Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 111

111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
    ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
    ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
    ಆತನ ನೀತಿಯು ಶಾಶ್ವತವಾದದ್ದು.
ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
    ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
    ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
ಆತನು ಅನ್ಯಜನಾಂಗಗಳ ದೇಶವನ್ನು
    ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
    ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
ದೇವರ ಆಜ್ಞೆಗಳು ಶಾಶ್ವತವಾಗಿವೆ.
    ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
    ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
    ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.

ಆದಿಕಾಂಡ 18:1-15

ಮೂವರು ಸಂದರ್ಶಕರು

18 ಅಬ್ರಹಾಮನು ಮಮ್ರೆಯಲ್ಲಿದ್ದ ಓಕ್ ಮರಗಳ ತೋಪಿನ ಸಮೀಪದಲ್ಲಿ ವಾಸಿಸುತ್ತಿದ್ದಾಗ ಯೆಹೋವನು ಅವನಿಗೆ ಕಾಣಿಸಿಕೊಂಡನು. ಅಂದು ಬಿಸಿಲಿನ ತಾಪದಿಂದಾಗಿ ಅಬ್ರಹಾಮನು ತನ್ನ ಗುಡಾರದ ಬಾಗಿಲ ಬಳಿ ಕುಳಿತಿದ್ದನು. ಅಬ್ರಹಾಮನು ದೃಷ್ಟಿಸಿ ನೋಡಿದಾಗ ತನ್ನ ಮುಂದೆ ಮೂವರು ಪುರುಷರು ನಿಂತಿರುವುದನ್ನು ಕಂಡನು. ಕೂಡಲೇ ಅವರ ಬಳಿಗೆ ಓಡಿಹೋಗಿ ಅವರಿಗೆ ಸಾಷ್ಟಾಂಗನಮಸ್ಕಾರ ಮಾಡಿ ಅವರಿಗೆ, “ಸ್ವಾಮಿಗಳೇ, ನಿಮ್ಮ ಸೇವಕನಾದ ನನ್ನ ಜೊತೆಯಲ್ಲಿ ಸ್ವಲ್ಪ ಸಮಯವಿರಿ. ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಲು ನೀರನ್ನು ತಂದುಕೊಡುವೆನು. ನೀವು ಮರದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳಿರಿ. ನಾನು ನಿಮಗೆ ಊಟವನ್ನು ತಂದುಕೊಡುವೆನು. ನೀವು ಬೇಕಾದಷ್ಟು ಊಟ ಮಾಡಿದ ನಂತರ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು” ಎಂದು ಹೇಳಿದನು.

ಆ ಮೂವರು ಪುರುಷರು, “ಸರಿ, ನೀನು ಹೇಳಿದಂತೆಯೇ ಮಾಡು” ಅಂದರು.

ಅಬ್ರಹಾಮನು ಗುಡಾರಕ್ಕೆ ಬೇಗನೆ ಹೋಗಿ ಸಾರಳಿಗೆ, “ಮೂರು ದೊಡ್ಡ ರೊಟ್ಟಿಗಳಿಗೆ ಬೇಕಾಗುವಷ್ಟು ಗೋಧಿ ಹಿಟ್ಟನ್ನು ಬೇಗನೆ ನಾದು” ಎಂದು ಹೇಳಿದನು. ಬಳಿಕ ಅವನು ತನ್ನ ಪಶುಗಳಿದ್ದಲ್ಲಿಗೆ ಓಡಿಹೋಗಿ ಉತ್ತಮವಾದ ಎಳೆಕರುವನ್ನು ತೆಗೆದು ಸೇವಕನಿಗೆ ಕೊಟ್ಟು, “ಬೇಗನೇ ಕರುವನ್ನು ಕೊಯ್ದು, ಊಟಕ್ಕೆ ಸಿದ್ಧಮಾಡು” ಎಂದು ಹೇಳಿದನು. ಅಬ್ರಹಾಮನು ಆ ಮೂವರಿಗೆ ಮಾಂಸದ ಅಡಿಗೆಯನ್ನು ಬಡಿಸಿದನು. ಇದಲ್ಲದೆ ಅವನು ಹಾಲನ್ನೂ ಬೆಣ್ಣೆಯನ್ನೂ ಕೊಟ್ಟನು. ಆ ಮೂವರು ಊಟ ಮಾಡುವಾಗ ಅಬ್ರಹಾಮನು ಅವರ ಸಮೀಪದಲ್ಲಿ ಮರದ ಕೆಳಗೆ ನಿಂತುಕೊಂಡಿದ್ದನು.

ಆ ಪುರುಷರು ಅಬ್ರಹಾಮನಿಗೆ, “ನಿನ್ನ ಹೆಂಡತಿಯಾದ ಸಾರಳು ಎಲ್ಲಿ?” ಎಂದು ಕೇಳಿದರು.

ಅಬ್ರಹಾಮನು ಅವರಿಗೆ, “ಆಕೆ ಗುಡಾರದಲ್ಲಿ ಇದ್ದಾಳೆ” ಅಂದನು.

10 ಆಗ ಯೆಹೋವನು ಅವನಿಗೆ, “ನಾನು ಮತ್ತೆ ವಸಂತಕಾಲದಲ್ಲಿ ಬರುತ್ತೇನೆ. ಆ ಸಮಯದಲ್ಲಿ ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನಿರುವನು” ಎಂದು ಹೇಳಿದನು.

ಸಾರಳು ಗುಡಾರದಲ್ಲಿದ್ದುಕೊಂಡು ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದಳು. ಅವಳಿಗೆ ಈ ಸಂಗತಿಯೂ ಕೇಳಿಸಿತು. 11 ಅಬ್ರಹಾಮನೂ ಮತ್ತು ಸಾರಳೂ ತುಂಬ ವೃದ್ಧರಾಗಿದ್ದರು. ಸಾರಳಿಗೂ ಮಕ್ಕಳು ಹುಟ್ಟುವ ಕಾಲ ಆಗಿಹೋಗಿತ್ತು. 12 ಆದ್ದರಿಂದ ಸಾರಳಿಗೆ ನಂಬಲಾಗಲಿಲ್ಲ. ಆಕೆ ತನ್ನೊಳಗೆ, “ಈಗಾಗಲೇ ನನಗೆ ವಯಸ್ಸಾಗಿದೆ; ನನ್ನ ಗಂಡನಿಗೂ ವಯಸ್ಸಾಗಿದೆ” ಅಂದುಕೊಂಡಳು.

13 ಆಗ ಯೆಹೋವನು ಅಬ್ರಹಾಮನಿಗೆ, “ನಾನು ಹೇಳುವುದನ್ನು ಸಾರಳು ನಂಬುತ್ತಿಲ್ಲ. ಆಕೆಯು ನಗುತ್ತಾ ತನ್ನೊಳಗೆ, ‘ನನಗೆ ಮಕ್ಕಳಾಗದಷ್ಟು ವಯಸ್ಸಾಗಿದೆ’ ಎಂದು ಹೇಳಿದ್ದೇಕೆ? 14 ಯೆಹೋವನಿಗೆ ಅಸಾಧ್ಯವಾದುದುಂಟೇ? ನಾನು ಮತ್ತೆ ವಸಂತಕಾಲದಲ್ಲಿ ಬರುವೆನು. ಆಗ ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನಿದ್ದೇ ಇರುವನು” ಅಂದನು.

15 ಆದರೆ ಸಾರಳು ಭಯಪಟ್ಟು, “ನಾನು ನಗಲಿಲ್ಲ” ಅಂದಳು.

ಅದಕ್ಕೆ ಯೆಹೋವನು, “ಇಲ್ಲ, ನೀನು ನಕ್ಕಿದ್ದು ನಿಜ!” ಅಂದನು.

ಫಿಲಿಪ್ಪಿಯವರಿಗೆ 4:10-20

ಫಿಲಿಪ್ಪಿ ಕ್ರೈಸ್ತರಿಗೆ ಪೌಲನ ವಂದನೆ

10 ನನ್ನ ಮೇಲೆ ನಿಮಗಿರುವ ಚಿಂತೆಯನ್ನು ನೀವು ಮತ್ತೆ ತೋರಿಸಿದ್ದಕ್ಕಾಗಿ ನಾನು ಪ್ರಭುವಿನಲ್ಲಿ ಬಹು ಸಂತೋಷಪಡುತ್ತೇನೆ. ನೀವು ನನ್ನ ಬಗ್ಗೆ ಚಿಂತಿಸುತ್ತಲೇ ಇದ್ದೀರಿ. ಆದರೆ ಅದನ್ನು ತೋರಿಸಲು ನಿಮಗೆ ಅವಕಾಶವೇ ಇರಲಿಲ್ಲ. 11 ನಾನು ಈ ಮಾತುಗಳನ್ನು ಹೇಳುತ್ತಿರುವುದು ನನಗಿರುವ ಕೊರತೆಯ ದೆಸೆಯಿಂದಲ್ಲ. ನನ್ನಲ್ಲಿರುವಂಥವುಗಳಲ್ಲಿ ಮತ್ತು ನನಗೆ ಸಂಭವಿಸುವ ಪ್ರತಿಯೊಂದರಲ್ಲಿ ತೃಪ್ತನಾಗಿರಲು ನಾನು ಕಲಿತುಕೊಂಡಿದ್ದೇನೆ. 12 ಹಸಿವೆಯಿಂದಿರುವಾಗಲೂ ಸಮೃದ್ಧಿಯುಳ್ಳವನಾಗಿರುವಾಗಲೂ ಹೇಗೆ ಜೀವಿಸಬೇಕೆಂಬುದು ನನಗೆ ತಿಳಿದಿದೆ. ಯಾವ ಸಮಯದಲ್ಲಾಗಲಿ ಯಾವ ಪರಿಸ್ಥಿತಿಯಲ್ಲಾಗಲಿ ಸಂತೋಷದಿಂದಿರುವ ಗುಟ್ಟು ನನಗೆ ತಿಳಿದಿದೆ. ಊಟಕ್ಕೆ ಬೇಕಾದಷ್ಟು ಇರುವಾಗಲೂ ಇಲ್ಲದಿರುವಾಗಲೂ ನನಗೆ ಅಗತ್ಯವಾದವುಗಳನ್ನು ಹೊಂದಿರುವಾಗಲೂ ಹೊಂದಿಲ್ಲದಿರುವಾಗಲೂ ಸಂತೋಷವಾಗಿರಲು ಕಲಿತುಕೊಂಡಿದ್ದೇನೆ. 13 ಕ್ರಿಸ್ತನ ಮೂಲಕ ನಾನು ಎಲ್ಲಾ ಕಾರ್ಯಗಳನ್ನು ಮಾಡಬಲ್ಲೆನು. ಏಕೆಂದರೆ ಆತನು ನನ್ನನ್ನು ಬಲಪಡಿಸುತ್ತಾನೆ.

14 ಆದರೂ ನಾನು ಕೊರತೆಯಲ್ಲಿದ್ದಾಗ ನೀವು ನನಗೆ ಸಹಾಯ ಮಾಡಿದ್ದು ಒಳ್ಳೆಯದಾಯಿತು. 15 ಇದಲ್ಲದೆ ಫಿಲಿಪ್ಪಿ ಪಟ್ಟಣದವರೇ, ನಾನು ಮೊದಲು ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ ಮಕೆದೋನಿಯಕ್ಕೆ ಹೊರಟಾಗ, ನಿಮ್ಮ ಸಭೆಯೊಂದೇ ನನಗೆ ಸಹಾಯ ಮಾಡಿದ್ದು ನಿಮಗೆ ಗೊತ್ತಿದೆ. 16 ನಾನು ಥೆಸಲೋನಿಕದಲ್ಲಿದ್ದಾಗ ನನಗೆ ಅಗತ್ಯವಾದವುಗಳನ್ನು ನೀವು ಹಲವಾರು ಸಲ ಕಳುಹಿಸಿಕೊಟ್ಟಿರಿ. 17 ನಿಜವಾಗಿಯೂ, ನಿಮ್ಮಿಂದ ಕೊಡುಗೆಗಳನ್ನು ಪಡೆದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಲ್ಲ. ಆದರೆ ಕೊಡುವುದರ ಮೂಲಕ ಮುಂದೆ ಹೇರಳವಾಗಿ ದೊರೆಯುವ ಆಶೀರ್ವಾದಗಳನ್ನು ನೀವು ಹೊಂದಿಕೊಳ್ಳಬೇಕೆಂಬುದೇ ನನ್ನ ಅಪೇಕ್ಷೆ. 18 ಎಪಫ್ರೊದೀತನು ನಿಮ್ಮ ಕೊಡುಗೆಯನ್ನು ತಂದು ಕೊಟ್ಟಿದ್ದರಿಂದ ಬೇಕಾದದ್ದೆಲ್ಲ ನನ್ನಲ್ಲಿ ಹೇರಳವಾಗಿದೆ. ನಿಮ್ಮ ಕೊಡುಗೆಯು ದೇವರಿಗೆ ಅರ್ಪಿಸಲ್ಪಟ್ಟ ಪರಿಮಳಭರಿತವಾದ ಯಜ್ಞವಾಗಿದೆ. ಇದು ದೇವರಿಗೆ ಮೆಚ್ಚಿಕೆಯಾದದ್ದೂ ಆಗಿದೆ. 19 ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ಅನುಗುಣವಾಗಿ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು. 20 ನಮ್ಮ ತಂದೆಯಾದ ದೇವರಿಗೆ ಸದಾಕಾಲ ಮಹಿಮೆಯಾಗಲಿ. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International