Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 34:9-14

ಯೆಹೋವನ ಜನರೇ, ಆತನನ್ನು ಆರಾಧಿಸಿರಿ.
    ಆತನ ಭಕ್ತರಿಗೆ ಬೇರೆ ಯಾವ ಆಶ್ರಯಸ್ಥಾನವೂ ಇಲ್ಲ.
10 ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು.
    ಆದರೆ ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರು ಸುವರಗಳನ್ನು ಹೊಂದಿಕೊಳ್ಳುವರು.
11 ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ;
    ಯೆಹೋವನಲ್ಲಿ ನಿಮಗಿರಬೇಕಾದ ಭಯಭಕ್ತಿಯನ್ನು ಕಲಿಸಿಕೊಡುವೆನು.
12 ದೀರ್ಘಾಯುಷ್ಯವು ಬೇಕೋ?
    ಬಹುಕಾಲ ಸುಖವನ್ನು ಅನುಭವಿಸಬೇಕೋ?
13 ಹಾಗಾದರೆ ಕೆಟ್ಟದ್ದನ್ನು ಮಾತಾಡದಂತೆ ನಾಲಿಗೆಯನ್ನು ಕಾದುಕೊಳ್ಳಿರಿ.
    ಸುಳ್ಳಾಡದಂತೆ ತುಟಿಗಳನ್ನು ಇಟ್ಟುಕೊಳ್ಳಿರಿ.
14 ಕೆಟ್ಟದ್ದನ್ನು ಬಿಟ್ಟು ಒಳ್ಳೆಯವುಗಳನ್ನು ಮಾಡಿರಿ.
    ಸಮಾಧಾನವನ್ನು ಬಯಸಿ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ.

ಯೋಬನು 13:1-19

13 ಯೋಬನು ಹೇಳಿದನು:

“ಇಗೋ, ಇವುಗಳನ್ನೆಲ್ಲ ನನ್ನ ಕಣ್ಣುಗಳು ಕಂಡಿವೆ;
    ಕಿವಿಗಳು ಕೇಳಿ ಗ್ರಹಿಸಿಕೊಂಡಿವೆ.
ನಿಮಗೆ ತಿಳಿದಿರುವುದು ನನಗೂ ತಿಳಿದಿದೆ.
    ನಾನು ನಿಮಗಿಂತ ಕಡಿಮೆಯಲ್ಲ.
ಆದರೆ ನಾನು ನಿಮ್ಮೊಂದಿಗೆ ವಾದಮಾಡದೆ
    ಸರ್ವಶಕ್ತನಾದ ದೇವರೊಂದಿಗೆ ಮಾತಾಡುವೆನು;
    ನನ್ನ ಕಷ್ಟಗಳ ಕುರಿತು ಆತನೊಂದಿಗೆ ವಾದಿಸುವೆನು.
ನೀವಾದರೋ ನಿಮ್ಮ ಆ ಜ್ಞಾನವನ್ನು ಸುಳ್ಳುಗಳಿಂದ ಮುಚ್ಚಲು ಪ್ರಯತ್ನಿಸುತ್ತಿದ್ದೀರಿ.
    ನೀವೆಲ್ಲರೂ ಗುಣಪಡಿಸಲಾಗದ ವೈದ್ಯರುಗಳಂತಿದ್ದೀರಿ.
ನೀವು ಬಾಯಿಮುಚ್ಚಿಕೊಂಡು ಸುಮ್ಮನಿದ್ದರೆ ಎಷ್ಟೋ ಒಳ್ಳೆಯದು.
    ನೀವು ಮಾಡಬಹುದಾದ ಜ್ಞಾನದ ಕಾರ್ಯ ಅದೊಂದೇ.

“ಈಗ ನನ್ನ ವಾದಕ್ಕೆ ಕಿವಿಗೊಡಿ.
    ನಾನು ಹೇಳುವುದನ್ನು ಕೇಳಿ.
ನೀವು ದೇವರಿಗಾಗಿ ಸುಳ್ಳಾಡುವಿರಾ?
    ಆತನಿಗಾಗಿ ಅನ್ಯಾಯದ ವಾದಗಳನ್ನು ಬಳಸುವಿರಾ?
ನೀವು ದೇವರಿಗೆ ಮುಖದಾಕ್ಷಿಣ್ಯವನ್ನು ತೋರಿಸುವಿರಾ?
    ನ್ಯಾಯಾಲಯದಲ್ಲಿ ಆತನಿಗಾಗಿ ವಾದಿಸಲು ಹೋಗುವಿರಾ?
ದೇವರು ನಿಮ್ಮನ್ನು ಸೂಕ್ಷ್ಮವಾಗಿ ಪರಿಶೋಧಿಸಿದರೆ
    ನೀವು ನೀತಿವಂತರಾಗಿ ಕಂಡುಬರುವಿರಾ?
ಜನರಿಗೆ ಮೋಸ ಮಾಡುವಂತೆ
    ದೇವರಿಗೂ ಮೋಸ ಮಾಡಬಹುದೆಂದು ಯೋಚಿಸಿಕೊಂಡಿದ್ದೀರಾ?
10 ನೀವು ನ್ಯಾಯಾಲಯದಲ್ಲಿ ರಹಸ್ಯವಾಗಿ ಪಕ್ಷಪಾತ ಮಾಡಿದರೆ
    ಆತನು ನಿಮ್ಮನ್ನು ಖಂಡಿಸೇ ಖಂಡಿಸುವನು.
11 ಆತನ ಪ್ರಕಾಶಮಾನವಾದ ಮಹಿಮೆಯು ನಿಮ್ಮನ್ನು ಹೆದರಿಸುವುದಿಲ್ಲವೇ?
    ನೀವು ಆತನಿಗೆ ಭಯಪಡುವುದಿಲ್ಲವೇ?
12 ನೀವಾಡುವ ಸ್ಮರಣೀಯ ನುಡಿಗಳು ಬೂದಿಗೆ ಸಮಾನವಾಗಿವೆ.
    ನಿಮ್ಮ ವಾದಗಳು ಮಣ್ಣಿನಷ್ಟೇ ಬಲಹೀನವಾಗಿವೆ.

13 “ಸುಮ್ಮನಿರಿ, ಮಾತಾಡಲು ನನಗೆ ಅವಕಾಶ ಕೊಡಿ!
    ನನಗೆ ಏನಾಗಬೇಕೋ ಆಗಲಿ.
14 ನಾನು ನನ್ನನ್ನು ಅಪಾಯಕ್ಕೊಡ್ಡುವೆನು;
    ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.
15 ದೇವರು ನನ್ನನ್ನು ಕೊಂದರೂ ಆತನಲ್ಲಿಯೇ ಭರವಸವಿಟ್ಟಿರುವೆನು.
    ನನ್ನ ನಡತೆಯ ಕುರಿತು ಆತನ ಮುಂದೆ ವಾದಿಸುವೆನು.
16 ನಾನು ನಿರಪರಾಧಿಯೆಂದು ಆಗ ರುಜುವಾತಾಗುವುದು.
    ಯಾಕೆಂದರೆ, ದೇವರನ್ನು ಮುಖಾಮುಖಿಯಾಗಿ ಸಂಧಿಸಲು ದುಷ್ಟನಿಗೆ ಸಾಧ್ಯವೇ ಇಲ್ಲ.
17 ನಾನು ಹೇಳುವುದನ್ನು ಗಮನವಿಟ್ಟು ಕೇಳಿ.
    ನನ್ನ ವಿವರಣೆಯನ್ನು ನಿಮ್ಮ ಕಿವಿಗಳು ಕೇಳಲಿ.
18 ನನ್ನ ಪರವಾಗಿ ವಾದಿಸಲು ಈಗ ಸಿದ್ಧವಾಗಿದ್ದೇನೆ.
    ನಾನು ನಿರಪರಾಧಿಯೆಂದು ನನಗೆ ಗೊತ್ತದೆ.
19 ನಾನು ತಪ್ಪಿತಸ್ಥನೆಂದು ಯಾವನೂ ನಿರೂಪಿಸಲಾರನು.
    ನಿರೂಪಿಸಬಲ್ಲವನಿದ್ದರೆ ಬಾಯಿ ಮುಚ್ಚಿಕೊಳ್ಳುವೆನು.

ಯೋಹಾನ 4:7-26

ಸಮಾರ್ಯದ ಸ್ತ್ರೀಯೊಬ್ಬಳು ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆ ಬಾವಿಗೆ ಬಂದಳು. ಯೇಸು ಆಕೆಗೆ, “ದಯವಿಟ್ಟು, ಕುಡಿಯಲು ಸ್ವಲ್ಪ ನೀರು ಕೊಡು” ಎಂದು ಕೇಳಿದನು. (ಯೇಸುವಿನ ಶಿಷ್ಯರು ಆಹಾರಪದಾರ್ಥವನ್ನು ಕೊಂಡುಕೊಂಡು ಬರಲು ಪಟ್ಟಣದೊಳಗೆ ಹೋಗಿದ್ದಾಗ ಇದು ಸಂಭವಿಸಿತು.)

ಸಮಾರ್ಯದ ಸ್ತ್ರೀಯು, “ಕುಡಿಯುವ ನೀರಿಗಾಗಿ ನೀನು ನನ್ನನ್ನು ಕೇಳುತ್ತಿರುವುದು ನನಗೆ ಆಶ್ಚರ್ಯವನ್ನು ಉಂಟುಮಾಡಿದೆ! ನೀನಾದರೋ ಯೆಹೂದ್ಯನು. ನಾನಾದರೋ ಸಮಾರ್ಯದವಳು!” ಎಂದು ಹೇಳಿದಳು. (ಯೆಹೂದ್ಯರು ಸಮಾರ್ಯದವರೊಂದಿಗೆ ಸ್ನೇಹದಿಂದಿರಲಿಲ್ಲ.)

10 ಯೇಸು ಆಕೆಗೆ, “ದೇವರು ಏನು ಕೊಡುತ್ತಾನೆಂಬುದು ನಿನಗೆ ಗೊತ್ತಿಲ್ಲ ಮತ್ತು ಕುಡಿಯಲು ನೀರನ್ನು ಕೇಳಿದ ನಾನು ಯಾರೆಂಬುದೂ ನಿನಗೆ ಗೊತ್ತಿಲ್ಲ. ನಿನಗೆ ಈ ಸಂಗತಿಗಳು ಗೊತ್ತಿದ್ದರೆ, ನೀನು ನನ್ನನ್ನು ಕೇಳಿಕೊಳ್ಳುತ್ತಿದ್ದೆ, ಮತ್ತು ನಾನು ನಿನಗೆ ಜೀವಜಲವನ್ನು ಕೊಡುತ್ತಿದ್ದೆ” ಎಂದನು.

11 ಆ ಸ್ತ್ರೀಯು, “ಅಯ್ಯಾ, ಆ ಜೀವಜಲ ನಿನಗೆಲ್ಲಿ ಸಿಕ್ಕುವುದು? ಬಾವಿಯು ಬಹು ಆಳವಾಗಿದೆ ಮತ್ತು ನೀರು ಸೇದುವುದಕ್ಕೆ ನಿನ್ನಲ್ಲಿ ಏನೂ ಇಲ್ಲ. 12 ನಮ್ಮ ಪಿತೃವಾದ ಯಾಕೋಬನಿಗಿಂತಲೂ ನೀನು ದೊಡ್ಡವನೋ? ನಮಗೆ ಈ ಬಾವಿಯನ್ನು ಯಾಕೋಬನೇ ಕೊಟ್ಟನು. ಸ್ವತಃ ಅವನೇ ಈ ನೀರನ್ನು ಕುಡಿದನು. ಅಲ್ಲದೆ ಅವನ ಮಕ್ಕಳು ಈ ಬಾವಿಯ ನೀರನ್ನು ಕುಡಿದರು ಮತ್ತು ಅವನ ಪಶುಗಳೆಲ್ಲಾ ಈ ಬಾವಿಯ ನೀರನ್ನು ಕುಡಿದವು” ಎಂದು ಹೇಳಿದಳು.

13 ಯೇಸು, “ಈ ನೀರನ್ನು ಕುಡಿಯುವ ಪ್ರತಿಯೊಬ್ಬನಿಗೂ ಮತ್ತೆ ದಾಹವಾಗುವುದು. 14 ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ದಾಹವಾಗುವುದೇ ಇಲ್ಲ. ನಾನು ಅವನಿಗೆ ಕೊಡುವ ನೀರು ಅವನೊಳಗೆ ಉಕ್ಕಿಹರಿಯುವ ನೀರಿನ ಬುಗ್ಗೆಯಾಗುವುದು. ಆ ನೀರು ಅವನಿಗೆ ನಿತ್ಯಜೀವವನ್ನು ತರುತ್ತದೆ” ಎಂದು ಉತ್ತರಕೊಟ್ಟನು.

15 ಆ ಸ್ತ್ರೀಯು ಯೇಸುವಿಗೆ, “ಅಯ್ಯಾ, ಆ ನೀರನ್ನು ನನಗೆ ಕೊಡು. ಆಗ ನನಗೆ ಮತ್ತೆಂದಿಗೂ ದಾಹವಾಗುವುದಿಲ್ಲ. ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ನಾನು ಇಲ್ಲಿಗೆ ಮತ್ತೆ ಬರುವ ಅಗತ್ಯವೂ ಇರುವುದಿಲ್ಲ” ಎಂದು ಹೇಳಿದಳು.

16 ಯೇಸು ಆಕೆಗೆ, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ” ಎಂದನು.

17 ಆ ಸ್ತ್ರೀಯು, “ನನಗೆ ಗಂಡನಿಲ್ಲ” ಎಂದು ಹೇಳಿದಳು.

ಯೇಸು ಆಕೆಗೆ, “ಗಂಡನಿಲ್ಲವೆಂದು ಸರಿಯಾಗಿ ಹೇಳಿದೆ. 18 ನಿಜವಾಗಿಯೂ ನಿನಗೆ ಐದು ಮಂದಿ ಗಂಡಂದಿರಿದ್ದರು. ಆದರೆ ಈಗ ನೀನು ಯಾರೊಂದಿಗೆ ವಾಸಿಸುತ್ತಿರುವಿಯೋ ಅವನು ನಿನ್ನ ಗಂಡನಲ್ಲ. ನೀನು ನನಗೆ ಸತ್ಯವನ್ನು ತಿಳಿಸಿದೆ” ಎಂದು ಹೇಳಿದನು.

19 ಆ ಸ್ತ್ರೀಯು, “ಅಯ್ಯಾ, ನೀನು ಪ್ರವಾದಿಯೆಂದು ಕಾಣುತ್ತದೆ. 20 ನಮ್ಮ ಪಿತೃಗಳು ಈ ಗುಡ್ಡದ ಮೇಲೆ ಆರಾಧಿಸಿದರು. ಆದರೆ ಜನರು ಆರಾಧಿಸಬೇಕಾದ ಸ್ಥಳ ಜೆರುಸಲೇಮ್ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲಾ” ಎಂದಳು.

21 ಯೇಸು, “ಅಮ್ಮಾ, ನನ್ನನ್ನು ನಂಬು! ನೀವು ಇನ್ನೆಂದಿಗೂ ತಂದೆಯನ್ನು (ದೇವರನ್ನು) ಜೆರುಸಲೇಮಿನಲ್ಲಾಗಲಿ ಈ ಗುಡ್ಡದ ಮೇಲಾಗಲಿ ಆರಾಧಿಸಬೇಕಿಲ್ಲ. 22 ನೀವು ನಿಮಗೆ ತಿಳಿದಿಲ್ಲದ ಯಾವುದನ್ನೋ ಆರಾಧಿಸುತ್ತೀರಿ. ನಮಗಾದರೋ ನಾವು ಯಾರನ್ನು ಆರಾಧಿಸುತ್ತಿದ್ದೇವೆ ಎಂಬುದು ತಿಳಿದಿದೆ. ರಕ್ಷಣೆಯು ಯೆಹೂದ್ಯರಿಂದ ಬರುತ್ತದೆ. 23 ನಿಜವಾದ ಆರಾಧಕರು ತಂದೆಯ ಚಿತ್ತಕ್ಕನುಸಾರವಾಗಿ ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ. ಆ ಕಾಲ ಈಗಲೇ ಬಂದಿದೆ ಮತ್ತು ಅಂಥ ಜನರೇ ತನ್ನ ಆರಾಧಕರಾಗಿರಬೇಕೆಂದು ತಂದೆಯು ಬಯಸುತ್ತಾನೆ. 24 ದೇವರು ಆತ್ಮಸ್ವರೂಪಿ. ಆದ್ದರಿಂದ ದೇವರನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು” ಎಂದು ಹೇಳಿದನು.

25 ಆ ಸ್ತ್ರೀಯು, “ಮೆಸ್ಸೀಯನು ಬರುತ್ತಾನೆಂದು ನನಗೆ ಗೊತ್ತು. ಆತನು ಬಂದಾಗ ನಮಗೆ ಪ್ರತಿಯೊಂದನ್ನೂ ವಿವರಿಸುವನು” ಎಂದು ಹೇಳಿದಳು. (“ಮೆಸ್ಸೀಯನು” ಅಂದರೆ “ಕ್ರಿಸ್ತನು”)

26 ಆಗ ಯೇಸು, “ಆತನೇ ಈಗ ನಿನ್ನೊಂದಿಗೆ ಮಾತಾಡುತ್ತಿದ್ದಾನೆ. ನಾನೇ ಮೆಸ್ಸೀಯ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International