Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 81

ರಚನೆಗಾರ: ಆಸಾಫ.

81 ನಮಗೆ ಬಲಪ್ರದನಾಗಿರುವ ದೇವರಿಗೆ ಸಂತಸದಿಂದ ಹಾಡಿರಿ.
    ಇಸ್ರೇಲಿನ ದೇವರಿಗೆ ಆನಂದಘೋಷ ಮಾಡಿರಿ.
ವಾದ್ಯವನ್ನು ನುಡಿಸಲಾರಂಭಿಸಿರಿ;
    ದಮ್ಮಡಿಯನ್ನು ಬಡಿಯಿರಿ.
    ಇಂಪಾದ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನು ಬಾರಿಸಿರಿ.
ಅಮಾವಾಸ್ಯೆಯಲ್ಲಿಯೂ ನಮ್ಮ ರಜಾಕಾಲವಾದ
    ಪೂರ್ಣಿಮೆಯಲ್ಲಿಯೂ ತುತ್ತೂರಿಯನ್ನು ಊದಿರಿ.
ಇದು ಇಸ್ರೇಲರಿಗೆ ಕಟ್ಟಳೆಯಾಗಿದೆ.
    ಯಾಕೋಬ್ಯರ ದೇವರು ಈ ಆಜ್ಞೆಯನ್ನು ಕೊಟ್ಟನು.
ಆತನು ಯೋಸೇಫನನ್ನು[a] ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಾಗ
    ಅವನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡನು.
ಈಜಿಪ್ಟಿನಲ್ಲಿ ನಾವು ಕೇಳಿದ್ದು ನಮಗೆ ಅರ್ಥವಾಗದ ಭಾಷೆಯನ್ನೇ!
ಆತನು ಹೀಗೆನ್ನುತ್ತಾನೆ: “ನಿಮ್ಮ ಹೆಗಲಿನಿಂದ ಹೊರೆಯನ್ನು ತೆಗೆದುಹಾಕಿದೆನು.
    ಕೆಲಸಗಾರರ ಬುಟ್ಟಿಯನ್ನು ನೀವು ಬಿಸಾಕುವಂತೆ ಮಾಡಿದೆನು.
ನೀವು ಆಪತ್ತಿನಲ್ಲಿದ್ದಾಗ ಸಹಾಯಕ್ಕಾಗಿ ಮೊರೆಯಿಟ್ಟಿರಿ.
    ಆಗ ನಾನು ನಿಮ್ಮನ್ನು ಬಿಡಿಸಿದೆನು.
    ನಾನು ಕಾರ್ಮೋಡದಲ್ಲಿ ಮರೆಯಾಗಿದ್ದರೂ ನಿಮಗೆ ಉತ್ತರಿಸಿದೆನು.
    ನಾನು ನಿಮ್ಮನ್ನು ಮೆರೀಬಾದ ನೀರಿನಿಂದ ಪರೀಕ್ಷಿಸಿದೆನು.”

“ನನ್ನ ಜನರೇ, ನನಗೆ ಕಿವಿಗೊಡಿರಿ, ನಾನು ನಿಮಗೆ ಒಡಂಬಡಿಕೆಯನ್ನು ಕೊಡುತ್ತಿರುವೆ.
    ಇಸ್ರೇಲೇ, ದಯವಿಟ್ಟು ಕಿವಿಗೊಡು!
ಪರದೇಶದವರು ಆರಾಧಿಸುವ
    ಯಾವ ಸುಳ್ಳು ದೇವರುಗಳನ್ನೂ ಪೂಜಿಸಬೇಡ.
10 ಯೆಹೋವನಾದ ನಾನೇ ನಿನ್ನ ದೇವರು.
    ನಿನ್ನನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ನಾನೇ.
ಇಸ್ರೇಲೇ, ನಿನ್ನ ಬಾಯನ್ನು ತೆರೆ,
    ಆಗ ನಾನು ನಿನಗೆ ತಿನ್ನಿಸುವೆನು.

11 “ಆದರೆ ನನ್ನ ಜನರು ನನಗೆ ಕಿವಿಗೊಡಲಿಲ್ಲ.
    ಇಸ್ರೇಲರು ನನಗೆ ವಿಧೇಯರಾಗಲಿಲ್ಲ.
12 ಆದ್ದರಿಂದ ತಮ್ಮ ಇಷ್ಟಾನುಸಾರ ಮಾಡಲೆಂದು ಅವರನ್ನು ಬಿಟ್ಟುಕೊಟ್ಟೆ.
    ಇಸ್ರೇಲ್ ತನ್ನ ಇಷ್ಟಾನುಸಾರ ಮಾಡಿತು.
13 ನನ್ನ ಜನರು ನನಗೆ ಕಿವಿಗೊಟ್ಟು ನನ್ನ ಚಿತ್ತಾನುಸಾರವಾಗಿ ಜೀವಿಸಿದರೆ,
14     ಅವರ ಶತ್ರುಗಳನ್ನು ಸೋಲಿಸುವೆನು;
    ಇಸ್ರೇಲಿಗೆ ಕೇಡುಮಾಡುವವರನ್ನು ದಂಡಿಸುವೆನು.
15 ಯೆಹೋವನ ಶತ್ರುಗಳು ಭಯದಿಂದ ನಡುಗುವರು.
    ಅವರು ಶಾಶ್ವತವಾಗಿ ದಂಡಿಸಲ್ಪಡುವರು.
16 ದೇವರು ತನ್ನ ಜನರಿಗೆ ಉತ್ತಮವಾದ ಗೋಧಿಯನ್ನು ಒದಗಿಸುವನು.
    ಬಂಡೆಯಾಗಿರುವ ಆತನು ತನ್ನ ಜನರಿಗೆ ಜೇನುತುಪ್ಪವನ್ನು ಸಂತೃಪ್ತಿಯಾಗುವ ತನಕ ಕೊಡುವನು.”

ಯೆರೆಮೀಯ 31:1-6

ಇಸ್ರೇಲಿನ ನವನಿರ್ಮಾಣ

31 ಯೆಹೋವನು ಈ ವಿಷಯಗಳನ್ನು ಹೇಳಿದನು: “ಆ ಸಮಯದಲ್ಲಿ ನಾನು ಇಸ್ರೇಲಿನ ಎಲ್ಲಾ ಗೋತ್ರಗಳ ದೇವರಾಗಿರುವೆನು; ಅವರು ನನ್ನ ಪ್ರಜೆಗಳಾಗಿರುವರು.”

ಯೆಹೋವನು ಹೀಗೆನ್ನುತ್ತಾನೆ:
“ಶತ್ರುವಿನ ಖಡ್ಗಕ್ಕೆ ಕೆಲವು ಜನರು ಆಹುತಿಯಾಗಿಲ್ಲ.
    ಅವರಿಗೆ ಮರುಭೂಮಿಯಲ್ಲಿ ನೆಮ್ಮದಿ ದೊರೆಯುವುದು.
    ಇಸ್ರೇಲು ವಿಶ್ರಾಂತಿಯನ್ನು ಬಯಸಿ ಬರುವುದು.”
ದೂರದಿಂದ ಯೆಹೋವನು
    ತನ್ನ ಜನರಿಗೆ ದರ್ಶನವನ್ನು ಕೊಡುವನು.

ಯೆಹೋವನು ಹೀಗೆನ್ನುವನು, “ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನನ್ನ ಪ್ರೇಮವು ಶಾಶ್ವತವಾದದ್ದು.
ನಾನು ಎಂದೆಂದಿಗೂ
    ನಿಮ್ಮ ಹಿತೈಷಿಯಾಗಿರುವೆನು.
ನನ್ನ ವಧುವಾದ ಇಸ್ರೇಲೇ, ನಾನು ನಿನ್ನನ್ನು ಮತ್ತೆ ನಿರ್ಮಿಸುವೆನು,
    ಆಗ ನೀನು ಮತ್ತೆ ಒಂದು ಜನಾಂಗವಾಗುವೆ.
ನೀನು ಮೊದಲಿನಂತೆ ನಿನ್ನ ದಮ್ಮಡಿಯನ್ನು ತೆಗೆದುಕೊಂಡು
    ಸಂತೋಷದಿಂದ ನೃತ್ಯ ಮಾಡುವವರೊಡನೆ ನೃತ್ಯ ಮಾಡುವೆ.
ಇಸ್ರೇಲಿನ ರೈತರಾದ ನೀವು ಮತ್ತೆ ದ್ರಾಕ್ಷಿತೋಟಗಳನ್ನು ಬೆಳೆಸುವಿರಿ.
ನೀವು ಸಮಾರ್ಯ ನಗರದ ಸುತ್ತಮುತ್ತಲಿನ
    ಬೆಟ್ಟಗಳಲ್ಲಿ ಆ ದ್ರಾಕ್ಷಿತೋಟವನ್ನು ಬೆಳೆಸುವಿರಿ.
ರೈತರಾದ ನೀವು
    ಅದರ ಫಲವನ್ನು ಅನುಭವಿಸುವಿರಿ.
ಒಂದು ಕಾಲ ಬರುವುದು,
    ಆಗ ಕಾವಲುಗಾರರು,
‘ಬನ್ನಿ, ನಮ್ಮ ದೇವರಾದ ಯೆಹೋವನನ್ನು ಆರಾಧಿಸಲು
    ಚೀಯೋನಿಗೆ ಹೋಗೋಣ’ ಎಂದು ಕೂಗುವರು.
ಎಫ್ರಾಯೀಮಿನ ಬೆಟ್ಟಪ್ರದೇಶದ ಕಾವಲುಗಾರರು ಸಹ ಹೀಗೆಯೇ ಕೂಗುವರು.”

ಯೋಹಾನ 6:35-40

35 ಅದಕ್ಕೆ ಯೇಸು, “ನಾನೇ ಜೀವಕೊಡುವ ರೊಟ್ಟಿ. ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗದು. ನನ್ನಲ್ಲಿ ನಂಬಿಕೆ ಇಡುವವನಿಗೆ ಎಂದಿಗೂ ಬಾಯಾರಿಕೆಯಾಗದು. 36 ನಾನು ನಿಮಗೆ ಮೊದಲೇ ಹೇಳಿದಂತೆ, ನೀವು ನನ್ನನ್ನು ನೋಡಿದ್ದರೂ ಇನ್ನೂ ನನ್ನನ್ನು ನಂಬುತ್ತಿಲ್ಲ. 37 ತಂದೆಯು ನನ್ನ ಜನರನ್ನು ನನಗೆ ಕೊಡುತ್ತಾನೆ. ಆ ಜನರಲ್ಲಿ ಪ್ರತಿಯೊಬ್ಬರೂ ನನ್ನ ಬಳಿಗೆ ಬರುತ್ತಾರೆ. ನನ್ನಲ್ಲಿಗೆ ಬರುವ ಪ್ರತಿಯೊಬ್ಬರನ್ನೂ ನಾನು ಖಂಡಿತವಾಗಿ ಸ್ವೀಕರಿಸಿಕೊಳ್ಳುವೆನು, ಅವರನ್ನು ಎಂದಿಗೂ ತಳ್ಳಿಬಿಡುವುದಿಲ್ಲ. 38 ನಾನು ಪರಲೋಕದಿಂದ ಇಳಿದು ಬಂದದ್ದು ದೇವರ ಚಿತ್ತಕ್ಕನುಸಾರವಾಗಿ ಮಾಡುವುದಕ್ಕಾಗಿಯೇ ಹೊರತು ನನ್ನ ಚಿತ್ತಕ್ಕನುಸಾರವಾಗಿಯಲ್ಲ. 39 ದೇವರು ನನಗೆ ಕೊಟ್ಟಿರುವ ಯಾವ ವ್ಯಕ್ತಿಯನ್ನೂ ನಾನು ಕಳೆದುಕೊಳ್ಳಕೂಡದು. ಅಲ್ಲದೆ ಅಂತಿಮ ದಿನದಂದು ನಾನು ಆ ಜನರನ್ನು ಜೀವಂತವಾಗಿ ಎಬ್ಬಿಸಬೇಕು. ನನ್ನನ್ನು ಕಳುಹಿಸಿದಾತನು ಆ ಕಾರ್ಯವನ್ನೇ ನನ್ನಿಂದ ಅಪೇಕ್ಷಿಸುತ್ತಾನೆ. 40 ಮಗನನ್ನು ನೋಡಿ ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಹೊಂದಿದ್ದಾನೆ. ಅಂತಿಮ ದಿನದಂದು ನಾನು ಆ ವ್ಯಕ್ತಿಯನ್ನು ಜೀವಂತವಾಗಿ ಎಬ್ಬಿಸುವೆನು. ನನ್ನ ತಂದೆಯು ಬಯಸುವುದು ಇದನ್ನೇ” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International