Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 85:8-13

ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
    ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
    ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
    ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
    ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
    ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
    ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
    ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.

ಆಮೋಸ 3:1-12

ಇಸ್ರೇಲಿಗೆ ಎಚ್ಚರಿಕೆಯ ಮಾತು

ಇಸ್ರೇಲಿನ ಜನರೇ, ಈ ಸಂದೇಶಕ್ಕೆ ಕಿವಿಗೊಡಿರಿ! ನಿಮ್ಮ ವಿಷಯವಾಗಿ ಯೆಹೋವನು ಹೀಗೆ ಹೇಳಿದ್ದಾನೆ. ಇಸ್ರೇಲೇ, ಇದು ನಾನು ಈಜಿಪ್ಟ್‌ನಿಂದ ಬಿಡಿಸಿಕೊಂಡು ಬಂದ ಎಲ್ಲಾ ಕುಟುಂಬಗಳವರ (ಇಸ್ರೇಲ್) ವಿಷಯವಾದ ಸಂದೇಶ. “ಈ ಭೂಮುಖದಲ್ಲಿ ಅನೇಕ ಕುಟುಂಬಗಳಿವೆ. ಅವರೆಲ್ಲರಲ್ಲಿ ನಿಮ್ಮನ್ನು ಮಾತ್ರವೇ ನಾನು ವಿಶೇಷ ರೀತಿಯಲ್ಲಿ ಬಲ್ಲೆನು. ಆದರೆ ನೀವು ನನಗೆ ವಿರುದ್ಧವಾದಿರಿ. ಆದ್ದರಿಂದ ನಾನು ನೀವು ಮಾಡಿದ ಪಾಪಗಳಿಗೆ ನಿಮ್ಮೆಲ್ಲರನ್ನು ಶಿಕ್ಷಿಸುವೆನು.”

ಇಸ್ರೇಲಿನ ಶಿಕ್ಷೆಯ ಕಾರಣ

ಇಬ್ಬರು ಒಟ್ಟಾಗಿ ನಡೆಯಬೇಕಾದರೆ
    ಅದಕ್ಕೆ ಅವರಿಬ್ಬರೂ ಒಪ್ಪಿಕೊಂಡಿರಲೇಬೇಕು.
ಅಡವಿಯಲ್ಲಿರುವ ಸಿಂಹವು
    ಪ್ರಾಣಿಯನ್ನು ಹಿಡಿದ ನಂತರವೇ ಗರ್ಜಿಸುವದು.
ಪ್ರಾಯದ ಸಿಂಹವು ತನ್ನ ಗವಿಯಲ್ಲಿ ಗರ್ಜಿಸಿದರೆ
    ಅದು ಒಂದು ಪ್ರಾಣಿಯನ್ನು ಹಿಡಿಯಿತು ಎಂದು ಅರ್ಥ.
ಬಲೆಯಲ್ಲಿ ಆಹಾರ ಹಾಕದಿದ್ದರೆ
    ಪಕ್ಷಿಯು ಬಲೆಯೊಳಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ.
ಏನೂ ಸಿಕ್ಕಿಕೊಳ್ಳದೆ
    ಬೋನು ಮುಚ್ಚಿಕೊಳ್ಳುವುದೇ?
ತುತ್ತೂರಿಯ ಎಚ್ಚರಿಕೆಯ ಶಬ್ಧವನ್ನು ಕೇಳಿದ ಜನರು
    ಖಂಡಿತವಾಗಿ ಹೆದರಿ ನಡುಗುವರು.
ಒಂದು ಗಂಡಾಂತರವು ಪಟ್ಟಣಕ್ಕೆ ಬಂದಿರುವುದಾದರೆ
    ಅದನ್ನು ಬರಮಾಡಿದಾತನು ಯೆಹೋವನೇ.

ನನ್ನ ಒಡೆಯನಾದ ಯೆಹೋವನು ಒಂದು ಕಾರ್ಯವನ್ನು ಮಾಡಲು ನಿರ್ಧರಿಸಬಹುದು. ಆದರೆ ಆತನು ಹಾಗೆ ಮಾಡುವ ಮುಂಚಿತವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ಮುಂತಿಳಿಸುವನು. ಸಿಂಹವು ಗರ್ಜಿಸಿದಾಗ ಜನರಿಗೆ ಭಯವಾಗುವುದು. ಯೆಹೋವನು ಮಾತನಾಡಿದಾಗ ಪ್ರವಾದಿಗಳು ಪ್ರವಾದಿಸುವರು.

9-10 ಅಷ್ಡೋದ್ ಮತ್ತು ಈಜಿಪ್ಟಿನ ಉನ್ನತ ಬುರುಜುಗಳ ಬಳಿಗೆ ಹೋಗಿ ಈ ಸಂದೇಶವನ್ನು ಸಾರಿರಿ, “ಸಮಾರ್ಯದ ಪರ್ವತಗಳ ಬಳಿಗೆ ಬನ್ನಿರಿ. ಅಲ್ಲಿ ಒಂದು ದೊಡ್ಡ ಗಲಿಬಿಲಿಯನ್ನು ನೋಡುವಿರಿ. ಯಾಕೆಂದರೆ ಜನರಿಗೆ ಸರಿಯಾಗಿ ಜೀವಿಸುವ ರೀತಿ ಗೊತ್ತಿಲ್ಲ. ಅವರು ಜನರೊಂದಿಗೆ ಕ್ರೂರವಾಗಿ ವರ್ತಿಸುವರು. ಬೇರೆ ಜನರಿಂದ ವಸ್ತುಗಳನ್ನು ತೆಗೆದುಕೊಂಡು ಅವುಗಳನ್ನು ಉನ್ನತ ಬುರುಜುಗಳಲ್ಲಿ ಅಡಗಿಸಿಡುವರು. ಯುದ್ಧದಲ್ಲಿ ಸೂರೆ ಮಾಡಿದ ವಸ್ತುಗಳಿಂದ ಅವರ ಖಜಾನೆಯು ತುಂಬಿರುವದು.”

11 ಆದ್ದರಿಂದ ಯೆಹೋವನು ಹೇಳುವುದೇನೆಂದರೆ, “ಆ ದೇಶಕ್ಕೆ ಒಬ್ಬ ಶತ್ರುವು ಬರುವನು. ಅವನು ನಿಮ್ಮ ಬಲವನ್ನೇ ಮುರಿಯುವನು. ನೀವು ಉನ್ನತ ಬುರುಜುಗಳಲ್ಲಿ ಅಡಿಗಿಸಿಟ್ಟಿದ್ದ ವಸ್ತುಗಳನ್ನು ಕಿತ್ತುಕೊಳ್ಳುವನು.”

12 ಯೆಹೋವನು ಹೇಳುವುದೇನೆಂದರೆ,

“ಒಂದುವೇಳೆ ಸಿಂಹವು ಒಂದು ಕುರಿಮರಿಯ ಮೇಲೆ ಎರಗಿದರೆ
    ಕುರುಬನು ಅದನ್ನು ರಕ್ಷಿಸಲು ಪ್ರಯತ್ನಿಸಾನು.
ಆದರೆ ಕುರುಬನು ಆ ಕುರಿಮರಿಯ
    ಒಂದು ಭಾಗವನ್ನು ಮಾತ್ರ ಕಾಪಾಡಿಯಾನು.
ಸಿಂಹದ ಬಾಯಿಂದ ಕುರಿಯ ಎರಡು ಕಾಲುಗಳನ್ನೋ
    ಕಿವಿಯ ಒಂದು ಭಾಗವನ್ನೋ ಎಳೆದು ರಕ್ಷಿಸಿಯಾನು.
ಅದೇ ರೀತಿಯಲ್ಲಿ ಬಹುತೇಕ ಇಸ್ರೇಲರು ರಕ್ಷಿಸಲ್ಪಡುವದಿಲ್ಲ.
    ಸಮಾರ್ಯದಲ್ಲಿರುವ ಜನರು ತಮ್ಮ ಹಾಸಿಗೆಯ ಒಂದು ಮೂಲೆಯನ್ನಾಗಲಿ
    ಅಥವಾ ಮಂಚದ ಮೇಲಿನ ಬಟ್ಟೆಯ ಒಂದು ತುಂಡನ್ನಾಗಲಿ ಉಳಿಸಿಕೊಳ್ಳುವರು.”

ಕೊಲೊಸ್ಸೆಯವರಿಗೆ 4:2-18

ಕ್ರೈಸ್ತರು ಮಾಡತಕ್ಕ ಕಾರ್ಯಗಳು

ಪ್ರಾರ್ಥನೆಯನ್ನು ತಪ್ಪದೆ ಮಾಡಿರಿ, ನೀವು ಪ್ರಾರ್ಥಿಸುವಾಗ, ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ. ನಮಗಾಗಿಯೂ ನೀವು ಪ್ರಾರ್ಥಿಸಿ. ಜನರಿಗೆ ದೇವರ ಸಂದೇಶವನ್ನು ತಿಳಿಸಲು ಅನುಕೂಲವಾದ ಸಂದರ್ಭವನ್ನು ಆತನು ನಿಮಗೆ ದಯಪಾಲಿಸುವಂತೆ ಪ್ರಾರ್ಥಿಸಿರಿ. ದೇವರು ಕ್ರಿಸ್ತನ ಬಗ್ಗೆ ತಿಳಿಸಿರುವ ರಹಸ್ಯಸತ್ಯವನ್ನು ನಾವು ಬೋಧಿಸಲಾಗುವಂತೆ ಪ್ರಾರ್ಥಿಸಿರಿ. ನಾನು ಈ ಸತ್ಯವನ್ನು ಬೋಧಿಸಿದರಿಂದಲೇ ಈಗ ಸೆರೆಮನೆಯಲ್ಲಿದ್ದೇನೆ. ಈ ಸತ್ಯವನ್ನು ನಾನು ಜನರಿಗೆ ಸ್ಪಷ್ಟವಾಗಿಯೂ ಸರಳವಾಗಿಯೂ ತಿಳಿಸಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.

ಅವಿಶ್ವಾಸಿಗಳೊಂದಿಗೆ ವ್ಯವಹರಿಸುವಾಗ ಜ್ಞಾನವುಳ್ಳವರಾಗಿರಿ. ನಿಮ್ಮ ಸಮಯವನ್ನು ಅತ್ಯುತ್ತಮವಾದ ರೀತಿಯಲ್ಲಿ ಬಳಸಿರಿ. ನೀವು ಮಾತನಾಡುವಾಗಲೆಲ್ಲಾ ದಯೆಯುಳ್ಳವರಾಗಿಯೂ ಜ್ಞಾನವುಳ್ಳವರಾಗಿಯೂ ಮಾತನಾಡಿರಿ. ಆಗ ಪ್ರತಿಯೊಬ್ಬರಿಗೂ ಯೋಗ್ಯವಾದ ರೀತಿಯಲ್ಲಿ ಉತ್ತರಿಸಲು ಶಕ್ತರಾಗುವಿರಿ.

ಪೌಲನೊಂದಿಗಿರುವ ಜನರನ್ನು ಕುರಿತ ಸುದ್ಧಿ

ತುಖಿಕನು ಕ್ರಿಸ್ತನಲ್ಲಿ ನನ್ನ ಪ್ರೀತಿಯ ಸಹೋದರನಾಗಿದ್ದಾನೆ. ನನ್ನೊಡನೆ ಅವನೂ ಪ್ರಭುವಿನಲ್ಲಿ ನಂಬಿಗಸ್ತನಾದ ಸೇವಕನೂ ದಾಸನೂ ಆಗಿದ್ದಾನೆ. ನನಗೆ ಸಂಭವಿಸುತ್ತಿರುವುದನ್ನೆಲ್ಲ ಅವನು ನಿಮಗೆ ತಿಳಿಸುತ್ತಾನೆ. ಆದಕಾರಣವೇ ನಾನು ಅವನನ್ನು ಕಳುಹಿಸುತ್ತಿದ್ದೇನೆ. ನಾವು ಹೇಗಿರುವೆವು ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆ. ನಿಮ್ಮನ್ನು ಪ್ರೋತ್ಸಾಹಿಸಲು ನಾನು ಅವನನ್ನು ಒನೇಸಿಮನ ಜೊತೆಯಲ್ಲಿ ಕಳುಹಿಸುತ್ತಿದ್ದೇನೆ. ಒನೇಸಿಮನು ಕ್ರಿಸ್ತನಲ್ಲಿ ನಂಬಿಗಸ್ತನಾದ ಪ್ರೀತಿಯ ಸಹೋದರನಾಗಿದ್ದಾನೆ. ಅವನು ನಿಮ್ಮ ಊರಿನವನೇ. ಇಲ್ಲಿ ಸಂಭವಿಸಿದ್ದೆಲ್ಲವನ್ನು ಅವರು ನಿಮಗೆ ತಿಳಿಸುತ್ತಾರೆ.

10 ಅರಿಸ್ತಾರ್ಕನು ವಂದನೆ ತಿಳಿಸಿದ್ದಾನೆ. ಅವನೂ ನನ್ನೊಡನೆ ಸೆರೆಯಲ್ಲಿದ್ದಾನೆ. ಬಾರ್ನಬನಿಗೆ ಸೋದರ ಬಾಂಧ್ಯವ್ಯವುಳ್ಳ ಮಾರ್ಕನೂ ವಂದನೆಯನ್ನು ಹೇಳುತ್ತಾನೆ. (ಮಾರ್ಕನ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ. ಅವನು ಬಂದರೆ ಅವನನ್ನು ಸ್ವಾಗತಿಸಿರಿ.) 11 ಯೇಸುವು (ಯುಸ್ತನೆಂದೂ ಅವನನ್ನು ಕರೆಯುತ್ತಾರೆ.) ಸಹ ವಂದನೆಯನ್ನು ಹೇಳುತ್ತಾನೆ. ಯೆಹೂದ್ಯರಲ್ಲಿ ವಿಶ್ವಾಸಿಗಳಾಗಿರುವ ಇವರು ಮಾತ್ರವೇ ದೇವರ ರಾಜ್ಯಕ್ಕಾಗಿ ನನ್ನ ಜೊತೆ ಕೆಲಸ ಮಾಡುತ್ತಿದ್ದಾರೆ. ಇವರೇ ನನಗೆ ಆದರಣೆಯಾಗಿದ್ದಾರೆ.

12 ಎಪಫ್ರನು ಸಹ ವಂದನೆ ತಿಳಿಸಿದ್ದಾನೆ. ಅವನು ಯೇಸು ಕ್ರಿಸ್ತನ ಸೇವಕನು. ಅವನು ನಿಮ್ಮವರಲ್ಲಿ ಒಬ್ಬನಾಗಿದ್ದಾನೆ. ಅವನು ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತಾನೆ. ನೀವು ಆತ್ಮಿಕತೆಯಲ್ಲಿ ಬೆಳೆಯುತ್ತಾ ಸಂಪೂರ್ಣತೆಯನ್ನು ಮುಟ್ಟಬೇಕೆಂತಲೂ ದೇವರ ಚಿತ್ತವನ್ನು ಪೂರ್ಣವಾಗಿ ತಿಳಿದುಕೊಂಡು ದೃಢವಾಗಿರಬೇಕೆಂತಲೂ ಪ್ರಾರ್ಥಿಸುತ್ತಾನೆ. 13 ಅವನು ನಿಮಗೋಸ್ಕರ, ಲವೊದಿಕೀಯ ಮತ್ತು ಹಿರೆಯಾ ಪೊಲಿಯದ ಜನರಿಗೋಸ್ಕರ ಬಹಳ ಪ್ರಯಾಸಪಟ್ಟು ಕೆಲಸ ಮಾಡಿದನೆಂಬುದು ನನಗೆ ತಿಳಿದಿದೆ. 14 ದೇಮನು ಮತ್ತು ಪ್ರೀತಿಯ ಸ್ನೇಹಿತನಾದ ವೈದ್ಯ ಲೂಕನು ವಂದನೆಗಳನ್ನು ಹೇಳುತ್ತಾರೆ.

15 ಲವೊದಿಕೀಯದಲ್ಲಿರುವ ಸಹೋದರ ಸಹೋದರಿಯರಿಗೆ ವಂದನೆಗಳನ್ನು ತಿಳಿಸಿರಿ. ನುಂಫಳಿಗೂ ಅವಳ ಮನೆಯಲ್ಲಿ ಸೇರುವ ಸಭೆಯವರಿಗೂ ವಂದನೆಗಳನ್ನು ತಿಳಿಸಿರಿ. 16 ಈ ಪತ್ರವನ್ನು ಓದಿದ ನಂತರ ಲವೊದಿಕೀಯದ ಸಭೆಯವರಿಗೂ ಓದಲು ಕೊಡಿರಿ. ನಾನು ಲವೊದಿಕೀಯದವರಿಗೆ ಬರೆದಿರುವ ಪತ್ರವನ್ನು ನೀವೂ ಓದಿರಿ. 17 ಅರ್ಖಿಪ್ಪನಿಗೆ, “ಪ್ರಭುವು ನಿನಗೆ ವಹಿಸಿರುವ ಸೇವೆಯನ್ನು ಖಂಡಿತವಾಗಿ ನೆರವೇರಿಸಬೇಕು” ಎಂದು ತಿಳಿಸಿರಿ.

18 ನಿಮಗೆ ನನ್ನ ವಂದನೆಗಳು. ಪೌಲನೆಂಬ ನಾನು ನನ್ನ ಸ್ವಂತ ಕೈಯಿಂದ ಇದನ್ನು ಬರೆದಿದ್ದೇನೆ. ಸೆರೆಮನೆಯಲ್ಲಿರುವ ನನ್ನನ್ನು ಜ್ಞಾಪಿಸಿಕೊಳ್ಳಿರಿ. ದೇವರ ಕೃಪೆಯು ನಿಮ್ಮೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International