Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಆಮೋಸ 7:7-15

ತೂಗು ಗುಂಡಿನ ದರ್ಶನ

ಯೆಹೋವನು ಈ ದರ್ಶನವನ್ನು ನನಗೆ ದಯಪಾಲಿಸಿದನು. ಕೈಯಲ್ಲಿ ತೂಗುಗುಂಡನ್ನು ಹಿಡಿದುಕೊಂಡು ಗೋಡೆಯ ಬದಿಯಲ್ಲಿ ನಿಂತಿದ್ದನು. ಆ ಗೋಡೆಯು ನೂಲಿನಿಂದ ಗುರುತು ಮಾಡಲ್ಪಟ್ಟಿತ್ತು. ಆಗ ಯೆಹೋವನು ನನಗೆ, “ಆಮೋಸನೇ, ಏನನ್ನು ನೋಡುತ್ತೀ?” ಎಂದು ಕೇಳಿದನು.

ಅದಕ್ಕೆ ನಾನು, “ನೂಲುಗುಂಡು” ಅಂದೆನು.

ಆಗ ನನ್ನ ಒಡೆಯನು, “ನೋಡು, ನನ್ನ ಜನರಾದ ಇಸ್ರೇಲರ ಮೇಲೆ ನೂಲುಗುಂಡನ್ನು ಹಾಕುವೆನು. ಅವರನ್ನು ನಾನು ಸುಮ್ಮನೆ ಬಿಟ್ಟುಬಿಡುವುದಿಲ್ಲ. ಅವರ ಪಾಪದ ಸ್ಥಳಗಳನ್ನು ನಾನು ತೆಗೆದುಬಿಡುವೆನು. ಇಸಾಕನ ವೇದಿಕೆಗಳೆಲ್ಲಾ ನಾಶವಾಗುವದು. ಇಸ್ರೇಲಿನ ಪವಿತ್ರ ಸ್ಥಳಗಳೆಲ್ಲಾ ಬಂಡೆಯ ರಾಶಿಯಾಗಿ ಮಾರ್ಪಡುವವು. ಯಾರೊಬ್ಬಾಮನ ಕುಟುಂಬದ ಮೇಲೆ ಆಕ್ರಮಣ ಮಾಡಿ ಅವರನ್ನು ಸಂಹರಿಸುವೆನು” ಎಂದು ಹೇಳಿದನು.

ಆಮೋಸನನ್ನು ಪ್ರವಾದಿಸದಂತೆ ಅಮಚ್ಯನು ಪ್ರಯತ್ನಿಸಿದ್ದು

10 ಬೇತೇಲಿನ ಯಾಜಕನಾದ ಅಮಚ್ಯನು ಇಸ್ರೇಲಿನ ಅರಸನಾದ ಯಾರೊಬ್ಬಾಮನಿಗೆ ಈ ಪತ್ರವನ್ನು ಕಳುಹಿಸಿದನು. “ನಿನಗೆ ವಿರುದ್ಧವಾಗಿ ಆಮೋಸನು ಯೋಜನೆಗಳನ್ನು ಮಾಡುತ್ತಿದ್ದಾನೆ. ಇಸ್ರೇಲಿನ ಜನರು ನಿನಗೆ ವಿರುದ್ಧವಾಗಿ ಯುದ್ಧಮಾಡುವಂತೆ ಪ್ರಯತ್ನಿಸುತ್ತಾನೆ. ಅವನು ಎಷ್ಟೆಲ್ಲಾ ಮಾತಾಡುತ್ತಾನೆಂದರೆ, ಈ ದೇಶವು ಅವನ ಮಾತುಗಳನ್ನು ತುಂಬಲು ಸಾಧ್ಯವಿಲ್ಲ. 11 ಅಮೋಸನು, ‘ಯಾರೊಬ್ಬಾಮನು ಕತ್ತಿಯಿಂದ ಸಂಹರಿಸಲ್ಪಡುವನು ಮತ್ತು ಇಸ್ರೇಲಿನ ಜನರು ಸೆರೆಹಿಡಿಯಲ್ಪಟ್ಟವರಾಗಿ ಪರದೇಶಕ್ಕೆ ಒಯ್ಯಲ್ಪಡುವರು’” ಎಂದು ಹೇಳಿದ್ದಾನೆ.

12 ಅಮಚ್ಯನು ಆಮೋಸನಿಗೆ ಹೇಳಿದ್ದೇನೆಂದರೆ, “ಭವಿಷ್ಯವಾದಿಯೇ, ನೀನು ಯೆಹೂದಕ್ಕೆ ಹೋಗಿ ಅಲ್ಲಿ ನಿನ್ನ ಹೊಟ್ಟೆ ತುಂಬಿಸಿಕೊ. ನಿನ್ನ ಪ್ರಸಂಗವನ್ನು ಅಲ್ಲಿಯೇ ಮಾಡು. 13 ಬೇತೇಲಿನಲ್ಲಿ ಇನ್ನು ನೀನು ಪ್ರವಾದಿಸುವದು ಬೇಡ. ಇದು ಯಾರೊಬ್ಬಾಮನ ಪವಿತ್ರಸ್ಥಳ. ಇದು ಇಸ್ರೇಲಿನ ದೇವಾಲಯ” ಎಂದು ಹೇಳಿದನು.

14 ಅದಕ್ಕೆ ಅಮೋಸನು ಅಮಚ್ಯನಿಗೆ, “ಪ್ರವಾದಿಸುವದು ನನ್ನ ಕೆಲಸವಲ್ಲ. ಅಲ್ಲದೆ ನಾನು ಪ್ರವಾದಿಗಳ ಕುಟುಂಬಕ್ಕೂ ಸೇರಿದವನಲ್ಲ. ನಾನು ದನ ಮೇಯಿಸುವವನೂ, ಅತ್ತಿ ಮರಗಳನ್ನು ಹತ್ತಿ ಹಣ್ಣು ಕೀಳುವವನೂ ಆಗಿದ್ದೇನೆ. 15 ನಾನು ಕುರಿಕಾಯುತ್ತಿರುವಾಗ ಯೆಹೋವನು ನನ್ನನ್ನು ಕುರಿಗಳ ಹಿಂದೆ ಹೋಗಬೇಡ ಎಂದು ಕರೆದನು. ಆತನು ನನಗೆ, ‘ನನ್ನ ಜನರಾದ ಇಸ್ರೇಲರ ಬಳಿಗೆ ಹೋಗಿ ಪ್ರವಾದಿಸು’ ಎಂದು ಹೇಳಿದನು.

ಕೀರ್ತನೆಗಳು 85:8-13

ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
    ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
    ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
    ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
    ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
    ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
    ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
    ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.

ಎಫೆಸದವರಿಗೆ 1:3-14

ಕ್ರಿಸ್ತನಲ್ಲಿರುವ ಆತ್ಮಿಕ ಆಶೀರ್ವಾದಗಳು

ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ಪರಲೋಕದಲ್ಲಿರುವ ಪ್ರತಿಯೊಂದು ಆಶೀರ್ವಾದಗಳನ್ನು ದೇವರು ನಮಗೆ ಕ್ರಿಸ್ತನಲ್ಲಿ ದಯಪಾಲಿಸಿದ್ದಾನೆ. ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡನು. ತನ್ನ ಸನ್ನಿಧಿಯಲ್ಲಿ ನಾವು ಪರಿಶುದ್ಧರೂ ನಿರ್ದೋಷಿಗಳೂ ಆಗಿರಬೇಕೆಂಬುದು ಆತನ ಉದ್ದೇಶವಾಗಿತ್ತು. ನಮ್ಮ ಮೇಲಿನ ಪ್ರೀತಿಯಿಂದ ಕ್ರಿಸ್ತ ಯೇಸುವಿನ ಮೂಲಕ ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ಆತನು ಆಗಲೇ ನಿರ್ಧರಿಸಿದ್ದನು. ಅದು ಆತನ ಚಿತ್ತವಾಗಿತ್ತು ಮತ್ತು ಆತನಿಗೆ ಮೆಚ್ಚಿಕೆಕರವಾಗಿತ್ತು. ದೇವರ ಅದ್ಭುತವಾದ ಕೃಪೆಯಿಂದಾದ ಈ ನಿರ್ಧಾರವು ಆತನಿಗೆ ಸ್ತೋತ್ರವನ್ನು ಉಂಟುಮಾಡುತ್ತದೆ. ದೇವರು ಆ ಕೃಪೆಯನ್ನು ತನ್ನ ಪ್ರಿಯನಾದ ಕ್ರಿಸ್ತನಲ್ಲಿ ನಮಗೆ ಉಚಿತವಾಗಿ ದಯಪಾಲಿಸಿದ್ದಾನೆ.

ಕ್ರಿಸ್ತನ ರಕ್ತದ ಮೂಲಕವಾಗಿ ನಮಗೆ ಬಿಡುಗಡೆಯಾಯಿತು. ದೇವರ ಮಹಾ ಕೃಪೆಯಿಂದ ನಮ್ಮ ಪಾಪಗಳು ಕ್ಷಮಿಸಲ್ಪಟ್ಟವು. ದೇವರು ನಮಗೆ ಆ ಕೃಪೆಯನ್ನು ಸಂಪೂರ್ಣವಾಗಿಯೂ ಉಚಿತವಾಗಿಯೂ ತೋರಿದನು. ದೇವರು ತನ್ನ ರಹಸ್ಯವಾದ ಯೋಜನೆಯನ್ನು ನಮಗೆ ತಿಳಿಸುವುದರ ಮೂಲಕ ನಮಗೆ ಸಂಪೂರ್ಣವಾದ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಟ್ಟನು. ಇದು ದೇವರ ಚಿತ್ತವಾಗಿತ್ತು. ಕ್ರಿಸ್ತನ ಮೂಲಕ ಇದನ್ನು ನೆರವೇರಿಸಲು ಆತನು ಯೋಜನೆ ಮಾಡಿದನು. 10 ಕಾಲವು ಪರಿಪೂರ್ಣವಾದಾಗ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದುಗೂಡಿಸಿ ಆತನಿಗೆ ಅಧೀನ ಪಡಿಸಬೇಕೆಂಬುದೇ ದೇವರ ಯೋಜನೆಯಾಗಿತ್ತು.

11 ನಾವು ದೇವರ ಮಕ್ಕಳಾಗಿರಬೇಕೆಂದು ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಳ್ಳಲಾಯಿತು. ನಾವು ತನ್ನ ಮಕ್ಕಳಾಗಿರಬೇಕೆಂದು ದೇವರು ತನ್ನ ಚಿತ್ತಾನುಸಾರವಾಗಿ ಮೊದಲೇ ಯೋಜನೆ ಮಾಡಿದ್ದನು. ತನ್ನ ನಿರ್ಧಾರ ಮತ್ತು ಇಷ್ಟಗಳಿಗನುಸಾರವಾಗಿ ಪ್ರತಿಯೊಂದನ್ನು ನೆರವೇರಿಸುವಾತನು ದೇವರೇ. 12 ಕ್ರಿಸ್ತನನ್ನು ನಿರೀಕ್ಷಿಸಿಕೊಂಡಿರುವವರಲ್ಲಿ ನಾವೇ ಮೊದಲಿಗರು. ದೇವರ ಮಹಿಮೆಗೆ ಸ್ತೋತ್ರವನ್ನು ಉಂಟುಮಾಡಬೇಕೆಂದೇ ನಮ್ಮನ್ನು ಆರಿಸಿಕೊಳ್ಳಲಾಯಿತು. 13 ಇದು ನಿಮಗೂ ಅನ್ವಯಿಸುತ್ತದೆ. ನೀವು ಸತ್ಯ ಬೋಧನೆಯ ಬಗ್ಗೆ ಅಂದರೆ ನಿಮ್ಮ ರಕ್ಷಣೆಯ ಕುರಿತಾದ ಸುವಾರ್ತೆಯ ಬಗ್ಗೆ ಕೇಳಿದಾಗ ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರಿ. ದೇವರು ತನ್ನ ವಾಗ್ದಾನಕ್ಕನುಸಾರವಾಗಿ ನಿಮಗೆ ಪವಿತ್ರಾತ್ಮನನ್ನು ದಯಪಾಲಿಸುವುದರ ಮೂಲಕ ನಿಮ್ಮ ಮೇಲೆ ತನ್ನ ವಿಶೇಷವಾದ ಮುದ್ರೆಯನ್ನು ಹಾಕಿದನು. 14 ದೇವರು ತನ್ನ ಜನರಿಗೆ ವಾಗ್ದಾನ ಮಾಡಿದವುಗಳನ್ನು ನಾವು ಹೊಂದಿಕೊಳ್ಳುತ್ತೇವೆ ಎಂಬುದಕ್ಕೆ ಆ ಪವಿತ್ರಾತ್ಮನೇ ಪ್ರಮಾಣವಾಗಿದ್ದಾನೆ. ದೇವರು ಸಂಪಾದಿಸಿಕೊಂಡ ಜನರಿಗೆ ಇದು ಸಂಪೂರ್ಣ ವಿಮೋಚನೆಯನ್ನು ಉಂಟುಮಾಡುತ್ತದೆ. ದೇವರ ಮಹಿಮೆಗೆ ಸ್ತೋತ್ರವಾಗ ಬೇಕೆಂಬುದೇ ಇದೆಲ್ಲದರ ಉದ್ದೇಶವಾಗಿದೆ.

ಮಾರ್ಕ 6:14-29

ಯೇಸುವಿನ ಕುರಿತು ಹೆರೋದನ ಅಭಿಪ್ರಾಯ

(ಮತ್ತಾಯ 14:1-12; ಲೂಕ 9:7-9)

14 ಯೇಸು ಪ್ರಸಿದ್ಧನಾಗಿದ್ದುದರಿಂದ ರಾಜನಾದ ಹೆರೋದನಿಗೆ ಯೇಸುವಿನ ವಿಷಯ ತಿಳಿಯಿತು. ಕೆಲವು ಜನರು, “ಇವನು (ಯೇಸು) ಸ್ನಾನಿಕನಾದ ಯೋಹಾನ. ಇವನು ಮತ್ತೆ ಬದುಕಿಬಂದಿದ್ದಾನೆ. ಆದಕಾರಣವೇ ಈ ಅದ್ಭುತಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿದರು.

15 ಇನ್ನು ಕೆಲವರು, “ಇವನು ಎಲೀಯ”ನೆಂದು ಹೇಳಿದರು.

ಇತರ ಜನರು, “ಯೇಸು ಒಬ್ಬ ಪ್ರವಾದಿ. ಬಹುಕಾಲದ ಹಿಂದೆ ಜೀವಿಸಿದ್ದ ಪ್ರವಾದಿಗಳಂತೆ ಇವನೂ ಒಬ್ಬನು” ಎಂದು ಹೇಳಿದರು.

16 ಜನರು ಯೇಸುವಿನ ಬಗ್ಗೆ ಹೇಳುತ್ತಿದ್ದ ಈ ಮಾತುಗಳನ್ನೆಲ್ಲಾ ಕೇಳಿದ ಹೆರೋದನು, “ನಾನು ಶಿರಚ್ಛೇದನ ಮಾಡಿಸಿದ ಯೋಹಾನನು ಈಗ ಮತ್ತೆ ಬದುಕಿಬಂದಿದ್ದಾನೆ!” ಎಂದು ಹೇಳಿದನು.

ಸ್ನಾನಿಕ ಯೋಹಾನನು ಕೊಲ್ಲಲ್ಪಟ್ಟದ್ದರ ಬಗ್ಗೆ

17 ಯೋಹಾನನನ್ನು ಬಂಧಿಸಲು ತನ್ನ ಸೈನಿಕರಿಗೆ ಹೆರೋದನೇ ಆಜ್ಞಾಪಿಸಿದ್ದನು. ಅಂತೆಯೇ ಅವರು ಯೋಹಾನನನ್ನು ಸೆರೆಯಲ್ಲಿ ಹಾಕಿದ್ದರು. ಹೆರೋದನು ತನ್ನ ಪತ್ನಿಯಾಗಿ ಇಟ್ಟುಕೊಂಡಿದ್ದ ಹೆರೋದ್ಯಳ ನಿಮಿತ್ತ ಹೀಗೆ ಮಾಡಿದ್ದನು. ಹೆರೋದ್ಯಳು ಹೆರೋದನ ಸಹೋದರನಾದ ಫಿಲಿಪ್ಪನ ಪತ್ನಿ. 18 ಯೋಹಾನನು ಹೆರೋದನಿಗೆ, “ನೀನು ನಿನ್ನ ಅಣ್ಣನ ಪತ್ನಿಯನ್ನು ಇಟ್ಟುಕೊಂಡಿರುವುದು ಸರಿಯಲ್ಲ” ಎಂದು ಹೇಳುತ್ತಿದ್ದನು. 19 ಆದ್ದರಿಂದ ಹೆರೋದ್ಯಳು ಯೋಹಾನನನ್ನು ದ್ವೇಷಿಸಲಾರಂಭಿಸಿ ಅವನನ್ನು ಕೊಲ್ಲಿಸಬೇಕೆಂದಿದ್ದಳು. 20 ಆದರೆ ಆಕೆಗೆ ಸಾಧ್ಯವಾಗಲಿಲ್ಲ. ಹೆರೋದನು ಯೋಹಾನನನ್ನು ಕೊಲ್ಲಿಸಲು ಭಯಪಟ್ಟನು. ಯೋಹಾನನನ್ನು ಒಳ್ಳೆಯವನೆಂದೂ ಪವಿತ್ರನೆಂದೂ ಜನರೆಲ್ಲರು ನಂಬಿದ್ದಾರೆಂಬುದು ಹೆರೋದನಿಗೆ ತಿಳಿದಿತ್ತು. ಆದ್ದರಿಂದ ಹೆರೋದನು ಯೋಹಾನನನ್ನು ರಕ್ಷಿಸಿದನು. ಹೆರೋದನು ಯೋಹಾನನ ಉಪದೇಶವನ್ನು ಕೇಳಿದಾಗಲೆಲ್ಲಾ ಗಲಿಬಿಲಿಗೊಳ್ಳುತ್ತಿದ್ದನು. ಆದರೂ ಅವನ ಉಪದೇಶವನ್ನು ಸಂತೋಷದಿಂದ ಕೇಳುತ್ತಿದ್ದನು.

21 ಒಮ್ಮೆ ಯೋಹಾನನನ್ನು ಮರಣಕ್ಕೆ ಈಡುಮಾಡುವ ಸುಸಮಯ ಹೆರೋದ್ಯಳಿಗೆ ದೊರೆಯಿತು. ಅಂದು ಹೆರೋದನ ಹುಟ್ಟುಹಬ್ಬದ ದಿನವಾಗಿತ್ತು. ಹೆರೋದನು ರಾಜಾಧಿಕಾರಿಗಳಿಗೂ ಸೇನಾಧಿಪತಿಗಳಿಗೂ ಮತ್ತು ಗಲಿಲಾಯದ ಪ್ರಮುಖರಿಗೂ ಒಂದು ಔತಣಕೂಟವನ್ನು ಏರ್ಪಡಿಸಿದನು. 22 ಹೆರೋದ್ಯಳ ಮಗಳು ಈ ಔತಣಕೂಟಕ್ಕೆ ಬಂದು ನರ್ತಿಸಿದಳು. ಹೆರೋದನಿಗೂ ಮತ್ತು ಅವನ ಜೊತೆಯಲ್ಲಿ ಊಟಮಾಡುತ್ತಿದ್ದವರಿಗೂ ಬಹಳ ಸಂತೋಷವಾಯಿತು.

ಆಗ ರಾಜ ಹೆರೋದನು ಆ ಹುಡುಗಿಗೆ, “ನಿನಗೆ ಏನು ಬೇಕಾದರೂ ಕೇಳಿಕೊ, ನಾನು ನಿನಗೆ ಕೊಡುತ್ತೇನೆ. 23 ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಕೊಡುತ್ತೇನೆ” ಎಂದು ಪ್ರಮಾಣಮಾಡಿದನು.

24 ಆ ಹುಡುಗಿಯು ತನ್ನ ತಾಯಿಯ ಬಳಿಗೆ ಹೋಗಿ, “ನಾನು ಏನ್ನನ್ನು ಕೇಳಿಕೊಳ್ಳಲಿ?” ಎಂದು ಕೇಳಿದಳು.

ಅವಳ ತಾಯಿ, “ಸ್ನಾನಿಕ ಯೋಹಾನನ ತಲೆಯನ್ನು ಕೇಳಿಕೊ” ಎಂದು ಹೇಳಿಕೊಟ್ಟಳು.

25 ಆ ಹುಡುಗಿ ಬೇಗನೆ ರಾಜನ ಬಳಿಗೆ ಬಂದು, “ಸ್ನಾನಿಕ ಯೋಹಾನನ ತಲೆಯನ್ನು ಒಂದು ತಟ್ಟೆಯಲ್ಲಿ ಈಗಲೇ ತರಿಸಿಕೊಡಿ, ಇದೇ ನನ್ನ ಬೇಡಿಕೆ” ಎಂದು ಹೇಳಿದಳು.

26 ರಾಜ ಹೆರೋದನು ಬಹಳ ವ್ಯಸನಗೊಂಡನು. ಆದರೆ ಅವನು ಆ ಹುಡುಗಿಗೆ ಏನು ಬೇಕಾದರೂ ಕೊಡುವೆನೆಂದು ಪ್ರಮಾಣ ಮಾಡಿದ್ದನು. ಅಲ್ಲಿ ಹೆರೋದನ ಸಂಗಡ ಊಟಮಾಡುತ್ತಿದ್ದ ಜನರು ಆ ಪ್ರಮಾಣವನ್ನು ಕೇಳಿಸಿಕೊಂಡಿದ್ದರು. ಆದ್ದರಿಂದ ಅವಳು ಕೇಳಿದ್ದನ್ನು ನಿರಾಕರಿಸಲು ಹೆರೋದನು ಇಚ್ಛಿಸಲಿಲ್ಲ. 27 ಆದ್ದರಿಂದ ರಾಜನು ಯೋಹಾನನ ತಲೆಯನ್ನು ಕತ್ತರಿಸಿ ತರಲು ಒಬ್ಬ ಸೈನಿಕನನ್ನು ಕಳುಹಿಸಿದನು. ಸೈನಿಕನು ಸೆರೆಮನೆಗೆ ಹೋಗಿ ಯೋಹಾನನ ತಲೆಯನ್ನು ಕತ್ತರಿಸಿ, 28 ಅದನ್ನು ಒಂದು ತಟ್ಟೆಯ ಮೇಲಿಟ್ಟು ತಂದು ಆ ಹುಡುಗಿಗೆ ಕೊಟ್ಟನು. ಅವಳು ಆ ತಲೆಯನ್ನು ತನ್ನ ತಾಯಿಗೆ ಕೊಟ್ಟಳು. 29 ನಡೆದ ಈ ಸಂಗತಿಯು ಯೋಹಾನನ ಶಿಷ್ಯರಿಗೆ ತಿಳಿಯಿತು. ಅವರು ಬಂದು, ಯೋಹಾನನ ದೇಹವನ್ನು ತೆಗೆದುಕೊಂಡು ಹೋಗಿ ಒಂದು ಸಮಾಧಿಯಲ್ಲಿಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International