Revised Common Lectionary (Complementary)
ಕೃತಜ್ಞತಾ ಸ್ತುತಿಗೀತೆ.
100 ಸಮಸ್ತ ಭೂನಿವಾಸಿಗಳೇ,
ಯೆಹೋವನಿಗೆ ಗಾಯನ ಮಾಡಿರಿ!
2 ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡಿರಿ;
ಹರ್ಷಗೀತೆಗಳೊಡನೆ ಆತನ ಸನ್ನಿಧಿಗೆ ಬನ್ನಿರಿ!
3 ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ.
ನಮ್ಮನ್ನು ಸೃಷ್ಟಿಸಿದವನು ಆತನೇ, ನಾವು ಆತನವರು.
ನಾವು ಆತನ ಜನರೂ ಮಂದೆಯೂ ಆಗಿದ್ದೇವೆ.
4 ಕೃತಜ್ಞತಾಗೀತೆಗಳೊಡನೆ ಆತನ ಪಟ್ಟಣಕ್ಕೆ ಬನ್ನಿರಿ.
ಸ್ತುತಿಗೀತೆಗಳೊಡನೆ ಆತನ ಆಲಯಕ್ಕೆ ಬನ್ನಿರಿ.
ಆತನನ್ನು ಸನ್ಮಾನಿಸುತ್ತಾ ಆತನ ಹೆಸರನ್ನು ಕೊಂಡಾಡಿರಿ.
5 ಯೆಹೋವನು ಒಳ್ಳೆಯವನು!
ಆತನ ಪ್ರೀತಿಯು ಶಾಶ್ವತವಾದದ್ದು,
ಆತನ ನಂಬಿಗಸ್ತಿಕೆಯು ನಿರಂತರವಾದದ್ದು.
ಬಾಬಿಲೋನಿನ ಬಗ್ಗೆ ದೈವೋಕ್ತಿ
50 ಬಾಬಿಲೋನ್ ಮತ್ತು ಬಾಬಿಲೋನಿನ ಜನರ ಬಗ್ಗೆ ಯೆಹೋವನ ಸಂದೇಶವಿದು. ಈ ಸಂದೇಶವನ್ನು ಯೆಹೋವನು ಯೆರೆಮೀಯನ ಮುಖಾಂತರ ಕೊಟ್ಟನು.
2 “ಎಲ್ಲಾ ಜನಾಂಗಗಳಲ್ಲಿ ಪ್ರಚಾರಪಡಿಸಿರಿ,
ಒಂದು ಧ್ವಜವನ್ನು ಹಾರಿಸಿ ಈ ಸಂದೇಶವನ್ನೆಲ್ಲಾ ಸಾರಿರಿ.
‘ಬಾಬಿಲೋನ್ ಜನಾಂಗವನ್ನು ವಶಪಡಿಸಿಕೊಳ್ಳಲಾಗುವುದು.
ಬೇಲ್ ದೇವತೆ ನಾಚಿಕೆಪಡುವುದು.
ಮೆರೋದಾಕ್ ದೇವತೆಯು ಭಯಪಡುವುದು.
ಬಾಬಿಲೋನಿನ ವಿಗ್ರಹಗಳು ನಾಚಿಕೆಪಡುವವು.
ಅಲ್ಲಿಯ ದೇವತೆಗಳು ಹೆದರಿಕೊಳ್ಳುವವು.’
3 ಉತ್ತರದ ಒಂದು ಜನಾಂಗವು ಬಾಬಿಲೋನಿನ ಮೇಲೆ ಧಾಳಿ ಮಾಡುವುದು.
ಆ ಜನಾಂಗವು ಬಾಬಿಲೋನನ್ನು ಒಂದು ಬರಿದಾದ ಮರುಭೂಮಿಯನ್ನಾಗಿ ಮಾಡುವದು.
ಅಲ್ಲಿ ಯಾರೂ ವಾಸಮಾಡಲಾರರು.
ಪ್ರಾಣಿಗಳು ಮತ್ತು ಮನುಷ್ಯರು ಅಲ್ಲಿಂದ ಪಲಾಯನ ಮಾಡುವರು.”
4 ಯೆಹೋವನು ಹೀಗೆನ್ನುತ್ತಾನೆ: “ಆ ಸಮಯದಲ್ಲಿ
ಇಸ್ರೇಲಿನ ಮತ್ತು ಯೆಹೂದದ ಜನರು ಒಟ್ಟಿಗೆ ಸೇರುವರು.
ಅವರು ಒಟ್ಟುಗೂಡಿ ಬಹಳವಾಗಿ ಗೋಳಾಡುವರು;
ತಮ್ಮ ದೇವರಾದ ಯೆಹೋವನನ್ನು ಹುಡುಕಲು ಹೋಗುವರು.
5 ಅವರು ಚೀಯೋನಿಗೆ ಹೋಗುವ ಮಾರ್ಗವನ್ನು ವಿಚಾರಿಸುವರು.
ಆ ದಿಕ್ಕಿನಲ್ಲಿ ಹೋಗಲು ಪ್ರಾರಂಭಿಸುವರು.
‘ಬನ್ನಿ, ನಾವೆಲ್ಲರೂ ಯೆಹೋವನ ಆಶ್ರಯಪಡೆಯೋಣ.
ಆತನೊಂದಿಗೆ ಶಾಶ್ವತವಾದ ಮತ್ತು ನಾವೆಂದೂ ಮರೆಯಲಾಗದ
ಒಡಂಬಡಿಕೆಯನ್ನು ಮಾಡಿಕೊಳ್ಳೋಣ’ ಎಂದು ಅವರು ಹೇಳುವರು.
6 “ನನ್ನ ಜನರು ತಪ್ಪಿಸಿಕೊಂಡ ಕುರಿಗಳಂತಿದ್ದಾರೆ.
ಅವರ ಕುರುಬರು ಅವರನ್ನು ತಪ್ಪು ದಾರಿಗೆ ಎಳೆದಿದ್ದಾರೆ.
ಅವರ ನಾಯಕರುಗಳು ಅವರನ್ನು ಬೆಟ್ಟಗಳಲ್ಲಿ ಅಲೆಯುವಂತೆ ಮಾಡಿದ್ದಾರೆ.
ಅವರ ವಿಶ್ರಾಂತಿಸ್ಥಾನವನ್ನು ಅವರು ಮರೆತುಬಿಟ್ಟಿದ್ದಾರೆ.
7 ನನ್ನ ಜನರನ್ನು ಕಂಡವರೆಲ್ಲ ಅವರನ್ನು ನೋಯಿಸಿದ್ದಾರೆ.
ಆ ಶತ್ರುಗಳು,
‘ನಾವು ಮಾಡಿದ್ದು ತಪ್ಪಲ್ಲ.
ಅವರು ಯೆಹೋವನ ವಿರುದ್ಧ ಪಾಪ ಮಾಡಿದ್ದಾರೆ.
ಯೆಹೋವನು ಅವರ ನಿಜವಾದ ನಿವಾಸವಾಗಿದ್ದನು.
ಯೆಹೋವನು ಅವರ ಪೂರ್ವಿಕರು ನಂಬಿದ್ದ ದೇವರಾಗಿದ್ದನು’ ಎಂದರು.
17 ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ ಮತ್ತು ಅವರ ಅಧಿಕಾರದ ಅಧೀನದಲ್ಲಿರಿ. ಅವರೇ ನಿಮಗೆ ಜವಾಬ್ದಾರರು. ಅವರು ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ಈ ಕಾರ್ಯವನ್ನು ವ್ಯಸನದಿಂದ ಮಾಡದೆ ಸಂತೋಷದಿಂದ ಮಾಡಲು ಸಾಧ್ಯವಾಗುವಂತೆ ಅವರಿಗೆ ವಿಧೇಯರಾಗಿರಿ. ಅವರ ಕಾರ್ಯವನ್ನು ಕಷ್ಟಕರವನ್ನಾಗಿ ಮಾಡುವುದರಿಂದ ನಿಮಗೇನೂ ಪ್ರಯೋಜನವಿಲ್ಲ.
18 ನಮಗೋಸ್ಕರ ಪ್ರಾರ್ಥಿಸುವುದನ್ನು ಮುಂದುವರಿಸಿರಿ. ನಾವು ಯಾವಾಗಲೂ ಉತ್ತಮ ಕಾರ್ಯಗಳನ್ನು ಮಾಡಲು ಪ್ರಯತ್ನಿಸುವುದರಿಂದ, ನಮ್ಮ ಹೃದಯಗಳು ಶುದ್ಧವಾಗಿವೆ ಎಂಬ ನಂಬಿಕೆ ನಮಗಿದೆ. 19 ದೇವರು ನನ್ನನ್ನು ನಿಮ್ಮ ಬಳಿಗೆ ಬೇಗನೆ ಕಳುಹಿಸುವಂತೆ ನೀವು ಆತನಲ್ಲಿ ಪ್ರಾರ್ಥನೆಯನ್ನು ಮಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ. ನನಗೆ ಅತ್ಯಗತ್ಯವಾದದ್ದು ಇದೇ.
20-21 ಶಾಂತಿಸ್ವರೂಪನಾದ ದೇವರು ನಿಮಗೆ ಬೇಕಾದ ತನ್ನ ವರದಾನಗಳನ್ನು ದಯಪಾಲಿಸಲಿ ಎಂದು ನಾನು ಆತನಲ್ಲಿ ಪ್ರಾರ್ಥಿಸುತ್ತೇನೆ. ಏಕೆಂದರೆ ಆಗ ನೀವು ಆತನ ಇಷ್ಟಕ್ಕನುಸಾರವಾದವುಗಳನ್ನೆಲ್ಲಾ ಮಾಡಲು ಸಾಧ್ಯವಾಗುವುದು. ತನ್ನ ರಕ್ತವನ್ನು ಸುರಿಸಿ ಸಭೆಯೆಂಬ ಹಿಂಡಿಗೆ ಮಹಾಕುರುಬನಾಗಿರುವ ನಮ್ಮ ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಮೇಲಕ್ಕೆ ಎಬ್ಬಿಸಿದವನು ದೇವರೇ. ಆತನ ರಕ್ತವು ಶಾಶ್ವತವಾದ ಹೊಸ ಒಡಂಬಡಿಕೆಯನ್ನಾರಂಭಿಸಿತು. ದೇವರು ತನಗೆ ಸಂತೋಷವನ್ನು ಉಂಟುಮಾಡುವ ಕಾರ್ಯಗಳನ್ನು ಯೇಸು ಕ್ರಿಸ್ತನ ಮೂಲಕ ನಮ್ಮಲ್ಲಿ ನಡೆಸಲಿ. ಯೇಸುವಿಗೆ ಎಂದೆಂದಿಗೂ ಮಹಿಮೆಯಾಗಲಿ. ಆಮೆನ್.
22 ನನ್ನ ಸಹೋದರ ಸಹೋದರಿಯರೇ, ನಾನು ಹೇಳಿದ ಈ ಸಂಗತಿಗಳನ್ನು ನೀವು ತಾಳ್ಮೆಯಿಂದ ಆಲಿಸಬೇಕೆಂದು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ನಿಮ್ಮನ್ನು ಬಲಪಡಿಸುವುದಕ್ಕಾಗಿ ಈ ಪತ್ರವನ್ನು ಬರೆದಿರುವೆನು. ಈ ಪತ್ರವು ಬಹುದೀರ್ಘವಾದದ್ದೇನೂ ಅಲ್ಲ. 23 ನಮ್ಮ ಸಹೋದರನಾದ ತಿಮೊಥೆಯನಿಗೆ ಸೆರೆಮನೆಯಿಂದ ಬಿಡುಗಡೆ ಆಯಿತೆಂಬುದು ನಿಮಗೆ ತಿಳಿದಿರಲಿ. ಅವನು ನನ್ನ ಬಳಿಗೆ ಬೇಗನೆ ಬಂದರೆ, ನಾವಿಬ್ಬರೂ ನಿಮ್ಮನ್ನು ನೋಡಲು ಬರುತ್ತೇವೆ.
24 ನಿಮ್ಮ ಸಭಾನಾಯಕರಿಗೆಲ್ಲ ಮತ್ತು ದೇವಜನರಿಗೆಲ್ಲ ನಮ್ಮ ವಂದನೆಗಳನ್ನು ತಿಳಿಸಿ. ಇಟಲಿಯ ದೇವಜನರೆಲ್ಲರೂ ನಿಮಗೆ ವಂದನೆಗಳನ್ನು ಹೇಳುತ್ತಾರೆ.
25 ದೇವರ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.
Kannada Holy Bible: Easy-to-Read Version. All rights reserved. © 1997 Bible League International