Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 34:9-14

ಯೆಹೋವನ ಜನರೇ, ಆತನನ್ನು ಆರಾಧಿಸಿರಿ.
    ಆತನ ಭಕ್ತರಿಗೆ ಬೇರೆ ಯಾವ ಆಶ್ರಯಸ್ಥಾನವೂ ಇಲ್ಲ.
10 ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು.
    ಆದರೆ ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರು ಸುವರಗಳನ್ನು ಹೊಂದಿಕೊಳ್ಳುವರು.
11 ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ;
    ಯೆಹೋವನಲ್ಲಿ ನಿಮಗಿರಬೇಕಾದ ಭಯಭಕ್ತಿಯನ್ನು ಕಲಿಸಿಕೊಡುವೆನು.
12 ದೀರ್ಘಾಯುಷ್ಯವು ಬೇಕೋ?
    ಬಹುಕಾಲ ಸುಖವನ್ನು ಅನುಭವಿಸಬೇಕೋ?
13 ಹಾಗಾದರೆ ಕೆಟ್ಟದ್ದನ್ನು ಮಾತಾಡದಂತೆ ನಾಲಿಗೆಯನ್ನು ಕಾದುಕೊಳ್ಳಿರಿ.
    ಸುಳ್ಳಾಡದಂತೆ ತುಟಿಗಳನ್ನು ಇಟ್ಟುಕೊಳ್ಳಿರಿ.
14 ಕೆಟ್ಟದ್ದನ್ನು ಬಿಟ್ಟು ಒಳ್ಳೆಯವುಗಳನ್ನು ಮಾಡಿರಿ.
    ಸಮಾಧಾನವನ್ನು ಬಯಸಿ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ.

ಯೋಬನು 12

ಯೋಬನ ವಾದ

12 ಆಮೇಲೆ ಯೋಬನು ಚೋಫರನಿಗೆ ಹೀಗೆ ಉತ್ತರಿಸಿದನು:

“ನೀವು ನಿಮ್ಮನ್ನೇ ಜ್ಞಾನಿಗಳೆಂದು ಆಲೋಚಿಸಿಕೊಂಡಿದ್ದೀರಿ.
    ನೀವು ಸಾಯುವಾಗ ಜ್ಞಾನವು ನಿಮ್ಮೊಡನೆಯೇ ಸಾಯುವುದು.
ಆದರೆ ನನ್ನ ಮನಸ್ಸು ನಿಮ್ಮ ಮನಸ್ಸಿನಂತೆಯೇ ಒಳ್ಳೆಯದಾಗಿದೆ.
    ನಾನು ನಿಮ್ಮಂತೆಯೇ ಬುದ್ಧಿವಂತನಾಗಿರುವೆ.
ಇದು ಸತ್ಯವೆಂದು
    ಯಾರು ಬೇಕಾದರೂ ತಿಳಿದುಕೊಳ್ಳಬಲ್ಲರು.

“ಈಗ ನನ್ನ ಸ್ನೇಹಿತರು ನನ್ನನ್ನು ನೋಡಿ ನಗುವರು.
    ಹೌದು, ನಾನು ದೇವರಿಗೆ ಪ್ರಾರ್ಥಿಸುವೆನು; ಆತನು ನನಗೆ ಉತ್ತರಿಸುವನು.
ನಾನು ನೀತಿವಂತನಾಗಿದ್ದರೂ ನಿರ್ದೋಷಿಯಾಗಿದ್ದರೂ
    ಪರಿಹಾಸ್ಯಕ್ಕೆ ಗುರಿಯಾಗಿದ್ದೇನೆ.
ಆಪತ್ತಿಗೆ ಗುರಿಯಾಗಿಲ್ಲದವರು ಆಪತ್ತಿನಿಂದ ಕಷ್ಟಪಡುತ್ತಿರುವ ಜನರನ್ನು ಗೇಲಿ ಮಾಡುವರು;
    ಜಾರಿಬಿದ್ದವನಿಗೆ ಹೊಡೆಯುವರು.
ಕಳ್ಳರ ಗುಡಾರಗಳಿಗೆ ತೊಂದರೆಯಿಲ್ಲ;
    ತಮ್ಮ ದೇವರುಗಳನ್ನು ಕೈಗಳಲ್ಲಿ ಎತ್ತಿಕೊಂಡು ಹೋಗುತ್ತಾ
    ದೇವರನ್ನು ರೇಗಿಸುವವರು ಸಮಾಧಾನದಿಂದಿದ್ದಾರೆ.

“ಆದರೆ ಪ್ರಾಣಿಗಳನ್ನು ಕೇಳು, ಅವು ನಿನಗೆ ಉಪದೇಶಿಸುತ್ತವೆ.
    ಆಕಾಶದ ಪಕ್ಷಿಗಳನ್ನು ಕೇಳು, ಅವು ನಿನಗೆ ತಿಳಿಸುತ್ತವೆ.
ಭೂಮಿಯೊಂದಿಗೆ ಮಾತಾಡು, ಅದು ನಿನಗೆ ಉಪದೇಶಿಸುತ್ತದೆ.
    ಸಮುದ್ರದ ಮೀನುಗಳು ತಮ್ಮ ಜ್ಞಾನವನ್ನು ನಿನಗೆ ತಿಳಿಸಲಿ.
ಇದನ್ನು ಮಾಡಿದಾತನು ಯೆಹೋವನೇ ಎಂಬುದು
    ಈ ಸೃಷ್ಟಿಗಳಲ್ಲಿ ಪ್ರತಿಯೊಂದಕ್ಕೂ ಗೊತ್ತು.
10 ಪ್ರತಿಯೊಂದು ಪ್ರಾಣಿಯ ಜೀವವೂ ಪ್ರತಿಯೊಬ್ಬ ವ್ಯಕ್ತಿಯ ಆತ್ಮವೂ
    ದೇವರ ಕೈಯಲ್ಲಿವೆ.
11 ಆದರೆ ನಾಲಿಗೆಯು ಊಟದ ರುಚಿಯನ್ನು ಆನಂದಿಸುವಂತೆ
    ಕಿವಿಗಳು ಮಾತುಗಳನ್ನು ವಿವೇಚಿಸುವುದಿಲ್ಲವೇ?
12 ‘ಜ್ಞಾನವು ವೃದ್ಧರಲ್ಲಿಲ್ಲವೇ?
    ದೀರ್ಘಾಯುಷ್ಯವು ತಿಳಿವಳಿಕೆಯನ್ನು ಉಂಟುಮಾಡುವುದಿಲ್ಲವೇ?’
13 ಜ್ಞಾನವೂ ಶಕ್ತಿಯೂ ಆತನವೇ.
    ಆಲೋಚನೆಯೂ ವಿವೇಕವೂ ಆತನವೇ.
14 ದೇವರು ಕೆಡವಿದ್ದನ್ನು ಮತ್ತೆ ಕಟ್ಟುವುದಕ್ಕಾಗಲಿ
    ಸೆರೆಗೆ ಹಾಕಿದವನನ್ನು ಬಿಡಿಸುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ.
15 ಆತನು ಮಳೆಯನ್ನು ತಡೆಹಿಡಿದರೆ ಭೂಮಿಗೆ ಬರಗಾಲವಾಗುವುದು.
    ಮಳೆಯನ್ನು ಸುರಿಸಿದರೆ ಭೂಮಿಯ ಮೇಲೆ ಪ್ರವಾಹವಾಗುವುದು.
16 ದೇವರು ಬಲಿಷ್ಠನಾಗಿರುವುದರಿಂದ ಯಾವಾಗಲೂ ಜಯಗಳಿಸುತ್ತಾನೆ.
    ಗೆಲ್ಲುವವರೂ ಸೋಲುವವರೂ ಆತನವರೇ!
17 ದೇವರು ಮಂತ್ರಿಗಳ ಜ್ಞಾನವನ್ನು ತೆಗೆದುಹಾಕುವನು.
    ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುವನು.
18 ರಾಜರುಗಳು ಜನರಿಗೆ ಬೇಡಿಗಳನ್ನು ಹಾಕಿಸಿದರೆ ದೇವರು ಅವುಗಳನ್ನು ಕಿತ್ತೊಗೆದು
    ರಾಜರುಗಳ ಸೊಂಟಕ್ಕೆ ಚಿಂದಿಬಟ್ಟೆಯನ್ನು ಕಟ್ಟಿಸುವನು.
19 ದೇವರು ಯಾಜಕರುಗಳ ಅಧಿಕಾರವನ್ನು ಕಿತ್ತೊಗೆಯುವನು;
    ಪ್ರಧಾನರನ್ನು ದಬ್ಬಿಬಿಡುವನು.
20 ದೇವರು ವಿಶ್ವಾಸನೀಯವಾದ ಆಲೋಚನಾಗಾರರನ್ನು ಮೌನಗೊಳಿಸುವನು;
    ಹಿರಿಯರ ವಿವೇಕವನ್ನು ತೆಗೆದುಹಾಕುವನು.
21 ದೇವರು ಪ್ರಮುಖರಿಗೆ ಅವಮಾನ ಮಾಡುವನು;
    ಅಧಿಪತಿಗಳ ಶಕ್ತಿಯನ್ನು ತೆಗೆದುಹಾಕುವನು.[a]
22 ಕಾರ್ಗತ್ತಲೆಯೊಳಗಿರುವ ನಿಗೂಢ ರಹಸ್ಯಗಳನ್ನು ಆತನು ಪ್ರಕಟಿಸುವನು;
    ಮರಣಾಂಧಕಾರದ ಸ್ಥಳಗಳನ್ನು ಬೆಳಕಿನಿಂದ ಪ್ರಕಾಶಗೊಳಿಸುವನು.
23 ದೇವರು ಜನಾಂಗಗಳನ್ನು ವೃದ್ಧಿಮಾಡಿ ಬಲಗೊಳಿಸುವನು;
    ಬಳಿಕ ಅವುಗಳನ್ನು ನಾಶಮಾಡುವನು.
ಆತನು ಜನಾಂಗಗಳನ್ನು ವಿಸ್ತಾರವಾಗಿ ಬೆಳೆಯ ಮಾಡುವನು;
    ನಂತರ ಅವುಗಳನ್ನು ಚದರಿಸಿಬಿಡುವನು.
24 ದೇವರು ಭೂಲೋಕದ ನಾಯಕರುಗಳನ್ನು ಮೂಢರನ್ನಾಗಿ ಮಾಡುವನು;
    ರಸ್ತೆಯಿಲ್ಲದ ಮರಳುಗಾಡಿನಲ್ಲಿ ಅವರನ್ನು ಅಲೆದಾಡಿಸುವನು.
25 ಅವರು ಬೆಳಕಿಲ್ಲದೆ ಕತ್ತಲೆಯಲ್ಲಿ ತಡವಾಡುವರು.
    ಆತನು ಅವರನ್ನು ಅಮಲೇರಿದವರಂತೆ ಅಲೆದಾಡಿಸುವನು.”

ರೋಮ್ನಗರದವರಿಗೆ 16:17-20

17 ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಡಕುಗಳನ್ನು ಉಂಟುಮಾಡುವ ಜನರ ವಿಷಯದಲ್ಲಿ ನೀವು ಬಹು ಜಾಗ್ರತೆಯಿಂದ ಇರಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಇತರರ ನಂಬಿಕೆಯನ್ನು ಕೆಡಿಸುವಂಥವರ ಬಗ್ಗೆ ಬಹು ಎಚ್ಚರದಿಂದಿರಿ. ನೀವು ಕಲಿತಿರುವ ಉಪದೇಶಕ್ಕೆ ಅವರು ವಿರುದ್ಧವಾಗಿದ್ದಾರೆ. ನೀವು ಅವರಿಂದ ದೂರವಿರಿ. 18 ಅಂಥ ಜನರು ನಮ್ಮ ಪ್ರಭುವಾದ ಕ್ರಿಸ್ತನ ಸೇವೆ ಮಾಡುತ್ತಿಲ್ಲ. ಅವರು ಕೇವಲ ತಮ್ಮ ಸುಖಕ್ಕಾಗಿ ಈ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೆಟ್ಟದರ ಬಗ್ಗೆ ತಿಳಿದಿಲ್ಲದ ಜನರ ಮನಸ್ಸುಗಳನ್ನು ಮೋಸಗೊಳಿಸುವುದಕ್ಕಾಗಿ ಅವರು ನಯನಾಜುಕಿನ ನುಡಿಗಳನ್ನಾಡುತ್ತಾರೆ ಮತ್ತು ಮುಖಸ್ತುತಿಯ ಮಾತುಗಳನ್ನಾಡುತ್ತಾರೆ. 19 ನಿಮ್ಮ ವಿಧೇಯತ್ವವು ಎಲ್ಲಾ ವಿಶ್ವಾಸಿಗಳಿಗೆ ತಿಳಿದಿದೆ. ಆದ್ದರಿಂದ ನಿಮ್ಮ ವಿಷಯದಲ್ಲಿ ನಾನು ಬಹು ಸಂತೋಷಪಡುತ್ತೇನೆ. ಆದರೆ ಒಳ್ಳೆಯ ಸಂಗತಿಗಳ ಬಗ್ಗೆ ನೀವು ವಿವೇಕಿಗಳಾಗಿರಬೇಕೆಂದು ಮತ್ತು ಕೆಟ್ಟಸಂಗತಿಗಳ ಬಗ್ಗೆ ಏನೂ ತಿಳಿದಿಲ್ಲದವರಾಗಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.

20 ಶಾಂತಿಯನ್ನು ಕೊಡುವ ದೇವರು ಬೇಗನೆ ಸೈತಾನನನ್ನು ಸೋಲಿಸಿ, ಅವನ ಮೇಲೆ ನಿಮಗೆ ಅಧಿಕಾರವನ್ನು ಕೊಡುವನು.

ನಮ್ಮ ಪ್ರಭುವಾದ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International