Revised Common Lectionary (Complementary)
23 ಆಗ ಆತನು ಉನ್ನತದಲ್ಲಿರುವ ಮೇಘಗಳನ್ನು ತೆರೆದನು,
ಅವರ ಆಹಾರಕ್ಕಾಗಿ ಮನ್ನವನ್ನು ಮಳೆಗರೆಸಿದನು.
24 ಆಕಾಶದ ದ್ವಾರಗಳು ತೆರೆದು
ಆಕಾಶದ ಉಗ್ರಾಣದಿಂದ ಧಾನ್ಯವು ಸುರಿದಂತೆ ಮನ್ನವು ಸುರಿಯಿತು.
25 ಜನರು ದೇವದೂತರ ಆಹಾರವನ್ನು ತಿಂದರು.
ಅವರನ್ನು ತೃಪ್ತಿಗೊಳಿಸುವುದಕ್ಕಾಗಿ ಆತನು ಆಹಾರವನ್ನು ಹೇರಳವಾಗಿ ಒದಗಿಸಿದನು.
26 ಬಳಿಕ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು.
ಆಗ ಲಾವಕ್ಕಿಗಳು ಮಳೆಯಂತೆ ಅವರಿದ್ದಲ್ಲಿಗೆ ಬಂದು ಬಿದ್ದವು.
27 ಆತನು ತೇಮಾನಿನಿಂದ ಗಾಳಿಬೀಸುವಂತೆ ಮಾಡಿದಾಗ
ಪಕ್ಷಿಗಳು ಸಮುದ್ರದ ಮರಳಿನಷ್ಟು ಅವರಿದ್ದಲ್ಲಿ ಬಂದು ಬಿದ್ದವು.
28 ಪಕ್ಷಿಗಳು ಪಾಳೆಯದ ಮಧ್ಯಭಾಗದಲ್ಲಿ,
ಆ ಜನರ ಗುಡಾರಗಳ ಸುತ್ತಲೆಲ್ಲಾ ಬಿದ್ದವು.
29 ಅವರಿಗೆ ತಿನ್ನಲು ಹೇರಳವಾಗಿತ್ತು.
ಆದರೆ ತಮ್ಮ ಆಸೆಗಳೇ ತಮ್ಮನ್ನು ಪಾಪಕ್ಕೆ ನಡೆಸುವಂತೆ ಅವರು ಮಾಡಿದರು.
33 ಈಜಿಪ್ಟಿನ ಜನರು ಸಹ ತಮ್ಮನ್ನು ಬೇಗನೆ ಬಿಟ್ಟು ಹೋಗಬೇಕೆಂದು ಇಸ್ರೇಲರನ್ನು ಬೇಡಿಕೊಂಡು, “ನೀವು ಬಿಟ್ಟು ಹೋಗದಿದ್ದರೆ, ನಾವೆಲ್ಲಾ ಸಾಯುವೆವು” ಎಂದು ಹೇಳಿದರು.
34 ತಮ್ಮ ರೊಟ್ಟಿಗೆ ಹುಳಿಹಾಕಲು ಇಸ್ರೇಲರಿಗೆ ಸಮಯವಿರಲಿಲ್ಲ. ಅವರು ಹಿಟ್ಟಿನ ಮುದ್ದೆಯನ್ನು ಬಟ್ಟೆಯಲ್ಲಿ ಸುತ್ತಿ ಹೆಗಲಿನ ಮೇಲೆ ಹೊತ್ತುಕೊಂಡು ಹೋದರು. 35 ಅಲ್ಲದೆ ಮೋಶೆಯು ಹೇಳಿದಂತೆಯೇ ಇಸ್ರೇಲರು ತಮ್ಮ ನೆರೆಮನೆಯವರ ಬಳಿಗೆ ಹೋಗಿ ಬಟ್ಟೆಗಳನ್ನೂ ಬೆಳ್ಳಿಬಂಗಾರಗಳ ವಸ್ತುಗಳನ್ನೂ ಕೇಳಿಕೊಂಡರು. 36 ಈಜಿಪ್ಟಿನವರು ಇಸ್ರೇಲರಿಗೆ ದಯೆ ತೋರಿಸುವಂತೆ ಯೆಹೋವನು ಪ್ರೇರೇಪಿಸಿದ್ದರಿಂದ ಈಜಿಪ್ಟಿನವರು ತಮ್ಮ ಸ್ವತ್ತುಗಳನ್ನು ಇಸ್ರೇಲರಿಗೆ ಕೊಟ್ಟುಬಿಟ್ಟರು.
37 ಇಸ್ರೇಲರು ರಮ್ಸೇಸ್‌ನಿಂದ ಸುಕ್ಕೋತಿಗೆ ಪ್ರಯಾಣ ಮಾಡಿದರು. ಅವರಲ್ಲಿ ಸುಮಾರು ಆರು ಲಕ್ಷಮಂದಿ[a] ಗಂಡಸರಿದ್ದರು. (ಈ ಸಂಖ್ಯೆಯಲ್ಲಿ ಮಕ್ಕಳು ಮತ್ತು ಹೆಂಗಸರು ಸೇರಿಲ್ಲ.) 38 ಲೆಕ್ಕವಿಲ್ಲದಷ್ಟು ಕುರಿಗಳೂ ದನಕರುಗಳೂ ಇವರೊಂದಿಗಿದ್ದವು. ಇಸ್ರೇಲರಲ್ಲದ ಬೇರೆ ಜನರು ಸಹ ಇಸ್ರೇಲರೊಂದಿಗೆ ಈಜಿಪ್ಟಿನಿಂದ ಹೊರಟರು. 39 ರೊಟ್ಟಿಗೆ ಹುಳಿಹಾಕುವಷ್ಟು ಸಮಯವೂ ಜನರಿಗೆ ಇರಲಿಲ್ಲ; ಅವರು ತಮ್ಮ ಪ್ರಯಾಣಕ್ಕಾಗಿ ವಿಶೇಷ ಆಹಾರವನ್ನು ತಯಾರಿಸುವುದಕ್ಕೂ ಆಗಲಿಲ್ಲ. ಆದ್ದರಿಂದ ಅವರು ಹುಳಿಯಿಲ್ಲದ ರೊಟ್ಟಿ ಮಾಡಿ ತಮ್ಮೊಡನೆ ತೆಗೆದುಕೊಂಡು ಹೋದರು.
40 ಇಸ್ರೇಲರು ಈಜಿಪ್ಟಿನಲ್ಲಿ ನಾನೂರಮೂವತ್ತು ವರ್ಷ ವಾಸಿಸಿದರು. 41 ನಾನೂರಮೂವತ್ತು ವರ್ಷಗಳಾದ ನಂತರ, ಅದೇ ದಿನದಂದು ಯೆಹೋವನ ಸೈನ್ಯಗಳೆಲ್ಲಾ[b] ಈಜಿಪ್ಟನ್ನು[c] ಬಿಟ್ಟು ಹೊರಟವು. 42 ಆದ್ದರಿಂದ ಯೆಹೋವನು ಅವರನ್ನು ಸಂರಕ್ಷಿಸಿ ಈಜಿಪ್ಟಿನಿಂದ ಹೊರತಂದದ್ದನ್ನು ಜ್ಞಾಪಕಮಾಡುವ ಆ ರಾತ್ರಿ ಬಹು ವಿಶೇಷವಾದ ರಾತ್ರಿಯಾಗಿದೆ. ಇಸ್ರೇಲರೆಲ್ಲರೂ ಆ ರಾತ್ರಿಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವರು.
ಪ್ರಭುವಿನ ರಾತ್ರಿಭೋಜನ
17 ಈಗ ನಾನು ನಿಮಗೆ ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ನಿಮ್ಮ ಸಭಾಕೂಟಗಳು ನಿಮಗೆ ಒಳ್ಳೆಯದನ್ನು ಮಾಡುವುದಕ್ಕಿಂತಲೂ ಹೆಚ್ಚು ಕೇಡುಗಳನ್ನೇ ಮಾಡುತ್ತವೆ. 18 ಮೊದಲನೆಯದಾಗಿ, ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಪಂಗಡಗಳಿರುವುದಾಗಿ ಕೇಳಿದ್ದೇನೆ. ಇದು ನಿಜವೆಂದು ಸ್ವಲ್ಪಮಟ್ಟಿಗೆ ನಂಬುತ್ತೇನೆ. 19 (ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ನಿಮ್ಮಲ್ಲಿ ಯಾರು ನಿಜವಾಗಿಯೂ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.)
20 ನೀವೆಲ್ಲರೂ ಒಟ್ಟಾಗಿ ಸೇರಿದಾಗ ನೀವು ಮಾಡುವಂಥದ್ದು ನಿಜವಾಗಿಯೂ ಪ್ರಭುವಿನ ರಾತ್ರಿಭೋಜನವಲ್ಲ. 21 ಏಕೆಂದರೆ, ನೀವು ಊಟ ಮಾಡುವಾಗ, ಇತರರಿಗೋಸ್ಕರ ಕಾಯದೆ ಪ್ರತಿಯೊಬ್ಬರು ತಮ್ಮಷ್ಟಕ್ಕೆ ತಾವೇ ಊಟ ಮಾಡುತ್ತಾರೆ. ಕೆಲವು ಜನರಲ್ಲಿ ಊಟಮಾಡಲು ಸಾಕಷ್ಟು ಆಹಾರ ಇರುವುದಿಲ್ಲ. ಇನ್ನು ಕೆಲವರಲ್ಲಿ ತಿಂದು, ಕುಡಿದು ಮತ್ತರಾಗುವಷ್ಟು ಆಹಾರವಿರುತ್ತದೆ. 22 ನೀವು ನಿಮ್ಮ ಸ್ವಂತ ಮನೆಗಳಲ್ಲಿ ತಿನ್ನಬಹುದು, ಕುಡಿಯಬಹುದು. ದೇವರ ಸಭೆಯು ಮುಖ್ಯವಾದದ್ದಲ್ಲವೆಂದು ನೀವು ಯೋಚಿಸುವಂತೆ ತೋರುತ್ತದೆ. ನೀವು ಬಡವರನ್ನು ನಾಚಿಕೆಗೆ ಗುರಿಮಾಡುತ್ತೀರಿ. ನಾನು ನಿಮಗೆ ಏನು ಹೇಳಲಿ? ನೀವು ಮಾಡುತ್ತಿರುವ ಈ ಕಾರ್ಯಕ್ಕೋಸ್ಕರ ನಾನು ನಿಮ್ಮನ್ನು ಹೊಗಳಬೇಕೇ? ನಾನು ನಿಮ್ಮನ್ನು ಹೊಗಳುವುದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International