Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 78:23-29

23 ಆಗ ಆತನು ಉನ್ನತದಲ್ಲಿರುವ ಮೇಘಗಳನ್ನು ತೆರೆದನು,
    ಅವರ ಆಹಾರಕ್ಕಾಗಿ ಮನ್ನವನ್ನು ಮಳೆಗರೆಸಿದನು.
24 ಆಕಾಶದ ದ್ವಾರಗಳು ತೆರೆದು
    ಆಕಾಶದ ಉಗ್ರಾಣದಿಂದ ಧಾನ್ಯವು ಸುರಿದಂತೆ ಮನ್ನವು ಸುರಿಯಿತು.
25 ಜನರು ದೇವದೂತರ ಆಹಾರವನ್ನು ತಿಂದರು.
    ಅವರನ್ನು ತೃಪ್ತಿಗೊಳಿಸುವುದಕ್ಕಾಗಿ ಆತನು ಆಹಾರವನ್ನು ಹೇರಳವಾಗಿ ಒದಗಿಸಿದನು.
26 ಬಳಿಕ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು.
    ಆಗ ಲಾವಕ್ಕಿಗಳು ಮಳೆಯಂತೆ ಅವರಿದ್ದಲ್ಲಿಗೆ ಬಂದು ಬಿದ್ದವು.
27 ಆತನು ತೇಮಾನಿನಿಂದ ಗಾಳಿಬೀಸುವಂತೆ ಮಾಡಿದಾಗ
    ಪಕ್ಷಿಗಳು ಸಮುದ್ರದ ಮರಳಿನಷ್ಟು ಅವರಿದ್ದಲ್ಲಿ ಬಂದು ಬಿದ್ದವು.
28 ಪಕ್ಷಿಗಳು ಪಾಳೆಯದ ಮಧ್ಯಭಾಗದಲ್ಲಿ,
    ಆ ಜನರ ಗುಡಾರಗಳ ಸುತ್ತಲೆಲ್ಲಾ ಬಿದ್ದವು.
29 ಅವರಿಗೆ ತಿನ್ನಲು ಹೇರಳವಾಗಿತ್ತು.
    ಆದರೆ ತಮ್ಮ ಆಸೆಗಳೇ ತಮ್ಮನ್ನು ಪಾಪಕ್ಕೆ ನಡೆಸುವಂತೆ ಅವರು ಮಾಡಿದರು.

ವಿಮೋಚನಕಾಂಡ 12:43-13:2

43 ಯೆಹೋವನು ಮೋಶೆ ಆರೋನರಿಗೆ, “ಪಸ್ಕಹಬ್ಬದ ನಿಯಮಗಳು ಇಂತಿವೆ: ಯಾವ ಪರದೇಶಿಯೂ ಪಸ್ಕಹಬ್ಬದ ಊಟವನ್ನು ಮಾಡಬಾರದು. 44 ಆದರೆ ಸುನ್ನತಿ ಮಾಡಿಸಿಕೊಂಡಿರುವ ಗುಲಾಮನು ಪಸ್ಕಹಬ್ಬದ ಊಟವನ್ನು ಮಾಡಬಹುದು. 45 ಆದರೆ ನಿಮ್ಮ ದೇಶದಲ್ಲಿ ಕೇವಲ ವಾಸವಾಗಿರುವವರಾಗಲಿ ಕೂಲಿಯಾಳಾಗಲಿ ಪಸ್ಕಹಬ್ಬದ ಊಟ ಮಾಡಬಾರದು.

46 “ಪಸ್ಕಹಬ್ಬದ ಊಟವನ್ನು ಮನೆಯೊಳಗೆ ತಿನ್ನಬೇಕು. ಪಸ್ಕದ ಮಾಂಸವನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಕೂಡದು. ಕುರಿಮರಿಯ ಎಲುಬುಗಳಲ್ಲಿ ಯಾವುದನ್ನೂ ಮುರಿಯಬಾರದು. 47 ಇಸ್ರೇಲರ ಇಡೀ ಸಮೂಹವು ಈ ಹಬ್ಬವನ್ನು ಆಚರಿಸಬೇಕು. 48 ನಿಮ್ಮ ಮಧ್ಯದಲ್ಲಿ ವಾಸವಾಗಿರುವ ಪರದೇಶದವನು ಯೆಹೋವನ ಪಸ್ಕ ಭೋಜನದಲ್ಲಿ ಪಾಲುಗಾರನಾಗಬೇಕೆಂದು ಬಯಸಿದರೆ ಅವನು ಸುನ್ನತಿ ಮಾಡಿಸಿಕೊಳ್ಳಬೇಕು. ಆಗ ಅವನು ಇಸ್ರೇಲಿನವನಾಗುವುದರಿಂದ ಭೋಜನದಲ್ಲಿ ಪಾಲುಗಾರನಾಗಬಹುದು. ಆದರೆ ಸುನ್ನತಿಯಾಗಿಲ್ಲದವನು ಪಸ್ಕದ ಊಟ ಮಾಡಕೂಡದು. 49 ಪ್ರತಿಯೊಬ್ಬರಿಗೂ ಇದೇ ನಿಯಮ ಅನ್ವಯಿಸುತ್ತದೆ. ಸ್ವದೇಶದವನಿಗೂ ನಿಮ್ಮಲ್ಲಿ ವಾಸವಾಗಿರುವ ಪರದೇಶದವನಿಗೂ ಒಂದೇ ನಿಯಮವಿರಬೇಕು” ಅಂದನು.

50 ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದಂತೆಯೇ ಇಸ್ರೇಲರೆಲ್ಲರೂ ಮಾಡಿದರು. 51 ಆದ್ದರಿಂದ ಅದೇ ದಿನದಲ್ಲಿ ಯೆಹೋವನು ಇಸ್ರೇಲರನ್ನು ಈಜಿಪ್ಟ್ ದೇಶದಿಂದ ಜನರನ್ನು ಗುಂಪುಗುಂಪುಗಳಾಗಿ ಹೊರತಂದನು.

13 ಬಳಿಕ ಯೆಹೋವನು ಮೋಶೆಗೆ, “ಇಸ್ರೇಲರಲ್ಲಿ ಹುಟ್ಟಿದ ಚೊಚ್ಚಲು ಗಂಡುಮಕ್ಕಳೆಲ್ಲಾ ನನಗೆ ಮೀಸಲಾಗಿರಬೇಕು; ಪ್ರತಿಯೊಬ್ಬ ಚೊಚ್ಚಲು ಮಗನು ನನ್ನವನೇ. ಪ್ರತಿಯೊಂದು ಚೊಚ್ಚಲು ಪಶುವು ನನ್ನದೇ” ಎಂದು ಹೇಳಿದನು.

1 ಕೊರಿಂಥದವರಿಗೆ 11:27-34

27 ಹೀಗಿರಲಾಗಿ ಒಬ್ಬನು ಪ್ರಭುವಿನ ರೊಟ್ಟಿಯನ್ನು ತಿನ್ನುವಾಗ, ಪಾತ್ರೆಯಲ್ಲಿ ಕುಡಿಯುವಾಗ ಇವುಗಳ ನಿಜವಾದ ಅರ್ಥವನ್ನು ಕಾರ್ಯಗಳ ಮೂಲಕ ತೋರ್ಪಡಿಸಬೇಕು, ಇಲ್ಲವಾದರೆ ಅವನು ಪ್ರಭುವಿನ ದೇಹಕ್ಕೂ ರಕ್ತಕ್ಕೂ ದೋಷಿಯಾಗುತ್ತಾನೆ. 28 ಪ್ರತಿಯೊಬ್ಬ ವ್ಯಕ್ತಿಯು ರೊಟ್ಟಿಯನ್ನು ತಿನ್ನುವುದಕ್ಕಿಂತಲೂ ಪಾತ್ರೆಯಲ್ಲಿ ಕುಡಿಯುವುದಕ್ಕಿಂತಲೂ ಮುಂಚಿತವಾಗಿ ತನ್ನ ಹೃದಯವನ್ನು ಪರಿಶೀಲಿಸಿಕೊಳ್ಳಬೇಕು. 29 ಯಾವನಾದರೂ ಪ್ರಭುವಿನ ದೇಹವೆಂದು ಗುರುತಿಸದೆ ರೊಟ್ಟಿಯನ್ನು ತಿಂದರೆ ಮತ್ತು ದ್ರಾಕ್ಷಾರಸವನ್ನು ಕುಡಿದರೆ ಅವನು ತಿಂದದ್ದಕ್ಕೂ ಕುಡಿದದ್ದಕ್ಕೂ ದೋಷಿಯೆಂಬ ತೀರ್ಪಿಗೆ ಒಳಗಾಗುತ್ತಾನೆ. 30 ಆದಕಾರಣವೇ, ನಿಮ್ಮ ಸಭೆಯಲ್ಲಿರುವ ಅನೇಕರು ರೋಗಿಗಳೂ ಬಲಹೀನರೂ ಆಗಿದ್ದಾರೆ ಮತ್ತು ಅನೇಕರು ಸತ್ತು ಹೋದರು. 31 ಆದರೆ ನಮ್ಮನ್ನು ನಾವೇ ಪರಿಶೋಧಿಸಿಕೊಂಡರೆ ನ್ಯಾಯತೀರ್ಪಿಗೆ ಒಳಗಾಗುವುದಿಲ್ಲ. 32 ಆದರೆ ಪ್ರಭುವು ನಮಗೆ ತೀರ್ಪು ಮಾಡುವಾಗ, ನಮಗೆ ಸರಿಯಾದ ಮಾರ್ಗವನ್ನು ತೋರಿಸುವುದಕ್ಕಾಗಿಯೂ ಈ ಲೋಕದ ಇತರ ಜನರೊಂದಿಗೆ ನಮಗೆ ಅಪರಾಧಿಗಳೆಂಬ ತೀರ್ಪಾಗದಂತೆಯೂ ಆತನು ನಮ್ಮನ್ನು ಶಿಕ್ಷಿಸುತ್ತಾನೆ.

33 ಆದ್ದರಿಂದ ನನ್ನ ಪ್ರಿಯ ಸಹೋದರ ಸಹೋದರಿಯರೇ, ನೀವು ಊಟ ಮಾಡುವುದಕ್ಕಾಗಿ ಒಟ್ಟಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ. 34 ಒಬ್ಬ ವ್ಯಕ್ತಿಯು ಹಸಿವೆಗೊಂಡಿದ್ದರೆ, ಅವನು ಮನೆಯಲ್ಲಿ ಊಟಮಾಡಲಿ. ನೀವು ಹೀಗೆ ಮಾಡಿದರೆ, ನಿಮ್ಮ ಸಭಾಕೂಟವು ನಿಮ್ಮ ಮೇಲೆ ನ್ಯಾಯತೀರ್ಪನ್ನು ಬರಮಾಡುವುದಿಲ್ಲ. ಉಳಿದ ವಿಷಯಗಳ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ನಿಮ್ಮಲ್ಲಿಗೆ ಬಂದಾಗ ತಿಳಿಸಿಕೊಡುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International