Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 123

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

123 ಪರಲೋಕದಲ್ಲಿ ಸಿಂಹಾಸನಾರೂಢನಾಗಿರುವಾತನೇ,
    ನಿನ್ನ ಕಡೆಗೆ ಕಣ್ಣೆತ್ತಿ ನೋಡುತ್ತಾ ಪ್ರಾರ್ಥಿಸುವೆನು.
ಸೇವಕರು ತಮಗೆ ಬೇಕಾದವುಗಳಿಗಾಗಿ ತಮ್ಮ ಯಜಮಾನರನ್ನು ಅವಲಂಬಿಸಿಕೊಳ್ಳುವರು;
    ಸೇವಕಿಯರು ತಮ್ಮ ಯಜಮಾನಿಯರನ್ನು ಅವಲಂಬಿಸಿಕೊಳ್ಳುವರು.
ಅಂತೆಯೇ, ನಾವು ನಮ್ಮ ದೇವರಾದ ಯೆಹೋವನನ್ನು ಅವಲಂಬಿಸಿಕೊಳ್ಳುವೆವು.
    ಆತನ ಕರುಣೆಯನ್ನೇ ನಿರೀಕ್ಷಿಸುವೆವು.
ಯೆಹೋವನೇ, ನಮಗೆ ಕರುಣೆತೋರು,
    ಬಹುಕಾಲದಿಂದ ನಾವು ಅವಮಾನಿತರಾಗಿದ್ದೇವೆ.
ಗರ್ವಿಷ್ಠರೂ ಮೊಂಡರೂ
    ನಮ್ಮನ್ನು ಸಾಕಷ್ಟು ಗೇಲಿ ಮಾಡಿದ್ದಾರೆ.

ಯೆರೆಮೀಯ 7:1-15

ಯೆಹೋವನ ಆಲಯದಲ್ಲಿ ಯೆರೆಮೀಯನ ಧರ್ಮೋಪದೇಶ

ಯೆರೆಮೀಯನಿಗೆ ಯೆಹೋವನ ಸಂದೇಶ ಹೀಗಿತ್ತು: “ಯೆರೆಮೀಯನೇ, ಯೆಹೋವನ ಆಲಯದ ಹೆಬ್ಬಾಗಿಲಿನ ಹತ್ತಿರ ನಿಂತುಕೊಂಡು ಈ ಸಂದೇಶವನ್ನು ಸಾರು:

“‘ಇದು ಯೆಹೋವನ ಸಂದೇಶ. ಯೆಹೂದದ ಜನರೆಲ್ಲರೇ, ಯೆಹೋವನನ್ನು ಆರಾಧಿಸಲು ಈ ದ್ವಾರದಿಂದ ಪ್ರವೇಶ ಮಾಡುವ ಜನರೇ, ಈ ಸಂದೇಶವನ್ನು ಕೇಳಿರಿ. ಯೆಹೋವನು ಇಸ್ರೇಲರ ದೇವರು. ಸರ್ವಶಕ್ತನಾದ ದೇವರು ಹೀಗೆ ಹೇಳುತ್ತಾನೆ: ನಿಮ್ಮ ನಡತೆಯನ್ನು ಬದಲಾಯಿಸಿರಿ; ಒಳ್ಳೆಯದನ್ನು ಮಾಡಿರಿ. ಆಗ ನೀವು ಇಲ್ಲಿರಲು ಆಸ್ಪದ ಕೊಡುತ್ತೇನೆ. ಕೆಲವರು ಹೇಳುವ ಸುಳ್ಳುಗಳನ್ನು ನಂಬಬೇಡಿರಿ. ಅವರು “ಇದು ಯೆಹೋವನ ಆಲಯ, ಯೆಹೋವನ ಆಲಯ, ಯೆಹೋವನ ಆಲಯ” ಎಂದು ಹೇಳುತ್ತಾರೆ. ನೀವು ನಿಮ್ಮ ನಡತೆಯನ್ನು ಬದಲಾಯಿಸಿ ಸತ್ಕಾರ್ಯಗಳನ್ನು ಮಾಡಿದರೆ ನಾನು ನಿಮಗೆ ಈ ಸ್ಥಳದಲ್ಲಿ ವಾಸಿಸಲು ಆಸ್ಪದಕೊಡುತ್ತೇನೆ. ನೀವು ಒಬ್ಬರಿಗೊಬ್ಬರು ನ್ಯಾಯವಾದ ರೀತಿಯಲ್ಲಿ ವ್ಯವಹರಿಸಬೇಕು. ಅಪರಿಚಿತರೊಂದಿಗೂ ನೀವು ನ್ಯಾಯಬದ್ಧವಾಗಿ ವರ್ತಿಸಬೇಕು. ವಿಧವೆಯರಿಗೆ ಮತ್ತು ಅನಾಥರಿಗೆ ನೀವು ಒಳ್ಳೆಯದನ್ನು ಮಾಡಬೇಕು. ನಿರ್ದೋಷಿಗಳ ಕೊಲೆ ಮಾಡಬಾರದು; ಅನ್ಯ ದೇವರುಗಳನ್ನು ಸೇವಿಸಬಾರದು. ಏಕೆಂದರೆ ಅವುಗಳು ನಿಮ್ಮ ಜೀವನವನ್ನು ಹಾಳುಮಾಡುತ್ತವೆ. ನೀವು ನನ್ನ ಆಜ್ಞೆಯನ್ನು ಪಾಲಿಸಿದರೆ ಇಲ್ಲಿರಲು ನಾನು ನಿಮಗೆ ಆಸ್ಪದ ಕೊಡುತ್ತೇನೆ. ನಾನು ಈ ಪ್ರದೇಶವನ್ನು ನಿಮ್ಮ ಪೂರ್ವಿಕರಿಗೆ ಶಾಶ್ವತವಾದ ಸ್ವಾಸ್ತ್ಯವಾಗಿ ಕೊಟ್ಟಿದ್ದೇನೆ.

“‘ನೀವು ಸುಳ್ಳುಗಳನ್ನು ನಂಬುತ್ತಿದ್ದೀರಿ, ಆ ಸುಳ್ಳುಗಳು ಹುರುಳಿಲ್ಲದವುಗಳಾಗಿವೆ. ನೀವು ಕದಿಯುವುದಿಲ್ಲವೇ? ಕೊಲೆಗಳನ್ನು ಮಾಡುವುದಿಲ್ಲವೇ? ನೀವು ವ್ಯಭಿಚಾರ ಮಾಡುವುದಿಲ್ಲವೇ? ನೀವು ಅನ್ಯರ ಮೇಲೆ ಸುಳ್ಳು ದೋಷಾರೋಪಣೆ ಮಾಡುವುದಿಲ್ಲವೇ? ನೀವು ಸುಳ್ಳುದೇವರಾದ ಬಾಳನನ್ನು ಪೂಜಿಸಿ ಅನ್ಯದೇವರುಗಳ ಅನುಯಾಯಿಗಳಾಗಿಲ್ಲವೇ? 10 ನೀವು ಈ ಪಾಪಗಳನ್ನು ಮಾಡುತ್ತಿದ್ದರೂ ನನ್ನ ಹೆಸರಿನಿಂದ ಕರೆಯಲ್ಪಡುವ ಈ ಆಲಯದಲ್ಲಿ ನನ್ನ ಎದುರಿಗೆ ನಿಲ್ಲಬಹುದೆಂದು ಭಾವಿಸಿರುವಿರಾ? ನೀವು ನನ್ನ ಸಮ್ಮುಖದಲ್ಲಿ ನಿಂತುಕೊಂಡು, “ನಾವು ಸುರಕ್ಷಿತರಾಗಿದ್ದೇವೆ” ಎಂದು ಹೇಳಿಕೊಂಡು ನಿಮ್ಮ ದುಷ್ಕೃತ್ಯಗಳನ್ನು ಮುಂದುವರಿಸಬಹುದೆಂದು ಭಾವಿಸಿರುವಿರಾ? 11 ಈ ಪವಿತ್ರ ಆಲಯವನ್ನು ನನ್ನ ಹೆಸರಿನಿಂದ ಕರೆಯಲಾಗಿದೆ. ಈ ಆಲಯವು ನಿಮ್ಮ ದೃಷ್ಟಿಯಲ್ಲಿ ಕೇವಲ ಕಳ್ಳರು ಅಡಗುವ ಸ್ಥಳವಾಯಿತೇ? ನಾನು ನಿಮ್ಮ ವ್ಯವಹಾರವನ್ನೆಲ್ಲಾ ನೋಡುತ್ತಿದ್ದೇನೆ’” ಎಂಬುದು ಯೆಹೋವನಾದ ನನ್ನ ನುಡಿ.

12 “ಯೆಹೂದದ ಜನರಾದ ನೀವು ಈಗ ಶೀಲೋವಿಗೆ ಹೋಗಿರಿ. ನಾನು ಮೊದಲು ನನ್ನ ಹೆಸರಿಗಾಗಿ ಆಲಯವನ್ನು ಮಾಡಿದ ಸ್ಥಳಕ್ಕೆ ಹೋಗಿರಿ. ಇಸ್ರೇಲಿನ ಜನರು ಸಹ ದುಷ್ಕೃತ್ಯಗಳನ್ನು ಮಾಡಿದರು. ಅವರು ಮಾಡಿದ ದುಷ್ಕೃತ್ಯಗಳ ಕಾರಣ ನಾನು ಆ ಸ್ಥಳಕ್ಕೆ ಮಾಡಿರುವುದನ್ನು ಹೋಗಿ ನೋಡಿರಿ. 13 ಇಸ್ರೇಲಿನ ಜನರಾದ ನೀವು ಈ ದುಷ್ಕೃತ್ಯಗಳನ್ನು ಮಾಡುತ್ತಿದ್ದೀರಿ.” ಇದು ಯೆಹೋವನಾದ ನನ್ನ ಮಾತು: “ನಾನು ನಿಮಗೆ ಮತ್ತೆಮತ್ತೆ ಹೇಳಿದೆ, ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ನಾನು ನಿಮ್ಮನ್ನು ಕೂಗಿದೆ, ಆದರೆ ನೀವು ಉತ್ತರ ಕೊಡಲಿಲ್ಲ. 14 ಆದ್ದರಿಂದ ನನ್ನ ಹೆಸರನ್ನು ಹೊಂದಿರುವ ಆಲಯವನ್ನೂ ನೀವು ನಂಬಿರುವ ಆಲಯವನ್ನೂ ನಿಮ್ಮ ಪೂರ್ವಿಕರಿಗೆ ನಾನು ಕೊಟ್ಟಿರುವ ಸ್ಥಳವನ್ನೂ ನಾನು ಶೀಲೋವಿಗೆ ಮಾಡಿದಂತೆ ಮಾಡುವೆನು. 15 ನಾನು ನಿಮ್ಮ ಎಲ್ಲಾ ಸಹೋದರರನ್ನು ಅಂದರೆ ಸಮಸ್ತ ಎಫ್ರಾಯೀಮ್ ವಂಶದವರನ್ನು ಎಸೆದುಬಿಟ್ಟ ಹಾಗೆ ನಿಮ್ಮನ್ನೂ ನನ್ನಿಂದ ದೂರ ಎಸೆದುಬಿಡುವೆನು.”

1 ಕೊರಿಂಥದವರಿಗೆ 4:8-13

ನಿಮಗೆ ಅಗತ್ಯವಾದ ಪ್ರತಿಯೊಂದೂ ನಿಮಗಿದೆಯೆಂದು ನೀವು ಭಾವಿಸಿಕೊಂಡಿದ್ದೀರಿ. ನೀವು ನಿಮ್ಮನ್ನು ಐಶ್ವರ್ಯವಂತರೆಂದೂ ರಾಜರುಗಳೆಂದೂ ಭಾವಿಸಿಕೊಂಡಿದ್ದೀರಿ. ನೀವು ನಿಜವಾಗಿಯೂ ರಾಜರುಗಳಾಗಿದ್ದರೆ ನನಗೆ ಎಷ್ಟೋ ಸಂತೋಷವಾಗುತ್ತಿತ್ತು. ಆಗ ನಾವೂ ನಿಮ್ಮೊಂದಿಗೆ ರಾಜರುಗಳಾಗುತ್ತಿದ್ದೆವು. ಆದರೆ ದೇವರು ನನಗೂ ಉಳಿದ ಅಪೊಸ್ತಲರಿಗೂ ಕಡೆಯ ಸ್ಥಾನವನ್ನು ಕೊಟ್ಟಿದ್ದಾನೆಂದು ನನಗೆ ತೋರುತ್ತದೆ. ಜನರೆಲ್ಲರ ಎದುರಿನಲ್ಲಿ ನಾವು ಮರಣದಂಡನೆಗೆ ಗುರಿಯಾದಂಥವರಾಗಿದ್ದೇವೆ. ನಾವು ದೇವದೂತರಿಗೂ ಮನುಷ್ಯರಿಗೂ ಒಟ್ಟಿನಲ್ಲಿ ಇಡೀ ಜಗತ್ತಿಗೇ ನೋಟವಾಗಿದ್ದೇವೆ. 10 ನಾವು ಕ್ರಿಸ್ತನಿಗೋಸ್ಕರ ಮೂರ್ಖರಾಗಿದ್ದೇವೆ. ಆದರೆ ನೀವು ನಿಮ್ಮನ್ನು ಕ್ರಿಸ್ತನಲ್ಲಿ ಬಹು ಜ್ಞಾನಿಗಳೆಂದು ಭಾವಿಸಿಕೊಂಡಿದ್ದೀರಿ. ನಾವು ಬಲಹೀನರಾಗಿದ್ದೇವೆ, ಆದರೆ ನೀವು ನಿಮ್ಮನ್ನು ಬಲಿಷ್ಠರೆಂದು ಭಾವಿಸಿಕೊಂಡಿದ್ದೀರಿ. ಜನರು ನಿಮಗೆ ಗೌರವವನ್ನು ಕೊಡುತ್ತಾರೆ; ನಮಗಾದರೋ ಅವರು ಗೌರವವನ್ನು ಕೊಡುವುದಿಲ್ಲ. 11 ಈಗಲೂ ಸಹ ನಾವು ಹಸಿದವರಾಗಿದ್ದೇವೆ; ಬಾಯಾರಿದವರಾಗಿದ್ದೇವೆ; ಧರಿಸಿಕೊಳ್ಳಲು ಸಾಕಷ್ಟು ಬಟ್ಟೆಯಿಲ್ಲದವರಾಗಿದ್ದೇವೆ. ಆಗಾಗ್ಗೆ ನಮಗೆ ಪೆಟ್ಟುಗಳು ಬೀಳುತ್ತಿರುತ್ತವೆ; ನಮಗೆ ಮನೆಗಳೂ ಇಲ್ಲ. 12 ನಾವು ಊಟಕ್ಕಾಗಿ ನಮ್ಮ ಕೈಯಾರೆ ಕಷ್ಟಪಟ್ಟು ದುಡಿಯುತ್ತೇವೆ. ಜನರು ನಮ್ಮನ್ನು ಶಪಿಸುತ್ತಾರೆ, ನಾವಾದರೋ ಅವರನ್ನು ಆಶೀರ್ವದಿಸುತ್ತೇವೆ. ಜನರು ನಮಗೆ ಹಿಂಸೆ ಕೊಟ್ಟರೂ ತಾಳಿಕೊಳ್ಳುತ್ತೇವೆ. 13 ಜನರು ನಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಮಾತಾಡುತ್ತಾರೆ. ನಾವಾದರೋ ಅವರಿಗೆ ಒಳ್ಳೆಯ ವಿಷಯಗಳನ್ನು ಹೇಳುತ್ತೇವೆ. ಇಂದಿನವರೆಗೂ ಜನರು ನಮ್ಮನ್ನು ಲೋಕದ ಕಸವೋ ಭೂಮಿಯ ಹೊಲಸೋ ಎಂಬಂತೆ ಪರಿಗಣಿಸಿದ್ದಾರೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International