Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 142

ದಾವೀದನು ಗುಹೆಯಲ್ಲಿದ್ದಾಗ ಮಾಡಿದ ಪ್ರಾರ್ಥನೆ. ರಚನೆಗಾರ: ದಾವೀದ.

142 ನಾನು ಯೆಹೋವನಿಗೆ ಮೊರೆಯಿಡುವೆನು;
    ಯೆಹೋವನನ್ನು ಕೂಗಿಕೊಳ್ಳುವೆನು.
ನನ್ನ ಕಷ್ಟಗಳನ್ನೂ ಚಿಂತೆಗಳನ್ನೂ
    ಆತನಿಗೆ ಅರಿಕೆಮಾಡಿಕೊಳ್ಳುವೆನು.
ನನ್ನ ವೈರಿಗಳು ನನಗೆ ಉರುಲನ್ನು ಒಡ್ಡಿದ್ದಾರೆ.
    ನನ್ನ ಆತ್ಮವು ಕುಂದಿಹೋಗಿದೆ.
    ನನ್ನ ಮಾರ್ಗವನ್ನು ತಿಳಿದಿರುವಾತನು ನೀನೇ.

ನಾನು ಸುತ್ತಮುತ್ತ ನೋಡಿದರೂ
    ನನ್ನ ಸ್ನೇಹಿತರಲ್ಲಿ ಯಾರೂ ಕಾಣುತ್ತಿಲ್ಲ.
ಓಡಿಹೋಗಲು ನನಗೆ ಯಾವ ಸ್ಥಳವೂ ಇಲ್ಲ.
    ನನ್ನನ್ನು ರಕ್ಷಿಸಲು ಯಾರೂ ಪ್ರಯತ್ನಿಸುತ್ತಿಲ್ಲ.
ಆದ್ದರಿಂದ ಯೆಹೋವನನ್ನು ಕೂಗಿಕೊಳ್ಳುವೆನು.
    ನನ್ನ ಆಶ್ರಯಸ್ಥಾನವೂ ನೀನೇ,
    ನನ್ನನ್ನು ಬದುಕಿಸಬಲ್ಲಾತನೂ ನೀನೇ ಎಂದು ಆತನಿಗೆ ಮೊರೆಯಿಡುವೆನು.
ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
    ನೀನು ನನಗೆ ಬೇಕೇಬೇಕು.
ನನ್ನನ್ನು ಬೆನ್ನಟ್ಟುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
    ಅವರು ನನಗಿಂತ ಬಹು ಬಲಿಷ್ಠರಾಗಿದ್ದಾರೆ.
ಈ ಉರುಲಿನಿಂದ ಪಾರಾಗಲು ನನಗೆ ಸಹಾಯಮಾಡು.
    ಯೆಹೋವನೇ, ಆಗ ನಾನು ನಿನ್ನ ಹೆಸರನ್ನು ಕೊಂಡಾಡುವೆನು.
ನೀನು ನನ್ನನ್ನು ಕಾಪಾಡಿದ್ದರಿಂದ
    ನೀತಿವಂತರು ನನ್ನೊಂದಿಗೆ ಕೊಂಡಾಡುವರು.

ಆಮೋಸ 9:11-15

ರಾಜ್ಯವು ತಿರುಗಿ ಸ್ಥಾಪಿಸಲ್ಪಡುವದೆಂದು ದೇವರ ವಾಗ್ದಾನ

11 “ದಾವೀದನ ಗುಡಾರವು ಕುಸಿದುಬಿದ್ದಿದೆ.
    ಆದರೆ ಆ ದಿವಸಗಳಲ್ಲಿ ತಿರುಗಿ ಅದನ್ನು ಮೇಲಕ್ಕೆತ್ತುವೆನು.
ಗೋಡೆಯಲ್ಲಿರುವ ರಂಧ್ರಗಳನ್ನು ನಾನು ಸರಿಪಡಿಸುವೆನು.
    ಬಿದ್ದುಹೋದ ಕಟ್ಟಡಗಳನ್ನು ತಿರುಗಿ ಕಟ್ಟುವೆನು.
    ಮುಂಚೆ ಹೇಗಿತ್ತೋ ಹಾಗೆಯೇ ಇರುವದು.
12 ಆಗ ಎದೋಮಿನಲ್ಲಿ ಉಳಿದವರು
    ಮತ್ತು ನನ್ನ ಹೆಸರಿನಿಂದ ಕರೆಯಲ್ಪಟ್ಟ ಜನರು ಸಹಾಯಕ್ಕಾಗಿ ಯೆಹೋವನನ್ನು ನೋಡುವರು.”
ಇದು ಯೆಹೋವನ ನುಡಿ.
    ಆತನು ಅವುಗಳನ್ನು ನೆರವೇರಿಸುವನು.
13 ಯೆಹೋವನು ಹೇಳುವುದೇನೆಂದರೆ, “ಒಂದು ಸಮಯವು ಬರುವುದು,
ಆಗ ಉಳುವವನು ಕೊಯ್ಯುವವನನ್ನೇ
    ಮೀರಿಸಿ ಮುಂದೆ ಹೋಗುವನು.
ದ್ರಾಕ್ಷಿನೆಡುವವನು ದ್ರಾಕ್ಷಿಯನ್ನು ಕೊಯ್ಯುವನನ್ನೇ
    ಮೀರಿಸಿ ಮುಂದೆ ಹೋಗುವನು.
ಬೆಟ್ಟಗಳಿಂದಲೂ ಪರ್ವತಗಳಿಂದಲೂ
    ಸಿಹಿ ದ್ರಾಕ್ಷಾರಸವು ಹರಿದುಬರುವುದು.
14 ಸೆರೆಯಿಂದ ಬಿಡಿಸಿ ನನ್ನ ಜನರಾದ ಇಸ್ರೇಲನ್ನು
    ಹಿಂದಕ್ಕೆ ಕರೆತರುವೆನು.
ಪಾಳುಬಿದ್ದ ಪಟ್ಟಣಗಳನ್ನು ತಿರುಗಿ ಕಟ್ಟಿ
    ಅದರಲ್ಲಿ ವಾಸಿಸುವರು.
ದ್ರಾಕ್ಷಿತೋಟವನ್ನು ಮಾಡಿ
    ಅದರಿಂದ ಸಿಗುವ ದ್ರಾಕ್ಷಾರಸವನ್ನು ಕುಡಿಯುವರು.
ತೋಟಗಳನ್ನು ಮಾಡಿ
    ಅದರ ಫಲಗಳನ್ನು ಭೋಗಿಸುವರು.
15 ನಾನು ನನ್ನ ಜನರನ್ನು ಅವರ ದೇಶದಲ್ಲಿ ಸ್ಥಾಪಿಸುವೆನು.
    ನಾನು ಕೊಟ್ಟಿರುವ ದೇಶದಿಂದ ಅವರು ಕೀಳಲ್ಪಡುವುದಿಲ್ಲ.”
ನಿಮ್ಮ ದೇವರಾದ ಯೆಹೋವನು ಈ ಸಂಗತಿಗಳನ್ನು ಹೇಳಿದ್ದಾನೆ.

ಲೂಕ 7:31-35

31 “ಈ ಕಾಲದ ಜನರ ಬಗ್ಗೆ ನಾನು ಏನು ಹೇಳಲಿ? ನಾನು ಅವರನ್ನು ಯಾವುದಕ್ಕೆ ಹೋಲಿಸಲಿ? ಅವರು ಯಾರನ್ನು ಹೋಲುತ್ತಾರೆ? 32 ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಿಗೆ ಹೋಲುತ್ತಾರೆ. ಒಂದು ಗುಂಪಿನ ಮಕ್ಕಳು ಇನ್ನೊಂದು ಗುಂಪಿನ ಮಕ್ಕಳನ್ನು ಕರೆದು,

‘ನಾವು ನಿಮಗೋಸ್ಕರ ವಾದ್ಯಬಾರಿಸಿದೆವು,
    ಆದರೆ ನೀವು ಕುಣಿಯಲಿಲ್ಲ;
ನಾವು ದುಃಖದ ಹಾಡನ್ನು ಹಾಡಿದೆವು,
    ಆದರೆ ನೀವು ಅಳಲಿಲ್ಲ’

ಎಂದು ಹೇಳುತ್ತಾರೆ. 33 ಸ್ನಾನಿಕ ಯೋಹಾನನು ಬಂದನು. ಅವನು ಇತರರಂತೆ ತಿನ್ನಲಿಲ್ಲ ಅಥವಾ ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ನೀವು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತೀರಿ. 34 ಮನುಷ್ಯಕುಮಾರನು ಬಂದನು. ಅವನು ಇತರ ಜನರಂತೆ ಊಟಮಾಡುತ್ತಾನೆ ಮತ್ತು ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ನೀವು, ‘ನೋಡಿರಿ! ಅವನೊಬ್ಬ ಹೊಟ್ಟೆಬಾಕ, ಕುಡುಕ! ಸುಂಕವಸೂಲಿಗಾರರು ಮತ್ತು ಇತರ ಕೆಟ್ಟಜನರೇ ಅವನ ಸ್ನೇಹಿತರು!’ ಎನ್ನುತ್ತೀರಿ. 35 ಆದರೆ ಜ್ಞಾನವು ತನ್ನ ಕಾರ್ಯಗಳಿಂದಲೇ ತನ್ನನ್ನು ಸಮರ್ಥಿಸಿಕೊಳ್ಳುವುದು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International