Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 130

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
    ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
ನನ್ನ ಒಡೆಯನೇ, ನನಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲಿಸು.
ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
    ಒಬ್ಬನೂ ಜೀವಂತವಾಗಿ ಉಳಿಯಲಾರ.
ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
    ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.

ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
    ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
    ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
    ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
    ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
    ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.

ಆದಿಕಾಂಡ 2:4-14

ಮಾನವನ ಪ್ರಾರಂಭ

ಇದು ಆಕಾಶದ ಮತ್ತು ಭೂಮಿಯ ಚರಿತ್ರೆ. ದೇವರು ಭೂಮಿಯನ್ನು ಮತ್ತು ಆಕಾಶವನ್ನು ಸೃಷ್ಟಿಸಿದಾಗ ನಡೆದ ಸಂಗತಿಗಳೇ ಈ ಚರಿತ್ರೆ. ಆಗ ಭೂಮಿಯ ಮೇಲೆ ಯಾವ ಮರಗಿಡಗಳೂ ಇರಲಿಲ್ಲ. ಭೂಮಿಯ ಮೇಲೆ ಯಾವ ಸಸಿಯೂ ಬೆಳೆಯುತ್ತಿರಲಿಲ್ಲ; ಯಾಕೆಂದರೆ ಯೆಹೋವನು ಭೂಮಿಯ ಮೇಲೆ ಇನ್ನೂ ಮಳೆಯನ್ನು ಸುರಿಸಿರಲಿಲ್ಲ; ಭೂಮಿಯನ್ನು ವ್ಯವಸಾಯ ಮಾಡಲು ಯಾರೂ ಇರಲಿಲ್ಲ.

ಭೂಮಿಯಿಂದ ನೀರು[a] ಚಿಮ್ಮಿಬಂದು ನೆಲವನ್ನೆಲ್ಲಾ ತೋಯಿಸುತ್ತಿತ್ತು. ಹೀಗಿರಲು ದೇವರಾದ ಯೆಹೋವನು ನೆಲದಿಂದ ಮಣ್ಣನ್ನು ತೆಗೆದುಕೊಂಡು ಮನುಷ್ಯನನ್ನು ರೂಪಿಸಿ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಸಜೀವಿಯಾದನು. ದೇವರಾದ ಯೆಹೋವನು ಪೂರ್ವ ದಿಕ್ಕಿನಲ್ಲಿದ್ದ ಏದೆನ್ ಸೀಮೆಯಲ್ಲಿ ಒಂದು ತೋಟವನ್ನು ಮಾಡಿ ತಾನು ಸೃಷ್ಟಿಸಿದ ಮನುಷ್ಯನನ್ನು ಆ ತೋಟದಲ್ಲಿರಿಸಿದನು. ದೇವರಾದ ಯೆಹೋವನು ಆ ತೋಟದಲ್ಲಿ ಸುಂದರವಾದ ಪ್ರತಿಯೊಂದು ಮರವನ್ನು ಮತ್ತು ಊಟಕ್ಕೆ ಬೇಕಾದ ಒಳ್ಳೆಯ ಹಣ್ಣುಗಳನ್ನು ಬಿಡುವ ಪ್ರತಿಯೊಂದು ಮರವನ್ನು ಬೆಳೆಸಿದನು. ಇದಲ್ಲದೆ ತೋಟದ ಮಧ್ಯಭಾಗದಲ್ಲಿ ಜೀವದಾಯಕ ಮರವನ್ನೂ ಅಲ್ಲದೆ ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಕೊಡುವ ಮರವನ್ನೂ ಬೆಳೆಸಿದನು.

10 ಏದೆನಿನಿಂದ ಹರಿದುಬರುತ್ತಿದ್ದ ನದಿಯು ತೋಟಕ್ಕೆ ಬೇಕಾದ ನೀರನ್ನು ಒದಗಿಸುತ್ತಿತ್ತು. ಬಳಿಕ ಅದೇ ನದಿಯು ಶಾಖೆಗಳಾಗಿ ಒಡೆದು ನಾಲ್ಕು ಉಪನದಿಗಳಾಯಿತು. 11 ಮೊದಲನೆ ನದಿಯ ಹೆಸರು ಪೀಶೋನ್. ಹವೀಲ ದೇಶದಲ್ಲೆಲ್ಲಾ ಹರಿಯುತ್ತಿದ್ದ ನದಿ ಇದೇ. 12 ಈ ದೇಶದಲ್ಲಿ ಒಳ್ಳೆಯ ಬಂಗಾರ ದೊರೆಯುತ್ತಿತ್ತು. ಅಲ್ಲದೆ ಗುಗ್ಗುಲ ಮತ್ತು ಗೋಮೇಧಿಕ ರತ್ನ ಸಹ ದೊರಕುತ್ತಿದ್ದವು. 13 ಎರಡನೆ ನದಿಯ ಹೆಸರು ಗೀಹೋನ್. ಇಥಿಯೋಪಿಯ ದೇಶದಲ್ಲೆಲ್ಲಾ ಹರಿಯುತ್ತಿದ್ದ ನದಿ ಇದೇ. 14 ಮೂರನೆ ನದಿಯ ಹೆಸರು ಟೈಗ್ರಿಸ್. ದಕ್ಷಿಣ ಅಸ್ಸೀರಿಯ ದೇಶದಲ್ಲಿ ಹರಿಯುತ್ತಿದ್ದ ನದಿ ಇದೇ. ನಾಲ್ಕನೆ ನದಿಯ ಹೆಸರು ಯೂಫ್ರೇಟೀಸ್.

ಲೂಕ 8:4-15

ಯೇಸು ಹೇಳಿದ ಬೀಜ ಬಿತ್ತುವವನ ಸಾಮ್ಯ

(ಮತ್ತಾಯ 13:1-17; ಮಾರ್ಕ 4:1-12)

ಅನೇಕ ಜನರು ಊರೂರುಗಳಿಂದ ಯೇಸುವಿನ ಬಳಿಗೆ ಸೇರಿಬಂದರು. ಆಗ ಯೇಸು ಅವರಿಗೆ ಈ ಸಾಮ್ಯ ಹೇಳಿದನು:

“ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೊಲಕ್ಕೆ ಹೋದನು. ಬೀಜ ಬಿತ್ತುವಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದು ಜನರ ತುಳಿತಕ್ಕೆ ಸಿಕ್ಕಿಕೊಂಡವು. ಹಕ್ಕಿಗಳು ಬಂದು ಅವುಗಳನ್ನೆಲ್ಲ ತಿಂದುಬಿಟ್ಟವು. ಕೆಲವು ಬೀಜಗಳು ಬಂಡೆಯ ಮೇಲೆ ಬಿದ್ದವು. ಅವುಗಳು ಮೊಳೆಯತೊಡಗಿದರೂ ನೀರಿಲ್ಲದೆ ಒಣಗಿಹೋದವು. ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯೆ ಬಿದ್ದವು. ಅವುಗಳು ಮೊಳೆತರೂ ಮುಳ್ಳುಗಿಡಗಳಿಂದ ಬೆಳೆಯಲಾಗಲಿಲ್ಲ. ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಈ ಬೀಜಗಳು ಮೊಳೆತು ಬೆಳೆದು ನೂರರಷ್ಟು ಹೆಚ್ಚು ಫಲವನ್ನು ಕೊಟ್ಟವು.”

ಯೇಸು ಈ ಸಾಮ್ಯವನ್ನು ಹೇಳಿ ಮುಗಿಸಿದ ಮೇಲೆ, “ನನ್ನ ಮಾತನ್ನು ಆಲಿಸುತ್ತಿರುವ ಜನರೇ, ಕೇಳಿರಿ” ಎಂದು ಹೇಳಿದನು.

ಶಿಷ್ಯರು ಆತನಿಗೆ, “ಈ ಸಾಮ್ಯದ ಅರ್ಥವೇನು?” ಎಂದು ಕೇಳಿದರು.

10 ಯೇಸು, “ನೀವು ದೇವರ ರಾಜ್ಯದ ಗುಟ್ಟುಗಳನ್ನು ತಿಳಿದುಕೊಳ್ಳಬೇಕೆಂದು ನಿಮ್ಮನ್ನು ಆರಿಸಿಕೊಳ್ಳಲಾಗಿದೆ. ಆದರೆ ಬೇರೆ ಜನರೊಂದಿಗೆ ನಾನು ಸಾಮ್ಯಗಳ ಮೂಲಕ ಮಾತಾಡುತ್ತೇನೆ, ಏಕೆಂದರೆ,

‘ಅವರು ನೋಡಿದರೂ ಕಾಣುವುದಿಲ್ಲ,
    ಕೇಳಿದರೂ ಗ್ರಹಿಸಿಕೊಳ್ಳುವುದಿಲ್ಲ.’(A)

ಬೀಜಗಳ ಕುರಿತು ಯೇಸು ಕೊಟ್ಟ ವಿವರಣೆ

(ಮತ್ತಾಯ 13:18-23; ಮಾರ್ಕ 4:13-20)

11 “ಈ ಸಾಮ್ಯದ ಅರ್ಥ ಹೀಗಿದೆ: ಬೀಜವು ದೇವರ ವಾಕ್ಯ. 12 ಕಾಲ್ದಾರಿಯಲ್ಲಿ ಬಿದ್ದ ಬೀಜವೆಂದರೇನು? ದೇವರ ವಾಕ್ಯವನ್ನು ಕೆಲವರು ಕೇಳುತ್ತಾರೆ. ಆದರೆ ಸೈತಾನನು ಬಂದು ಅವರ ಹೃದಯದೊಳಗಿಂದ ಆ ವಾಕ್ಯವನ್ನು ತೆಗೆದುಬಿಡುತ್ತಾನೆ. ಅವರು ಆ ವಾಕ್ಯವನ್ನು ನಂಬದಿರುವುದರಿಂದ ರಕ್ಷಣೆಯನ್ನು ಹೊಂದಲಾರರು. 13 ಬಂಡೆಯ ಮೇಲೆ ಬಿದ್ದ ಬೀಜವೆಂದರೇನು? ಕೆಲವರು ದೇವರ ವಾಕ್ಯ ಕೇಳಿ ಸಂತೋಷದಿಂದ ಸ್ವೀಕರಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಆಳವಾದ ಬೇರುಗಳಿರುವುದಿಲ್ಲ. ಅವರು ಸ್ವಲ್ಪಕಾಲ ಮಾತ್ರವೇ ನಂಬುತ್ತಾರೆ. ಬಳಿಕ ತೊಂದರೆಯೇನಾದರೂ ಬಂದರೆ ತಮ್ಮ ನಂಬಿಕೆಯನ್ನು ಕಳೆದುಕೊಂಡು ದೇವರಿಂದ ದೂರ ಸರಿಯುತ್ತಾರೆ.

14 “ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದ ಬೀಜವೆಂದರೇನು? ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಲೋಕದ ಚಿಂತೆಗಳಿಗೂ ಐಶ್ವರ್ಯಗಳಿಗೂ ಭೋಗಗಳಿಗೂ ಅವರು ಅವಕಾಶಕೊಡುವುದರಿಂದ ಅವರು ಬೆಳೆಯಲಾರರು; ಎಂದಿಗೂ ಒಳ್ಳೆಯ ಫಲವನ್ನು ಕೊಡಲಾರರು. 15 ಒಳ್ಳೆಯ ನೆಲದಲ್ಲಿ ಬಿದ್ದ ಬೀಜವೆಂದರೇನು? ಒಳ್ಳೆಯದಾದ ಮತ್ತು ಯಥಾರ್ಥವಾದ ಹೃದಯದಿಂದ ದೇವರ ವಾಕ್ಯವನ್ನು ಕೇಳುವ ಜನರೇ ಬೀಜಬಿದ್ದ ಒಳ್ಳೆಯ ನೆಲವಾಗಿದ್ದಾರೆ. ಅವರು ದೇವರ ವಾಕ್ಯಕ್ಕೆ ವಿಧೇಯರಾಗಿ ತಾಳ್ಮೆಯಿಂದ ಒಳ್ಳೆಯ ಫಲವನ್ನು ನೀಡುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International