Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:97-104

97 ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ;
    ದಿನವೆಲ್ಲಾ ಅವುಗಳನ್ನೇ ಧ್ಯಾನಿಸುವೆನು.
98 ನಿನ್ನ ಆಜ್ಞೆಗಳು ನನ್ನನ್ನು ನನ್ನ ಶತ್ರುಗಳಿಗಿಂತಲೂ ಹೆಚ್ಚು ಜ್ಞಾನಿಯನ್ನಾಗಿ ಮಾಡುತ್ತವೆ.
    ಅವು ಯಾವಾಗಲೂ ನನ್ನೊಂದಿಗಿವೆ.
99 ನಿನ್ನ ಒಡಂಬಡಿಕೆಯನ್ನು ನಾನು ಧ್ಯಾನಿಸುತ್ತಿರುವುದರಿಂದ
    ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100 ನಾನು ನಿನ್ನ ಆಜ್ಞೆಗಳನ್ನು ಅನುಸರಿಸುವುದರಿಂದ
    ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101 ನನ್ನ ಪಾದಗಳು ಕೆಟ್ಟದಾರಿಗೆ ಹೋಗದಂತೆ ನನ್ನನ್ನು ಕಾಪಾಡು,
    ಆಗ, ನಾನು ನಿನ್ನ ವಾಕ್ಯವನ್ನೇ ಅನುಸರಿಸುವೆನು.
102 ನೀನೇ ನನ್ನ ಉಪಾಧ್ಯಾಯ.
    ಆದ್ದರಿಂದ ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿಯೇ ಇರುವೆನು.
103 ನಿನ್ನ ನುಡಿಗಳು ನನ್ನ ಬಾಯಲ್ಲಿ
    ಜೇನಿಗಿಂತಲೂ ಸಿಹಿಯಾಗಿವೆ.
104 ನಿನ್ನ ಉಪದೇಶಗಳು ನನ್ನನ್ನು ಜ್ಞಾನಿಯನ್ನಾಗಿ ಮಾಡುತ್ತವೆ,
    ಆದ್ದರಿಂದ ನಾನು ದುರುಪದೇಶಗಳನ್ನು ದ್ವೇಷಿಸುವೆನು.

ಯೆಶಾಯ 33:10-16

10 ಯೆಹೋವನು ಹೀಗೆನ್ನುತ್ತಾನೆ, “ಈಗ ನಾನು ಎದ್ದುನಿಂತು ನನ್ನ ಮಹತ್ವವನ್ನು ತೋರಿಸುವೆನು. ಈಗ ನಾನು ಜನರಿಗೆ ಉನ್ನತೋನ್ನತನಾಗುವೆನು. 11 ಜನರೇ, ನೀವು ಪ್ರಯೋಜನವಿಲ್ಲದ ಕಾರ್ಯಗಳನ್ನು ಮಾಡಿದಿರಿ. ಆ ಕೆಲಸಗಳು ಒಣಹುಲ್ಲಿನಂತೆಯೂ ದಂಟಿನಂತೆಯೂ ಇವೆ. ನಿಮ್ಮ ಆತ್ಮವು ನಿಮ್ಮಲ್ಲಿ ಬೆಂಕಿಯಂತಿದ್ದು ನಿಮ್ಮನ್ನು ಸುಡುವದು. 12 ಎಲುಬುಗಳು ಬೂದಿಯಾಗುವ ತನಕ ಜನರು ಸುಡಲ್ಪಡುವರು. ಅವರು ಮುಳ್ಳುಗಳಂತೆಯೂ ಒಣಪೊದೆಗಳಂತೆಯೂ ಬೇಗನೆ ಸುಟ್ಟುಹೋಗುವರು.

13 “ದೂರದೇಶದಲ್ಲಿರುವವರೇ, ನಾನು ಮಾಡಿದ ಕಾರ್ಯಗಳ ವಿಷಯವಾಗಿ ಕೇಳಿರಿ. ನನ್ನ ಹತ್ತಿರವಿರುವವರೇ, ನನ್ನ ಸಾಮರ್ಥ್ಯದ ವಿಷಯವಾಗಿ ಕಲಿತುಕೊಳ್ಳಿರಿ.”

14 ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಕೆಟ್ಟಕಾರ್ಯಗಳನ್ನು ಮಾಡುವವರು ಹೆದರಿಕೆಯಿಂದ ನಡುಗುವರು. ಜನರು, “ನಮ್ಮಲ್ಲಿ ಯಾರು ನಾಶಮಾಡುವ ಈ ಬೆಂಕಿಯ ಜೊತೆ ಜೀವಿಸಬಲ್ಲರು? ನಿತ್ಯಕಾಲಕ್ಕೂ ಸುಡುವ ಈ ಬೆಂಕಿಯ ಬಳಿಯಲ್ಲಿ ಯಾರು ವಾಸಮಾಡಬಲ್ಲರು?” ಎಂದು ಹೇಳುವರು.

15 ಪ್ರಾಮಾಣಿಕರಾಗಿರುವ ನೀತಿವಂತರು ಹಣಕ್ಕಾಗಿ ಇತರರಿಗೆ ಹಾನಿಮಾಡದವರಾಗಿದ್ದಾರೆ. ಅವರು ಆ ಬೆಂಕಿಯಲ್ಲಿ ವಾಸಿಸುವರು. ಅವರು ಲಂಚ ತೆಗೆದುಕೊಳ್ಳಲು ನಿರಾಕರಿಸುವರು. ಇತರರನ್ನು ಕೊಲೆಮಾಡುವ ಯೋಜನೆಯನ್ನು ಕೇಳಲು ಅವರು ಇಷ್ಟಪಡುವುದಿಲ್ಲ. ಅವರು ಕೆಟ್ಟಕಾರ್ಯಗಳ ಯೋಜನೆಗಳನ್ನು ನೋಡುವುದಿಲ್ಲ. 16 ಅಂಥವರು ಉನ್ನತವಾದ ಸ್ಥಳದಲ್ಲಿ ಸುರಕ್ಷಿತವಾಗಿ ವಾಸಿಸುವರು. ಎತ್ತರವಾದ ಬಂಡೆಕಲ್ಲಿನ ಕೋಟೆಯೊಳಗೆ ಅವರು ಕಾಪಾಡಲ್ಪಡುವರು. ಅವರ ಬಳಿ ಆಹಾರ ಮತ್ತು ನೀರು ಯಾವಾಗಲೂ ಇರುವದು.

ಯೋಹಾನ 15:16-25

16 “ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ; ನಾನು ನಿಮ್ಮನ್ನು ಆರಿಸಿಕೊಂಡೆನು. ನೀವು ಹೊರಟುಹೋಗಿ ಫಲಕೊಡಬೇಕು. ಇದೇ ನಾನು ನಿಮಗೆ ಕೊಟ್ಟಿರುವ ಕೆಲಸ. ಈ ಫಲವು ನಿಮ್ಮ ಜೀವನದಲ್ಲಿ ಶಾಶ್ವತವಾಗಿರಲಿ ಎಂಬುದೇ ನನ್ನ ಬಯಕೆ. ಹೀಗಿರಲಾಗಿ, ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ತಂದೆಯು ಅದನ್ನು ನಿಮಗೆ ಕೊಡುವನು. 17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನನ್ನ ಆಜ್ಞೆ.

ಯೇಸು ತನ್ನ ಶಿಷ್ಯರಿಗೆ ನೀಡಿದ ಎಚ್ಚರಿಕೆ

18 “ಈ ಲೋಕವು ನಿಮ್ಮನ್ನು ದ್ವೇಷ ಮಾಡಿದರೆ, ಅದು ಮೊದಲು ನನ್ನನ್ನೇ ದ್ವೇಷ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿರಿ. 19 ನೀವು ಈ ಲೋಕಕ್ಕೆ ಸೇರಿದವರಾಗಿದ್ದರೆ, ಈ ಲೋಕವು ತನ್ನ ಸ್ವಂತ ಜನರನ್ನು ಪ್ರೀತಿಸುವಂತೆ ನಿಮ್ಮನ್ನೂ ಪ್ರೀತಿಸುತ್ತಿತ್ತು. ಆದರೆ ನಾನು ನಿಮ್ಮನ್ನು ಈ ಲೋಕದೊಳಗಿಂದ ಆರಿಸಿಕೊಂಡಿದ್ದೇನೆ. ಆದ್ದರಿಂದ ನೀವು ಈ ಲೋಕಕ್ಕೆ ಸೇರಿದವರಲ್ಲ. ಆದಕಾರಣ ಈ ಲೋಕವು ನಿಮ್ಮನ್ನು ದ್ವೇಷಿಸುತ್ತದೆ.

20 “ಸೇವಕನು ತನ್ನ ಒಡೆಯನಿಗಿಂತ ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಿಸಿಕೊಳ್ಳಿ. ಜನರು ನನ್ನನ್ನು ಹಿಂಸಿಸಿದಂತೆ ನಿಮ್ಮನ್ನೂ ಹಿಂಸಿಸುವರು ಮತ್ತು ನನ್ನ ಉಪದೇಶಕ್ಕೆ ವಿಧೇಯರಾದರೆ ನಿಮ್ಮ ಉಪದೇಶಕ್ಕೂ ವಿಧೇಯರಾಗುವರು. 21 ಜನರು ನನ್ನ ದೆಸೆಯಿಂದ ಇದನ್ನೆಲ್ಲಾ ನಿಮಗೆ ಮಾಡುವರು. ನನ್ನನ್ನು ಕಳುಹಿಸಿದಾತನನ್ನು ಅವರು ತಿಳಿದಿಲ್ಲ. 22 ನಾನು ಬಂದು ಈ ಲೋಕದ ಜನರೊಂದಿಗೆ ಮಾತಾಡಿಲ್ಲದಿದ್ದರೆ, ಅವರನ್ನು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ಈಗ ನಾನು ಅವರೊಂದಿಗೆ ಮಾತಾಡಿದ್ದೇನೆ. ಆದ್ದರಿಂದ ತಮ್ಮ ಪಾಪಕ್ಕೆ ಅವರಿಗೆ ಯಾವ ನೆವವೂ ಇಲ್ಲ.

23 “ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನೂ ದ್ವೇಷಿಸುವವನಾಗಿದ್ದಾನೆ. 24 ಬೇರೆ ಯಾವ ವ್ಯಕ್ತಿಯೂ ಹಿಂದೆಂದೂ ಮಾಡಿಲ್ಲದ ಕಾರ್ಯಗಳನ್ನು ಮಾಡಿಲ್ಲದಿದ್ದರೆ, ಅವರನ್ನು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ನಾನು ಮಾಡಿದ ಆ ಕಾರ್ಯಗಳನ್ನು ಅವರು ನೋಡಿದ್ದಾರೆ. ಹೀಗಿದ್ದರೂ ಅವರು ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸುತ್ತಾರೆ. 25 ‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು’[a] ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನಿಜವಾಗಲೆಂದು ಹೀಗಾಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International