Revised Common Lectionary (Complementary)
23 ಆಗ ಆತನು ಉನ್ನತದಲ್ಲಿರುವ ಮೇಘಗಳನ್ನು ತೆರೆದನು,
ಅವರ ಆಹಾರಕ್ಕಾಗಿ ಮನ್ನವನ್ನು ಮಳೆಗರೆಸಿದನು.
24 ಆಕಾಶದ ದ್ವಾರಗಳು ತೆರೆದು
ಆಕಾಶದ ಉಗ್ರಾಣದಿಂದ ಧಾನ್ಯವು ಸುರಿದಂತೆ ಮನ್ನವು ಸುರಿಯಿತು.
25 ಜನರು ದೇವದೂತರ ಆಹಾರವನ್ನು ತಿಂದರು.
ಅವರನ್ನು ತೃಪ್ತಿಗೊಳಿಸುವುದಕ್ಕಾಗಿ ಆತನು ಆಹಾರವನ್ನು ಹೇರಳವಾಗಿ ಒದಗಿಸಿದನು.
26 ಬಳಿಕ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು.
ಆಗ ಲಾವಕ್ಕಿಗಳು ಮಳೆಯಂತೆ ಅವರಿದ್ದಲ್ಲಿಗೆ ಬಂದು ಬಿದ್ದವು.
27 ಆತನು ತೇಮಾನಿನಿಂದ ಗಾಳಿಬೀಸುವಂತೆ ಮಾಡಿದಾಗ
ಪಕ್ಷಿಗಳು ಸಮುದ್ರದ ಮರಳಿನಷ್ಟು ಅವರಿದ್ದಲ್ಲಿ ಬಂದು ಬಿದ್ದವು.
28 ಪಕ್ಷಿಗಳು ಪಾಳೆಯದ ಮಧ್ಯಭಾಗದಲ್ಲಿ,
ಆ ಜನರ ಗುಡಾರಗಳ ಸುತ್ತಲೆಲ್ಲಾ ಬಿದ್ದವು.
29 ಅವರಿಗೆ ತಿನ್ನಲು ಹೇರಳವಾಗಿತ್ತು.
ಆದರೆ ತಮ್ಮ ಆಸೆಗಳೇ ತಮ್ಮನ್ನು ಪಾಪಕ್ಕೆ ನಡೆಸುವಂತೆ ಅವರು ಮಾಡಿದರು.
3 ಮೋಶೆಯು ಜನರಿಗೆ, “ನೀವು ಈಜಿಪ್ಟಿನ ಗುಲಾಮತನದಿಂದ ಬಿಡುಗಡೆಯಾದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಆದರೆ ಈ ದಿನದಲ್ಲಿ ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ನೀವು ಹುಳಿಯಿರುವ ರೊಟ್ಟಿಯನ್ನು ತಿನ್ನಬಾರದು. 4 ಅಬೀಬ್ ತಿಂಗಳಿನ ಈ ದಿನದಲ್ಲಿ ನೀವು ಈಜಿಪ್ಟನ್ನು ಬಿಟ್ಟು ಹೊರಟಿರಿ. 5 ಆಗ ಯೆಹೋವನು ಒಂದು ವಿಶೇಷ ವಾಗ್ದಾನವನ್ನು ನಿಮ್ಮ ಪೂರ್ವಿಕರಿಗೆ ಮಾಡಿದನು. ಕಾನಾನ್ಯರು, ಹಿತ್ತಿಯರು, ಅಮೋರಿಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸಿಸುವ ಸಮೃದ್ಧಿಕರವಾದ ದೇಶವನ್ನು ನಿಮಗೆ ಕೊಡುವುದಾಗಿ ಯೆಹೋವನು ವಾಗ್ದಾನ ಮಾಡಿದನು. ಆತನು ನಿಮಗೆ ಆ ದೇಶವನ್ನು ಕೊಟ್ಟಾಗ ಪ್ರತಿವರ್ಷದ ಮೊದಲನೆಯ ತಿಂಗಳ ಈ ದಿನವನ್ನು ಆರಾಧನೆಯ ವಿಶೇಷ ದಿನವನ್ನಾಗಿ ಇಟ್ಟುಕೊಳ್ಳಬೇಕು.
6 “ಏಳು ದಿನಗಳವರೆಗೆ ನೀವು ಕೇವಲ ಹುಳಿಯಿಲ್ಲದ ರೊಟ್ಟಿಯನ್ನೇ ತಿನ್ನಬೇಕು. ಏಳನೆಯ ದಿನದಲ್ಲಿ ಯೊಹೋವನ ಘನತೆಗಾಗಿ ಒಂದು ದೊಡ್ಡ ಹಬ್ಬ ಮಾಡಬೇಕು. 7 ಆದ್ದರಿಂದ ಹುಳಿಯಿರುವ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನಬಾರದು. ನಿಮ್ಮ ದೇಶದಲ್ಲಿ ಹುಳಿಯಿರುವ ರೊಟ್ಟಿ ಇರಲೇಕೂಡದು. 8 ಈ ದಿನದಲ್ಲಿ ನೀವು ನಿಮ್ಮ ಮಕ್ಕಳಿಗೆ, ‘ಯೆಹೋವನು ನಮ್ಮನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದದ್ದರಿಂದ ನಾವು ಈ ಹಬ್ಬವನ್ನು ಮಾಡುತ್ತಿದ್ದೇವೆ’ ಎಂದು ಹೇಳಬೇಕು.
9 “ಈ ಹಬ್ಬವು ನಿಮ್ಮ ಕೈಗಳಲ್ಲಿ ಜ್ಞಾಪಕಪಟ್ಟಿಯಂತಿದ್ದು ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿದ್ದನ್ನು ಮತ್ತು ನಿಮಗೆ ಆತನು ನೀಡಿದ ಉಪದೇಶಗಳನ್ನು ನೆನಪಿಗೆ ತರುತ್ತದೆ. 10 ಆದ್ದರಿಂದ ಪ್ರತಿವರ್ಷ ನಿಯಮಿತವಾದ ಕಾಲದಲ್ಲಿ ನೀವು ಈ ಹಬ್ಬವನ್ನು ಆಚರಿಸಬೇಕು.
ಯೆಹೂದ್ಯನಾಯಕರ ಬಗ್ಗೆ ಯೇಸು ನೀಡಿದ ಎಚ್ಚರಿಕೆ
(ಮಾರ್ಕ 8:14-21)
5 ಯೇಸು ಮತ್ತು ಆತನ ಶಿಷ್ಯರು ಸರೋವರವನ್ನು[a] ದಾಟಿ ಹೋದರು. ಆದರೆ ಶಿಷ್ಯರು ರೊಟ್ಟಿಯನ್ನು ತರಲು ಮರೆತುಬಿಟ್ಟರು. 6 ಯೇಸು ಶಿಷ್ಯರಿಗೆ, “ಎಚ್ಚರಿಕೆಯಿಂದಿರಿ! ಫರಿಸಾಯರ ಮತ್ತು ಸದ್ದುಕಾಯರ ಹುಳಿಗೆ ಒಳಗಾಗಬೇಡಿ” ಎಂದು ಹೇಳಿದನು.
7 ಶಿಷ್ಯರು ಇದರ ಅರ್ಥವನ್ನು ಚರ್ಚಿಸಿದರು. ಅವರು, “ನಾವು ರೊಟ್ಟಿ ತರಲು ಮರೆತುಬಿಟ್ಟದ್ದಕ್ಕಾಗಿ ಯೇಸು ಹೀಗೆ ಹೇಳಿರಬಹುದೆ?” ಎಂದು ಮಾತಾಡಿಕೊಂಡರು.
8 ಶಿಷ್ಯರು ಈ ವಿಷಯವನ್ನು ಚರ್ಚಿಸುತ್ತಿರುವುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಯೇಸು ಅವರಿಗೆ, “ರೊಟ್ಟಿ ಇಲ್ಲವಲ್ಲಾ ಎಂಬ ವಿಷಯದಲ್ಲಿ ನೀವು ಮಾತಾಡಿಕೊಳ್ಳುತ್ತಿರುವುದೇಕೆ? ಅಲ್ಪ ವಿಶ್ವಾಸಿಗಳೇ, 9 ನೀವಿನ್ನೂ ಅರ್ಥಮಾಡಿಕೊಳ್ಳಲಿಲ್ಲವೇ? ಐದು ರೊಟ್ಟಿಗಳಿಂದ ಐದು ಸಾವಿರ ಜನರಿಗೆ ಊಟ ಮಾಡಿಸಿದ್ದು ನಿಮಗೆ ನೆನಪಿಲ್ಲವೇ? ಜನರು ಊಟ ಮಾಡಿದ ಮೇಲೆ ನೀವು ಅನೇಕ ಬುಟ್ಟಿಗಳಲ್ಲಿ ರೊಟ್ಟಿಗಳನ್ನು ತುಂಬಿಸಿದ್ದು ನಿಮಗೆ ನೆನಪಿಲ್ಲವೇ? 10 ಏಳು ರೊಟ್ಟಿಗಳ ತುಂಡುಗಳನ್ನು ನಾಲ್ಕು ಸಾವಿರ ಜನರಿಗೆ ಊಟ ಮಾಡಿಸಿದ್ದು ನಿಮಗೆ ನೆನಪಿಲ್ಲವೇ? ಜನರು ತಿಂದು ಮುಗಿಸಿದ ಮೇಲೆ ನೀವು ಅನೇಕ ಬುಟ್ಟಿಗಳಲ್ಲಿ ರೊಟ್ಟಿಗಳನ್ನು ತುಂಬಿಸಿದ್ದು ನಿಮಗೆ ನೆನಪಿಲ್ಲವೇ? 11 ಆದ್ದರಿಂದ ನಾನು ನಿಮಗೆ ಹೇಳಿದ್ದು ರೊಟ್ಟಿಯ ಕುರಿತಲ್ಲ. ನೀವು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇಕೆ? ಫರಿಸಾಯರು ಮತ್ತು ಸದ್ದುಕಾಯರ ಹುಳಿಗೆ (ಕೆಟ್ಟ ಪ್ರಭಾವಕ್ಕೆ) ಒಳಗಾಗದಂತೆ ನೀವು ಎಚ್ಚರಿಕೆಯಿಂದಿರಬೇಕೆಂದು ನಾನು ನಿಮ್ಮನ್ನು ಎಚ್ಚರಿಸಿದೆನು” ಅಂದನು.
12 ಆಗ ಶಿಷ್ಯರು ಯೇಸು ಹೇಳಿದ್ದನ್ನು ಅರ್ಥಮಾಡಿಕೊಂಡರು. ಆತನು ಅವರಿಗೆ ರೊಟ್ಟಿಯಲ್ಲಿ ಬೆರೆಸಿದ್ದ ಹುಳಿಯನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಹೇಳಲಿಲ್ಲ. ಫರಿಸಾಯರು ಮತ್ತು ಸದ್ದುಕಾಯರ ಬೋಧನೆಯ ಪ್ರಭಾವಕ್ಕೆ ಒಳಗಾಗದಂತೆ ಎಚ್ಚರಿಕೆಯಾಗಿರಬೇಕೆಂದು ಹೇಳಿದ್ದನು.
Kannada Holy Bible: Easy-to-Read Version. All rights reserved. © 1997 Bible League International