ಮಾರ್ಕ 4:1-12
Kannada Holy Bible: Easy-to-Read Version
ಬೀಜ ಬಿತ್ತುವ ರೈತನ ಸಾಮ್ಯ
(ಮತ್ತಾಯ 13:1-9; 8:4-8)
4 ಮತ್ತೊಂದು ಸಮಯದಲ್ಲಿ ಯೇಸು ಸರೋವರದ ತೀರದಲ್ಲಿ ಉಪದೇಶಿಸಲಾರಂಭಿಸಿದನು. ಅನೇಕಾನೇಕ ಜನರು ಆತನ ಸುತ್ತಲೂ ಸೇರಿದರು. ಯೇಸು ಒಂದು ದೋಣಿಯೊಳಕ್ಕೆ ಹೋಗಿ ಕುಳಿತು ಸರೋವರದ ದಡದಿಂದ ಸ್ವಲ್ಪದೂರ ಹೋದನು. ಜನರೆಲ್ಲರೂ ಸರೋವರದ ದಡದ ಮೇಲಿದ್ದರು. 2 ಯೇಸು ದೋಣಿಯಲ್ಲಿ ಕುಳಿತುಕೊಂಡು ಅವರಿಗೆ ಅನೇಕ ಸಾಮ್ಯಗಳ ಮೂಲಕ ಉಪದೇಶಿಸಿದನು. ಆತನು ಹೇಳಿದ್ದೇನೆಂದರೆ:
3 “ಕೇಳಿರಿ! ಒಬ್ಬ ರೈತನು ಬೀಜ ಬಿತ್ತಲು ಹೊಲಕ್ಕೆ ಹೋದನು. 4 ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಆ ಬೀಜಗಳನ್ನೆಲ್ಲ ತಿಂದುಬಿಟ್ಟವು. 5 ಕೆಲವು ಬೀಜಗಳು ಬಂಡೆಯ ನೆಲದ ಮೇಲೆ ಬಿದ್ದವು. ಆ ನೆಲದಲ್ಲಿ ಸಾಕಷ್ಟು ಮಣ್ಣಿರಲಿಲ್ಲ. ನೆಲವು ಆಳವಾಗಿಲ್ಲದಿದ್ದ ಕಾರಣ ಬೀಜಗಳು ಬಹಳ ಬೇಗನೆ ಮೊಳೆತವು. 6 ಆದರೆ ಸೂರ್ಯನು ಮೇಲೇರಿದಾಗ, ಆಳವಾದ ಬೇರಿಲ್ಲದ ಕಾರಣ ಆ ಸಸಿಗಳು ಒಣಗಿಹೋದವು. 7 ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು, ಒಳ್ಳೆಯ ಗಿಡಗಳನ್ನು ಬೆಳೆಯದಂತೆ ತಡೆದವು. ಆದ್ದರಿಂದ ಆ ಗಿಡಗಳು ಫಲ ಕೊಡಲಿಲ್ಲ. 8 ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಆ ಬೀಜಗಳು ಮೊಳೆತು, ಬೆಳೆದು, ಫಲಬಿಟ್ಟವು. ಕೆಲವು ಗಿಡಗಳು ಮೂವತ್ತರಷ್ಟು ಹೆಚ್ಟಾಗಿ, ಇನ್ನು ಕೆಲವು ಗಿಡಗಳು ಅರವತ್ತರಷ್ಟು ಹೆಚ್ಚಾಗಿ ಮತ್ತು ಬೇರೆ ಕೆಲವು ಗಿಡಗಳು ನೂರರಷ್ಟು ಹೆಚ್ಚಾಗಿ ಫಲಕೊಟ್ಟವು.”
9 ನಂತರ ಯೇಸು, “ನನ್ನ ಮಾತನ್ನು ಕೇಳುವ ಜನರೇ, ಆಲಿಸಿರಿ!” ಎಂದು ಹೇಳಿದನು.
ಯೇಸು ಸಾಮ್ಯಗಳನ್ನು ಬಳಸಲು ಕಾರಣವೇನು?
(ಮತ್ತಾಯ 13:10-17; ಲೂಕ 8:9-10)
10 ತರುವಾಯ, ಯೇಸು ಒಬ್ಬನೇ ಇದ್ದಾಗ ಹನ್ನೆರಡು ಮಂದಿ ಅಪೊಸ್ತಲರು ಮತ್ತು ಯೇಸುವಿನ ಇತರ ಶಿಷ್ಯರು ಆ ಸಾಮ್ಯಗಳ ಕುರಿತು ಆತನನ್ನು ಕೇಳಿದರು.
11 ಯೇಸು, “ದೇವರ ರಾಜ್ಯದ ಸತ್ಯದ ಗುಟ್ಟನ್ನು ನೀವು ಮಾತ್ರ ತಿಳಿದುಕೊಳ್ಳತಕ್ಕದ್ದು. ಆದರೆ ಇತರ ಎಲ್ಲಾ ಜನರಿಗೆ ನಾನು ಸಾಮ್ಯಗಳ ಮೂಲಕವಾಗಿ ಎಲ್ಲವನ್ನೂ ಹೇಳುತ್ತೇನೆ. 12 ಏಕೆಂದರೆ:
‘ಅವರು ಕಣ್ಣಾರೆ ನೋಡಿಯೂ ಕಾಣರು.
ಕಿವಿಯಾರೆ ಕೇಳಿಯೂ ಗ್ರಹಿಸರು.
ಅವರು ನೋಡಿ ಗ್ರಹಿಸಿಕೊಂಡರೆ,
ಪರಿವರ್ತನೆಗೊಂಡು ಪಾಪಕ್ಷಮೆ ಹೊಂದಿಯಾರು’” ಎಂದನು.(A)
Kannada Holy Bible: Easy-to-Read Version. All rights reserved. © 1997 Bible League International