Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 123

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

123 ಪರಲೋಕದಲ್ಲಿ ಸಿಂಹಾಸನಾರೂಢನಾಗಿರುವಾತನೇ,
    ನಿನ್ನ ಕಡೆಗೆ ಕಣ್ಣೆತ್ತಿ ನೋಡುತ್ತಾ ಪ್ರಾರ್ಥಿಸುವೆನು.
ಸೇವಕರು ತಮಗೆ ಬೇಕಾದವುಗಳಿಗಾಗಿ ತಮ್ಮ ಯಜಮಾನರನ್ನು ಅವಲಂಬಿಸಿಕೊಳ್ಳುವರು;
    ಸೇವಕಿಯರು ತಮ್ಮ ಯಜಮಾನಿಯರನ್ನು ಅವಲಂಬಿಸಿಕೊಳ್ಳುವರು.
ಅಂತೆಯೇ, ನಾವು ನಮ್ಮ ದೇವರಾದ ಯೆಹೋವನನ್ನು ಅವಲಂಬಿಸಿಕೊಳ್ಳುವೆವು.
    ಆತನ ಕರುಣೆಯನ್ನೇ ನಿರೀಕ್ಷಿಸುವೆವು.
ಯೆಹೋವನೇ, ನಮಗೆ ಕರುಣೆತೋರು,
    ಬಹುಕಾಲದಿಂದ ನಾವು ಅವಮಾನಿತರಾಗಿದ್ದೇವೆ.
ಗರ್ವಿಷ್ಠರೂ ಮೊಂಡರೂ
    ನಮ್ಮನ್ನು ಸಾಕಷ್ಟು ಗೇಲಿ ಮಾಡಿದ್ದಾರೆ.

ಯೆರೆಮೀಯ 7:27-34

27 “ಯೆರೆಮೀಯನೇ, ನೀನು ಈ ಸಂಗತಿಗಳನ್ನು ಯೆಹೂದದ ಜನರಿಗೆ ಹೇಳು. ಆದರೆ ಅವರು ನಿನ್ನ ಮಾತುಗಳನ್ನು ಕೇಳುವದಿಲ್ಲ. 28 ಆದ್ದರಿಂದ ನೀನು ಅವರಿಗೆ ಹೀಗೆ ಹೇಳಬೇಕು: ತಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸದ ಜನಾಂಗವಿದು. ಈ ಜನರು ದೇವರ ಧರ್ಮೋಪದೇಶವನ್ನು ಕೇಳಲಿಲ್ಲ. ಈ ಜನರಿಗೆ ನಿಜವಾದ ಧರ್ಮೋಪದೇಶ ಗೊತ್ತಿಲ್ಲ.

ಸಂಹಾರದ ತಗ್ಗು

29 “ಯೆರೆಮೀಯನೇ, ನಿನ್ನ ಕೂದಲನ್ನು ಕತ್ತರಿಸಿ[a] ಎಸೆದುಬಿಡು. ಬೋಳುಶಿಖರಕ್ಕೆ ಹೋಗಿ ರೋಧಿಸು. ಏಕೆಂದರೆ ಯೆಹೋವನು ಈ ತಲೆಮಾರಿನ ಜನರನ್ನು ತಿರಸ್ಕರಿಸಿದ್ದಾನೆ; ಆತನು ಇವರಿಗೆ ವಿಮುಖನಾಗಿದ್ದಾನೆ. ಆತನು ಕೋಪದಿಂದ ಅವರನ್ನು ದಂಡಿಸುವನು. 30 ನೀನು ಹಾಗೆ ಮಾಡಲೇಬೇಕು ಯಾಕೆಂದರೆ, ಯೆಹೂದದ ಜನರು ಮಾಡುವ ದುಷ್ಕೃತ್ಯಗಳನ್ನು ನಾನು ನೋಡಿದ್ದೇನೆ.” ಯೆಹೋವನು ಹೀಗೆನ್ನುತ್ತಾನೆ: “ಅವರು ತಮ್ಮ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ನಾನು ಆ ವಿಗ್ರಹಗಳನ್ನು ದ್ವೇಷಿಸುತ್ತೇನೆ. ನನ್ನ ಹೆಸರಿನಿಂದ ಖ್ಯಾತಿಪಡೆದ ಆಲಯದಲ್ಲಿ ಅವರು ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ಅವರು ನನ್ನ ಆಲಯವನ್ನು ‘ಮಲಿನ’ಗೊಳಿಸಿದ್ದಾರೆ. 31 ಯೆಹೂದದ ಜನರು ಬೆನ್‌ಹಿನ್ನೊಮ್ ತಗ್ಗಿನಲ್ಲಿ ತೋಫೆತೆಂಬ ಪೂಜಾಸ್ಥಳವನ್ನು ಕಟ್ಟಿದ್ದಾರೆ. ಆ ಸ್ಥಳಗಳಲ್ಲಿ ಜನರು ತಮ್ಮ ಗಂಡು ಮತ್ತು ಹೆಣ್ಣುಮಕ್ಕಳನ್ನು ಕೊಂದು ಯಜ್ಞದ ಆಹುತಿಯೆಂದು ಅವರನ್ನು ಸುಡುತ್ತಾರೆ. ನೀವು ಹೀಗೆ ಮಾಡಬೇಕೆಂದು ನಾನೆಂದೂ ಹೇಳಿಲ್ಲ. ಇಂಥ ವಿಚಾರಗಳು ನನ್ನ ಮನಸ್ಸಿನಲ್ಲಿಯೂ ಬಂದಿಲ್ಲ. 32 ಹೀಗಿರಲು ನಾನು ಈ ಕಣಿವೆಯನ್ನು ತೋಫೆತ್ ಮತ್ತು ಬೆನ್‌ಹಿನ್ನೊಮೀನ ಕಣಿವೆ ಎಂದು ಕರೆಯದೆ ಇದನ್ನು ಸಂಹಾರದ ಕಣಿವೆ ಎಂದು ಕರೆಯುವ ದಿನಗಳು ಬರುತ್ತಿವೆ ಎಂಬ ಎಚ್ಚರಿಕೆಯನ್ನು ಕೊಡುತ್ತೇನೆ.” ಇದು ಯೆಹೋವನು ಹೇಳಿದ ಮಾತು. “ಶವಗಳನ್ನು ಹೂಳುವದಕ್ಕೆ ಕೊಂಚವೂ ಸ್ಥಳ ಇಲ್ಲದಂತಾಗುವವರೆಗೆ ತೋಫೆತಿನಲ್ಲಿ ಶವಗಳನ್ನು ಹೂಳುವ ಕಾರಣ ಅದಕ್ಕೆ ಈ ಹೆಸರನ್ನು ಕೊಡಲಾಗುವುದು. 33 ಆಗ ಸತ್ತವರ ದೇಹಗಳು ಭೂಮಿಯ ಮೇಲೆ ಬಿದ್ದಿರುತ್ತವೆ; ಅವು ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ಕಾಡುಪ್ರಾಣಿಗಳಿಗೂ ಆಹಾರವಾಗುತ್ತವೆ. ಆ ಪಕ್ಷಿಗಳನ್ನು ಮತ್ತು ಪ್ರಾಣಿಗಳನ್ನು ಓಡಿಸುವದಕ್ಕೆ ಒಬ್ಬನಾದರೂ ಜೀವಂತವಾಗಿರುವುದಿಲ್ಲ. 34 ಜೆರುಸಲೇಮಿನ ಬೀದಿಗಳಲ್ಲಿಯೂ ಯೆಹೂದದ ಪಟ್ಟಣಗಳಲ್ಲಿಯೂ ಸಂತೋಷ ಮತ್ತು ಸಂಭ್ರಮದ ಧ್ವನಿಯನ್ನೂ ವಧುವರರ ಸ್ವರವನ್ನೂ ಬರದಂತೆ ಮಾಡುತ್ತೇನೆ. ಈ ಪ್ರದೇಶವು ಬರಿದಾದ ಮರಳುಗಾಡಾಗುವದು.”

ಮತ್ತಾಯ 8:18-22

ಯೇಸುವನ್ನು ಹಿಂಬಾಲಿಸಿ

(ಲೂಕ 9:57-62)

18 ಯೇಸು ತನ್ನ ಸುತ್ತಲೂ ಇದ್ದ ಜನರೆಲ್ಲರನ್ನು ನೋಡಿ ತನ್ನ ಶಿಷ್ಯರಿಗೆ ಸರೋವರದ ಆಚೆಯ ತೀರಕ್ಕೆ ಹೋಗುವಂತೆ ಹೇಳಿದನು. 19 ಆಗ ಧರ್ಮೋಪದೇಶಕನು ಯೇಸುವಿನ ಬಳಿಗೆ ಬಂದು, “ಬೋಧಕನೇ, ನೀನು ಯಾವ ಸ್ಥಳಕ್ಕೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದನು.

20 ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಪಕ್ಷಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಅಂದನು.

21 ಶಿಷ್ಯರಲ್ಲಿ ಒಬ್ಬನು ಯೇಸುವಿಗೆ, “ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿಬರಲು ನನಗೆ ಅಪ್ಪಣೆಯಾಗಲಿ. ಆಮೇಲೆ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಿದನು.

22 ಆದರೆ ಯೇಸು ಅವನಿಗೆ, “ಸತ್ತವರೇ ತಮ್ಮಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಿಕೊಳ್ಳಲಿ. ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International