Revised Common Lectionary (Complementary)
ಐದನೆಯ ಭಾಗ
(ಕೀರ್ತನೆಗಳು 107–150)
107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
ಆತನ ಪ್ರೀತಿ ಶಾಶ್ವತವಾದದ್ದು!
2 ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
3 ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.
33 ಆತನು ನದಿಗಳನ್ನು ಮರಳುಗಾಡನ್ನಾಗಿ ಮಾರ್ಪಡಿಸಿದನು;
ಹರಿಯುವ ಒರತೆಗಳನ್ನು ತಡೆದು ನಿಲ್ಲಿಸಿದನು.
34 ಆತನು ಫಲವತ್ತಾದ ಭೂಮಿಯನ್ನು ಉಪಯೋಗವಿಲ್ಲದ ಉಪ್ಪುಭೂಮಿಯನ್ನಾಗಿ ಪರಿವರ್ತಿಸಿದನು,
ಯಾಕೆಂದರೆ ಅಲ್ಲಿ ಕೆಟ್ಟಜನರು ನೆಲೆಸಿದ್ದರು.
35 ಆತನು ಮರಳುಗಾಡನ್ನು ಸರೋವರಗಳುಳ್ಳ ನಾಡನ್ನಾಗಿ ಪರಿವರ್ತಿಸಿದನು;
ಒಣನೆಲದಿಂದ ನೀರಿನ ಒರತೆಗಳನ್ನು ಹರಿಯಮಾಡಿದನು.
36 ಆತನು ಹಸಿದವರನ್ನು ಒಳ್ಳೆಯ ನಾಡಿಗೆ ನಡೆಸಿದನು.
ಅವರು ಅಲ್ಲಿ ನೆಲೆಸಿ ಪಟ್ಟಣವನ್ನು ಕಟ್ಟಿದರು.
37 ಅವರು ಹೊಲಗಳಲ್ಲಿ ಬೀಜ ಬಿತ್ತಿ
ತೋಟಗಳಲ್ಲಿ ದ್ರಾಕ್ಷಾಲತೆಗಳನ್ನು ನೆಟ್ಟು ಒಳ್ಳೆಯ ಸುಗ್ಗಿಗಳನ್ನು ಪಡೆದರು.
38 ಆತನ ಆಶೀರ್ವಾದದಿಂದ ಅವರ ಕುಟುಂಬಗಳು ವೃದ್ಧಿಯಾದವು.
ಅವರ ಪಶುಗಳು ಅಸಂಖ್ಯಾತಗೊಂಡವು.
39 ವಿಪತ್ತುಗಳಿಂದಲೂ ತೊಂದರೆಗಳಿಂದಲೂ
ಅವರ ಕುಟುಂಬಗಳು ಚಿಕ್ಕದಾಗಿದ್ದವು; ಬಲಹೀನವಾಗಿದ್ದವು.
40 ಆತನು ಅವರ ನಾಯಕರುಗಳಿಗೆ ಅವಮಾನ ಮಾಡಿದನು;
ದಾರಿಗಳಿಲ್ಲದ ಅರಣ್ಯದಲ್ಲಿ ಅಲೆದಾಡುವಂತೆ ಅವರನ್ನು ತೊರೆದುಬಿಟ್ಟನು.
41 ಬಳಿಕ ಆತನು ದೀನರನ್ನು ಅವರ ಸಂಕಟದಿಂದ ಬಿಡಿಸಿದನು.
ಈಗ ಅವರ ಕುಟುಂಬಗಳು ಕುರಿಮಂದೆಗಳಂತೆ ದೊಡ್ಡದಾದವು.
42 ಒಳ್ಳೆಯವರು ಇದನ್ನು ಕಂಡು ಸಂತೋಷಪಡುವರು.
ದುಷ್ಟರು ಇದನ್ನು ಕಂಡು ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳುವರು.
43 ಜ್ಞಾನಿಯು ಇವುಗಳನ್ನು ನೆನಪು ಮಾಡಿಕೊಂಡು
ದೇವರ ನಿಜಪ್ರೀತಿಯನ್ನು ಅರ್ಥಮಾಡಿಕೊಳ್ಳುವನು.
ತೃಪ್ತಿಗೊಳಿಸುವ ಆಹಾರವನ್ನು ದೇವರು ಕೊಡುತ್ತಾನೆ
55 “ಎಲೈ ಬಾಯಾರಿದ ಜನರೆಲ್ಲರೇ,
ಬಂದು ನೀರನ್ನು ಕುಡಿಯಿರಿ.
ನಿಮ್ಮಲ್ಲಿ ಹಣವಿಲ್ಲವೆಂದು ಚಿಂತೆಮಾಡಬೇಡಿರಿ.
ಬಂದು ಹೊಟ್ಟೆತುಂಬಾ ತಿಂದು ಕುಡಿಯಿರಿ.
ನೀವು ಹಣ ಕೊಡಬೇಕಿಲ್ಲ.
ಹೊಟ್ಟೆತುಂಬಾ ತಿಂದು ಕುಡಿಯಿರಿ ಹಾಲಿಗೂ ದ್ರಾಕ್ಷಾರಸಕ್ಕೂ ಕ್ರಯವಿಲ್ಲ.
2 ಆಹಾರವಲ್ಲದ್ದಕ್ಕಾಗಿ ಹಣವನ್ನು ಯಾಕೆ ವೆಚ್ಚ ಮಾಡುತ್ತೀರಿ?
ತೃಪ್ತಿಗೊಳಿಸದ ಆಹಾರಕ್ಕಾಗಿ ನೀವು ಯಾಕೆ ಶ್ರಮಿಸುತ್ತೀರಿ?
ಗಮನವಿಟ್ಟು ಕೇಳಿರಿ.
ನೀವು ಒಳ್ಳೆಯ ಆಹಾರವನ್ನು ತಿನ್ನುವಿರಿ; ನಿಮ್ಮ ಊಟದಲ್ಲಿ ಆನಂದಿಸುವಿರಿ.
ಅವು ನಿಮ್ಮ ಆತ್ಮವನ್ನು ತೃಪ್ತಿಗೊಳಿಸುತ್ತವೆ.
3 ನಾನು ಹೇಳುವ ವಿಷಯಗಳಿಗೆ ಸರಿಯಾಗಿ ಕಿವಿಗೊಡಿರಿ.
ನಿಮ್ಮ ಆತ್ಮಗಳು ಜೀವಿಸುವಂತೆ ನನ್ನ ಮಾತುಗಳನ್ನು ಕೇಳಿರಿ.
ನನ್ನ ಬಳಿಗೆ ಬನ್ನಿರಿ, ನಾನು ನಿಮ್ಮೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.
ನಾನು ದಾವೀದನೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತೆ ಅದಿರುವುದು.
ನಾನು ದಾವೀದನಿಗೆ ಅವನನ್ನು ಪ್ರೀತಿಸುವೆನೆಂದೂ ಅವನಿಗೆ ಪ್ರಾಮಾಣಿಕನಾಗಿರುವೆನೆಂದೂ ವಾಗ್ದಾನ ಮಾಡಿದ್ದೆನು.
ಆ ಒಡಂಬಡಿಕೆಯನ್ನು ನೀವು ಖಂಡಿತವಾಗಿ ನಂಬಬಹುದು.
4 ದಾವೀದನು ನನ್ನ ಸಾಮರ್ಥ್ಯದ ವಿಷಯದಲ್ಲಿ ಎಲ್ಲ ಜನಾಂಗಗಳವರಿಗೆ ಸಾಕ್ಷಿಯಾಗಿರುವಂತೆ ನಾನೇ ಮಾಡಿದೆನು.
ನಾನು ದಾವೀದನಿಗೆ, ‘ನೀನು ಅಧಿಪತಿಯಾಗುವೆ ಮತ್ತು ಅನೇಕ ಜನಾಂಗಗಳಿಗೆ ನೀನು ಸೈನ್ಯಾಧಿಪತಿಯಾಗುವೆ’ ಎಂದು ಪ್ರಮಾಣ ಮಾಡಿದೆ.”
5 ನಿನಗೆ ಗೊತ್ತಿರದ ಸ್ಥಳಗಳಲ್ಲಿ ಜನಾಂಗಗಳು ನೆಲೆಸಿವೆ.
ಆ ದೇಶಗಳನ್ನು ನೀನು ಕರೆಯುವೆ.
ಆ ದೇಶಗಳಿಗೆ ನಿನ್ನ ಪರಿಚಯವಿರುವದಿಲ್ಲ.
ಆದರೆ ಅವುಗಳು ನಿನ್ನ ಬಳಿಗೆ ಓಡಿಬರುವವು.
ಇವೆಲ್ಲಾ ನಿನ್ನ ದೇವರಾದ ಯೆಹೋವನ ಚಿತ್ತಕ್ಕನುಸಾರವಾಗಿ ಆಗುತ್ತವೆ.
ಇಸ್ರೇಲಿನ ಪರಿಶುದ್ಧ ದೇವರು ನಿನ್ನನ್ನು ಗೌರವಿಸುವದರಿಂದ ಇದನ್ನು ನೆರವೇರಿಸುವನು.
6 ಆದ್ದರಿಂದ ಸಮಯವು ದಾಟುವ ಮೊದಲು
ನೀವು ಯೆಹೋವನಿಗಾಗಿ ಹುಡುಕಿರಿ.
ಆತನು ಹತ್ತಿರವಿರುವಾಗಲೇ ಕರೆಯಿರಿ.
7 ಕೆಟ್ಟಜನರು ಕೆಟ್ಟತನದಲ್ಲಿ ಜೀವಿಸುವದನ್ನು ನಿಲ್ಲಿಸಲಿ.
ಅವರು ಕೆಟ್ಟ ಆಲೋಚನೆಗಳನ್ನು ಮಾಡದಿರಲಿ.
ಅವರು ಯೆಹೋವನ ಬಳಿಗೆ ಹಿಂತಿರುಗಲಿ.
ಆಗ ಯೆಹೋವನು ಅವರನ್ನು ಆದರಿಸುವನು.
ದೇವರಾದ ಯೆಹೋವನು ಕ್ಷಮಿಸುವುದರಿಂದ
ಅವರು ಆತನ ಬಳಿಗೆ ಬರಲಿ.
ಜನರು ದೇವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ
8 ಯೆಹೋವನು ಹೇಳುವುದೇನೆಂದರೆ: “ನಿಮ್ಮ ಆಲೋಚನೆಗಳು ನನ್ನ ಆಲೋಚನೆಗಳಲ್ಲ.
ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ.
9 ಆಕಾಶವು ಭೂಮಿಗಿಂತ ಎಷ್ಟು ಎತ್ತರವಾಗಿದೆಯೋ
ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತ ಅಷ್ಟೇ ಉನ್ನತವಾಗಿವೆ;
ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಿಗಿಂತ ಅಷ್ಟೇ ಉನ್ನತವಾಗಿವೆ.” ಇದು ಯೆಹೋವನ ನುಡಿ.
ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ
(ಮತ್ತಾಯ 15:32-39)
8 ಇನ್ನೊಂದು ಸಮಯದಲ್ಲಿ ಯೇಸುವಿನ ಜೊತೆಯಲ್ಲಿ ಅನೇಕ ಜನರಿದ್ದರು. ಆ ಜನರ ಬಳಿ ಊಟಕ್ಕೆ ಏನೂ ಇರಲಿಲ್ಲ. ಆದ್ದರಿಂದ ಯೇಸು ತನ್ನ ಶಿಷ್ಯರನ್ನು ಕರೆದು, 2 “ನಾನು ಈ ಜನರಿಗಾಗಿ ಕನಿಕರಪಡುತ್ತೇನೆ. ಇವರು ಮೂರು ದಿನಗಳಿಂದ ನನ್ನ ಜೊತೆಯಲ್ಲಿದ್ದಾರೆ. ಇವರ ಬಳಿ ಊಟಕ್ಕೆ ಏನೂ ಇಲ್ಲ. 3 ಇವರು ಏನನ್ನೂ ತಿನ್ನದೆ ಹಸಿವೆಯಲ್ಲಿಯೇ ಹೊರಟರೆ ದಾರಿಯಲ್ಲಿ ಬಳಲಿ ಹೋಗುವರು. ಈ ಜನರಲ್ಲಿ ಕೆಲವರು ಬಹಳ ದೂರದಿಂದ ಬಂದಿದ್ದಾರೆ” ಎಂದು ಹೇಳಿದನು.
4 ಅದಕ್ಕೆ ಶಿಷ್ಯರು, “ಇಲ್ಲಿಗೆ ಯಾವ ಊರೂ ಸಮೀಪದಲ್ಲಿಲ್ಲ. ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರಲು ಸಾದ್ಯ?” ಎಂದು ಉತ್ತರಿಸಿದರು.
5 ಯೇಸು, “ನಿಮ್ಮ ಬಳಿ ಎಷ್ಟು ರೊಟ್ಟಿಗಳಿವೆ?” ಎಂದು ಅವರನ್ನು ಕೇಳಿದನು.
ಅದಕ್ಕೆ ಶಿಷ್ಯರು, “ನಮ್ಮ ಬಳಿ ಏಳು ರೊಟ್ಟಿಗಳಿವೆ” ಎಂದು ಉತ್ತರಿಸಿದರು.
6 ಯೇಸು ಆ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಿದನು. ನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು, ದೇವರಿಗೆ ಸ್ತೋತ್ರಸಲ್ಲಿಸಿ ಅವುಗಳನ್ನು ಮುರಿದು, ತನ್ನ ಶಿಷ್ಯರಿಗೆ ಕೊಟ್ಟು, ಅವುಗಳನ್ನು ಜನರಿಗೆ ಹಂಚಬೇಕೆಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. 7 ಶಿಷ್ಯರ ಬಳಿ ಕೆಲವು ಸಣ್ಣ ಮೀನುಗಳೂ ಇದ್ದವು. ಯೇಸು ಆ ಮೀನುಗಳಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಅವುಗಳನ್ನೂ ಜನರಿಗೆ ಕೊಡಬೇಕೆಂದು ಶಿಷ್ಯರಿಗೆ ಹೇಳಿದನು.
8 ಜನರೆಲ್ಲರೂ ಊಟಮಾಡಿ ತೃಪ್ತರಾದರು. ನಂತರ ತಿನ್ನದೆ ಉಳಿದಿದ್ದ ಆಹಾರದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಏಳು ಬುಟ್ಟಿಗಳು ತುಂಬಿಹೋದವು. 9 ಅಲ್ಲಿ ಊಟ ಮಾಡಿದವರಲ್ಲಿ ಸುಮಾರು ನಾಲ್ಕು ಸಾವಿರ ಗಂಡಸರಿದ್ದರು. ಅವರು ಊಟಮಾಡಿದ ಮೇಲೆ, ಯೇಸು ಅವರನ್ನು ಕಳುಹಿಸಿಕೊಟ್ಟನು. 10 ಬಳಿಕ ಆತನು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ ದಲ್ಮನೂಥ ಪ್ರದೇಶಕ್ಕೆ ಹೋದನು.
Kannada Holy Bible: Easy-to-Read Version. All rights reserved. © 1997 Bible League International