Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 88

ಸ್ತುತಿಗೀತೆ. ರಚನೆಗಾರರು: ಕೋರಹೀಯರಿಗೆ ಸೇರಿದ ಜೇರಹ ಕುಟುಂಬದ ಹೇಮಾನ.

88 ಯೆಹೋವ ದೇವರೇ, ನೀನೇ ನನ್ನ ರಕ್ಷಕನು.
    ಹಗಲಿರುಳು ನಿನಗೆ ಪ್ರಾರ್ಥಿಸುತ್ತಿದ್ದೇನೆ.
ನನ್ನ ಪ್ರಾರ್ಥನೆಗಳಿಗೆ ದಯವಿಟ್ಟು ಗಮನಕೊಡು.
    ಕರುಣೆಗೋಸ್ಕರ ನಾನಿಡುವ ಮೊರೆಗಳನ್ನು ಆಲಿಸು.
ನನ್ನ ಜೀವವು ನೋವಿನಿಂದ ತುಂಬಿಹೋಯಿತು.
    ಮರಣವು ನನಗೆ ಸಮೀಪವಾಗಿದೆ.
ಜನರು ನನ್ನನ್ನು ಸತ್ತವನಂತೆಯೂ
    ಬದುಕಲಾರದ ಬಲಹೀನನಂತೆಯೂ ಪರಿಗಣಿಸಿದ್ದಾರೆ.
ಸತ್ತವರ ಮಧ್ಯದಲ್ಲಿ ನನಗಾಗಿ ಹುಡುಕು.
    ಸಮಾಧಿಯಲ್ಲಿ ಬಿದ್ದಿರುವ ಶವದಂತಾಗಿದ್ದೇನೆ,
ನೀನು ಮರೆತುಬಿಟ್ಟ ಸತ್ತ ಜನರಂತೆ ಆಗಿದ್ದೇನೆ.
    ನಿನ್ನಿಂದಲೂ ನಿನ್ನ ಪರಿಪಾಲನೆಯಿಂದಲೂ ದೂರವಾದವನಾಗಿದ್ದೇನೆ.
ನೀನು ನನ್ನನ್ನು ಪಾತಾಳಕ್ಕೆ ದಬ್ಬಿರುವೆ;
    ನನ್ನನ್ನು ಕತ್ತಲೆಯ ಸ್ಥಳಕ್ಕೆ ನೂಕಿರುವೆ.
ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದಲೇ
    ನನ್ನನ್ನು ಶಿಕ್ಷಿಸಿದೆ.

ಸ್ನೇಹಿತರು ನನ್ನನ್ನು ತೊರೆದುಬಿಟ್ಟರು.
    ಹೊಲೆಯಾದ ಮನುಷ್ಯನಂತೆ ಅವರೆಲ್ಲರೂ ನನ್ನನ್ನು ದೂರ ಮಾಡಿದ್ದಾರೆ.
ನನ್ನನ್ನು ಮನೆಯೊಳಗೆ ದೊಬ್ಬಿ ಬೀಗ ಹಾಕಿದ್ದಾರೆ; ನಾನು ಹೊರಗೆ ಹೋಗಲಾರೆನು.
    ನನ್ನ ಎಲ್ಲಾ ಸಂಕಟಗಳಿಂದ ಅತ್ತುಅತ್ತು ನನ್ನ ಕಣ್ಣುಗಳು ನೋಯುತ್ತಿವೆ.
ಯೆಹೋವನೇ, ನಾನು ನಿನಗೆ ಎಡಬಿಡದೆ ಪ್ರಾರ್ಥಿಸುವೆನು!
    ನನ್ನ ಕೈಗಳನ್ನು ಎತ್ತಿ ನಿನಗೆ ಪ್ರಾರ್ಥಿಸುವೆನು!
10 ಯೆಹೋವನೇ, ಸತ್ತ ಜನರಿಗಾಗಿ ನೀನು ಮಹತ್ಕಾರ್ಯಗಳನ್ನು ಮಾಡುವೆಯಾ?
    ಇಲ್ಲ! ದೆವ್ವಗಳು ಎದ್ದುನಿಂತು ನಿನ್ನನ್ನು ಕೊಂಡಾಡುತ್ತವೆಯೋ? ಇಲ್ಲ!

11 ಸತ್ತ ಜನರು ತಮ್ಮ ಸಮಾಧಿಗಳಲ್ಲಿ ನಿನ್ನ ಪ್ರೀತಿಯ ಬಗ್ಗೆ ಮಾತಾಡಲಾರರು.
    ಸತ್ತವರು, ಸತ್ತವರ ಲೋಕದಲ್ಲಿ ನಿನ್ನ ನಂಬಿಗಸ್ತಿಕೆಯ ಬಗ್ಗೆ ಮಾತಾಡಲಾರರು.
12 ಸತ್ತು ಕತ್ತಲೆಯಲ್ಲಿ ಬಿದ್ದಿರುವ ಜನರು ನಿನ್ನ ಅದ್ಭುತಕಾರ್ಯಗಳನ್ನು ನೋಡಲಾರರು.
    ಸತ್ತವರು, ಮರೆಯಲ್ಪಟ್ಟವರ ಲೋಕದಲ್ಲಿ ನಿನ್ನ ನೀತಿಯ ಬಗ್ಗೆ ಮಾತಾಡಲಾರರು.
13 ಯೆಹೋವನೇ, ನಿನ್ನ ಸಹಾಯಕ್ಕಾಗಿ ಮೊರೆಯಿಡುತ್ತಿದ್ದೇನೆ.
    ಪ್ರತಿ ಮುಂಜಾನೆಯೂ ನಿನಗೆ ಪ್ರಾರ್ಥಿಸುತ್ತಿದ್ದೇನೆ.
14 ಯೆಹೋವನೇ, ನೀನು ನನ್ನನ್ನು ತೊರೆದುಬಿಟ್ಟಿದ್ದೇಕೆ?
    ನೀನು ನನಗೆ ಕಿವಿಗೊಡದಿರುವುದೇಕೆ?
15 ನಾನು ಚಿಕ್ಕಂದಿನಿಂದಲೂ ಬಲಹೀನನಾಗಿದ್ದೇನೆ ಮತ್ತು ಕಾಯಿಲೆಯವನಾಗಿದ್ದೇನೆ.
    ನಿನ್ನ ಕೋಪದಿಂದ ನಾನು ಸಂಕಟಪಡುತ್ತಿರುವೆ.
    ನಾನು ನಿಸ್ಸಹಾಯನಾಗಿರುವೆ.
16 ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದ
    ನಿನ್ನ ದಂಡನೆಯು ನನ್ನನ್ನು ಕೊಲ್ಲುತ್ತಿದೆ.
17 ಬಾಧೆಗಳೂ ನೋವುಗಳೂ ಯಾವಾಗಲೂ ನನ್ನೊಂದಿಗಿವೆ.
    ಬಾಧೆಗಳಿಂದಲೂ ನೋವುಗಳಿಂದಲೂ ಮುಳುಗಿ ಹೋಗುತ್ತಿದ್ದೇನೆ.
18 ಯೆಹೋವನೇ, ಸ್ನೇಹಿತರೆಲ್ಲರನ್ನೂ ಪ್ರಿಯರನ್ನೂ ನೀನು ನನ್ನಿಂದ ದೂರಮಾಡಿದೆ.
    ಕೇವಲ ಕತ್ತಲೆಯೊಂದೇ ನನ್ನೊಂದಿಗೆ ಉಳಿದುಕೊಂಡಿದೆ.

ಯಾಜಕಕಾಂಡ 15:19-31

19 “ಸ್ತ್ರೀಗೆ ಅವಳ ತಿಂಗಳ ಮುಟ್ಟಿನಿಂದ ಸ್ರಾವವಿದ್ದರೆ, ಅವಳು ಏಳು ದಿನಗಳವರೆಗೆ ಅಶುದ್ಧಳಾಗಿರುವಳು. ಯಾವನಾದರೂ ಆಕೆಯನ್ನು ಮುಟ್ಟಿದರೆ, ಆ ವ್ಯಕ್ತಿಯೂ ಸಾಯಂಕಾಲದವರೆಗೆ ಆಶುದ್ಧನಾಗಿರುವನು. 20 ಅಲ್ಲದೆ, ಸ್ತ್ರೀಯು ತನ್ನ ಮುಟ್ಟಿನ ದಿನಗಳಲ್ಲಿ ಯಾವುದರ ಮೇಲೆ ಮಲಗಿದರೂ ಅದು ಅಶುದ್ಧವಾಗಿರುವುದು ಮತ್ತು ಆ ಸಮಯದಲ್ಲಿ ಆಕೆಯು ಯಾವುದರ ಮೇಲೆ ಕುಳಿತುಕೊಂಡರೂ ಅದು ಅಶುದ್ಧವಾಗಿರುವುದು. 21 ಯಾವನಾದರೂ ಅವಳ ಹಾಸಿಗೆಯನ್ನು ಮುಟ್ಟಿದರೆ, ಆ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 22 ಯಾವನಾದರೂ ಅವಳು ಕುಳಿತುಕೊಂಡಿದ್ದ ಯಾವ ವಸ್ತುವನ್ನಾದರೂ ಮುಟ್ಟಿದರೆ, ಆ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 23 ಅವನು ಅವಳ ಹಾಸಿಗೆಯನ್ನಾಗಲಿ ಅಥವಾ ಅವಳು ಕುಳಿತ್ತಿದ್ದ ಸ್ಥಳದಲ್ಲಿ ಇದ್ದ ಯಾವದನ್ನಾದರೂ ಮುಟ್ಟಿದರೆ ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.

24 “ಪುರುಷನು ಸ್ತ್ರೀಯ ಮುಟ್ಟಿನ ಸಮಯದಲ್ಲಿ ಆಕೆಯೊಡನೆ ಲೈಂಗಿಕ ಸಂಪರ್ಕ ಹೊಂದಿದರೆ, ಆಗ ಅವನು ಏಳು ದಿನಗಳವರೆಗೆ ಅಶುದ್ಧನಾಗಿರುವನು. ಅವನು ಮಲಗಿಕೊಳ್ಳುವ ಪ್ರತಿಯೊಂದು ಹಾಸಿಗೆಯು ಅಶುದ್ಧವಾಗುವುದು.

25 “ಸ್ತ್ರೀಗೆ ತನ್ನ ಮುಟ್ಟಿನ ದಿನಗಳ ಹೊರತಾಗಿ ಅನೇಕ ದಿನಗಳವರೆಗೆ ರಕ್ತಸ್ರಾವವಾದರೆ ಅಥವಾ ಮುಟ್ಟಿನ ದಿನಗಳ ನಂತರ ಅವಳಿಗೆ ಸ್ರಾವವಾದರೆ, ಆಕೆಯು ತನ್ನ ಮುಟ್ಟಿನ ದಿನಗಳಲ್ಲಿ ಅಶುದ್ಧಳಾಗಿರುವಂತೆ, ಅಶುದ್ಧಳಾಗಿರುವಳು. ಅವಳಿಗೆ ಸ್ರಾವವಾಗುವ ದಿನಗಳೆಲ್ಲಾ ಅವಳು ಅಶುದ್ಧಳಾಗಿರುವಳು. 26 ಆ ಸ್ರಾವವಿರುವ ತನಕ ಅವಳು ಯಾವ ಹಾಸಿಗೆಯ ಮೇಲೆ ಮಲಗಿದರೂ, ಅದು ತಿಂಗಳ ಮುಟ್ಟಿನ ಕಾಲದಲ್ಲಿ ಅವಳು ಮಲಗಿರುವ ಹಾಸಿಗೆಯಂತೆಯೇ ಅಶುದ್ಧವಾಗಿರುವುದು. ಅವಳು ಯಾವುದರ ಮೇಲೆ ಕುಳಿತರೂ ಅದು ತಿಂಗಳ ಮುಟ್ಟಿನ ಕಾಲದಲ್ಲಿ ಅವಳು ಕುಳಿತಿದ್ದ ವಸ್ತುವಿನಂತೆಯೇ ಅಶುದ್ಧವಾಗಿರುವುದು. 27 ಯಾವನಾದರೂ ಆ ವಸ್ತುಗಳನ್ನು ಮುಟ್ಟಿದರೆ, ಆ ವ್ಯಕ್ತಿ ಅಶುದ್ಧನಾಗಿರುವನು. ಆ ವ್ಯಕ್ತಿಯು ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 28 ಸ್ತ್ರೀಗೆ ಸ್ರಾವವು ನಿಂತ ನಂತರ, ಅವಳು ಏಳು ದಿನಗಳವರೆಗೆ ಕಾಯಬೇಕು. ಅದರ ನಂತರ ಅವಳು ಶುದ್ಧಳಾಗಿರುವಳು. 29 ಬಳಿಕ ಎಂಟನೆಯ ದಿನದಲ್ಲಿ ಸ್ತ್ರೀಯು ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಳ್ಳಬೇಕು. ಅವಳು ಅವುಗಳನ್ನು ದೇವದರ್ಶನಗುಡಾರದ ಬಾಗಿಲಲ್ಲಿ ಯಾಜಕನ ಬಳಿಗೆ ತರಬೇಕು. 30 ತರುವಾಯ ಯಾಜಕನು ಒಂದು ಪಕ್ಷಿಯನ್ನು ಪಾಪಪರಿಹಾರಕ ಯಜ್ಞವಾಗಿಯೂ ಇನ್ನೊಂದು ಪಕ್ಷಿಯನ್ನು ಸರ್ವಾಂಗಹೋಮವಾಗಿಯೂ ಅರ್ಪಿಸಬೇಕು. ಹೀಗೆ ಯಾಜಕನು ಅವಳಿಗಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು.

31 “ಆದ್ದರಿಂದ ಅಶುದ್ಧತ್ವದ ಕುರಿತು ನೀವು ಇಸ್ರೇಲರನ್ನು ಎಚ್ಚರಿಸಬೇಕು. ನೀವು ಜನರನ್ನು ಎಚ್ಚರಿಸದಿದ್ದರೆ ಅವರು ನನ್ನ ಪವಿತ್ರ ಗುಡಾರವನ್ನು ಅಶುದ್ಧಮಾಡಿ ಸಾವಿಗೀಡಾಗುವರು.”

2 ಕೊರಿಂಥದವರಿಗೆ 9:1-5

ಕ್ರೈಸ್ತರಿಗೆ ಸಹಾಯ ಮಾಡಿರಿ

ದೇವಜನರಿಗೋಸ್ಕರವಾದ ಈ ಸಹಾಯದ ಬಗ್ಗೆ ನಾನು ನಿಮಗೆ ಬರೆಯುವುದು ನಿಜವಾಗಿಯೂ ಅಗತ್ಯವಿಲ್ಲ. ಸಹಾಯ ಮಾಡಬೇಕೆಂಬ ಬಯಕೆಯು ನಿಮಗಿದೆಯೆಂದು ನನಗೆ ಗೊತ್ತಿದೆ. ಮಕೆದೋನಿಯದಲ್ಲಿ ಜನರಿಗೆ ನಿಮ್ಮ ಈ ವಿಷಯದಲ್ಲಿ ಹೆಮ್ಮೆಯಿಂದ ಹೇಳುತ್ತಲೇ ಇದ್ದೇನೆ. ಅಖಾಯದಲ್ಲಿರುವ ನೀವು ಕಳೆದ ವರ್ಷದಿಂದಲೂ ಕೊಡಲು ಸಿದ್ಧರಾಗಿದ್ದೀರೆಂದು ಅವರಿಗೆ ಹೇಳಿದೆನು. ನಿಮ್ಮಲ್ಲಿರುವ ಕೊಡಬೇಕೆಂಬ ಬಯಕೆಯು ಇಲ್ಲಿರುವ ಅನೇಕ ಜನರಲ್ಲಿ ಕೊಡಬೇಕೆಂಬ ಬಯಕೆಯನ್ನು ಉಂಟುಮಾಡಿದೆ. ನಾನು ಸಹೋದರರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡುತ್ತಿದ್ದೇನೆ. ನಿಮ್ಮ ಬಗ್ಗೆ ಈ ವಿಷಯದಲ್ಲಿ ಹೊಗಳಿದ್ದು ವ್ಯರ್ಥವಾಗುವುದು ನನಗೆ ಇಷ್ಟವಿಲ್ಲ. ನಾನು ಹೇಳಿಕೊಂಡಂತೆ ನೀವು ಸಿದ್ಧರಾಗಿರಬೇಕೆಂದು ಆಶಿಸುತ್ತೇನೆ. ಒಂದುವೇಳೆ ಮಕೆದೋನಿಯದ ಜನರಲ್ಲಿ ಯಾರಾದರೂ ನನ್ನೊಂದಿಗೆ ಬಂದಾಗ ನೀವು ಸಿದ್ಧರಾಗಿಲ್ಲದಿದ್ದರೆ ನಾವು ನಾಚಿಕೆಗೆ ಗುರಿಯಾಗುತ್ತೇವೆ. ನಿಮ್ಮ ವಿಷಯದಲ್ಲಿ ನಾವು ಬಹಳ ಭರವಸೆ ಇಟ್ಟಿದ್ದರಿಂದ ನಾವು ನಾಚಿಕೆಗೆ ಗುರಿಯಾಗುವೆವು (ಮತ್ತು ನೀವೂ ಸಹ ನಾಚಿಕೆಗೆ ಗುರಿಯಾಗುವಿರಿ.) ಆದ್ದರಿಂದ ನಾನು ಬರುವುದಕ್ಕಿಂತ ಮೊದಲು ನಿಮ್ಮ ಬಳಿಗೆ ಹೋಗುವಂತೆ ಈ ಸಹೋದರರನ್ನು ಕೇಳಿಕೊಳ್ಳಬೇಕೆಂದು ನಾನು ಆಲೋಚಿಸಿದೆನು. ನೀವು ವಾಗ್ದಾನ ಮಾಡಿದ ಸಹಾಯಧನವನ್ನು ಇವರು ಸಂಗ್ರಹಿಸುವರು. ಆಗ, ನಾವು ಬರುವಷ್ಟರಲ್ಲಿ ನಿಮ್ಮ ಸಹಾಯಧನವು ಸಿದ್ಧವಾಗಿರುವುದು. ಈ ಸಹಾಯಧನವು ನಿಮ್ಮ ಹೃತ್ಪೂರ್ವಕವಾದ ದಾನವೇ ಹೊರತು ಸಂಕಟದಿಂದ ಕೊಟ್ಟ ದಾನವಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International