Revised Common Lectionary (Complementary)
ರಚನೆಗಾರ: ದಾವೀದ.
36 ದುಷ್ಟನು ಪಾಪದಿಂದ ಪ್ರಭಾವಿತನಾಗಿ, “ನಾನು ದೇವರಿಗೆ ಭಯಪಡುವುದೂ ಇಲ್ಲ
ಆತನನ್ನು ಗೌರವಿಸುವುದೂ ಇಲ್ಲ” ಎಂದುಕೊಳ್ಳುವನು.
2 ಅವನು ತನ್ನನ್ನು ವಂಚಿಸಿಕೊಳ್ಳುವನು.
ಅವನು ತನ್ನ ತಪ್ಪುಗಳನ್ನು ಕಾಣುವುದೂ ಇಲ್ಲ,
ಅವುಗಳಿಗಾಗಿ ಕ್ಷಮೆಯನ್ನು ಕೇಳುವುದೂ ಇಲ್ಲ.
3 ಅವನ ಮಾತುಗಳು ಕೇವಲ ಸುಳ್ಳುಗಳಾಗಿವೆ.
ಅವನು ಜ್ಞಾನಿಯಾಗುವುದೂ ಇಲ್ಲ, ಒಳ್ಳೆಯದನ್ನು ಕಲಿತುಕೊಳ್ಳುವುದೂ ಇಲ್ಲ.
4 ರಾತ್ರಿಯಲ್ಲಿ, ಅವನು ಕೇಡನ್ನೇ ಆಲೋಚಿಸುವನು.
ಮರುದಿನ ಮುಂಜಾನೆ ಎದ್ದಾಗ,
ಒಳ್ಳೆಯದನ್ನು ಮಾಡದೆ ಕೇಡನ್ನು ಮಾಡಲು ಸಿದ್ಧನಾಗಿರುವನು.
5 ಯೆಹೋವನೇ, ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ.
ನಿನ್ನ ನಂಬಿಗಸ್ತಿಕೆಯು ಮೇಘಗಳಿಗಿಂತಲೂ ಎತ್ತರವಾಗಿದೆ.
6 ನಿನ್ನ ನೀತಿಯು ಅತ್ಯುನ್ನತವಾದ ಬೆಟ್ಟಕ್ಕಿಂತಲೂ ಎತ್ತರವಾಗಿದೆ.
ನಿನ್ನ ನ್ಯಾಯವು ಮಹಾಸಾಗರಕ್ಕಿಂತಲೂ ಆಳವಾಗಿದೆ.
ಯೆಹೋವನೇ, ಮನುಷ್ಯರನ್ನೂ ಪ್ರಾಣಿಗಳನ್ನೂ ಕಾಪಾಡುವಾತನು ನೀನೇ.
7 ನಿನ್ನ ಶಾಶ್ವತವಾದ ಪ್ರೀತಿಗಿಂತ ಅಮೂಲ್ಯವಾದದ್ದು ಬೇರೊಂದಿಲ್ಲ.
ಜನರೂ ದೇವದೂತರೂ ನಿನ್ನನ್ನೇ ಆಶ್ರಯಿಸಿಕೊಳ್ಳುವರು.
8 ನಿನ್ನ ಆಲಯದ ಸಮೃದ್ಧಿಯಿಂದ ಅವರು ನವಚೈತನ್ಯವನ್ನು ಪಡೆದುಕೊಳ್ಳುವರು.
ನಿನ್ನ ಶ್ರೇಷ್ಠ ನದಿಯಲ್ಲಿ ಕುಡಿಯಲು ಅವರಿಗೆ ಆಸ್ಪದನೀಡು.
9 ಜೀವಬುಗ್ಗೆಯು ನಿನ್ನ ಬಳಿಯಿಂದ ಹರಿಯುವುದು!
ನಾವು ಬೆಳಕನ್ನು ನೋಡುವುದು ನಿನ್ನ ಬೆಳಕಿನಿಂದಲೇ.
10 ನಿನ್ನನ್ನು ಅರಿತುಕೊಂಡವರ ಮೇಲೆ ನಿನ್ನ ಪ್ರೀತಿಯು ನೆಲೆಸಿರಲಿ.
ಯಥಾರ್ಥವಂತರಿಗೆ ಒಳ್ಳೆಯದನ್ನು ಮಾಡು.
11 ಗರ್ವಿಷ್ಠರ ಬಲೆಗೆ ನನ್ನನ್ನು ಬೀಳಿಸಬೇಡ;
ದುಷ್ಟರ ಕೈಹಿಡಿತಕ್ಕೆ ನನ್ನನ್ನು ಸಿಕ್ಕಿಸಬೇಡ.
12 “ದುಷ್ಟರು ಬಿದ್ದು ಜಜ್ಜಲ್ಪಟ್ಟದ್ದು ಇಲ್ಲಿಯೇ.
ಅವರು ಮತ್ತೆಂದಿಗೂ ಮೇಲೇಳುವುದಿಲ್ಲ”
ಎಂದು ಅವರ ಸಮಾಧಿಯ ಮೇಲೆ ಬರೆಯಿಸು.
ಯೋಸೇಫನು ಫರೋಹನಿಗೆ ಭೂಮಿಯನ್ನು ಕೊಂಡುಕೊಂಡದ್ದು
13 ಬರಗಾಲವು ಹೆಚ್ಚು ಭೀಕರವಾಯಿತು. ದೇಶದಲ್ಲಿ ಎಲ್ಲಿಯೂ ಆಹಾರ ಇರಲಿಲ್ಲ. ಈಜಿಪ್ಟ್ ಮತ್ತು ಕಾನಾನ್ ದೇಶಗಳು ಬರಗಾಲದಿಂದ ಬಡದೇಶಗಳಾದವು. 14 ಈಜಿಪ್ಟ್ ಮತ್ತು ಕಾನಾನ್ ದೇಶಗಳ ಜನರು ಧಾನ್ಯಗಳನ್ನು ಕೊಂಡುಕೊಂಡರು. ಯೋಸೇಫನು ಹಣವನ್ನು ಉಳಿಸಿ ಫರೋಹನ ಭಂಡಾರಕ್ಕೆ ಸೇರಿಸಿದನು. 15 ಸ್ವಲ್ಪ ಸಮಯದ ನಂತರ, ಈಜಿಪ್ಟ್ ಮತ್ತು ಕಾನಾನ್ ದೇಶಗಳಲ್ಲಿದ್ದ ಜನರಲ್ಲಿ ಹಣವು ಉಳಿದಿರಲಿಲ್ಲ. ಆದ್ದರಿಂದ ಈಜಿಪ್ಟಿನ ಜನರು ಯೋಸೇಫನ ಬಳಿಗೆ ಹೋಗಿ, “ದಯವಿಟ್ಟು ನಮಗೆ ಆಹಾರವನ್ನು ಕೊಡು. ನಮ್ಮ ಹಣವೆಲ್ಲ ಮುಗಿದುಹೋಗಿದೆ. ನಾವು ಊಟ ಮಾಡದಿದ್ದರೆ ನಿನ್ನೆದುರಿನಲ್ಲೇ ಸಾಯುತ್ತೇವೆ” ಎಂದು ಹೇಳಿದರು.
16 ಅದಕ್ಕೆ ಯೋಸೇಫನು, “ನಿಮ್ಮ ದನಕರುಗಳನ್ನು ನನಗೆ ಕೊಡಿರಿ, ನಾನು ನಿಮಗೆ ಆಹಾರವನ್ನು ಕೊಡುತ್ತೇನೆ” ಎಂದು ಉತ್ತರಿಸಿದನು. 17 ಆದ್ದರಿಂದ ಜನರು ತಮ್ಮ ದನಕರುಗಳನ್ನೂ ಕುದುರೆಗಳನ್ನೂ ಇತರ ಎಲ್ಲಾ ಪಶುಗಳನ್ನೂ ಕೊಟ್ಟು ಆಹಾರವನ್ನು ಕೊಂಡುಕೊಂಡರು. ಆ ವರ್ಷ ಯೋಸೇಫನು ಅವರಿಗೆ ಆಹಾರವನ್ನು ಕೊಟ್ಟು ಅವರ ಪಶುಗಳನ್ನು ಕೊಂಡುಕೊಂಡನು.
18 ಆದರೆ ಮುಂದಿನ ವರ್ಷ, ಪಶುಗಳನ್ನು ಕೊಟ್ಟು ಆಹಾರವನ್ನು ಕೊಂಡುಕೊಳ್ಳಲು ಜನರ ಬಳಿ ಪಶುಗಳಿರಲಿಲ್ಲ. ಆದ್ದರಿಂದ ಜನರು ಯೋಸೇಫನಲ್ಲಿಗೆ ಹೋಗಿ, “ನಮ್ಮಲ್ಲಿ ಹಣ ಇಲ್ಲವೆಂಬುದು ನಿನಗೆ ಗೊತ್ತೇ ಇದೆ. ಅಲ್ಲದೆ ನಮ್ಮ ಪಶುಗಳೂ ನಿನ್ನ ಸ್ವತ್ತಾಗಿವೆ. ಆದ್ದರಿಂದ ನಮ್ಮಲ್ಲಿ ಏನೂ ಉಳಿದಿಲ್ಲ. ನೀನು ನೋಡುತ್ತಿರುವ ನಮ್ಮ ಶರೀರ ಮತ್ತು ನಮ್ಮ ಜಮೀನು ಮಾತ್ರ ಉಳಿದಿದೆ. 19 ನಿನ್ನ ಕಣ್ಣೆದುರಿನಲ್ಲಿಯೇ ನಾವು ಖಂಡಿತವಾಗಿ ಸಾಯುತ್ತೇವೆ. ಆದರೆ ನೀನು ನಮಗೆ ಆಹಾರವನ್ನು ಕೊಟ್ಟರೆ, ನಾವು ಫರೋಹನಿಗೆ ನಮ್ಮ ಭೂಮಿಯನ್ನು ಕೊಟ್ಟು ಅವನ ಗುಲಾಮರಾಗಿರುತ್ತೇವೆ. ಬಿತ್ತನೆ ಮಾಡಲು ನಮಗೆ ಬೀಜವನ್ನು ಕೊಡು. ಆಗ ನಾವು ಬದುಕುತ್ತೇವೆ, ಸಾಯುವುದಿಲ್ಲ. ಮತ್ತು ಭೂಮಿಯೂ ಬೆಳೆಗಳನ್ನು ಫಲಿಸುತ್ತದೆ” ಎಂದು ಹೇಳಿದರು.
20 ಆದ್ದರಿಂದ ಯೋಸೇಫನು ಈಜಿಪ್ಟಿನ ಎಲ್ಲಾ ಜಮೀನನ್ನು ಫರೋಹನಿಗಾಗಿ ಕೊಂಡುಕೊಂಡನು. ಹಸಿವೆಯಿಂದಾಗಿ ಈಜಿಪ್ಟಿನ ಎಲ್ಲಾ ಜನರು ಯೋಸೇಫನಿಗೆ ತಮ್ಮ ಜಮೀನುಗಳನ್ನು ಮಾರಿದರು. 21 ಈಜಿಪ್ಟಿನ ಎಲ್ಲಾ ಜನರು ಫರೋಹನ ಗುಲಾಮರಾಗಿದ್ದರು.[a] 22 ಪುರೋಹಿತರು ಹೊಂದಿದ್ದ ಭೂಮಿಯನ್ನು ಮಾತ್ರ ಯೋಸೇಫನು ಕೊಂಡುಕೊಳ್ಳಲಿಲ್ಲ. ಭೂಮಿಯನ್ನು ಮಾರುವ ಅವಶ್ಯಕತೆ ಪುರೋಹಿತರಿಗೆ ಇರಲಿಲ್ಲ. ಯಾಕೆಂದರೆ ಫರೋಹನೇ ಅವರಿಗೆ ಸಂಬಳವನ್ನು ಕೊಡುತ್ತಿದ್ದನು. ಆದ್ದರಿಂದ ಅವರು ಆ ಹಣದಿಂದ ಆಹಾರವನ್ನು ಕೊಂಡುಕೊಂಡರು.
23 ಯೋಸೇಫನು ಜನರಿಗೆ, “ಈಗ ನಾನು ನಿಮ್ಮನ್ನೂ ನಿಮ್ಮ ಜಮೀನನ್ನೂ ಫರೋಹನಿಗಾಗಿ ಕೊಂಡುಕೊಂಡಿದ್ದೇನೆ. ಆದ್ದರಿಂದ ನಾನು ನಿಮಗೆ ಬೀಜವನ್ನು ಕೊಡುತ್ತೇನೆ. ನೀವು ನಿಮ್ಮ ಜಮೀನುಗಳಲ್ಲಿ ಬಿತ್ತನೆಮಾಡಿರಿ. 24 ಸುಗ್ಗಿಕಾಲ ಬಂದಾಗ, ನಿಮ್ಮ ಬೆಳೆಗಳಲ್ಲಿ ಐದನೆ ಒಂದು ಭಾಗ ಫರೋಹನಿಗೆ ಸೇರಿದ್ದು. ಐದನೆ ನಾಲ್ಕು ಭಾಗವನ್ನು ನಿಮಗೋಸ್ಕರ ಇಟ್ಟುಕೊಳ್ಳಿರಿ. ನೀವು ಆಹಾರಕ್ಕಾಗಿ ಇಟ್ಟುಕೊಳ್ಳುವ ಬೀಜವನ್ನೇ ಮುಂದಿನ ವರ್ಷದ ಬಿತ್ತನೆಗಾಗಿ ಉಪಯೋಗಿಸಬಹುದು. ಹೀಗೆ ನೀವು ನಿಮ್ಮ ಕುಟುಂಬದವರಿಗೂ ಮಕ್ಕಳಿಗೂ ಪೋಷಣೆಮಾಡಿರಿ” ಎಂದು ಹೇಳಿದನು.
25 ಆಗ ಜನರು, “ನೀನು ನಮ್ಮ ಜೀವವನ್ನು ಉಳಿಸಿರುವೆ. ನಾವು ಸಂತೋಷದಿಂದ ಫರೋಹನ ಗುಲಾಮರಾಗುತ್ತೇವೆ” ಎಂದು ಹೇಳಿದರು.
26 ಆದ್ದರಿಂದ ಯೋಸೇಫನು ಒಂದು ಕಾನೂನನ್ನು ಮಾಡಿದನು. ಅದು ಇಂದಿಗೂ ಜಾರಿಯಲ್ಲಿದೆ. ಆ ಕಾನೂನಿನ ಪ್ರಕಾರ, ಭೂಮಿಯ ಫಸಲಿನಲ್ಲಿ ಐದನೇ ಒಂದು ಭಾಗವು ಫರೋಹನಿಗೆ ಸೇರಿದ್ದಾಗಿದೆ. ಫರೋಹನು ಎಲ್ಲಾ ಜಮೀನಿಗೂ ಒಡೆಯನಾಗಿದ್ದಾನೆ. ಪುರೋಹಿತರ ಭೂಮಿಯು ಮಾತ್ರ ಅವನಿಗೆ ಸೇರಿಲ್ಲ.
ಯೆಹೂದ್ಯ ನಾಯಕರ ಬಗ್ಗೆ ಯೇಸು ನೀಡಿದ ಎಚ್ಚರಿಕೆ
(ಮತ್ತಾಯ 16:5-12)
14 ಶಿಷ್ಯರು ದೋಣಿಯಲ್ಲಿ ಹೋಗುತ್ತಿದ್ದಾಗ ಅವರ ಬಳಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. ಅವರು ಮರೆತು ಹೆಚ್ಚು ರೊಟ್ಟಿಗಳನ್ನು ತಂದಿರಲಿಲ್ಲ. 15 ಯೇಸು ಅವರಿಗೆ, “ಜಾಗರೂಕರಾಗಿರಿ! ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ಬಗ್ಗೆ ಎಚ್ಚರವಹಿಸಿರಿ” ಎಂದು ಎಚ್ಚರಿಸಿದನು.
16 ಶಿಷ್ಯರು ಇದರ ಅರ್ಥವನ್ನು ಚರ್ಚಿಸಿ, “ನಮ್ಮ ಬಳಿ ರೊಟ್ಟಿ ಇಲ್ಲದೆ ಇರುವುದರಿಂದ ಆತನು ಹೀಗೆ ಹೇಳಿದನು” ಎಂದು ತಮ್ಮತಮ್ಮೊಳಗೆ ಅಂದುಕೊಂಡರು.
17 ಶಿಷ್ಯರು ಇದರ ಬಗ್ಗೆ ಮಾತಾಡುತ್ತಿರುವುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅವರಿಗೆ, “ರೊಟ್ಟಿ ಇಲ್ಲವೆಂದು ನೀವು ಚರ್ಚಿಸುವುದೇಕೆ? ನಿಮಗಿನ್ನೂ ಕಾಣುವುದಿಲ್ಲವೇ? ನಿಮಗಿನ್ನೂ ಅರ್ಥವಾಗುವುದಿಲ್ಲವೇ? ನಿಮ್ಮ ಹೃದಯಗಳು ಇನ್ನೂ ಕಠಿಣವಾಗಿವೆಯೋ? 18 ನಿಮ್ಮ ಕಣ್ಣುಗಳು ಕುರುಡಾಗಿವೆಯೋ? ನಿಮ್ಮ ಕಿವಿಗಳು ಕಿವುಡಾಗಿವೆಯೋ? ಮೊದಲೊಮ್ಮೆ, ನಮ್ಮ ಬಳಿ ಸಾಕಷ್ಟು ರೊಟ್ಟಿಗಳಿಲ್ಲದಿದ್ದಾಗ, ನಾನು ಏನು ಮಾಡಿದೆನೆಂಬುದನ್ನು ಜ್ಞಾಪಿಸಿಕೊಳ್ಳಿ. 19 ನಾನು ಐದು ಸಾವಿರ ಜನರಿಗಾಗಿ ಐದು ರೊಟ್ಟಿಗಳನ್ನು ಮುರಿದು ನಿಮಗೆ ಕೊಟ್ಟೆ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಹೇಳಿದನು.
ಆ ಶಿಷ್ಯರು, “ನಾವು ಹನ್ನೆರಡು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು.
20 “ನಾನು ನಾಲ್ಕು ಸಾವಿರ ಜನರಿಗಾಗಿ ಏಳು ರೊಟ್ಟಿಗಳನ್ನು ಮುರಿದು ಕೊಟ್ಟದ್ದನ್ನು ಜ್ಞಾಪಿಸಿಕೊಳ್ಳಿ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಕೇಳಿದನು.
ಅದಕ್ಕೆ ಶಿಷ್ಯರು, “ನಾವು ಏಳು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು.
21 ಆಗ ಯೇಸು ಅವರಿಗೆ, “ನಾನು ಮಾಡಿದ ಈ ಕಾರ್ಯಗಳನ್ನು ನೀವು ಜ್ಞಾಪಕದಲ್ಲಿಟ್ಟುಕೊಂಡಿದ್ದೀರಿ, ಆದರೆ ನೀವಿನ್ನೂ ಅರ್ಥಮಾಡಿಕೊಳ್ಳುವುದಿಲ್ಲವೇ?” ಎಂದು ಕೇಳಿದನು.
Kannada Holy Bible: Easy-to-Read Version. All rights reserved. © 1997 Bible League International