Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 92:1-4

ಸಬ್ಬತ್ ದಿನದ ಸ್ತುತಿಗೀತೆ.

92 ಯೆಹೋವನೇ, ನಿನ್ನನ್ನು ಸ್ತುತಿಸುವುದೂ
    ಮಹೋನ್ನತನಾದ ದೇವರೇ, ನಿನ್ನ ಹೆಸರನ್ನು ಕೊಂಡಾಡುವುದೂ ಯುಕ್ತವಾಗಿದೆ.
2-3 ಹತ್ತು ತಂತಿವಾದ್ಯಗಳನ್ನೂ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ನುಡಿಸುತ್ತಾ
    ನಿನ್ನ ಪ್ರೀತಿಯ ಕುರಿತು ಮುಂಜಾನೆಯಲ್ಲಿಯೂ
    ನಿನ್ನ ನಂಬಿಗಸ್ತಿಕೆಯ ಕುರಿತು ರಾತ್ರಿಯಲ್ಲಿಯೂ ಹಾಡುವುದು ಯುಕ್ತವಾಗಿದೆ.
ಯೆಹೋವನೇ, ನಿನ್ನ ಕಾರ್ಯಗಳಿಂದ ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಿರುವೆ.
    ಅವುಗಳ ಕುರಿತು ನಾವು ಹರ್ಷದಿಂದ ಹಾಡುವೆವು.

ಕೀರ್ತನೆಗಳು 92:12-15

12-13 ನೀತಿವಂತರಾದರೋ ಯೆಹೋವನ ಆಲಯದಲ್ಲಿ
    ಬೆಳೆಯುತ್ತಿರುವ ಲೆಬನೋನಿನ ದೇವದಾರು ವೃಕ್ಷದಂತಿರುವರು.
ನೀತಿವಂತರಾದರೋ ನಮ್ಮ ದೇವಾಲಯದ ಅಂಗಳದಲ್ಲಿ
    ಮೊಗ್ಗು ಬಿಡುತ್ತಿರುವ ಖರ್ಜೂರದ ಮರಗಳಂತಿರುವರು.
14 ಅವರು ಮುಪ್ಪಿನಲ್ಲಿಯೂ ಪುಷ್ಟಿಯಾಗಿ ಬೆಳೆದಿರುವ
    ಎಲೆಮರಗಳಂತೆ ಫಲಿಸುವರು.
15 ಯೆಹೋವನು ಒಳ್ಳೆಯವನೆಂಬುವುದಕ್ಕೆ
    ಅವರು ದೃಷ್ಟಾಂತವಾಗಿರುವರು.
ಆತನೇ ನನ್ನ ಬಂಡೆ.
    ಆತನು ಎಂದಿಗೂ ತಪ್ಪು ಮಾಡನು.

1 ರಾಜರುಗಳು 10:26-11:8

26 ಆದ್ದರಿಂದ ಅಸಂಖ್ಯವಾದ ರಥಗಳೂ ಕುದುರೆಗಳೂ ಸೊಲೊಮೋನನಲ್ಲಿದ್ದವು. ಅವನಲ್ಲಿ ಒಂದು ಸಾವಿರದ ನಾನೂರು ರಥಗಳು ಮತ್ತು ಹನ್ನೆರಡು ಸಾವಿರ ಕುದುರೆಗಳಿದ್ದವು. ಸೊಲೊಮೋನನು ಈ ರಥಗಳಿಗಾಗಿ ವಿಶೇಷವಾದ ನಗರಗಳನ್ನು ಕಟ್ಟಿಸಿದನು. ಆ ನಗರಗಳಲ್ಲಿ ರಥಗಳನ್ನು ಇರಿಸಿದನು. ರಾಜನಾದ ಸೊಲೊಮೋನನು ಕೆಲವು ರಥಗಳನ್ನು ಜೆರುಸಲೇಮಿನಲ್ಲಿ ತನ್ನ ಹತ್ತಿರ ಇಟ್ಟುಕೊಂಡನು. 27 ರಾಜನು ಇಸ್ರೇಲನ್ನು ಬಹಳ ಶ್ರೀಮಂತವಾಗಿರಿಸಿದನು. ಜೆರುಸಲೇಮಿನಲ್ಲಿ ಬೆಳ್ಳಿಯು ಕಲ್ಲುಗಳಂತೆಯೂ ದೇವದಾರುಮರಗಳು ಬೆಟ್ಟದ ಮೇಲೆ ಬೆಳೆಯುವ ಅನೇಕ ಅಂಜೂರದ ಗಿಡಗಳಂತೆಯೂ ಹೇರಳವಾಗಿದ್ದವು. 28 ಸೊಲೊಮೋನನು ಈಜಿಪ್ಟ್ ಮತ್ತು ಕ್ಯೂ ಪ್ರದೇಶಗಳಿಂದ ಕುದುರೆಗಳನ್ನು ಖರೀದಿಸಿ ಆಮದು ಮಾಡಿಕೊಂಡನು. ಅವನ ವ್ಯಾಪಾರಿಗಳು ಅವುಗಳನ್ನು ಕ್ಯೂ ಪ್ರಾಂತ್ಯದಿಂದ ಇಸ್ರೇಲಿಗೆ ತರುತ್ತಿದ್ದರು. 29 ಈಜಿಪ್ಟಿನ ಒಂದು ರಥದ ಬೆಲೆಯು ಏಳು ಕಿಲೋಗ್ರಾಂ ಆದರೆ ಒಂದು ಕುದುರೆಯ ಬೆಲೆಯು ಎರಡು ಕಿಲೋಗ್ರಾಂ ಬೆಳ್ಳಿಯಾಗಿತ್ತು. ಸೊಲೊಮೋನನು ಹಿತ್ತಿಯ ಮತ್ತು ಅರಾಮ್ಯ ರಾಜರುಗಳಿಗೆ ಕುದುರೆಗಳನ್ನೂ ರಥಗಳನ್ನೂ ಮಾರಿದನು.

ಸೊಲೊಮೋನನು ಮತ್ತು ಅವನ ಅನೇಕ ಪತ್ನಿಯರು

11 ರಾಜನಾದ ಸೊಲೊಮೋನನು ಸ್ತ್ರೀಯರನ್ನು ಪ್ರೀತಿಸಿದನು! ಅವನು ಇಸ್ರೇಲರಲ್ಲದ ಅನೇಕ ಸ್ತ್ರೀಯರನ್ನು ಪ್ರೀತಿಸಿದನು. ಇವರಲ್ಲಿ ಫರೋಹನ ಮಗಳು, ಮೋವಾಬ್ಯ, ಅಮ್ಮೋನಿಯ, ಎದೋಮ್ಯ ಚೀದೋನ್ಯ ಮತ್ತು ಹಿತ್ತಿಯ ಸ್ತ್ರೀಯರು ಸೇರಿದ್ದರು. ಯೆಹೋವನು ಮೊದಲೇ ಇಸ್ರೇಲಿನ ಜನರಿಗೆ, “ಅನ್ಯದೇಶದ ಸ್ತ್ರೀಯರನ್ನು ನೀವು ಮದುವೆಯಾಗಲೇಬಾರದು. ನೀವು ಅವರನ್ನು ಮದುವೆಯಾದರೆ, ತಮ್ಮ ದೇವರುಗಳನ್ನು ಅನುಸರಿಸುವಂತೆ ಅವರು ನಿಮ್ಮನ್ನು ಪ್ರೇರೇಪಿಸುತ್ತಾರೆ” ಎಂದು ಹೇಳಿದ್ದನು. ಆದರೆ ಸೊಲೊಮೋನನು ಈ ಸ್ತ್ರೀಯರನ್ನು ಪ್ರೀತಿಸತೊಡಗಿದನು. ಸೊಲೊಮೋನನಿಗೆ ಏಳುನೂರು ಮಂದಿ ಪತ್ನಿಯರಿದ್ದರು. (ಈ ಸ್ತ್ರೀಯರು ಅನ್ಯದೇಶಗಳ ನಾಯಕರ ಹೆಣ್ಣುಮಕ್ಕಳು) ಅವನಿಗೆ ಪತ್ನಿಯರಂತಿರುವ ಮುನ್ನೂರು ಮಂದಿ ಉಪಪತ್ನಿಯರೂ ಇದ್ದರು. ಅವನ ಪತ್ನಿಯರು ಅವನನ್ನು ದೇವರಿಗೆ ವಿಮುಖನನ್ನಾಗಿ ಮಾಡಿದರು. ಸೊಲೊಮೋನನು ವೃದ್ಧನಾದಾಗ, ತನ್ನ ಪತ್ನಿಯರ ದೆಸೆಯಿಂದಾಗಿ ಅನ್ಯದೇವತೆಗಳನ್ನು ಅನುಸರಿಸಿದನು. ತನ್ನ ತಂದೆಯಾದ ದಾವೀದನು ಯೆಹೋವನನ್ನು ಅನುಸರಿಸಿದಂತೆ ಸೊಲೊಮೋನನು ಪೂರ್ಣಮನಸ್ಸಿನಿಂದ ಯೆಹೋವನನ್ನು ಅನುಸರಿಸಲಿಲ್ಲ. ಸೊಲೊಮೋನನು ಅಷ್ಟೋರೆತ್ ದೇವತೆಯನ್ನು ಪೂಜಿಸಿದನು. ಇದು ಚೀದೋನ್ಯರ ದೇವತೆ. ಸೊಲೊಮೋನನು ಮಿಲ್ಕೋಮನನ್ನು ಆರಾಧಿಸಿದನು. ಇದು ಅಮ್ಮೋನಿಯರ ಭಯಂಕರ ವಿಗ್ರಹ. ಹೀಗೆ ಸೊಲೊಮೋನನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದಾಗಿದ್ದ ಕಾರ್ಯಗಳನ್ನು ಮಾಡಿದನು; ತನ್ನ ತಂದೆಯಾದ ದಾವೀದನು ಪೂರ್ಣಮನಸ್ಸಿನಿಂದ ಯೆಹೋವನನ್ನು ಅನುಸರಿಸಿದಂತೆ ಅನುಸರಿಸಲಿಲ್ಲ.

ಸೊಲೊಮೋನನು ಕೆಮೋಷನನ್ನು ಆರಾಧಿಸಲು ಒಂದು ಸ್ಥಳವನ್ನು ನಿರ್ಮಿಸಿದನು. ಮೋವಾಬ್ಯರ ಭಯಂಕರ ವಿಗ್ರಹವೇ ಕೆಮೋಷ್. ಜೆರುಸಲೇಮಿನ ಪಕ್ಕದಲ್ಲಿದ್ದ ಬೆಟ್ಟದ ಮೇಲೆ ಸೊಲೊಮೋನನು ಆರಾಧನೆಯ ಸ್ಥಳವನ್ನು ನಿರ್ಮಿಸಿದನು. ಆ ಬೆಟ್ಟದ ಮೇಲೆಯೇ ಸೊಲೊಮೋನನು ಮೋಲೆಕ್ ದೇವತೆಯ ಪೂಜಾಸ್ಥಳವನ್ನು ನಿರ್ಮಿಸಿದನು. ಅಮ್ಮೋನಿಯರ ಭಯಂಕರ ವಿಗ್ರಹವೇ ಮೋಲೆಕ್. ಸೊಲೊಮೋನನು ಅನ್ಯದೇಶಗಳ ತನ್ನ ಪತ್ನಿಯರಿಗೆಲ್ಲ ಇದೇ ರೀತಿ ಮಾಡಿದನು. ಅವನ ಪತ್ನಿಯರು ತಮ್ಮ ದೇವರುಗಳಿಗೆ ಧೂಪಹಾಕಿದರು ಮತ್ತು ಯಜ್ಞಗಳನ್ನು ಅರ್ಪಿಸಿದರು.

ಇಬ್ರಿಯರಿಗೆ 11:4-7

ಕಾಯಿನ ಮತ್ತು ಹೇಬೆಲರಿಬ್ಬರೂ ದೇವರಿಗೆ ಯಜ್ಞಗಳನ್ನು ಅರ್ಪಿಸಿದರು. ಆದರೆ ಹೇಬೆಲನಲ್ಲಿ ನಂಬಿಕೆಯಿದ್ದುದರಿಂದ ಅವನು ದೇವರಿಗೆ ಉತ್ತಮವಾದ ಯಜ್ಞವನ್ನು ಅರ್ಪಿಸಿದನು. ಅವನು ಅರ್ಪಿಸಿದ ವಸ್ತುಗಳಿಂದ ತನಗೆ ಸಂತೋಷವಾಯಿತೆಂದು ದೇವರೇ ಹೇಳಿದನು. ಅವನಲ್ಲಿ ನಂಬಿಕೆಯಿದ್ದುದರಿಂದ ದೇವರು ಅವನನ್ನು ಒಳ್ಳೆಯ ಮನುಷ್ಯನೆಂದು ಕರೆದನು. ಹೇಬೆಲನು ಸತ್ತುಹೋದನು, ಆದರೂ ತನ್ನ ನಂಬಿಕೆಯ ಮೂಲಕ ಇನ್ನೂ ಮಾತನಾಡುತ್ತಿದ್ದಾನೆ.

ಹನೋಕನು ಸಾವನ್ನು ಅನುಭವಿಸದೆ ಈ ಲೋಕದಿಂದ ಮೇಲೋಕಕ್ಕೆ ಒಯ್ಯಲ್ಪಟ್ಟನು. ಪವಿತ್ರ ಗ್ರಂಥವು ಹೇಳುವಂತೆ, ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರಿಗೆ ನಿಜವಾಗಿಯೂ ಮೆಚ್ಚಿಕೆಯಾಗಿದ್ದನು. ತರುವಾಯ ಜನರಿಗೆ ಅವನು ಸಿಕ್ಕಲೇ ಇಲ್ಲ. ಅವನ ನಂಬಿಕೆಯ ದೆಸೆಯಿಂದ ದೇವರು ಅವನನ್ನು ತನ್ನೊಡನಿರಲು ಕೊಂಡೊಯ್ದನು. ನಂಬಿಕೆಯಿಲ್ಲದೆ ದೇವರನ್ನು ಯಾರೂ ಮೆಚ್ಚಿಸಲಾಗುವುದಿಲ್ಲ. ದೇವರ ಬಳಿಗೆ ಬರುವ ಯಾರೇ ಆಗಲಿ, ದೇವರು ಇದ್ದಾನೆಂತಲೂ ಆತನನ್ನು ಮನಃಪೂರ್ವಕವಾಗಿ ಹುಡುಕುವ ಜನರಿಗೆ ಆತನು ಪ್ರತಿಫಲವನ್ನು ಕೊಡುತ್ತಾನೆಂತಲೂ ನಂಬಬೇಕು.

ಕಣ್ಣಿಗೆ ಇನ್ನೂ ಕಾಣದಿದ್ದ ಸಂಗತಿಗಳ ಬಗ್ಗೆ ದೇವರು ನೋಹನನ್ನು ಎಚ್ಚರಿಸಿದನು. ನೋಹನು ದೇವರಲ್ಲಿ ನಂಬಿಕೆಯಿಟ್ಟಿದ್ದನು ಮತ್ತು ಭಕ್ತಿಯುಳ್ಳವನಾಗಿದ್ದನು. ಆದ್ದರಿಂದ ಅವನು ತನ್ನ ಕುಟುಂಬ ರಕ್ಷಣೆಗಾಗಿ ದೊಡ್ಡ ನಾವೆಯನ್ನು ಕಟ್ಟಿ, ಈ ಲೋಕದ ತಪ್ಪನ್ನು ತೋರ್ಪಡಿಸಿದನು. ಹೀಗೆ, ನಂಬಿಕೆಯ ಮೂಲಕ ನೀತಿವಂತರಾದ ಜನರಲ್ಲಿ ಅವನೂ ಒಬ್ಬನಾದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International