Revised Common Lectionary (Complementary)
8 ಅಂದು ಸಂಜೆ ತಂಗಾಳಿ ಬೀಸುತ್ತಿರಲು ದೇವರಾದ ಯೆಹೋವನು ತೋಟದಲ್ಲಿ ತಿರುಗಾಡುತ್ತಿದ್ದನು. ಆತನ ಸಪ್ಪಳವನ್ನು ಕೇಳಿದ ಪುರುಷನು ಮತ್ತು ಅವನ ಹೆಂಡತಿಯು ತೋಟದ ಮರಗಳ ಮರೆಯಲ್ಲಿ ಅಡಗಿಕೊಂಡರು. 9 ದೇವರಾದ ಯೆಹೋವನು ಪುರುಷನಿಗೆ, “ನೀನು ಎಲ್ಲಿರುವೆ?” ಎಂದು ಕೂಗಿ ಕೇಳಿದನು.
10 ಅದಕ್ಕೆ ಪುರುಷನು, “ನೀನು ತೋಟದಲ್ಲಿ ತಿರುಗಾಡುತ್ತಿರುವ ಸಪ್ಪಳವನ್ನು ನಾನು ಕೇಳಿದೆನು. ಆದರೆ ನಾನು ಬೆತ್ತಲೆಯಾಗಿದ್ದರಿಂದ ಭಯದಿಂದ ಅಡಗಿಕೊಂಡೆನು” ಎಂದು ಹೇಳಿದನು.
11 ದೇವರು ಪುರುಷನಿಗೆ, “ನೀನು ಬೆತ್ತಲೆಯಾಗಿರುವೆ ಎಂದು ನಿನಗೆ ಹೇಳಿದವರು ಯಾರು? ವಿಶೇಷವಾದ ಆ ಮರದ ಹಣ್ಣನ್ನು ನೀನು ತಿಂದೆಯಾ? ಆ ಮರದ ಹಣ್ಣನ್ನು ತಿನ್ನಕೂಡದೆಂದು ನಾನು ನಿನಗೆ ಆಜ್ಞಾಪಿಸಿದ್ದೆನಲ್ಲಾ!” ಎಂದು ಹೇಳಿದನು.
12 ಅದಕ್ಕೆ ಪುರುಷನು, “ನೀನು ನನಗಾಗಿ ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ಆದ್ದರಿಂದ ನಾನು ತಿಂದೆ” ಅಂದನು.
13 ಆಗ ದೇವರಾದ ಯೆಹೋವನು ಸ್ತ್ರೀಗೆ, “ನೀನು ಮಾಡಿದ್ದೇನು?” ಎಂದು ಕೇಳಿದನು.
ಅದಕ್ಕೆ ಸ್ತ್ರೀಯು, “ಆ ಹಾವಿನ ಮೋಸಕ್ಕೆ ಒಳಗಾಗಿ ನಾನು ಆ ಹಣ್ಣನ್ನು ತಿಂದೆ” ಅಂದಳು.
14 ಆಗ ದೇವರಾದ ಯೆಹೋವನು ಹಾವಿಗೆ,
“ನೀನು ಮಾಡಿದ ಈ ಕೆಟ್ಟಕಾರ್ಯದಿಂದ
ನಿನಗೂ ಕೇಡುಗಳಾಗುತ್ತವೆ.[a]
ಬೇರೆಲ್ಲಾ ಪ್ರಾಣಿಗಳಿಗಿಂತಲೂ
ನಿನಗೆ ಹೀನಸ್ಥಿತಿ ಉಂಟಾಗುವುದು.
ನೀನು ಹೊಟ್ಟೆಯಿಂದಲೇ ತೆವಳಿಕೊಂಡು
ನಿನ್ನ ಜೀವಮಾನವೆಲ್ಲಾ ಮಣ್ಣನ್ನೇ ತಿನ್ನುವೆ.
15 ನೀನು ಮತ್ತು ಸ್ತ್ರೀಯು ಒಬ್ಬರಿಗೊಬ್ಬರು ವೈರಿಗಳಾಗಿರುವಂತೆ ಮಾಡುವೆನು.
ನಿನ್ನ ಮಕ್ಕಳು ಮತ್ತು ಅವಳ ಮಕ್ಕಳು[b] ಒಬ್ಬರಿಗೊಬ್ಬರು ವೈರಿಗಳಾಗಿರುವರು.
ನೀನು ಆಕೆಯ ಮಗನ ಪಾದವನ್ನು ಕಚ್ಚುವೆ.
ಆದರೆ ಅವನು ನಿನ್ನ ತಲೆಯನ್ನು ಜಜ್ಜಿ ಹಾಕುವನು” ಎಂದನು.
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
2 ನನ್ನ ಒಡೆಯನೇ, ನನಗೆ ಕಿವಿಗೊಡು.
ನನ್ನ ಮೊರೆಯನ್ನು ಆಲಿಸು.
3 ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
ಒಬ್ಬನೂ ಜೀವಂತವಾಗಿ ಉಳಿಯಲಾರ.
4 ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.
5 ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
6 ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
7 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
8 ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.
13 “ನಾನು ನಂಬಿದ್ದರಿಂದಲೇ ಮಾತಾಡಿದೆನು.” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ನಮ್ಮ ನಂಬಿಕೆಯು ಸಹ ಅದೇ ರೀತಿಯಲ್ಲಿದೆ. ನಾವು ನಂಬುವುದರಿಂದಲೇ ಮಾತಾಡುತ್ತೇವೆ. 14 ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರು ನಮ್ಮನ್ನು ಸಹ ಕ್ರಿಸ್ತನೊಂದಿಗೆ ಎಬ್ಬಿಸುತ್ತಾನೆ ಎಂಬುದು ನಮಗೆ ಗೊತ್ತಿದೆ. ದೇವರು ನಮ್ಮನ್ನು ನಿಮ್ಮ ಜೊತೆಯಲ್ಲಿ ತನ್ನ ಮುಂದೆ ನಿಲ್ಲಿಸುವನು. 15 ಇವುಗಳೆಲ್ಲ ನಿಮಗೋಸ್ಕರವಾಗಿಯೇ. ಹೀಗೆ ದೇವರ ಕೃಪೆಯು ಹೆಚ್ಚುಹೆಚ್ಚು ಜನರಿಗೆ ಕೊಡಲ್ಪಡುವುದು. ಇದರಿಂದಾಗಿ, ಹೆಚ್ಚುಹೆಚ್ಚು ಜನರು ದೇವರ ಮಹಿಮೆಗಾಗಿ ಕೃತಜ್ಞತಾಸುತ್ತಿ ಸಲ್ಲಿಸುವರು.
ನಂಬಿಕೆಯ ಜೀವನ
16 ಆದಕಾರಣವೇ, ನಾವೆಂದಿಗೂ ಬಲಹೀನರಾಗುವುದಿಲ್ಲ. ನಮ್ಮ ಭೌತಿಕ ದೇಹಕ್ಕೆ ವಯಸ್ಸಾಗುತ್ತಿದೆ ಮತ್ತು ಅದು ಬಲಹೀನವಾಗುತ್ತಿದೆ. ಆದರೆ ನಮ್ಮ ಆಂತರ್ಯವು ಪ್ರತಿದಿನ ಹೊಸದಾಗುತ್ತಿದೆ. 17 ಸ್ವಲ್ಪಕಾಲದವರೆಗೆ ನಮಗೆ ಚಿಕ್ಕಪುಟ್ಟ ಇಕ್ಕಟ್ಟುಗಳಿರುತ್ತವೆ. ಆದರೆ ನಿತ್ಯವಾದ ಮಹಿಮೆಯನ್ನು ಹೊಂದಿಕೊಳ್ಳಲು ಅವು ನಮಗೆ ಸಹಾಯಕವಾಗಿವೆ. ಆ ಮಹಿಮೆಯು ಇಂದಿನ ಇಕ್ಕಟ್ಟುಗಳಿಗಿಂತಲೂ ಮಹತ್ವವುಳ್ಳದ್ದಾಗಿದೆ. 18 ಆದ್ದರಿಂದ ನಮಗೆ ಕಾಣುವಂಥವುಗಳ ಬಗ್ಗೆ ಯೋಚಿಸದೆ ನಮಗೆ ಕಾಣದಿರುವಂಥವುಗಳ ಬಗ್ಗೆ ಯೋಚಿಸುತ್ತೇವೆ. ನಮಗೆ ಕಾಣುವಂಥವುಗಳು ಕೇವಲ ಸ್ವಲ್ಪಕಾಲ ಮಾತ್ರ ಇರುತ್ತವೆ. ಆದರೆ ನಮಗೆ ಕಾಣದಂಥವುಗಳು ಎಂದೆಂದಿಗೂ ಇರುತ್ತವೆ.
5 ಭೂಮಿಯ ಮೇಲೆ ನಾವು ವಾಸವಾಗಿರುವ ಈ ಗುಡಾರವು ಅಂದರೆ ಈ ದೇಹವು ನಾಶವಾಗುವುದೆಂದು ನಮಗೆ ಗೊತ್ತಿದೆ. ಆದರೆ ಅದು ಸಂಭವಿಸಿದಾಗ, ನಮ್ಮ ವಾಸಕ್ಕಾಗಿ ದೇವರು ನಮಗೊಂದು ಮನೆಯನ್ನು ಕೊಡುವನು. ಅದು ಮನುಷ್ಯರಿಂದ ನಿರ್ಮಿತವಾದ ಮನೆಯಲ್ಲ. ಅದು ಪರಲೋಕದಲ್ಲಿರುವ ಶಾಶ್ವತವಾದ ಮನೆಯಾಗಿದೆ.
ಯೇಸುವಿಗೆ ದೆವ್ವಹಿಡಿದಿದೆ ಎಂಬ ಆರೋಪ
(ಮತ್ತಾಯ 12:22-32; ಲೂಕ 11:14-23; 12:10)
20 ನಂತರ ಯೇಸು ಮನೆಗೆ ಹೋದನು. ಮತ್ತೆ ಅನೇಕ ಜನರು ಅಲ್ಲಿಗೆ ಸೇರಿಬಂದರು. ಆದ್ದರಿಂದ ಯೇಸು ಮತ್ತು ಅವನ ಶಿಷ್ಯರಿಗೆ ಊಟಮಾಡಲೂ ಸಾಧ್ಯವಾಗಲಿಲ್ಲ. 21 ಯೇಸುವಿನ ಕುಟುಂಬದವರಿಗೆ ಈ ವಿಷಯಗಳೆಲ್ಲ ತಿಳಿದವು. ಯೇಸುವಿಗೆ ಹುಚ್ಚು ಹಿಡಿದಿದೆಯೆಂದು ಕೆಲವರು ಹೇಳಿದ್ದರಿಂದ ಆತನ ಕುಟುಂಬದವರು ಆತನನ್ನು ಕರೆದೊಯ್ಯಲು ಅಲ್ಲಿಗೆ ಬಂದರು.
22 ಜೆರುಸಲೇಮಿನ ಧರ್ಮೋಪದೇಶಕರು, “ಇವನೊಳಗೆ ದೆವ್ವಗಳ ಒಡೆಯನಾದ ಬೆಲ್ಜೆಬೂಲನು ವಾಸಿಸುತ್ತಿದ್ದಾನೆ. ದೆವ್ವಗಳಿಂದ ಪೀಡಿತರಾಗಿರುವವರನ್ನು ಇವನು ಬಿಡಿಸುವುದು ದೆವ್ವಗಳ ಒಡೆಯನ ಸಹಾಯದಿಂದಲೇ” ಎಂದು ಹೇಳಿದರು.
23 ಆದ್ದರಿಂದ ಯೇಸು ಜನರನ್ನು ಒಟ್ಟಿಗೆ ಕರೆದು, ಅವರಿಗೆ ಸಾಮ್ಯಗಳ ಮೂಲಕ ಬೋಧಿಸಿ, “ಸೈತಾನನು ತನ್ನ ದೆವ್ವಗಳನ್ನು ಜನರಿಂದ ಬಲವಂತವಾಗಿ ಹೊರಡಿಸುವುದಿಲ್ಲ. 24 ತನ್ನ ವಿರುದ್ಧವಾಗಿ ತಾನೇ ಹೋರಾಡುವ ರಾಜ್ಯ ಉಳಿಯುವುದಿಲ್ಲ. 25 ಭೇದ ಹುಟ್ಟಿದ ಕುಟುಂಬ ಏಳಿಗೆ ಹೊಂದುವುದಿಲ್ಲ. 26 ಸೈತಾನನು ತನ್ನ ವಿರುದ್ಧವಾಗಿಯೂ ತನ್ನ ಜನರ ವಿರುದ್ಧವಾಗಿಯೂ ತಾನೇ ಹೋರಾಟ ಮಾಡಿದರೆ ಅವನು ಅಂತ್ಯಗೊಳ್ಳುತ್ತಾನೆ.
27 “ಒಬ್ಬ ವ್ಯಕ್ತಿಯು ಬಲಾಢ್ಯನ ಮನೆಗೆ ಪ್ರವೇಶಿಸಿ ಅವನ ವಸ್ತುಗಳನ್ನು ಕದಿಯಲು ಇಚ್ಛಿಸಿದರೆ, ಮೊದಲು ಅವನು ಬಲಾಢ್ಯನನ್ನು ಕಟ್ಟಿಹಾಕಬೇಕು. ಆಗ ಅವನು ಬಲಾಢ್ಯನ ಮನೆಯಿಂದ ವಸ್ತುಗಳನ್ನು ಕದಿಯಲು ಸಾಧ್ಯವಾಗುವುದು.
28 “ನಾನು ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ, ಜನರು ಮಾಡುವ ಎಲ್ಲಾ ಪಾಪಗಳಿಗೂ ದೇವದೂಷಣೆಗಳಿಗೂ ಕ್ಷಮೆ ದೊರೆಯಲು ಸಾಧ್ಯ. 29 ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಕ್ಷಮೆ ಇಲ್ಲವೇ ಇಲ್ಲ. ಅವರ ಪಾಪ ಶಾಶ್ವತವಾದದ್ದು” ಎಂದು ಹೇಳಿದನು.
30 “ಇವನಿಗೆ ದೆವ್ವಹಿಡಿದಿದೆ” ಎಂದು ಧರ್ಮೋಪದೇಶಕರು ಆರೋಪಿಸಿದ್ದರಿಂದ ಯೇಸು ಹೀಗೆ ಹೇಳಬೇಕಾಯಿತು.
ಯೇಸುವಿನ ಶಿಷ್ಯರೇ ಆತನ ನಿಜ ಕುಟುಂಬದವರು
(ಮತ್ತಾಯ 12:46-50; ಲೂಕ 8:19-21)
31 ನಂತರ ಯೇಸುವಿನ ತಾಯಿ ಮತ್ತು ಆತನ ಸಹೋದರರು ಅಲ್ಲಿಗೆ ಬಂದರು. ಅವರು ಹೊರಗೆ ನಿಂತುಕೊಂಡು ಯೇಸುವಿಗೆ ಬರಬೇಕೆಂದು ಒಬ್ಬನ ಮೂಲಕ ಹೇಳಿ ಕಳುಹಿಸಿದರು. 32 ಅನೇಕ ಜನರು ಯೇಸುವಿನ ಸುತ್ತಲೂ ಕುಳಿತಿದ್ದರು. ಅವನು ಯೇಸುವಿಗೆ, “ನಿನ್ನ ತಾಯಿ ಮತ್ತು ಸಹೋದರರು ನಿನಗಾಗಿ ಹೊರಗಡೆ ಕಾಯುತ್ತಿದ್ದಾರೆ” ಎಂದು ಹೇಳಿದನು.
33 ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಕೇಳಿ 34 ತನ್ನ ಸುತ್ತಲೂ ಕುಳಿತಿದ್ದ ಜನರ ಕಡೆಗೆ ನೋಡಿ, “ಈ ಜನರೇ ನನ್ನ ತಾಯಿ ಮತ್ತು ನನ್ನ ಸಹೋದರರು! 35 ದೇವರ ಚಿತ್ತಕ್ಕನುಸಾರವಾಗಿ ನಡೆಯುವ ಜನರೇ ನನ್ನ ಸಹೋದರರು, ಸಹೋದರಿಯರು ಮತ್ತು ತಾಯಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International