Revised Common Lectionary (Complementary)
ರಚನೆಗಾರ: ದಾವೀದ.
15 ಯೆಹೋವನೇ, ನಿನ್ನ ಪವಿತ್ರ ಗುಡಾರದಲ್ಲಿ ಎಂಥವನು ವಾಸಿಸಬಲ್ಲನು?
ನಿನ್ನ ಪವಿತ್ರ ಪರ್ವತದ ಮೇಲೆ ಎಂಥವನು ನೆಲಸಬಲ್ಲನು?
2 ಅವನು ನಿರ್ದೋಷಿಯೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ
ಹೃದಯದಿಂದ ಸತ್ಯವನ್ನು ಮಾತಾಡುವವನೂ ಆಗಿರಬೇಕು.
3 ಅವನು ಚಾಡಿ ಹೇಳದವನೂ ನೆರೆಯವರಿಗೆ ಕೇಡನ್ನು ಮಾಡದವನೂ
ತನ್ನ ಸ್ವಂತ ಕುಟುಂಬದವರನ್ನು ನಿಂದಿಸದವನೂ ಆಗಿರಬೇಕು.
4 ಅವನು ದೇವದೂಷಕರನ್ನು ತಿರಸ್ಕರಿಸುವವನೂ
ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಗೌರವಿಸುವವನೂ
ತನಗೆ ತೊಂದರೆಯಾದರೂ
ಕೊಟ್ಟ ಮಾತಿಗೆ ತಪ್ಪದವನೂ ಆಗಿರಬೇಕು.
5 ಅವನು ಕೊಟ್ಟ ಸಾಲಕ್ಕೆ ಬಡ್ಡಿ ಕೇಳದವನೂ
ನಿರಪರಾಧಿಗೆ ಕೇಡುಮಾಡಲು ಲಂಚ ತೆಗೆದುಕೊಳ್ಳದವನೂ ಆಗಿರಬೇಕು.
ಹೀಗೆ ಜೀವಿಸುವವನು
ದೇವರಿಗೆ ಸಮೀಪವಾಗಿಯೇ ಇರುತ್ತಾನೆ.[a]
15 ಬಳಿಕ ಮೋಶೆ ಬೆಟ್ಟದಿಂದಿಳಿದು ಬಂದನು. ಮೋಶೆಯೊಡನೆ ಆಜ್ಞಾಶಾಸನಗಳ ಎರಡು ಕಲ್ಲಿನ ಹಲಿಗೆಗಳಿದ್ದವು. ಈ ಆಜ್ಞಾಶಾಸನಗಳ ಕಲ್ಲುಗಳ ಮುಂದೆಯೂ ಹಿಂದೆಯೂ ಬರೆಯಲ್ಪಟ್ಟಿದ್ದವು. 16 ಯೆಹೋವನು ತಾನೇ ಆ ಕಲ್ಲುಗಳನ್ನು ಮಾಡಿ ಅವುಗಳ ಮೇಲೆ ಬರೆದಿದ್ದನು.
17 ಇಸ್ರೇಲರ ಗದ್ದಲವನ್ನೂ ಕೂಗಾಟವನ್ನೂ ಯೆಹೋಶುವನು ಕೇಳಿ ಮೋಶೆಗೆ, “ಪಾಳೆಯದ ಕಡೆಯಿಂದ ಯುದ್ಧದ ಧ್ವನಿ ಕೇಳಿಬರುತ್ತಿದೆ” ಅಂದನು.
18 ಅದಕ್ಕೆ ಮೋಶೆ, “ಅದು ಸೈನ್ಯದ ಜಯಧ್ವನಿಯಲ್ಲ. ಅದು ಸೋಲಿನಿಂದ ಕೂಗುವ ಸೈನ್ಯದ ಧ್ವನಿಯೂ ಅಲ್ಲ. ನಾನು ಕೇಳುತ್ತಿರುವುದು ಉತ್ಸವದ ಧ್ವನಿ” ಎಂದು ಉತ್ತರಿಸಿದನು.
19 ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದನು. ಅವನು ಚಿನ್ನದ ಬಸವನನ್ನೂ ಜನರ ನರ್ತನವನ್ನೂ ನೋಡಿ ಬಹುಕೋಪಗೊಂಡು ಕಲ್ಲಿನ ಹಲಿಗೆಗಳನ್ನು ನೆಲದ ಮೇಲೆ ಬಿಸಾಡಿಬಿಟ್ಟನು; ಅವು ಚೂರುಚೂರಾಗಿ ಒಡೆದುಹೋದವು. 20 ಬಳಿಕ ಮೋಶೆಯು ಆ ಬಸವನ ಮೂರ್ತಿಯನ್ನು ಬೆಂಕಿಯಲ್ಲಿ ಕರಗಿಸಿ ಅದರ ಚಿನ್ನವನ್ನು ಧೂಳಿನಂತೆ ಅರೆದು ನೀರಿಗೆ ಹಾಕಿ ಆ ನೀರನ್ನು ಇಸ್ರೇಲರಿಗೆ ಕುಡಿಸಿದನು.
21 ಮೋಶೆಯು ಆರೋನನಿಗೆ, “ಈ ಜನರು ನಿನಗೇನು ಮಾಡಿದರು? ಇಂಥಾ ಕೆಟ್ಟ ಪಾಪವನ್ನು ಮಾಡುವಂತೆ ಯಾಕೆ ಅವರನ್ನು ನಡಿಸಿದೆ?” ಎಂದು ಹೇಳಿದನು.
22 ಆರೋನನು, “ಕೋಪಗೊಳ್ಳಬೇಡ. ಇವರು ಯಾವಾಗಲೂ ಪಾಪಮಾಡಲು ಸಿದ್ಧರಾಗಿರುವುದು ನಿನಗೆ ಗೊತ್ತೇ ಇದೆ. 23 ಅವರು ನನಗೆ, ‘ಮೋಶೆಯು ನಮ್ಮನ್ನು ಈಜಿಪ್ಟಿನಿಂದ ಹೊರಗೆ ನಡೆಸಿದನು. ಆದರೆ ಅವನಿಗೇನಾಯಿತೋ ನಮಗೆ ತಿಳಿಯದು. ಆದ್ದರಿಂದ ನಮ್ಮನ್ನು ಮುನ್ನಡೆಸಲು ದೇವರುಗಳನ್ನು ಮಾಡಿಕೊಡು’ ಎಂದು ಕೇಳಿದರು. 24 ಆದ್ದರಿಂದ ನಾನು ಅವರಿಗೆ, ‘ನಿಮ್ಮಲ್ಲಿ ಚಿನ್ನದ ಆಭರಣಗಳಿದ್ದರೆ ನನಗೆ ಕೊಡಿರಿ’ ಎಂದು ಹೇಳಿದೆನು. ಅವರು ಆಭರಣಗಳನ್ನು ನನಗೆ ತಂದುಕೊಟ್ಟರು. ನಾನು ಅವುಗಳನ್ನು ಬೆಂಕಿಯಲ್ಲಿ ಕರಗಿಸಿ ಈ ಬಸವನ ಮೂರ್ತಿಯನ್ನು ಎರಕಹೊಯ್ದೆನು” ಎಂದು ಉತ್ತರಿಸಿದನು.
25 ಜನರು ಅಂಕೆತಪ್ಪಿ ತಮ್ಮ ಇಷ್ಟಬಂದಂತೆ ಮಾಡುವುದಕ್ಕೆ ಆರೋನನು ಅವರನ್ನು ಬಿಟ್ಟುಬಿಟ್ಟಿರುವುದು ಮೋಶೆಗೆ ತಿಳಿಯಿತು. ಜನರು ಕ್ರಮವಿಲ್ಲದೆ ಸ್ವೇಚ್ಛೆಯಿಂದ ನಡೆಯುತ್ತಿದ್ದರು; ಅವರ ಮೂರ್ಖತನವು ಅವರ ವಿರೋಧಿಗಳಿಗೆ ಎದ್ದುಕಾಣುತ್ತಿತ್ತು! 26 ಆದ್ದರಿಂದ ಪಾಳೆಯದ ದ್ವಾರದಲ್ಲಿ ಮೋಶೆಯು ನಿಂತು, “ಯೆಹೋವನ ಪಕ್ಷದವರು ನನ್ನ ಬಳಿಗೆ ಬರಬೇಕು” ಎಂದು ಹೇಳಿದನು. ಲೇವಿ ಕುಲದವರೆಲ್ಲಾ ಮೋಶೆಯ ಬಳಿಗೆ ಬಂದರು.
27 ಆಗ ಮೋಶೆ ಅವರಿಗೆ, “ಇಸ್ರೇಲರ ದೇವರಾದ ಯೆಹೋವನು ಹೇಳುವುದನ್ನು ನಿಮಗೆ ತಿಳಿಸುತ್ತೇನೆ: ‘ನಿಮ್ಮಲ್ಲಿ ಪ್ರತಿಯೊಬ್ಬನು ಕತ್ತಿಯನ್ನು ತೆಗೆದುಕೊಂಡು ಪಾಳೆಯದ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೆ ಹೋಗಿ ಜನರನ್ನು ಶಿಕ್ಷಿಸಬೇಕು. ನಿಮ್ಮ ಸಹೋದರರಾಗಿದ್ದರೂ ಸ್ನೇಹಿತರಾಗಿದ್ದರೂ ಅಥವಾ ನೆರೆಯವರಾಗಿದ್ದರೂ ಸರಿ, ಕೊಲ್ಲಿರಿ’” ಎಂದು ಹೇಳಿದನು.
28 ಲೇವಿಕುಲದವರು ಮೋಶೆಯ ಮಾತಿಗೆ ವಿಧೇಯರಾದರು. ಅಂದು ಇಸ್ರೇಲರಲ್ಲಿ ಸುಮಾರು ಮೂರು ಸಾವಿರ ಮಂದಿ ಸತ್ತರು. 29 ಆಗ ಮೋಶೆಯು ಅವರಿಗೆ, “ಇಂದು ನೀವು ಯೆಹೋವನಿಗೆ ಮೀಸಲಾದ ಜನರಾದಿರಿ; ಯಾಕೆಂದರೆ ನೀವು ನಿಮ್ಮ ಸ್ವಂತ ಗಂಡುಮಗನಿಗೂ ಸಹೋದರನಿಗೂ ವಿರೋಧವಾದಿರಿ. ಇಂದು ಆತನು ನಿಮ್ಮನ್ನು ಆಶೀರ್ವದಿಸಿದ್ದಾನೆ” ಅಂದನು.
30 ಮರುದಿನ ಮುಂಜಾನೆ ಮೋಶೆಯು ಜನರಿಗೆ, “ನೀವು ಭಯಂಕರವಾದ ಪಾಪವನ್ನು ಮಾಡಿದ್ದೀರಿ. ಆದರೆ ಈಗ ನಾನು ಯೆಹೋವನ ಬಳಿಗೆ ಹೋಗಿ, ಆತನು ನಿಮ್ಮ ಪಾಪಗಳನ್ನು ಕ್ಷಮಿಸುವಂತೆ ನಾನೇನಾದರೂ ಮಾಡಬಹುದೊ ಎಂದು ವಿಚಾರಿಸುತ್ತೇನೆ” ಎಂದನು. 31 ಅಂತೆಯೇ ಮೋಶೆಯು ಯೆಹೋವನ ಬಳಿಗೆ ಮರಳಿ ಹೋಗಿ, “ದಯವಿಟ್ಟು ಆಲಿಸು! ಈ ಜನರು ಬಹಳ ಕೆಟ್ಟ ಪಾಪವನ್ನು ಮಾಡಿದ್ದಾರೆ. ಚಿನ್ನದಿಂದ ಮೂರ್ತಿಯನ್ನು ಮಾಡಿಕೊಂಡಿದ್ದಾರೆ. 32 ಅವರ ಈ ಪಾಪವನ್ನು ಕ್ಷಮಿಸು. ನೀನು ಅವರನ್ನು ಕ್ಷಮಿಸುವುದಿಲ್ಲವಾದರೆ ನಿನ್ನ ಜೀವಭಾದ್ಯರ ಪಟ್ಟಿಯ ಪುಸ್ತಕದಿಂದ ನನ್ನ ಹೆಸರನ್ನು ಅಳಿಸಿಬಿಡು” ಎಂದು ಪ್ರಾರ್ಥಿಸಿದನು.
33 ಆದರೆ ಯೆಹೋವನು ಮೋಶೆಗೆ, “ನನಗೆ ವಿರೋಧವಾಗಿ ಪಾಪಮಾಡುವ ಜನರ ಹೆಸರನ್ನು ಮಾತ್ರವೇ ನನ್ನ ಪುಸ್ತಕದಿಂದ ಅಳಿಸುತ್ತೇನೆ. 34 ಆದ್ದರಿಂದ ಈಗ ಕೆಳಗಿಳಿದು ನಾನು ನಿನಗೆ ಹೇಳುವಲ್ಲಿಗೆ ಜನರನ್ನು ನಡಿಸು. ನನ್ನ ದೂತನು ನಿನ್ನ ಮುಂದೆ ಹೋಗಿ ನಿನ್ನನ್ನು ನಡಿಸುವನು. ಪಾಪಮಾಡಿದ ಜನರನ್ನು ಶಿಕ್ಷಿಸುವ ಸಮಯ ಬಂದಾಗ ಅವರು ಶಿಕ್ಷಿಸಲ್ಪಡುವರು” ಎಂದು ಹೇಳಿದನು. 35 ಆದ್ದರಿಂದ ಯೆಹೋವನು ಜನರಿಗೆ ಭಯಂಕರವಾದ ವ್ಯಾದಿಯನ್ನು ಬರಮಾಡಿದನು. ಅವರು ಆರೋನನಿಂದ ಬಸವನನ್ನು ಮಾಡಿಸಿಕೊಂಡದ್ದೇ ಇದಕ್ಕೇ ಕಾರಣ.
ನಿಜ ಶ್ರೀಮಂತಿಕೆ
9 ಬಡವನಾಗಿರುವ ವಿಶ್ವಾಸಿಯು ಹೆಮ್ಮೆಪಡಲಿ, ಏಕೆಂದರೆ ದೇವರು ಅವನನ್ನು ಆತ್ಮಿಕ ವಿಷಯದಲ್ಲಿ ಐಶ್ವರ್ಯವಂತನನ್ನಾಗಿ ಮಾಡಿದ್ದಾನೆ. 10 ಐಶ್ವರ್ಯವಂತನಾಗಿರುವ ವಿಶ್ವಾಸಿಯೂ ಹೆಮ್ಮೆಪಡಬೇಕು. ಏಕೆಂದರೆ ಆತ್ಮಿಕ ವಿಷಯದಲ್ಲಿ ಅವನಿಗಿರುವ ಬಡತನವನ್ನು ದೇವರು ಅವನಿಗೆ ತೋರಿಸಿಕೊಟ್ಟಿದ್ದಾನೆ. ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸುವನು. 11 ಸೂರ್ಯನು ಮೇಲೇರಿದಂತೆ ಬಿಸಿಲು ಹೆಚ್ಚಾಗುವುದು. ಸೂರ್ಯನ ತಾಪದಿಂದ ಗಿಡಗಳು ಒಣಗಿಹೋಗುವವು; ಹೂವುಗಳು ಉದುರಿ ಹೋಗುವವು. ಹೂವು ಸುಂದರವಾಗಿತ್ತು, ಆದರೆ ಈಗ ಅದು ಒಣಗಿಹೋಯಿತು. ಐಶ್ವರ್ಯವಂತನಿಗೂ ಇದೇ ರೀತಿಯಾಗುವುದು. ಅವನು ತನ್ನ ವ್ಯಾಪಾರದ ಬಗ್ಗೆ ಯೋಜನೆಗಳನ್ನು ಮಾಡುತ್ತಿರುವಾಗಲೇ ಸತ್ತುಹೋಗುವನು.
ಶೋಧನೆಯು ದೇವರಿಂದ ಬರುವುದಿಲ್ಲ
12 ಶೋಧನೆಯನ್ನು ಎದುರಿಸುತ್ತಿದ್ದರೂ ದೃಢವಾಗಿರುವವನೇ ಧನ್ಯನು. ಏಕೆಂದರೆ ಅವನು ತನ್ನ ನಂಬಿಕೆಯನ್ನು ನಿರೂಪಿಸಿದಾಗ, ಜೀವವೆಂಬ ಜಯಮಾಲೆಯನ್ನು ಹೊಂದುವನು. ದೇವರು ತನ್ನನ್ನು ಪ್ರೀತಿಸುವ ಜನರಿಗೆಲ್ಲರಿಗೂ ಇದನ್ನು ವಾಗ್ದಾನ ಮಾಡಿದ್ದಾನೆ. 13 ಶೋಧನೆಗೆ ಗುರಿಯಾಗಿರುವ ವ್ಯಕ್ತಿಯು, “ದೇವರು ನನ್ನನ್ನು ಶೋಧಿಸುತ್ತಿದ್ದಾನೆ” ಎಂದು ಹೇಳಬಾರದು. ಕೆಟ್ಟದ್ದು ದೇವರನ್ನು ಶೋಧಿಸಲಾರದು. ದೇವರು ತಾನಾಗಿಯೇ ಯಾರನ್ನೂ ಶೋಧಿಸುವುದಿಲ್ಲ. 14 ಶೋಧನೆಗೆ ಗುರಿಯಾಗಿರುವವನು ತಾನು ಇಷ್ಟಪಡುವ ಕೆಟ್ಟಕಾರ್ಯಗಳಿಂದಲೇ ಶೋಧನೆಗೆ ಒಳಗಾಗಿದ್ದಾನೆ. ಅವನ ಕೆಟ್ಟ ಆಸೆಗಳೇ ಅವನನ್ನು ದೂರ ಸೆಳೆದು, ಬಿಡದೆ ಹಿಡಿದುಕೊಳ್ಳುತ್ತವೆ. 15 ಈ ಆಸೆಗಳು ಅವನಿಂದ ಪಾಪವನ್ನು ಮಾಡಿಸುತ್ತದೆ. ನಂತರ ಪಾಪವು ಬೆಳೆದು ಸಾವನ್ನು ತರುತ್ತದೆ.
16 ನನ್ನ ಪ್ರಿಯ ಸಹೋದರ ಸಹೋದರಿಯರೇ, ಈ ವಿಷಯದಲ್ಲಿ ನೀವು ಮೋಸಹೋಗಬೇಡಿರಿ.
Kannada Holy Bible: Easy-to-Read Version. All rights reserved. © 1997 Bible League International