Revised Common Lectionary (Complementary)
2 ಆಗ ಇಸ್ರೇಲರು ಮತ್ತೆ ಮರುಭೂಮಿಯಲ್ಲಿ ಮೋಶೆ ಆರೋನರ ಮೇಲೆ ಗುಣುಗುಟ್ಟಿದರು. 3 ಅವರು, “ಯೆಹೋವನು ನಮ್ಮನ್ನು ಈಜಿಪ್ಟಿನಲ್ಲಿ ಕೊಂದಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ನಮಗೆ ಈಜಿಪ್ಟಿನಲ್ಲಿ ಮಾಂಸವೂ ರೊಟ್ಟಿಯೂ ಇತ್ತು. ನಮಗೆ ಬೇಕಿದ್ದ ಆಹಾರವೆಲ್ಲಾ ನಮ್ಮಲ್ಲಿತ್ತು. ಆದರೆ ಈಗ ನೀವು ನಮ್ಮನ್ನು ಈ ಅರಣ್ಯಕ್ಕೆ ಕರೆದುಕೊಂಡು ಬಂದಿರಿ. ನಾವೆಲ್ಲರೂ ಇಲ್ಲಿ ಹಸಿವೆಯಿಂದ ಸಾಯುವೆವು” ಎಂದು ಹೇಳಿದರು.
4 ಆಗ ಯೆಹೋವನು ಮೋಶೆಗೆ, “ಆಕಾಶದಿಂದ ನಿಮಗೋಸ್ಕರ ರೊಟ್ಟಿ ಸುರಿಯುವಂತೆ ಮಾಡುವೆನು. ಪ್ರತಿದಿನ ಅವರು ಹೊರಗೆ ಹೋಗಿ, ತಮಗೆ ಆ ದಿನದಲ್ಲಿ ತಿನ್ನಲು ಬೇಕಾದ ಆಹಾರವನ್ನು ಕೂಡಿಸಿಕೊಳ್ಳಬೇಕು. ನಾನು ಹೇಳುವುದನ್ನು ಅವರು ಮಾಡುತ್ತಾರೊ ಇಲ್ಲವೊ ಎಂದು ನೋಡಲು ನಾನು ಇದನ್ನು ಮಾಡುವೆನು.
9 ಬಳಿಕ ಮೋಶೆ ಆರೋನನಿಗೆ, “ಇಸ್ರೇಲರೊಂದಿಗೆ ಮಾತಾಡು. ಅವರಿಗೆ, ‘ಯೆಹೋವನ ಮುಂದೆ ಒಟ್ಟಾಗಿ ನೆರೆದು ಬನ್ನಿ: ಯಾಕೆಂದರೆ ಆತನು ನಿಮ್ಮ ಗೊಣಗುಟ್ಟುವಿಕೆಯನ್ನು ಕೇಳಿದ್ದಾನೆ’ ಎಂದು ಹೇಳು” ಅಂದನು.
10 ಅರೋನನು ಇಸ್ರೇಲರೆಲ್ಲರೊಂದಿಗೆ ಮಾತಾಡಿದನು. ಅವರೆಲ್ಲರೂ ಒಂದು ಸ್ಥಳದಲ್ಲಿ ಕೂಡಿಬಂದರು. ಆರೋನನು ಅವರೊಂದಿಗೆ ಮಾತಾಡುತ್ತಿದ್ದಾಗ ಅವರೆಲ್ಲರೂ ಅರಣ್ಯದ ಕಡೆಗೆ ತಿರುಗಿನೋಡಿದರು. ಮೇಘದಲ್ಲಿ ಯೆಹೋವನ ಮಹಿಮೆಯು ಪ್ರತ್ಯಕ್ಷವಾದದ್ದನ್ನು ಅವರೆಲ್ಲರೂ ಕಂಡರು.
11 ಯೆಹೋವನು ಮೋಶೆಗೆ, 12 “ನಾನು ಇಸ್ರೇಲರ ಗೊಣಗುಟ್ಟುವಿಕೆಯನ್ನು ಕೇಳಿದ್ದೇನೆ. ಆದ್ದರಿಂದ ಅವರಿಗೆ ಹೀಗೆ ಹೇಳು: ‘ಸೂರ್ಯಾಸ್ತಮಕ್ಕಿಂತ ಮೊದಲು ನೀವು ಮಾಂಸವನ್ನು ತಿನ್ನುವಿರಿ; ಪ್ರತಿ ಮುಂಜಾನೆ ಸೂರ್ಯೋದಯಕ್ಕಿಂತ ಮೊದಲು ನಿಮಗೆ ಬೇಕಾದಷ್ಟು ರೊಟ್ಟಿಯನ್ನು ತಿನ್ನುವಿರಿ. ಆಗ ನಾನೇ ದೇವರಾದ ಯೆಹೋವನೆಂಬುದನ್ನು ನೀವು ತಿಳಿದುಕೊಳ್ಳುವಿರಿ; ನನ್ನಲ್ಲಿ ಭರವಸೆ ಇಡುವಿರಿ’” ಎಂದು ಹೇಳಿದನು.
13 ಸಾಯಂಕಾಲ ಲಾವಕ್ಕಿಗಳು ಪಾಳೆಯದ ಸುತ್ತಲೂ ಬಂದವು. ಜನರು ಮಾಂಸಕ್ಕಾಗಿ ಈ ಪಕ್ಷಿಗಳನ್ನು ಹಿಡಿದರು ಮತ್ತು ಪ್ರತಿ ಮುಂಜಾನೆ ಅವರ ಪಾಳೆಯದ ಸುತ್ತಲೂ ಮಂಜು ನೆಲದ ಮೇಲೆ ಬಿದ್ದಿತ್ತು. 14 ಸೂರ್ಯನು ಮೇಲಕ್ಕೇರಿದ ನಂತರ ಮಂಜು ಕರಗಿ ಇಲ್ಲವಾಯಿತು. ಆದರೆ ಮಂಜು ಕರಗಿ ಹೋದನಂತರ ನೆಲದ ಮೇಲೆ ಮಂಜಿನ ಹನಿಗಳಂತಿದ್ದ ತೆಳುವಾದ ಕಾಳುಗಳು ಬಿದ್ದಿದ್ದವು. 15 ಇಸ್ರೇಲರು ಅದನ್ನು ನೋಡಿ “ಏನದು” ಎಂಬುದಾಗಿ ಒಬ್ಬರನ್ನೊಬ್ಬರು ಕೇಳಿದರು. ಅದು ಏನೆಂದು ಅವರಿಗೆ ಗೊತ್ತಿಲ್ಲದ ಕಾರಣ ಅವರು ಈ ಪ್ರಶ್ನೆಯನ್ನು ಕೇಳಿದರು. ಆದ್ದರಿಂದ ಮೋಶೆ ಅವರಿಗೆ, “ಇದು ಯೆಹೋವನು ನಿಮಗೆ ಕೊಟ್ಟಿರುವ ಆಹಾರ.
23 ಆಗ ಆತನು ಉನ್ನತದಲ್ಲಿರುವ ಮೇಘಗಳನ್ನು ತೆರೆದನು,
ಅವರ ಆಹಾರಕ್ಕಾಗಿ ಮನ್ನವನ್ನು ಮಳೆಗರೆಸಿದನು.
24 ಆಕಾಶದ ದ್ವಾರಗಳು ತೆರೆದು
ಆಕಾಶದ ಉಗ್ರಾಣದಿಂದ ಧಾನ್ಯವು ಸುರಿದಂತೆ ಮನ್ನವು ಸುರಿಯಿತು.
25 ಜನರು ದೇವದೂತರ ಆಹಾರವನ್ನು ತಿಂದರು.
ಅವರನ್ನು ತೃಪ್ತಿಗೊಳಿಸುವುದಕ್ಕಾಗಿ ಆತನು ಆಹಾರವನ್ನು ಹೇರಳವಾಗಿ ಒದಗಿಸಿದನು.
26 ಬಳಿಕ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು.
ಆಗ ಲಾವಕ್ಕಿಗಳು ಮಳೆಯಂತೆ ಅವರಿದ್ದಲ್ಲಿಗೆ ಬಂದು ಬಿದ್ದವು.
27 ಆತನು ತೇಮಾನಿನಿಂದ ಗಾಳಿಬೀಸುವಂತೆ ಮಾಡಿದಾಗ
ಪಕ್ಷಿಗಳು ಸಮುದ್ರದ ಮರಳಿನಷ್ಟು ಅವರಿದ್ದಲ್ಲಿ ಬಂದು ಬಿದ್ದವು.
28 ಪಕ್ಷಿಗಳು ಪಾಳೆಯದ ಮಧ್ಯಭಾಗದಲ್ಲಿ,
ಆ ಜನರ ಗುಡಾರಗಳ ಸುತ್ತಲೆಲ್ಲಾ ಬಿದ್ದವು.
29 ಅವರಿಗೆ ತಿನ್ನಲು ಹೇರಳವಾಗಿತ್ತು.
ಆದರೆ ತಮ್ಮ ಆಸೆಗಳೇ ತಮ್ಮನ್ನು ಪಾಪಕ್ಕೆ ನಡೆಸುವಂತೆ ಅವರು ಮಾಡಿದರು.
ದೇಹದ ಐಕ್ಯತೆ
4 ನಾನು ಪ್ರಭುವಿಗೆ ಸೇರಿದವನಾದ್ದರಿಂದ ಸೆರೆಯಲ್ಲಿದ್ದೇನೆ. ನೀವು ದೇವರಿಂದ ಕರಯಲ್ಪಟ್ಟಿದ್ದೀರಿ. ಆದ್ದರಿಂದ ನಿಮ್ಮ ಕರೆಯುವಿಕೆಗೆ ತಕ್ಕಂತೆ ಯೋಗ್ಯವಾಗಿ ಜೀವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 2 ಯಾವಾಗಲೂ ದೀನತೆಯಿಂದ, ಸಾತ್ವಿಕತೆಯಿಂದ ಮತ್ತು ತಾಳ್ಮೆಯಿಂದ ಕೂಡಿದವರಾಗಿದ್ದು ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಿಸಿಕೊಳ್ಳಿರಿ. 3 ನೀವು ಆತ್ಮನ ಮೂಲಕವಾಗಿ ಸಮಾಧಾನವೆಂಬ ಬಂಧನದಿಂದ ಒಂದಾಗಿದ್ದೀರಿ. ಈ ರೀತಿ ಜೀವಿಸಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿ. ಸಮಾಧಾನವು ನಿಮ್ಮೆಲ್ಲರನ್ನು ಒಂದಾಗಿಸಲಿ. 4 ದೇಹವು ಒಂದೇ ಮತ್ತು ಆತ್ಮನು ಒಬ್ಬನೇ. ನೀವೆಲ್ಲರೂ ಒಂದೇ ನಿರೀಕ್ಷೆಯನ್ನು ಹೊಂದಿರಬೇಕೆಂದು ದೇವರು ನಿಮ್ಮನ್ನು ಕರೆದನು. 5 ಒಬ್ಬನೇ ಪ್ರಭು, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ. 6 ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ಆತನು ಸಮಸ್ತವನ್ನೂ ಆಳುತ್ತಾನೆ. ಆತನು ಸರ್ವವ್ಯಾಪಿಯಾಗಿದ್ದಾನೆ ಮತ್ತು ಎಲ್ಲರಲ್ಲಿ ವಾಸಿಸುವವನಾಗಿದ್ದಾನೆ.
7 ಕ್ರಿಸ್ತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾದ ವರವನ್ನು ಕೊಟ್ಟಿದ್ದಾನೆ. ಪ್ರತಿಯೊಬ್ಬನು ಕ್ರಿಸ್ತನ ಇಷ್ಟಾನುಸಾರವಾಗಿ ವರವನ್ನು ಪಡೆದುಕೊಂಡಿದ್ದಾನೆ. 8 ಆದಕಾರಣವೇ ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆದಿದೆ:
“ಆತನು ಆಕಾಶದ ಉನ್ನತಸ್ಥಾನಕ್ಕೆ ಏರಿಹೋದಾಗ,
ಶತ್ರುಗಳನ್ನು ಸೆರೆಯಾಳುಗಳಾಗಿ ಕೊಂಡೊಯ್ದು ಜನರಿಗೆ ದಾನಗಳನ್ನು ಮಾಡಿದನು.”(A)
9 “ಆತನು ಉನ್ನತಸ್ಥಾನಕ್ಕೆ ಏರಿಹೋದನು” ಎಂದರೆ ಆತನು ಭೂಲೋಕಕ್ಕೆ ಇಳಿದುಬಂದು, 10 ಭೂಮಿಯ ಅಧೋಭಾಗಕ್ಕೆ ಇಳಿದುಹೋಗಿ, ಅಲ್ಲಿಂದ ಆಕಾಶದ ಅತ್ಯುನ್ನತಸ್ಥಾನಕ್ಕೆ ಏರಿಹೋದನು ಎಂದರ್ಥ. ಸಮಸ್ತದಲ್ಲಿ ತಾನೇ ತುಂಬಿರಬೇಕೆಂದು ಕ್ರಿಸ್ತನು ಹಾಗೆ ಮಾಡಿದನು. 11 ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಉಪದೇಶಕರನ್ನಾಗಿಯೂ ನೇಮಿಸಿದನು. 12 ಸಭೆಯ ಸೇವೆಗೋಸ್ಕರ ದೇವರ ಪರಿಶುದ್ಧ ಜನರನ್ನು ಸಿದ್ಧಪಡಿಸುವುದಕ್ಕಾಗಿ ಆತನು ಅವರನ್ನು ನೇಮಿಸಿದನು. 13 ನಾವೆಲ್ಲರೂ ಒಂದೇ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಐಕ್ಯರಾಗುವತನಕ ಈ ಸೇವೆಯು ಮುಂದುವರಿಯಬೇಕು. ನಾವು ಪರಿಪೂರ್ಣರಾಗುವ ತನಕ ಅಂದರೆ ಕ್ರಿಸ್ತನ ಸರ್ವಸಂಪೂರ್ಣತೆಯನ್ನು ಮುಟ್ಟುವತನಕ ಬೆಳೆಯಬೇಕು.
14 ನಾವು ಇನ್ನು ಮೇಲೆ ಕೂಸುಗಳಾಗಿರಬಾರದು. ಸಮುದ್ರದ ಅಲೆಗಳಿಂದ ಅತ್ತಿಂದಿತ್ತ ಚಲಿಸುವ ಹಡಗಿನಂತೆ ಚಂಚಲರಾಗಿರಬಾರದು. ನಮ್ಮನ್ನು ವಂಚಿಸುವುದಕ್ಕಾಗಿ ಜನರು ಹೇಳುವ ಯಾವುದೇ ಹೊಸ ಉಪದೇಶದಿಂದಾಗಲಿ ನಾವು ಚಂಚಲರಾಗಬಾರದು. ಜನರನ್ನು ಮೋಸಗೊಳಿಸಿ ಕೆಟ್ಟದಾರಿಗೆ ನಡೆಸಬೇಕೆಂಬ ಉದ್ದೇಶದಿಂದ ಆ ದುರ್ಬೋಧಕರು ನಾನಾ ಬಗೆಯ ಕುತಂತ್ರವನ್ನು ಮಾಡುತ್ತಾರೆ. 15 ನಾವಾದರೊ ಸತ್ಯವನ್ನು ಪ್ರೀತಿಯಿಂದ ಹೇಳಬೇಕು; ಎಲ್ಲಾ ವಿಷಯಗಳಲ್ಲಿಯೂ ಬೆಳೆದು ಕ್ರಿಸ್ತನಂತಾಗಲು ಪ್ರಯತ್ನಿಸಬೇಕು. ಕ್ರಿಸ್ತನು ಶಿರಸ್ಸಾಗಿದ್ದಾನೆ ಮತ್ತು ನಾವು ದೇಹವಾಗಿದ್ದೇವೆ. 16 ಇಡೀ ದೇಹವು ಕ್ರಿಸ್ತನನ್ನು ಅವಲಂಬಿಸಿಕೊಂಡಿದೆ. ದೇಹದ ಒಂದೊಂದು ಅಂಗಗಳೂ ಒಂದಕ್ಕೊಂದು ಬಿಗಿದುಕೊಂಡಿವೆ. ಪ್ರತಿಯೊಂದು ಅಂಗವು ತನ್ನದೇ ಆದ ಕೆಲಸವನ್ನು ಮಾಡುವುದರಿಂದ ಇಡೀ ದೇಹವು ಬೆಳೆದು ಪ್ರೀತಿಯಲ್ಲಿ ಬಲವಾಗಿರಲು ಸಾಧ್ಯವಾಗುತ್ತದೆ.
24 ಯೇಸು ಮತ್ತು ಆತನ ಶಿಷ್ಯರು ಅಲ್ಲಿಲ್ಲದಿರುವುದನ್ನು ಜನರು ಕಂಡು ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಹೋದರು. ಅವರು ಯೇಸುವನ್ನು ಕಂಡುಕೊಳ್ಳಬೇಕೆಂದಿದ್ದರು.
ಯೇಸುವೇ ಜೀವದ ರೊಟ್ಟಿ
25 ಜನರು ಯೇಸುವನ್ನು ಸರೋವರದ ಆಚೆಯ ದಡದಲ್ಲಿ ಕಂಡುಕೊಂಡರು. ಅವರು ಆತನಿಗೆ, “ಗುರುವೇ, ನೀನು ಇಲ್ಲಿಗೆ ಯಾವಾಗ ಬಂದೆ?” ಎಂದು ಕೇಳಿದರು.
26 ಯೇಸು, “ನೀವು ನನ್ನನ್ನು ಏಕೆ ಹುಡುಕುತ್ತಿದ್ದೀರಿ? ನನ್ನ ಅಧಿಕಾರವನ್ನು ನಿರೂಪಿಸುವ ನನ್ನ ಅದ್ಭುತಕಾರ್ಯಗಳನ್ನು ಕಂಡು ನೀವು ನನ್ನನ್ನು ಹುಡುಕುತ್ತಿದ್ದೀರೋ? ಇಲ್ಲ! ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ರೊಟ್ಟಿಯನ್ನು ತೃಪ್ತಿಯಾಗುವಷ್ಟು ತಿಂದಕಾರಣ ನನ್ನನ್ನು ಹುಡುಕುತ್ತಿದ್ದೀರಿ. 27 ಈ ಲೋಕದ ಆಹಾರವು ಕೆಟ್ಟುಹೋಗುತ್ತದೆ ಮತ್ತು ಹಾಳಾಗುತ್ತದೆ. ಆದ್ದರಿಂದ ಅಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಬೇಡಿರಿ. ಆದರೆ ಎಂದಿಗೂ ಕೆಟ್ಟುಹೋಗದಂಥ ಮತ್ತು ನಿಮಗೆ ನಿತ್ಯಜೀವವನ್ನು ಕೊಡುವಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಿರಿ. ಮನುಷ್ಯಕುಮಾರನು ಆ ಆಹಾರವನ್ನು ನಿಮಗೆ ಕೊಡುವನು. ತಂದೆಯಾದ ದೇವರು ಆತನ ಮೇಲೆ ತನ್ನ ಅಧಿಕಾರದ ಮುದ್ರೆಯನ್ನು ಒತ್ತಿದ್ದಾನೆ” ಎಂದು ಹೇಳಿದನು.
28 ಜನರು ಯೇಸುವಿಗೆ, “ನಾವು ಯಾವ ಕಾರ್ಯಗಳನ್ನು ಮಾಡಬೇಕೆಂದು ದೇವರು ಬಯಸುತ್ತಾನೆ?” ಎಂದು ಕೇಳಿದರು.
29 ಯೇಸು, “ದೇವರು ಕಳುಹಿಸಿದಾತನನ್ನು ನೀವು ನಂಬಬೇಕು. ಈ ಕಾರ್ಯವನ್ನೇ ದೇವರು ನಿಮ್ಮಿಂದ ಅಪೇಕ್ಷಿಸುತ್ತಾನೆ” ಎಂದು ಉತ್ತರಕೊಟ್ಟನು.
30 ಆದ್ದರಿಂದ ಜನರು, “ದೇವರಿಂದ ಕಳುಹಿಸಲ್ಪಟ್ಟಾತನು ನೀನೇ ಎಂಬುದನ್ನು ನಿರೂಪಿಸುವುದಕ್ಕಾಗಿ ನೀನು ಯಾವ ಸೂಚಕಕಾರ್ಯವನ್ನು ಮಾಡುವೆ? 31 ನಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು (ಆಹಾರವನ್ನು) ತಿಂದರು. ‘ದೇವರು ಅವರಿಗೆ ತಿನ್ನಲು ಪರಲೋಕದಿಂದ ರೊಟ್ಟಿಯನ್ನು ಕೊಟ್ಟನು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಹೇಳಿದರು.
32 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮ ಜನರಿಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ. ಆದರೆ ನನ್ನ ತಂದೆಯು ನಿಮಗೆ ಪರಲೋಕದಿಂದ ನಿಜವಾದ ರೊಟ್ಟಿಯನ್ನು ಕೊಡುವನು. 33 ದೇವರ ರೊಟ್ಟಿ ಯಾವುದು? ಪರಲೋಕದಿಂದ ಇಳಿದುಬಂದು ಈ ಲೋಕಕ್ಕಾಗಿ ಜೀವವನ್ನು ಕೊಡುವಾತನೇ ದೇವರು ಕೊಡುವ ರೊಟ್ಟಿ” ಎಂದು ಹೇಳಿದನು.
34 ಜನರು, “ಅಯ್ಯಾ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು” ಎಂದು ಕೇಳಿಕೊಂಡರು.
35 ಅದಕ್ಕೆ ಯೇಸು, “ನಾನೇ ಜೀವಕೊಡುವ ರೊಟ್ಟಿ. ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗದು. ನನ್ನಲ್ಲಿ ನಂಬಿಕೆ ಇಡುವವನಿಗೆ ಎಂದಿಗೂ ಬಾಯಾರಿಕೆಯಾಗದು.
Kannada Holy Bible: Easy-to-Read Version. All rights reserved. © 1997 Bible League International