Revised Common Lectionary (Complementary)
ಐದನೆಯ ಭಾಗ
(ಕೀರ್ತನೆಗಳು 107–150)
107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
ಆತನ ಪ್ರೀತಿ ಶಾಶ್ವತವಾದದ್ದು!
2 ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
3 ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.
33 ಆತನು ನದಿಗಳನ್ನು ಮರಳುಗಾಡನ್ನಾಗಿ ಮಾರ್ಪಡಿಸಿದನು;
ಹರಿಯುವ ಒರತೆಗಳನ್ನು ತಡೆದು ನಿಲ್ಲಿಸಿದನು.
34 ಆತನು ಫಲವತ್ತಾದ ಭೂಮಿಯನ್ನು ಉಪಯೋಗವಿಲ್ಲದ ಉಪ್ಪುಭೂಮಿಯನ್ನಾಗಿ ಪರಿವರ್ತಿಸಿದನು,
ಯಾಕೆಂದರೆ ಅಲ್ಲಿ ಕೆಟ್ಟಜನರು ನೆಲೆಸಿದ್ದರು.
35 ಆತನು ಮರಳುಗಾಡನ್ನು ಸರೋವರಗಳುಳ್ಳ ನಾಡನ್ನಾಗಿ ಪರಿವರ್ತಿಸಿದನು;
ಒಣನೆಲದಿಂದ ನೀರಿನ ಒರತೆಗಳನ್ನು ಹರಿಯಮಾಡಿದನು.
36 ಆತನು ಹಸಿದವರನ್ನು ಒಳ್ಳೆಯ ನಾಡಿಗೆ ನಡೆಸಿದನು.
ಅವರು ಅಲ್ಲಿ ನೆಲೆಸಿ ಪಟ್ಟಣವನ್ನು ಕಟ್ಟಿದರು.
37 ಅವರು ಹೊಲಗಳಲ್ಲಿ ಬೀಜ ಬಿತ್ತಿ
ತೋಟಗಳಲ್ಲಿ ದ್ರಾಕ್ಷಾಲತೆಗಳನ್ನು ನೆಟ್ಟು ಒಳ್ಳೆಯ ಸುಗ್ಗಿಗಳನ್ನು ಪಡೆದರು.
38 ಆತನ ಆಶೀರ್ವಾದದಿಂದ ಅವರ ಕುಟುಂಬಗಳು ವೃದ್ಧಿಯಾದವು.
ಅವರ ಪಶುಗಳು ಅಸಂಖ್ಯಾತಗೊಂಡವು.
39 ವಿಪತ್ತುಗಳಿಂದಲೂ ತೊಂದರೆಗಳಿಂದಲೂ
ಅವರ ಕುಟುಂಬಗಳು ಚಿಕ್ಕದಾಗಿದ್ದವು; ಬಲಹೀನವಾಗಿದ್ದವು.
40 ಆತನು ಅವರ ನಾಯಕರುಗಳಿಗೆ ಅವಮಾನ ಮಾಡಿದನು;
ದಾರಿಗಳಿಲ್ಲದ ಅರಣ್ಯದಲ್ಲಿ ಅಲೆದಾಡುವಂತೆ ಅವರನ್ನು ತೊರೆದುಬಿಟ್ಟನು.
41 ಬಳಿಕ ಆತನು ದೀನರನ್ನು ಅವರ ಸಂಕಟದಿಂದ ಬಿಡಿಸಿದನು.
ಈಗ ಅವರ ಕುಟುಂಬಗಳು ಕುರಿಮಂದೆಗಳಂತೆ ದೊಡ್ಡದಾದವು.
42 ಒಳ್ಳೆಯವರು ಇದನ್ನು ಕಂಡು ಸಂತೋಷಪಡುವರು.
ದುಷ್ಟರು ಇದನ್ನು ಕಂಡು ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳುವರು.
43 ಜ್ಞಾನಿಯು ಇವುಗಳನ್ನು ನೆನಪು ಮಾಡಿಕೊಂಡು
ದೇವರ ನಿಜಪ್ರೀತಿಯನ್ನು ಅರ್ಥಮಾಡಿಕೊಳ್ಳುವನು.
ದೇವರಾದ ಯೆಹೋವನನ್ನು ಸ್ಮರಿಸಿರಿ
8 “ನಾನು ಈ ದಿನ ಕೊಡುವ ಎಲ್ಲಾ ಆಜ್ಞೆಗಳನ್ನು ನೀವು ಅನುಸರಿಸಬೇಕು. ಆಗ ನೀವು ದೊಡ್ಡ ಜನಾಂಗವಾಗಿ ಅಭಿವೃದ್ಧಿಯಾಗುವಿರಿ. ನಿಮ್ಮ ಪೂರ್ವಿಕರಿಗೆ ಯೆಹೋವನು ವಾಗ್ದಾನ ಮಾಡಿದ ದೇಶವನ್ನು ನೀವು ಪಡೆದುಕೊಳ್ಳುವಿರಿ. 2 ನಿಮ್ಮ ದೇವರಾದ ಯೆಹೋವನು ಈ ನಲವತ್ತು ವರ್ಷಗಳ ಕಾಲ ನಿಮ್ಮನ್ನು ಅರಣ್ಯ ಪ್ರಯಾಣದಲ್ಲಿ ಮೊದಲು ನಡೆಸಿದ್ದನ್ನು ನೀವು ಯಾವಾಗಲೂ ಸ್ಮರಿಸಬೇಕು. ಯೆಹೋವನು ನಿಮ್ಮನ್ನು ಪರೀಕ್ಷಿಸುತ್ತಿದ್ದನು ಮತ್ತು ನಿಮ್ಮನ್ನು ದೀನರನ್ನಾಗಿ ಮಾಡಬೇಕೆಂದಿದ್ದನು. ನಿಮ್ಮ ಹೃದಯದ ಆಲೋಚನೆಗಳನ್ನು ಆತನು ತಿಳಿದುಕೊಳ್ಳಬೇಕೆಂದಿದ್ದನು; ನೀವು ಆತನ ಆಜ್ಞೆಗಳಿಗೆ ವಿಧೇಯರಾಗುವಿರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕೆಂದಿದ್ದನು. 3 ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿ ನಿಮಗೆ ಹಸಿವೆಯಾಗುವಂತೆ ಮಾಡಿದನು. ಆ ಬಳಿಕ ಮನ್ನದ ಮೂಲಕ ನಿಮ್ಮ ಹಸಿವೆಯನ್ನು ನೀಗಿದನು. ಇದರ ವಿಷಯವಾಗಿ ನೀವು ಹಿಂದೆಂದೂ ಕೇಳಿರಲಿಲ್ಲ. ನಿಮ್ಮ ಪೂರ್ವಿಕರೂ ನೋಡಿರಲಿಲ್ಲ. ಆತನು ಹೀಗೇಕೆ ಮಾಡಿದನು? ಯಾಕೆಂದರೆ ಕೇವಲ ರೊಟ್ಟಿ ತಿಂದ ಮಾತ್ರದಿಂದ ಮನುಷ್ಯರು ಬದುಕದೆ ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೇ ಬದುಕುವರೆಂಬುದನ್ನು ನೀವು ತಿಳಿಯಬೇಕೆಂದು ಹೀಗೆ ಮಾಡಿದನು. 4 ಆತನು ನಿಮ್ಮನ್ನು ಕಾಪಾಡಿ ಸಂರಕ್ಷಿಸಿದ್ದರಿಂದ ಈ ನಲವತ್ತು ವರ್ಷ ನಿಮ್ಮ ಬಟ್ಟೆಗಳು ಹರಿದುಹೋಗಲಿಲ್ಲ; ನಿಮ್ಮ ಕಾಲುಗಳು ಊದಿಕೊಳ್ಳಲಿಲ್ಲ. 5 ಇವೆಲ್ಲವನ್ನು ನಿಮ್ಮ ದೇವರಾದ ಯೆಹೋವನು ನಿಮಗೆ ಮಾಡಿದನು. ತಂದೆಯು ತನ್ನ ಮಗನನ್ನು ತಿದ್ದಿ ಶಿಸ್ತಿನಲ್ಲಿ ನಡೆಸುವಂತೆ ದೇವರು ನಿಮ್ಮೊಂದಿಗೆ ವರ್ತಿಸಿದನು.
6 “ಆತನ ಆಜ್ಞೆಗಳಿಗೆ ವಿಧೇಯರಾಗಿರಿ. ಆತನನ್ನು ಅನುಸರಿಸಿ ಗೌರವಿಸಿರಿ. 7 ನಿಮ್ಮ ದೇವರಾದ ಯೆಹೋವನು ಉತ್ತಮವಾದ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. ಆ ದೇಶದಲ್ಲಿ ನೀರು ಸಮೃದ್ಧಿಯಾಗಿರುವುದು. ನೀರು ಕಣಿವೆಗಳಲ್ಲಿಯೂ ಬೆಟ್ಟಗಳಲ್ಲಿಯೂ ನೆಲದ ಮೇಲೂ ಹರಿದುಬರುವುದು. 8 ಆ ದೇಶವು ಗೋಧಿ, ಜವೆಗೋಧಿ, ದ್ರಾಕ್ಷಾಲತೆಗಳು, ಅಂಜೂರ, ದಾಳಿಂಬೆ ಮರಗಳಿಂದ ತುಂಬಿದೆ. ಅಲ್ಲಿ ಎಣ್ಣೆ, ಜೇನುತುಪ್ಪ ಧಾರಾಳವಾಗಿ ಸಿಗುವವು. 9 ಅಲ್ಲಿ ನೀವು ಯಥೇಚ್ಛವಾಗಿ ತಿನ್ನುವಿರಿ. ನಿಮಗೆ ಬೇಕಾದದ್ದೆಲ್ಲಾ ನಿಮಗಿರುವುದು. ಅಲ್ಲಿಯ ಕಲ್ಲುಗಳು ಕಬ್ಬಿಣದಂತಿವೆ. ಬೆಟ್ಟಗಳಿಂದ ನೀವು ತಾಮ್ರವನ್ನು ಅಗೆದು ತೆಗೆಯುವಿರಿ. 10 ನಿಮಗೆ ಬೇಕಾದಷ್ಟು ಆಹಾರ ಇರುವುದು. ಆಗ ನೀವು ನಿಮಗೆ ಉತ್ತಮ ದೇಶವನ್ನು ಕೊಟ್ಟಿರುವ ಯೆಹೋವ ದೇವರನ್ನು ಸ್ತುತಿಸುವಿರಿ.
ಯೆಹೋವನು ಮಾಡಿದ್ದನ್ನು ಮರೆಯಬೇಡಿರಿ
11 “ನೀವು ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡದಂತೆ ಎಚ್ಚರವಾಗಿರಿ. ನಾನು ಕೊಡುವ ವಿಧಿನಿಯಮಗಳಿಗೆ ವಿಧೇಯರಾಗಿರಿ. 12 ಆಗ ನಿಮಗೆ ಸಮೃದ್ಧಿಯಾಗಿ ಆಹಾರವಿರುವುದು. ನೀವು ಒಳ್ಳೆಯ ಮನೆಗಳನ್ನು ಕಟ್ಟಿಕೊಂಡು ವಾಸಿಸುವಿರಿ. 13 ನಿಮ್ಮ ಹಿಂಡು ವೃದ್ಧಿಯಾಗುವುದು. ನಿಮಗೆ ಬೆಳ್ಳಿಬಂಗಾರಗಳು ಹೇರಳವಾಗಿ ದೊರಕುವವು ಮತ್ತು ನೀವು ಪ್ರತಿಯೊಂದು ವಿಷಯದಲ್ಲೂ ಸಮೃದ್ಧಿಯನ್ನು ಕಾಣುವಿರಿ. 14 ಆಗ ನೀವು ಹೆಮ್ಮೆಯಿಂದ ಸೊಕ್ಕಿನ ಕಣ್ಣುಳ್ಳವರಾಗಿರಬೇಡಿ. ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡಬೇಡಿರಿ. ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ಆತನು ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದನು. 15 ಆತನು ನಿಮ್ಮನ್ನು ಭಯಂಕರವಾದ ಆ ಅಡವಿಯಲ್ಲಿ ಮೊದಲು ನಡೆಸಿದನು. ಅಲ್ಲಿ ವಿಷದ ಹಾವುಗಳು, ಚೇಳುಗಳು ಇದ್ದವು. ನೆಲವು ಕಾದಿದ್ದು ಎಲ್ಲಿಯೂ ನೀರು ಸಿಗುತ್ತಿರಲಿಲ್ಲ. ಆದರೆ ನಿಮ್ಮ ದೇವರಾದ ಯೆಹೋವನು ಬಂಡೆಯೊಳಗಿಂದ ನೀರನ್ನು ನಿಮಗೆ ಒದಗಿಸಿದನು. 16 ನಿಮ್ಮ ಪೂರ್ವಿಕರು ನೋಡಿಲ್ಲದ ಮನ್ನವನ್ನು ಯೆಹೋವನು ನಿಮಗೆ ಮರುಭೂಮಿಯಲ್ಲಿ ತಿನ್ನಲು ಕೊಟ್ಟನು. ಯೆಹೋವನು ನಿಮ್ಮನ್ನು ಪರೀಕ್ಷಿಸಿದನು. ನೀವು ಒಳ್ಳೆಯ ಫಲಭರಿತವಾದ ಜೀವಿತವನ್ನು ನಡೆಸಬೇಕೆಂದು ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿದನು. 17 ‘ಇವೆಲ್ಲಾ ನಾವೇ ಸಂಪಾದಿಸಿದ್ದು, ನಮ್ಮ ಶಕ್ತಿಸಾಮರ್ಥ್ಯಗಳಿಂದ ಇವುಗಳನ್ನು ನಾವು ಪಡೆದೆವು’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿ. 18 ನಿಮ್ಮ ದೇವರಾದ ಯೆಹೋವನನ್ನು ಜ್ಞಾಪಕಮಾಡಿಕೊಳ್ಳಿ. ಇವೆಲ್ಲಾ ಸಂಪಾದಿಸುವುದಕ್ಕೆ ಆತನೇ ನಿಮಗೆ ಶಕ್ತಿ ಕೊಟ್ಟನು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಯೆಹೋವನು ನಿಮಗೆ ಹೀಗೆ ಮಾಡುವುದರ ಉದ್ದೇಶವೇನಾಗಿತ್ತು? ಆತನು ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು.
19 “ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡಬೇಡಿ. ಅನ್ಯದೇವರುಗಳನ್ನು ಅನುಸರಿಸಬೇಡಿ. ಅವುಗಳನ್ನು ಪೂಜಿಸಬೇಡಿ; ಅವುಗಳ ಸೇವೆ ಮಾಡಬೇಡಿ. ಇಲ್ಲವಾದರೆ ನೀವು ಖಂಡಿತವಾಗಿ ನಾಶವಾಗುವಿರಿ. 20 ಯೆಹೋವನು ನಿಮಗೋಸ್ಕರ ಇತರ ಜನಾಂಗಗಳನ್ನು ನಾಶಮಾಡುತ್ತಾನೆ. ನಿಮ್ಮ ದೇವರಾದ ಯೆಹೋವನಿಗೆ ನೀವು ಕಿವಿಗೊಡದೆ ಅನ್ಯದೇವರುಗಳನ್ನು ಅನುಸರಿಸುವುದಾದರೆ ನೀವೂ ಅವರಂತೆ ನಾಶವಾಗುವಿರಿ.
27 ನೀವೆಲ್ಲರೂ ಒಂದುಗೂಡಿ ಕ್ರಿಸ್ತನ ದೇಹವಾಗಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಅದರ ಅಂಗವಾಗಿದ್ದೀರಿ. 28 ದೇವರು ಸಭೆಯಲ್ಲಿ ಅಪೊಸ್ತಲರಿಗೆ ಮೊದಲನೆಯ ಸ್ಥಾನವನ್ನೂ ಪ್ರವಾದಿಗಳಿಗೆ ಎರಡನೆಯ ಸ್ಥಾನವನ್ನೂ ಉಪದೇಶಕರಿಗೆ ಮೂರನೆಯ ಸ್ಥಾನವನ್ನೂ ಇಟ್ಟಿದ್ದಾನೆ. ಇದಲ್ಲದೆ ದೇವರು, ಅದ್ಭುತಕಾರ್ಯಗಳನ್ನು ಮಾಡುವ ಜನರಿಗೂ ಸ್ಪಸ್ಥಪಡಿಸುವ ಜನರಿಗೂ ಇತರರಿಗೆ ಸಹಾಯಮಾಡುವ ಜನರಿಗೂ ಮುನ್ನಡೆಸಬಲ್ಲ ಜನರಿಗೂ ವಿವಿಧ ಭಾಷೆಗಳನ್ನು ಮಾತಾಡಬಲ್ಲ ಜನರಿಗೂ ಸಭೆಯಲ್ಲಿ ಸ್ಥಾನವನ್ನು ಕೊಟ್ಟಿದ್ದಾನೆ. 29 ಎಲ್ಲಾ ಜನರು ಅಪೊಸ್ತಲರುಗಳಲ್ಲ. ಎಲ್ಲಾ ಜನರು ಪ್ರವಾದಿಗಳಲ್ಲ. ಎಲ್ಲಾ ಜನರು ಉಪದೇಶಕರುಗಳಲ್ಲ. ಎಲ್ಲಾ ಜನರು ಅದ್ಭುತಕಾರ್ಯಗಳನ್ನು ಮಾಡುವುದಿಲ್ಲ. 30 ಎಲ್ಲಾ ಜನರು ಗುಣಪಡಿಸುವ ವರವನ್ನು ಹೊಂದಿಲ್ಲ. ಎಲ್ಲಾ ಜನರು ವಿವಿಧ ಭಾಷೆಗಳನ್ನು ಮಾತಾಡುವುದಿಲ್ಲ. ಎಲ್ಲಾ ಜನರು ಆ ಭಾಷೆಗಳನ್ನು ಅನುವಾದಿಸುವುದಿಲ್ಲ. 31 ಆದರೆ ನೀವು ಪವಿತ್ರಾತ್ಮನ ಇನ್ನೂ ಶ್ರೇಷ್ಠವಾದ ವರಗಳನ್ನು ಯಥಾರ್ಥವಾಗಿ ಅಪೇಕ್ಷಿಸತಕ್ಕದ್ದು. ಈಗ ನಾನು ನಿಮಗೆ ಎಲ್ಲಕ್ಕಿಂತಲೂ ಉತ್ತಮವಾದ ಮಾರ್ಗವನ್ನು ತೋರಿಸುತ್ತೇನೆ.
Kannada Holy Bible: Easy-to-Read Version. All rights reserved. © 1997 Bible League International