Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 74

ರಚನೆಗಾರ: ಆಸಾಫ.

74 ದೇವರೇ, ನಮ್ಮನ್ನು ಶಾಶ್ವತವಾಗಿ ಕೈಬಿಟ್ಟಿರುವೆಯಾ?
    ನಿನ್ನ ಜನರ ಮೇಲೆ ಇನ್ನೂ ಕೋಪದಿಂದಿರುವೆಯಾ?
ಬಹುಕಾಲದ ಹಿಂದೆ ನೀನು ಕೊಂಡುಕೊಂಡ ನಿನ್ನ ಜನರನ್ನು ಜ್ಞಾಪಿಸಿಕೊ.
    ನೀನು ನಮ್ಮನ್ನು ರಕ್ಷಿಸಿದೆ. ನಾವು ನಿನ್ನವರೇ.
ನೀನು ವಾಸಿಸಿದ ಚೀಯೋನ್ ಪರ್ವತವನ್ನು ಜ್ಞಾಪಿಸಿಕೊ.
ಬಹುಕಾಲದಿಂದ ಹಾಳುಬಿದ್ದಿರುವ ಕಟ್ಟಡಗಳ ಬಳಿಗೆ ಆಗಮಿಸು.
    ಶತ್ರುವು ನಾಶಮಾಡಿದ ನಿನ್ನ ಪವಿತ್ರ ಸ್ಥಳಕ್ಕೆ ಹಿಂತಿರುಗಿ ಬಾ.

ಆಲಯದಲ್ಲಿ ಶತ್ರುಗಳು ಯುದ್ಧಾರ್ಭಟ ಮಾಡಿದರು.
    ಆಲಯದಲ್ಲಿ ತಮ್ಮ ಧ್ವಜಾರೋಹಣ ಮಾಡಿ ತಮ್ಮ ಜಯವನ್ನು ಸೂಚಿಸಿದರು.
ಶತ್ರು ಸೈನಿಕರಾದರೋ ಕಳೆಗುದ್ದಲಿಯಿಂದ
    ಕಳೆ ಕೀಳುತ್ತಿರುವ ಜನರಂತಿದ್ದಾರೆ.
ನಿನ್ನ ಆಲಯದ ಕೆತ್ತನೆ ಕೆಲಸಗಳನ್ನು ಅವರು ಕೊಡಲಿಗಳಿಂದಲೂ
    ಮಚ್ಚುಗತ್ತಿಗಳಿಂದಲೂ ಕತ್ತರಿಸಿ ಹಾಕಿದರು.
ಆ ಸೈನಿಕರು ನಿನ್ನ ಪವಿತ್ರ ಸ್ಥಳವನ್ನು ಸುಟ್ಟು ನೆಲಸಮಮಾಡಿದರು.
    ಆ ಆಲಯವು ನಿನ್ನ ನಾಮ ಘನತೆಗಾಗಿ ಕಟ್ಟಲ್ಪಟ್ಟಿತ್ತಲ್ಲಾ!
ನಮ್ಮನ್ನು ಸಂಪೂರ್ಣವಾಗಿ ಜಜ್ಜಿಹಾಕಲು ಶತ್ರುಗಳು ನಿರ್ಧರಿಸಿ
    ದೇಶದ ಪ್ರತಿಯೊಂದು ಪವಿತ್ರ ಸ್ಥಳವನ್ನೂ ಸುಟ್ಟುಹಾಕಿದರು.
ನಮ್ಮ ಯಾವ ಚಿಹ್ನೆಗಳೂ ನಮಗೆ ಕಾಣಲಿಲ್ಲ.
    ಪ್ರವಾದಿಗಳಲ್ಲಿ ಯಾರೂ ಉಳಿದಿಲ್ಲ.
    ಯಾರಿಗೂ ದಿಕ್ಕೇ ತೋಚುತ್ತಿಲ್ಲ.
10 ದೇವರೇ, ಇನ್ನೆಷ್ಟರವರೆಗೆ ಶತ್ರುಗಳು ನಮ್ಮನ್ನು ಗೇಲಿಮಾಡುತ್ತಿರಬೇಕು?
    ನಿನ್ನ ಹೆಸರಿಗೆ ಅವರು ಅವಮಾನ ಮಾಡುತ್ತಲೇ ಇರಬೇಕೇ?
11 ನೀನು ನಮ್ಮನ್ನು ಬಹು ಕಠಿಣವಾಗಿ ದಂಡಿಸಿದ್ದೇಕೆ?
    ನಿನ್ನ ಮಹಾಶಕ್ತಿಯಿಂದ ನಮ್ಮನ್ನು ಸಂಪೂರ್ಣವಾಗಿ ನಾಶಮಾಡಿರುವಿಯಲ್ಲಾ!
12 ದೇವರೇ, ಬಹುಕಾಲದಿಂದ ನೀನು ನಮ್ಮರಾಜ.
    ಈ ದೇಶದಲ್ಲಿ ಅನೇಕ ಯುದ್ಧಗಳನ್ನು ಗೆಲ್ಲಲು ನೀನು ನಮಗೆ ಸಹಾಯಮಾಡಿದೆ.
13 ಮಹಾಶಕ್ತಿಯಿಂದ ಕೆಂಪು ಸಮುದ್ರವನ್ನು ಇಬ್ಭಾಗ ಮಾಡಿದಾತನು ನೀನೇ.
    ಸಮುದ್ರದಲ್ಲಿ ಮಹಾ ತಿಮಿಂಗಲಗಳ ತಲೆಗಳನ್ನು ಜಜ್ಜಿ ಹಾಕಿದಾತನು ನೀನೇ.
14 ಲಿವ್ಯಾತಾನನ ತಲೆಗಳನ್ನು ಜಜ್ಜಿಹಾಕಿ ಪ್ರಾಣಿಗಳಿಗೆ ಆಹಾರವನ್ನಾಗಿ ಮಾಡಿದಾತನು ನೀನೇ.
15 ತೊರೆಗಳೂ ನದಿಗಳೂ ಹರಿಯುವಂತೆ ಮಾಡುವಾತನು ನೀನೇ.
    ನದಿಗಳನ್ನು ಒಣಗಿಸುವಾತನೂ ನೀನೇ.
16 ನೀನು ಹಗಲನ್ನೂ ರಾತ್ರಿಯನ್ನೂ ನಿನ್ನ ಹತೋಟಿಯಲ್ಲಿಟ್ಟುಕೊಂಡಿರುವೆ.
    ಸೂರ್ಯನನ್ನೂ ಚಂದ್ರನನ್ನೂ ಸೃಷ್ಟಿಮಾಡಿದಾತನು ನೀನೇ.
17 ಭೂಮಿಯ ಮೇಲೆ ಮೇರೆಗಳನ್ನು ಹಾಕಿರುವಾತನು ನೀನೇ.
    ಬೇಸಿಗೆಕಾಲವನ್ನೂ ಚಳಿಗಾಲವನ್ನೂ ನಿರ್ಮಿಸಿದಾತನು ನೀನೇ.
18 ದೇವರೇ, ಇವುಗಳನ್ನೆಲ್ಲಾ ಜ್ಞಾಪಿಸಿಕೊ.
    ವೈರಿಯು ನಿನಗೆ ಮಾಡಿದ ಅವಮಾನವನ್ನು ನೆನಸಿಕೊ!
    ಆ ಮೂರ್ಖರು ನಿನ್ನ ನಾಮವನ್ನು ದ್ವೇಷಿಸುತ್ತಾರೆ.
19 ದೇವರೇ, ನಿನ್ನ ಪಾರಿವಾಳವನ್ನು ಆ ದುಷ್ಟ ಪ್ರಾಣಿಗಳು ತೆಗೆದುಕೊಳ್ಳದಿರಲಿ.
    ನಿನ್ನ ಬಡಜನರನ್ನು ಮರೆತುಬಿಡಬೇಡ.
20 ನಿನ್ನ ಒಡಂಬಡಿಕೆಯನ್ನು ಜ್ಞಾಪಿಸಿಕೊ.
    ಈ ದೇಶದ ಕತ್ತಲೆಯ ಸ್ಥಳಗಳಲ್ಲೆಲ್ಲಾ ಹಿಂಸೆಯೂ ತುಂಬಿಕೊಂಡಿದೆ.
21 ದೇವರೇ, ನಿನ್ನ ಜನರಿಗೆ ಅವಮಾನವಾಗಿದೆ.
    ಅವರಿಗೆ ಕೇಡಾಗಲು ಬಿಡಬೇಡ.
    ನಿನ್ನ ಬಡಜನರೂ ನಿಸ್ಸಹಾಯಕರೂ ನಿನ್ನನ್ನು ಕೊಂಡಾಡಲಿ.
22 ದೇವರೇ, ಎದ್ದು ಹೋರಾಡು!
    ನಿನಗೆ ಸವಾಲೊಡ್ಡಿದ ಆ ನಿಂದಕರನ್ನು ಜ್ಞಾಪಿಸಿಕೊ!
23 ನಿನ್ನ ವೈರಿಗಳ ಆರ್ಭಟವನ್ನು ಮರೆತುಬಿಡಬೇಡ.
    ಅವರು ನಿನಗೆ ಪದೇಪದೇ ಅವಮಾನಮಾಡಿದರು.

1 ರಾಜರುಗಳು 18:17-40

17 ಅಹಾಬನು ಎಲೀಯನನ್ನು ಕಂಡು, “ಇಸ್ರೇಲಿಗೆ ತೊಂದರೆ ಕೊಡುವವನು ನೀನೇ ಅಲ್ಲವೇ?” ಎಂದನು.

18 ಎಲೀಯನು, “ಇಸ್ರೇಲಿನ ತೊಂದರೆಗೆ ನಾನು ಕಾರಣನಲ್ಲ. ನೀನು ಮತ್ತು ನಿನ್ನ ತಂದೆಯ ಕುಟುಂಬವು ಈ ತೊಂದರೆಗಳಿಗೆಲ್ಲ ಕಾರಣ. ಯೆಹೋವನ ಆಜ್ಞೆಗಳಿಗೆ ವಿಧೇಯನಾಗದೆ ಸುಳ್ಳುದೇವರುಗಳನ್ನು ಅನುಸರಿಸತೊಡಗಿದ್ದರಿಂದ ಆ ತೊಂದರೆಗಳಿಗೆಲ್ಲಾ ನೀನೇ ಕಾರಣನಾಗಿರುವೆ. 19 ಈಗ ಕರ್ಮೆಲ್ ಬೆಟ್ಟದ ಮೇಲೆ ನನ್ನನ್ನು ಭೇಟಿಮಾಡಲು ಎಲ್ಲಾ ಇಸ್ರೇಲರಿಗೆ ತಿಳಿಸು. ಬಾಳನ ನಾನೂರೈವತ್ತು ಮಂದಿ ಪ್ರವಾದಿಗಳನ್ನು ಆ ಸ್ಥಳಕ್ಕೆ ಕರೆದುಕೊಂಡು ಬಾ. ಸುಳ್ಳುದೇವತೆಯಾದ ಅಶೇರಳ ನಾನೂರು ಮಂದಿ ಪ್ರವಾದಿಗಳನ್ನೂ ಕರೆದುಕೊಂಡು ಬಾ. ಆ ಪ್ರವಾದಿಗಳನ್ನು ರಾಣಿಯಾದ ಈಜೆಬೆಲಳು ಪೋಷಣೆ ಮಾಡುತ್ತಿದ್ದಾಳೆ” ಎಂದು ಹೇಳಿದನು.

20 ಇಸ್ರೇಲರೆಲ್ಲರನ್ನು ಮತ್ತು ಆ ಪ್ರವಾದಿಗಳನ್ನು ಕರ್ಮೆಲ್ ಬೆಟ್ಟಕ್ಕೆ ಅಹಾಬನು ಕರೆಸಿದನು. 21 ಜನರೆಲ್ಲರ ಹತ್ತಿರಕ್ಕೆ ಎಲೀಯನು ಬಂದು ಅವರಿಗೆ, “ನೀವು ಯಾರನ್ನು ಹಿಂಬಾಲಿಸಬೇಕೆಂಬುದನ್ನು ಯಾವಾಗ ತೀರ್ಮಾನಿಸುತ್ತೀರಿ? ಯೆಹೋವನು ನಿಜವಾದ ದೇವರಾಗಿದ್ದರೆ, ನೀವು ಆತನನ್ನು ಹಿಂಬಾಲಿಸಬೇಕು; ಬಾಳನೇ ನಿಜವಾದ ದೇವರಾಗಿದ್ದರೆ, ನೀವು ಅವನನ್ನೇ ಹಿಂಬಾಲಿಸಬೇಕು” ಎಂದನು.

ಜನರು ಏನನ್ನೂ ಹೇಳಲಿಲ್ಲ. 22 ಎಲೀಯನು, “ಯೆಹೋವನ ಪ್ರವಾದಿಯಾಗಿ ನಾನೊಬ್ಬನು ಮಾತ್ರ ಇಲ್ಲಿದ್ದೇನೆ. ಆದರೆ ಇಲ್ಲಿ ನಾನೂರೈವತ್ತು ಮಂದಿ ಬಾಳನ ಪ್ರವಾದಿಗಳಿದ್ದಾರೆ. 23 ಎರಡು ಹೋರಿಗಳನ್ನು ತನ್ನಿ. ಬಾಳನ ಪ್ರವಾದಿಗಳು ಒಂದು ಹೋರಿಯನ್ನು ತೆಗೆದುಕೊಳ್ಳಲಿ. ಅವರು ಅದನ್ನು ಕೊಂದು, ತುಂಡುತುಂಡಾಗಿ ಕತ್ತರಿಸಲಿ. ನಂತರ ಅವರು ಆ ಮಾಂಸವನ್ನು ಸೌದೆಯ ಮೇಲಿಡಲಿ. ಆದರೆ ಬೆಂಕಿಯನ್ನು ಹೊತ್ತಿಸುವುದು ಬೇಡ. ಆಗ ನಾನು ಮತ್ತೊಂದು ಹೋರಿಯನ್ನು ಅವರಂತೆಯೇ ಕತ್ತರಿಸುವೆನು. ನಾನೂ ಬೆಂಕಿಯನ್ನು ಹೊತ್ತಿಸುವುದಿಲ್ಲ. 24 ಬಾಳನ ಪ್ರವಾದಿಗಳಾದ ನೀವು ನಿಮ್ಮ ದೇವರನ್ನು ಪ್ರಾರ್ಥಿಸಿ. ನಾನು ಯೆಹೋವನನ್ನು ಪ್ರಾರ್ಥಿಸುತ್ತೇನೆ. ನಮ್ಮಲ್ಲಿ ಯಾರ ಪ್ರಾರ್ಥನೆಗೆ ಉತ್ತರವಾಗಿ ದೇವರು ಸೌದೆಯನ್ನು ಉರಿಯುವಂತೆ ಮಾಡುತ್ತಾನೋ ಆತನೇ ನಿಜವಾದ ದೇವರು” ಎಂದು ಹೇಳಿದನು.

ಜನರೆಲ್ಲರೂ ಇದು ಒಳ್ಳೆಯ ಆಲೋಚನೆಯೆಂದು ಒಪ್ಪಿಕೊಂಡರು.

25 ನಂತರ ಎಲೀಯನು ಬಾಳನ ಪ್ರವಾದಿಗಳಿಗೆ, “ನಿಮ್ಮಲ್ಲಿ ಬಹು ಜನರು ಇರುವುದರಿಂದ ಮೊದಲು ನೀವೇ ಹೋಗಿ ನಿಮ್ಮ ಹೋರಿಯನ್ನು ಆರಿಸಿಕೊಂಡು ಅದನ್ನು ಸಿದ್ಧಪಡಿಸಿ. ನಿಮ್ಮ ದೇವರಿಗೆ ಪ್ರಾರ್ಥಿಸಿ. ಆದರೆ ನೀವು ಬೆಂಕಿಯನ್ನು ಹೊತ್ತಿಸಬೇಡಿ” ಎಂದು ಹೇಳಿದನು.

26 ಪ್ರವಾದಿಗಳು ತಾವು ತಂದಿದ್ದ ಹೋರಿಯನ್ನು ತೆಗೆದುಕೊಂಡು ಸಿದ್ಧಪಡಿಸಿದರು. ಅವರು ಬಾಳನನ್ನು ಮಧ್ಯಾಹ್ನದವರೆಗೆ ಪ್ರಾರ್ಥಿಸಿದರು. “ಬಾಳನೇ, ದಯವಿಟ್ಟು ನಮಗೆ ಉತ್ತರ ನೀಡು!” ಎಂದು ಅವರು ಪ್ರಾರ್ಥಿಸಿದರು. ಆದರೆ ಯಾವ ಶಬ್ದವೂ ಆಗಲಿಲ್ಲ: ಯಾರೊಬ್ಬರೂ ಉತ್ತರಿಸಲಿಲ್ಲ; ಪ್ರವಾದಿಗಳು ತಾವು ನಿರ್ಮಿಸಿದ್ದ ಯಜ್ಞವೇದಿಕೆಯ ಸುತ್ತಲೂ ನರ್ತಿಸಿದರು. ಆದರೆ ಬೆಂಕಿಯು ಹೊತ್ತಿಕೊಳ್ಳಲೇ ಇಲ್ಲ.

27 ಮಧ್ಯಾಹ್ನವಾದಾಗ ಎಲೀಯನು ಅವರನ್ನು ಅಪಹಾಸ್ಯ ಮಾಡಲಾರಂಭಿಸಿದನು. ಎಲೀಯನು, “ಬಾಳನು ನಿಜವಾದ ದೇವರಾಗಿದ್ದರೆ, ನೀವು ಮತ್ತಷ್ಟು ಗಟ್ಟಿಯಾಗಿ ಪ್ರಾರ್ಥಿಸಿ! ಬಹುಶಃ ಅವನು ಯೋಚನಾನಿರತನಾಗಿರಬಹುದು! ಅಥವಾ ಕಾರ್ಯನಿರತನಾಗಿರಬಹುದು! ಅಥವಾ ಸಂಚಾರನಿರತನಾಗಿರಬಹುದು! ಅಥವಾ ನಿದ್ರಾಮಗ್ನನಾಗಿರಬಹುದು! ನೀವು ಮತ್ತಷ್ಟು ಗಟ್ಟಿಯಾಗಿ ಪ್ರಾರ್ಥಿಸಿ, ಅವನನ್ನು ಎಚ್ಚರಗೊಳಿಸಿ!” ಎಂದು ಹೇಳಿದನು. 28 ಪ್ರವಾದಿಗಳು ಮತ್ತಷ್ಟು ಗಟ್ಟಿಯಾಗಿ ಪ್ರಾರ್ಥಿಸಿದರು. ಅವರು ಖಡ್ಗ ಮತ್ತು ಬರ್ಜಿಗಳಿಂದ ತಮ್ಮನ್ನು ತಾವೇ ತಿವಿದುಕೊಂಡರು. (ಅವರು ಆರಾಧಿಸುವ ರೀತಿಯೇ ಇದು.) ರಕ್ತವು ತಮ್ಮ ದೇಹದ ಮೇಲೆ ಚಿಮ್ಮುವತನಕ ಅವರು ತಮ್ಮನ್ನು ತಾವು ತಿವಿದುಕೊಂಡರು. 29 ಮಧ್ಯಾಹ್ನದ ಸಮಯವು ಮೀರುತ್ತಾ ಬಂದರೂ ಬೆಂಕಿಯು ಹೊತ್ತಿಕೊಳ್ಳಲೇ ಇಲ್ಲ. ಸಾಯಂಕಾಲದ ಯಜ್ಞಗಳನ್ನು ಅರ್ಪಿಸುವ ಸಮಯ ಬರುವ ತನಕ ಪ್ರವಾದಿಗಳು ಗಟ್ಟಿಯಾಗಿ ಕೂಗುತ್ತಲೇ ಇದ್ದರು. ಆದರೂ ಬಾಳನಿಂದ ಉತ್ತರವೇ ಬರಲಿಲ್ಲ. ಯಾವ ಶಬ್ದವೂ ಆಗಲಿಲ್ಲ; ಅವರ ಕೂಗಾಟವನ್ನು ಯಾರೂ ಲಕ್ಷಿಸಲಿಲ್ಲ.

30 ಆಗ ಎಲೀಯನು ಜನರೆಲ್ಲರಿಗೂ, “ಈಗ ನನ್ನ ಬಳಿಗೆ ಬನ್ನಿ” ಎಂದನು. ಅವನ ಸುತ್ತಲೂ ಜನರೆಲ್ಲರೂ ಒಟ್ಟುಗೂಡಿದರು. ಯೆಹೋವನ ಯಜ್ಞವೇದಿಕೆಯು ಒಡೆದುಹೋಗಿತ್ತು. ಎಲೀಯನು ಅದನ್ನು ಸರಿಪಡಿಸಿದನು. 31 ಎಲೀಯನು ಇಸ್ರೇಲಿನ ಪ್ರತಿಯೊಂದು ಕುಲಕ್ಕೂ ಒಂದೊಂದು ಕಲ್ಲಿನಂತೆ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡನು. ಯೆಹೋವನಿಂದ ಇಸ್ರೇಲನೆಂದು ಕರೆಸಿಕೊಂಡ ಯಾಕೋಬನ ಹನ್ನೆರಡು ಗಂಡುಮಕ್ಕಳ ಹೆಸರನ್ನೇ ಈ ಕುಲಗಳಿಗೆ ಕೊಡಲಾಗಿತ್ತು. 32 ಎಲೀಯನು ಯೆಹೋವನ ಗೌರವಾರ್ಥವಾಗಿ ಯಜ್ಞವೇದಿಕೆಯನ್ನು ಈ ಕಲ್ಲುಗಳಿಂದ ಸರಿಪಡಿಸಿದನು. ಎಲೀಯನು ಯಜ್ಞವೇದಿಕೆಯ ಸುತ್ತಲೂ ಹಳ್ಳವನ್ನು ತೋಡಿದನು. ಅದು ಹದಿನೈದು ಲೀಟರ್ ನೀರು ತುಂಬುವಷ್ಟು ಅಗಲವಾಗಿತ್ತು ಮತ್ತು ಆಳವಾಗಿತ್ತು. 33 ನಂತರ ಎಲೀಯನು ಸೌದೆಯನ್ನು ಯಜ್ಞವೇದಿಕೆಯ ಮೇಲೆ ಇಟ್ಟನು. ಅವನು ಹೋರಿಯನ್ನು ತುಂಡುತುಂಡಾಗಿ ಕತ್ತರಿಸಿದನು. ಅವನು ಆ ತುಂಡುಗಳನ್ನು ಸೌದೆಯ ಮೇಲಿಟ್ಟನು. 34 ಎಲೀಯನು, “ನಾಲ್ಕು ಕೊಡಗಳಲ್ಲಿ ನೀರನ್ನು ತುಂಬಿಸಿ. ಆ ಮಾಂಸದ ತುಂಡುಗಳ ಮೇಲೆ ಮತ್ತು ಸೌದೆಯ ಮೇಲೆ ಆ ನೀರನ್ನು ಸುರಿಯಿರಿ” ಎಂದು ಹೇಳಿದನು. ಎಲೀಯನು, “ಮತ್ತೆ ಅದೇ ರೀತಿ ಮಾಡಿ” ಎಂದನು, ಅವನು, “ಮೂರನೆಯ ಸಲ ಅದೇ ರೀತಿ ಮಾಡಿ” ಎಂದನು. 35 ಯಜ್ಞವೇದಿಕೆಯಿಂದ ಹರಿದ ನೀರೆಲ್ಲ ಹಳ್ಳವನ್ನು ತುಂಬಿಕೊಂಡಿತ್ತು.

36 ಅದು ಮಧ್ಯಾಹ್ನದ ಯಜ್ಞಗಳನ್ನು ಅರ್ಪಿಸುವ ಸಮಯ. ಪ್ರವಾದಿಯಾದ ಎಲೀಯನು ಯಜ್ಞವೇದಿಕೆಯ ಹತ್ತಿರಕ್ಕೆ ಹೋಗಿ, “ಅಬ್ರಹಾಮನ, ಇಸಾಕನ ಮತ್ತು ಯಾಕೋಬನ ದೇವರಾದ ಯೆಹೋವನೇ, ನೀನು ಇಸ್ರೇಲಿನಲ್ಲಿರುವ ದೇವರೆಂಬುದನ್ನು ರುಜುವಾತುಪಡಿಸಲು ನಾನೀಗ ನಿನ್ನನ್ನು ಪ್ರಾರ್ಥಿಸುತ್ತಿದ್ದೇನೆ. ನಾನು ನಿನ್ನ ಸೇವಕನೆಂಬುದನ್ನೂ ನೀನು ನಿರೂಪಿಸು. ಈ ಕಾರ್ಯಗಳನ್ನೆಲ್ಲಾ ನಾನು ಮಾಡುವಂತೆ ನೀನು ಆಜ್ಞಾಪಿಸಿದೆ ಎನ್ನುವುದನ್ನೂ ಈ ಜನರಿಗೆ ತೋರಿಸು. 37 ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು. ಯೆಹೋವನೇ, ನೀನು ದೇವರೆಂಬುದನ್ನು ಈ ಜನರಿಗೆಲ್ಲ ತೋರಿಸು. ಈ ಜನರನ್ನೆಲ್ಲ ಮತ್ತೆ ನೀನು ನಿನ್ನ ಬಳಿಗೆ ತರುತ್ತಿರುವೆ ಎಂಬುದನ್ನೂ ಈ ಜನರು ತಿಳಿದುಕೊಳ್ಳಲಿ” ಎಂದು ಪ್ರಾರ್ಥಿಸಿದನು.

38 ಕೂಡಲೇ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಗಳನ್ನು, ಸೌದೆಯನ್ನು, ಕಲ್ಲುಗಳನ್ನು ಮತ್ತು ಯಜ್ಞವೇದಿಕೆಯ ಸುತ್ತಲಿನ ಮಣ್ಣನ್ನೆಲ್ಲ ದಹಿಸಿತು. ಆ ಹಳ್ಳದಲ್ಲಿದ್ದ ನೀರನ್ನೆಲ್ಲ ಬೆಂಕಿಯು ದಹಿಸಿ ಒಣಗಿಸಿತು. 39 ಈ ದೃಶ್ಯವನ್ನು ಜನರೆಲ್ಲರೂ ನೋಡಿದರು. ಜನರು ನೆಲಕ್ಕೆ ಬಾಗಿ ನಮಸ್ಕರಿಸುತ್ತಾ, “ಯೆಹೋವನೇ ದೇವರು! ಯೆಹೋವನೇ ದೇವರು!” ಎಂದು ಕೂಗಿದರು.

40 ಆಗ ಎಲೀಯನು, “ಬಾಳನ ಪ್ರವಾದಿಗಳನ್ನು ಹಿಡಿದು ತನ್ನಿ! ಅವರಲ್ಲಿ ಒಬ್ಬರಾದರೂ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ!” ಎಂದು ಹೇಳಿದನು. ಪ್ರವಾದಿಗಳನ್ನೆಲ್ಲ ಜನರು ಹಿಡಿದುಕೊಂಡರು. ಎಲೀಯನು ಅವರನ್ನೆಲ್ಲಾ ಕೀಷೋನ್ ಬುಗ್ಗೆಗೆ ಎಳೆದುಕೊಂಡು ಹೋಗಿ ಕೊಂದು ಹಾಕಿದನು.

ಪ್ರಕಟನೆ 20:7-15

ಸೈತಾನನಿಗೆ ಸೋಲು

ಒಂದುಸಾವಿರ ವರ್ಷಗಳು ಮುಗಿದ ನಂತರ, ಸೈತಾನನನ್ನು ಅವನ ಸೆರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಸೈತಾನನು ಗೋಗ್ ಮತ್ತು ಮಾಗೋಗ್ ಜನಾಂಗಗಳನ್ನು ಮರುಳುಗೊಳಿಸಲು ಭೂಲೋಕದಲ್ಲೆಲ್ಲಾ ಹೋಗಿ ಆ ಜನರನ್ನು ಯುದ್ಧಕ್ಕೆ ಒಟ್ಟುಗೂಡಿಸುತ್ತಾನೆ. ಅವರು ಸಮುದ್ರ ತೀರದ ಮರಳಿನ ಕಣಗಳಂತೆ ಅಸಂಖ್ಯಾತವಾಗಿರುತ್ತಾರೆ.

ಸೈತಾನನ ಸೈನ್ಯವು ಭೂಮಿಯಲ್ಲೆಲ್ಲಾ ಶಿಸ್ತಿನಿಂದ ನಡೆದಾಡಿ ದೇವಜನರ ಶಿಬಿರದ ಸುತ್ತಲೂ ದೇವರ ಪ್ರಿಯ ನಗರದ ಸುತ್ತಲೂ ಒಟ್ಟುಗೂಡಿದರು. ಆದರೆ ಪರಲೋಕದಿಂದ ಇಳಿದು ಬಂದ ಬೆಂಕಿಯು ಸೈತಾನನ ಸೈನ್ಯವನ್ನು ನಾಶಗೊಳಿಸಿತು. 10 ಸೈತಾನನನ್ನು (ಇವನೇ ಜನರನ್ನು ಮೋಸಗೊಳಿಸಿದವನು.) ಬೆಂಕಿಗಂಧಕಗಳು ಉರಿಯುತ್ತಿದ್ದ ಕೆರೆಗೆ ಎಸೆಯಲಾಯಿತು. ಅಲ್ಲಿ ಮೃಗವೂ ಇತ್ತು, ಸುಳ್ಳುಪ್ರವಾದಿಗಳೂ ಇದ್ದರು. ಅಲ್ಲಿ ಅವರು ಹಗಲಿರುಳು ಎಂದೆಂದಿಗೂ ಹಿಂಸೆ ಅನುಭವಿಸುವರು.

ಲೋಕದ ಜನರಿಗಾಗುವ ತೀರ್ಪು

11 ಬಳಿಕ ನಾನು ಒಂದು ದೊಡ್ಡ ಬಿಳಿ ಸಿಂಹಾಸನವನ್ನೂ ಆ ಸಿಂಹಾಸನದ ಮೇಲೆ ಕುಳಿತಿದ್ದಾತನನ್ನೂ ನೋಡಿದೆನು. ಭೂಮಿ ಮತ್ತು ಆಕಾಶಗಳು ಆತನ ಬಳಿಯಿಂದ ಓಡಿಹೋಗಿ ಅದೃಶ್ಯವಾದವು. 12 ಸತ್ತುಹೋಗಿದ್ದ ಚಿಕ್ಕವರು ಮತ್ತು ದೊಡ್ಡವರು ಸಿಂಹಾಸನದ ಮುಂದೆ ನಿಂತಿದ್ದರು. ಆಗ ಜೀವಬಾಧ್ಯರ ಪುಸ್ತಕವನ್ನು ತೆರೆಯಲಾಯಿತು. ತೆರೆದಿದ್ದ ಇತರ ಪುಸ್ತಕಗಳೂ ಅಲ್ಲಿದ್ದವು. ಸತ್ತುಹೋಗಿದ್ದ ಈ ಜನರಿಗೆ ಅವರು ಮಾಡಿದ್ದ ಕಾರ್ಯಗಳ ಆಧಾರದ ಮೇಲೆ ತೀರ್ಪು ನೀಡಲಾಯಿತು. ಇವುಗಳು ಪುಸ್ತಕಗಳಲ್ಲಿ ಬರೆಯಲ್ಪಟ್ಟಿವೆ.

13 ಸಮುದ್ರವು ತನ್ನಲ್ಲಿ ಸತ್ತಿದ್ದ ಜನರನ್ನು ಒಪ್ಪಿಸಿತು. ಮೃತ್ಯುವೂ ಪಾತಾಳವೂ ತನ್ನಲ್ಲಿದ್ದ ಸತ್ತ ಜನರನ್ನು ಒಪ್ಪಿಸಿದವು. ಪ್ರತಿಯೊಬ್ಬ ವ್ಯಕ್ತಿಗೂ ಅವನ ಕಾರ್ಯಗಳಿಗನುಸಾರವಾಗಿ ತೀರ್ಪು ನೀಡಲಾಯಿತು. 14 ಆಮೇಲೆ ಮೃತ್ಯುವನ್ನೂ ಪಾತಾಳವನ್ನೂ ಬೆಂಕಿಯ ಕೆರೆಗೆ ಎಸೆಯಲಾಯಿತು. ಈ ಬೆಂಕಿಯ ಕೆರೆಯು ಎರಡನೆಯ ಮರಣ. 15 ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರು ಬರೆಯಲ್ಪಟ್ಟಿಲ್ಲವೋ ಆ ವ್ಯಕ್ತಿಯನ್ನು ಬೆಂಕಿಯ ಕೆರೆಗೆ ಎಸೆಯಲಾಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International