Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 111

111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
    ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
    ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
    ಆತನ ನೀತಿಯು ಶಾಶ್ವತವಾದದ್ದು.
ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
    ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
    ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
ಆತನು ಅನ್ಯಜನಾಂಗಗಳ ದೇಶವನ್ನು
    ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
    ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
ದೇವರ ಆಜ್ಞೆಗಳು ಶಾಶ್ವತವಾಗಿವೆ.
    ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
    ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
    ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.

ಯೆಶಾಯ 25:6-10

ಸೇವಕರಿಗಾಗಿ ದೇವರ ಔತಣ

ಆ ಸಮಯದಲ್ಲಿ, ಸರ್ವಶಕ್ತನಾದ ಯೆಹೋವನು ಎಲ್ಲಾ ಜನರಿಗಾಗಿ ಈ ಪರ್ವತದ ಮೇಲೆ ಔತಣವನ್ನು ಏರ್ಪಡಿಸುವನು. ಅದು ಉತ್ಕೃಷ್ಟವಾದ ದ್ರಾಕ್ಷಾರಸದಿಂದಲೂ ಮೃಷ್ಠಾನ್ನದಿಂದಲೂ ಕೂಡಿರುವದು.

ಆದರೆ ಎಲ್ಲಾ ಜನಾಂಗಗಳನ್ನು ಮತ್ತು ಜನರನ್ನು ಮುಚ್ಚುವ ಒಂದು ಮುಸುಕು ಇದೆ. ಆ ಮುಸುಕು ಯಾವದೆಂದರೆ ಮರಣ. ಆದರೆ ಮರಣವು ಎಂದೆಂದಿಗೂ ನಾಶಮಾಡಲ್ಪಡುವದು. ನನ್ನ ಒಡೆಯನಾಗಿರುವ ಯೆಹೋವನು ಪ್ರತೀ ಮುಖದಲ್ಲಿರುವ ಕಣ್ಣೀರನ್ನು ಒರೆಸುವನು. ಹಿಂದೆ ಆತನ ಜನರೆಲ್ಲಾ ದುಃಖಕ್ಕೆ ಒಳಗಾಗಿದ್ದರು. ಆದರೆ ದೇವರು ಆ ದುಃಖವನ್ನು ಈ ಭೂಮಿಯಿಂದಲೇ ತೆಗೆದುಹಾಕುವನು. ಇವೆಲ್ಲಾ ಯೆಹೋವನು ಹೇಳಿದಂತೆಯೇ ಸಂಭವಿಸುವದು.

ಆ ಸಮಯದಲ್ಲಿ ಜನರು,
    “ನಮ್ಮ ದೇವರು ಇಲ್ಲಿದ್ದಾನೆ.
ಆತನಿಗಾಗಿಯೇ ನಾವು ಕಾಯುತ್ತಿದ್ದೆವು.
    ಆತನು ನಮ್ಮನ್ನು ರಕ್ಷಿಸಲು ಬಂದಿದ್ದಾನೆ.
ನಾವು ನಮ್ಮ ದೇವರಾದ ಯೆಹೋವನಿಗಾಗಿ ಕಾಯುತ್ತಿದ್ದೆವು.
    ಆತನು ನಮ್ಮನ್ನು ರಕ್ಷಿಸುವಾಗ ನಾವು ಹರ್ಷಭರಿತರಾಗಿ ಸಂತೋಷಿಸುವೆವು” ಎಂದು ಹೇಳುವರು.
10 ಏಕೆಂದರೆ ಯೆಹೋವನ ಬಲವು ಈ ಪರ್ವತದಲ್ಲಿದೆ.
    ಮೋವಾಬ್ ಸೋಲಿಸಲ್ಪಡುವದು.
ಯೆಹೋವನು ವೈರಿಯನ್ನು ಹುಲ್ಲಿನಂತೆ ತುಳಿದುಬಿಡುವನು.

ಮಾರ್ಕ 6:35-44

35 ಅಂದು ಬಹಳ ಹೊತ್ತಾಯಿತು. ಯೇಸುವಿನ ಶಿಷ್ಯರು ಆತನ ಬಳಿಗೆ ಬಂದು, “ಈ ಸ್ಥಳದಲ್ಲಿ ಯಾರೂ ವಾಸಿಸುತ್ತಿಲ್ಲ. ಈಗಾಗಲೇ ಬಹಳ ಹೊತ್ತಾಗಿದೆ. 36 ಆದ್ದರಿಂದ ಜನರನ್ನು ಕಳುಹಿಸಿಬಿಡು. ಅವರು ಸುತ್ತಮುತ್ತಲಿರುವ ತೋಟಗಳಿಗೂ ಪಟ್ಟಣಗಳಿಗೂ ಹೋಗಿ ಆಹಾರವನ್ನು ಕೊಂಡುಕೊಳ್ಳಲಿ” ಎಂದು ಹೇಳಿದರು.

37 ಆದರೆ ಯೇಸು, “ನೀವೇ ಅವರಿಗೆ ಊಟ ಕೊಡಿ” ಎಂದು ಉತ್ತರಕೊಟ್ಟನು.

ಶಿಷ್ಯರು ಯೇಸುವಿಗೆ, “ಈ ಜನರಿಗೆಲ್ಲ ಬೇಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರೋಣ! ಅವರಿಗೆ ಬೇಕಾಗುವಷ್ಟು ರೊಟ್ಟಿಯನ್ನು ಕೊಂಡುಕೊಂಡು ಬರಬೇಕಾದರೆ ನಮಗೆ ಇನ್ನೂರು ದಿನಾರಿ ನಾಣ್ಯ[a] ಗಳಾದರೂ ಬೇಕು!” ಎಂದು ಹೇಳಿದರು.

38 ಯೇಸು ಶಿಷ್ಯರಿಗೆ, “ಈಗ ನಿಮ್ಮ ಬಳಿಯಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿ” ಎಂದು ಹೇಳಿದನು.

ಶಿಷ್ಯರು ಹೋಗಿ ರೊಟ್ಟಿಗಳನ್ನು ಎಣಿಸಿ ಬಂದು, “ನಮ್ಮ ಬಳಿ ಐದು ರೊಟ್ಟಿಗಳಿವೆ ಮತ್ತು ಎರಡು ಮೀನುಗಳಿವೆ” ಎಂದು ಹೇಳಿದರು.

39 ಆಗ ಯೇಸು ಶಿಷ್ಯರಿಗೆ, “ಹಸಿರು ಹುಲ್ಲಿನ ಮೇಲೆ ಸಾಲುಸಾಲಾಗಿ ಕುಳಿತುಕೊಳ್ಳಲು ಜನರಿಗೆ ತಿಳಿಸಿ” ಎಂದು ಹೇಳಿದನು. 40 ಅಂತೆಯೇ ಜನರೆಲ್ಲರೂ ಸಾಲುಸಾಲಾಗಿ ಕುಳಿತುಕೊಂಡರು. ಪ್ರತಿಯೊಂದು ಸಾಲಿನಲ್ಲಿಯೂ ಐವತ್ತರಿಂದ ನೂರು ಜನರಿದ್ದರು.

41 ಯೇಸು ಐದು ರೊಟ್ಟಿಗಳನ್ನು ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ, ರೊಟ್ಟಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದನು. ಬಳಿಕ ರೊಟ್ಟಿಯನ್ನು ಮುರಿದು, ಅದನ್ನು ಶಿಷ್ಯರಿಗೆ ಕೊಟ್ಟು ಜನರಿಗೆಲ್ಲ ಹಂಚಲು ತಿಳಿಸಿದನು. ಅಂತೆಯೇ ಎರಡು ಮೀನುಗಳನ್ನು ಮುರಿದು ಜನರಿಗೆ ಹಂಚಬೇಕೆಂದು ಶಿಷ್ಯರಿಗೆ ಕೊಟ್ಟನು.

42 ಜನರೆಲ್ಲರೂ ಊಟಮಾಡಿ ತೃಪ್ತರಾದರು. 43 ಬಳಿಕ ಜನರು ತಿನ್ನಲಾರದೆ ಉಳಿಸಿದ ರೊಟ್ಟಿ ಮತ್ತು ಮೀನುಗಳನ್ನು ಶಿಷ್ಯರು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು. 44 ಅಂದು ಸುಮಾರು ಐದು ಸಾವಿರ ಜನ ಊಟಮಾಡಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International