Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 74

ರಚನೆಗಾರ: ಆಸಾಫ.

74 ದೇವರೇ, ನಮ್ಮನ್ನು ಶಾಶ್ವತವಾಗಿ ಕೈಬಿಟ್ಟಿರುವೆಯಾ?
    ನಿನ್ನ ಜನರ ಮೇಲೆ ಇನ್ನೂ ಕೋಪದಿಂದಿರುವೆಯಾ?
ಬಹುಕಾಲದ ಹಿಂದೆ ನೀನು ಕೊಂಡುಕೊಂಡ ನಿನ್ನ ಜನರನ್ನು ಜ್ಞಾಪಿಸಿಕೊ.
    ನೀನು ನಮ್ಮನ್ನು ರಕ್ಷಿಸಿದೆ. ನಾವು ನಿನ್ನವರೇ.
ನೀನು ವಾಸಿಸಿದ ಚೀಯೋನ್ ಪರ್ವತವನ್ನು ಜ್ಞಾಪಿಸಿಕೊ.
ಬಹುಕಾಲದಿಂದ ಹಾಳುಬಿದ್ದಿರುವ ಕಟ್ಟಡಗಳ ಬಳಿಗೆ ಆಗಮಿಸು.
    ಶತ್ರುವು ನಾಶಮಾಡಿದ ನಿನ್ನ ಪವಿತ್ರ ಸ್ಥಳಕ್ಕೆ ಹಿಂತಿರುಗಿ ಬಾ.

ಆಲಯದಲ್ಲಿ ಶತ್ರುಗಳು ಯುದ್ಧಾರ್ಭಟ ಮಾಡಿದರು.
    ಆಲಯದಲ್ಲಿ ತಮ್ಮ ಧ್ವಜಾರೋಹಣ ಮಾಡಿ ತಮ್ಮ ಜಯವನ್ನು ಸೂಚಿಸಿದರು.
ಶತ್ರು ಸೈನಿಕರಾದರೋ ಕಳೆಗುದ್ದಲಿಯಿಂದ
    ಕಳೆ ಕೀಳುತ್ತಿರುವ ಜನರಂತಿದ್ದಾರೆ.
ನಿನ್ನ ಆಲಯದ ಕೆತ್ತನೆ ಕೆಲಸಗಳನ್ನು ಅವರು ಕೊಡಲಿಗಳಿಂದಲೂ
    ಮಚ್ಚುಗತ್ತಿಗಳಿಂದಲೂ ಕತ್ತರಿಸಿ ಹಾಕಿದರು.
ಆ ಸೈನಿಕರು ನಿನ್ನ ಪವಿತ್ರ ಸ್ಥಳವನ್ನು ಸುಟ್ಟು ನೆಲಸಮಮಾಡಿದರು.
    ಆ ಆಲಯವು ನಿನ್ನ ನಾಮ ಘನತೆಗಾಗಿ ಕಟ್ಟಲ್ಪಟ್ಟಿತ್ತಲ್ಲಾ!
ನಮ್ಮನ್ನು ಸಂಪೂರ್ಣವಾಗಿ ಜಜ್ಜಿಹಾಕಲು ಶತ್ರುಗಳು ನಿರ್ಧರಿಸಿ
    ದೇಶದ ಪ್ರತಿಯೊಂದು ಪವಿತ್ರ ಸ್ಥಳವನ್ನೂ ಸುಟ್ಟುಹಾಕಿದರು.
ನಮ್ಮ ಯಾವ ಚಿಹ್ನೆಗಳೂ ನಮಗೆ ಕಾಣಲಿಲ್ಲ.
    ಪ್ರವಾದಿಗಳಲ್ಲಿ ಯಾರೂ ಉಳಿದಿಲ್ಲ.
    ಯಾರಿಗೂ ದಿಕ್ಕೇ ತೋಚುತ್ತಿಲ್ಲ.
10 ದೇವರೇ, ಇನ್ನೆಷ್ಟರವರೆಗೆ ಶತ್ರುಗಳು ನಮ್ಮನ್ನು ಗೇಲಿಮಾಡುತ್ತಿರಬೇಕು?
    ನಿನ್ನ ಹೆಸರಿಗೆ ಅವರು ಅವಮಾನ ಮಾಡುತ್ತಲೇ ಇರಬೇಕೇ?
11 ನೀನು ನಮ್ಮನ್ನು ಬಹು ಕಠಿಣವಾಗಿ ದಂಡಿಸಿದ್ದೇಕೆ?
    ನಿನ್ನ ಮಹಾಶಕ್ತಿಯಿಂದ ನಮ್ಮನ್ನು ಸಂಪೂರ್ಣವಾಗಿ ನಾಶಮಾಡಿರುವಿಯಲ್ಲಾ!
12 ದೇವರೇ, ಬಹುಕಾಲದಿಂದ ನೀನು ನಮ್ಮರಾಜ.
    ಈ ದೇಶದಲ್ಲಿ ಅನೇಕ ಯುದ್ಧಗಳನ್ನು ಗೆಲ್ಲಲು ನೀನು ನಮಗೆ ಸಹಾಯಮಾಡಿದೆ.
13 ಮಹಾಶಕ್ತಿಯಿಂದ ಕೆಂಪು ಸಮುದ್ರವನ್ನು ಇಬ್ಭಾಗ ಮಾಡಿದಾತನು ನೀನೇ.
    ಸಮುದ್ರದಲ್ಲಿ ಮಹಾ ತಿಮಿಂಗಲಗಳ ತಲೆಗಳನ್ನು ಜಜ್ಜಿ ಹಾಕಿದಾತನು ನೀನೇ.
14 ಲಿವ್ಯಾತಾನನ ತಲೆಗಳನ್ನು ಜಜ್ಜಿಹಾಕಿ ಪ್ರಾಣಿಗಳಿಗೆ ಆಹಾರವನ್ನಾಗಿ ಮಾಡಿದಾತನು ನೀನೇ.
15 ತೊರೆಗಳೂ ನದಿಗಳೂ ಹರಿಯುವಂತೆ ಮಾಡುವಾತನು ನೀನೇ.
    ನದಿಗಳನ್ನು ಒಣಗಿಸುವಾತನೂ ನೀನೇ.
16 ನೀನು ಹಗಲನ್ನೂ ರಾತ್ರಿಯನ್ನೂ ನಿನ್ನ ಹತೋಟಿಯಲ್ಲಿಟ್ಟುಕೊಂಡಿರುವೆ.
    ಸೂರ್ಯನನ್ನೂ ಚಂದ್ರನನ್ನೂ ಸೃಷ್ಟಿಮಾಡಿದಾತನು ನೀನೇ.
17 ಭೂಮಿಯ ಮೇಲೆ ಮೇರೆಗಳನ್ನು ಹಾಕಿರುವಾತನು ನೀನೇ.
    ಬೇಸಿಗೆಕಾಲವನ್ನೂ ಚಳಿಗಾಲವನ್ನೂ ನಿರ್ಮಿಸಿದಾತನು ನೀನೇ.
18 ದೇವರೇ, ಇವುಗಳನ್ನೆಲ್ಲಾ ಜ್ಞಾಪಿಸಿಕೊ.
    ವೈರಿಯು ನಿನಗೆ ಮಾಡಿದ ಅವಮಾನವನ್ನು ನೆನಸಿಕೊ!
    ಆ ಮೂರ್ಖರು ನಿನ್ನ ನಾಮವನ್ನು ದ್ವೇಷಿಸುತ್ತಾರೆ.
19 ದೇವರೇ, ನಿನ್ನ ಪಾರಿವಾಳವನ್ನು ಆ ದುಷ್ಟ ಪ್ರಾಣಿಗಳು ತೆಗೆದುಕೊಳ್ಳದಿರಲಿ.
    ನಿನ್ನ ಬಡಜನರನ್ನು ಮರೆತುಬಿಡಬೇಡ.
20 ನಿನ್ನ ಒಡಂಬಡಿಕೆಯನ್ನು ಜ್ಞಾಪಿಸಿಕೊ.
    ಈ ದೇಶದ ಕತ್ತಲೆಯ ಸ್ಥಳಗಳಲ್ಲೆಲ್ಲಾ ಹಿಂಸೆಯೂ ತುಂಬಿಕೊಂಡಿದೆ.
21 ದೇವರೇ, ನಿನ್ನ ಜನರಿಗೆ ಅವಮಾನವಾಗಿದೆ.
    ಅವರಿಗೆ ಕೇಡಾಗಲು ಬಿಡಬೇಡ.
    ನಿನ್ನ ಬಡಜನರೂ ನಿಸ್ಸಹಾಯಕರೂ ನಿನ್ನನ್ನು ಕೊಂಡಾಡಲಿ.
22 ದೇವರೇ, ಎದ್ದು ಹೋರಾಡು!
    ನಿನಗೆ ಸವಾಲೊಡ್ಡಿದ ಆ ನಿಂದಕರನ್ನು ಜ್ಞಾಪಿಸಿಕೊ!
23 ನಿನ್ನ ವೈರಿಗಳ ಆರ್ಭಟವನ್ನು ಮರೆತುಬಿಡಬೇಡ.
    ಅವರು ನಿನಗೆ ಪದೇಪದೇ ಅವಮಾನಮಾಡಿದರು.

ಯೆಶಾಯ 26:16-27:1

16 ಯೆಹೋವನೇ, ಕಷ್ಟ ಬಂದಾಗ
    ಜನರಿಗೆ ನಿನ್ನ ನೆನಪಾಗುವುದು.
ನೀನು ಅವರನ್ನು ಶಿಕ್ಷಿಸಿದಾಗ
    ಅವರು ನಿನಗೆ ಮೌನ ಪ್ರಾರ್ಥನೆ ಮಾಡುವರು.
17 ಯೆಹೋವನೇ, ನಾವು ನಿನ್ನೊಂದಿಗೆ ಇಲ್ಲದಿರುವಾಗ
    ಪ್ರಸವವೇದನೆಯಿಂದ ನರಳುವ ಸ್ತ್ರೀಯರಂತಿದ್ದೇವೆ.
18 ಅದೇ ರೀತಿಯಲ್ಲಿ ನಾವು ನೋವನ್ನು ಅನುಭವಿಸುತ್ತೇವೆ.
    ನಾವು ಹೆರುವದು ಕೇವಲ ಗಾಳಿಯನ್ನೇ.
ನಾವು ಈ ಲೋಕದೊಳಗೆ ಹೊಸಜೀವಿಗಳನ್ನು ನಿರ್ಮಿಸುವದಿಲ್ಲ.
    ನಾವು ದೇಶಕ್ಕೆ ರಕ್ಷಣೆಯನ್ನು ತರುವದಿಲ್ಲ.
19 ಆದರೆ ಯೆಹೋವನು ಹೇಳುವುದೇನೆಂದರೆ,
“ನಿನ್ನ ಜನರು ಸತ್ತಿದ್ದಾರೆ.
    ಆದರೆ ಅವರು ಮತ್ತೆ ಬದುಕುವರು.
ನನ್ನ ಜನರ ದೇಹಗಳು
    ಸತ್ತವರೊಳಗಿಂದ ಏಳುವವು.
ಭೂಮಿಯ ಮೇಲೆ ಸತ್ತಿರುವ ಜನರೇ,
    ಎದ್ದುನಿಂತು ಸಂತೋಷಿಸಿರಿ.
ನಿಮ್ಮನ್ನು ಆವರಿಸಿದ ಮಂಜು
    ಮುಂಜಾನೆಯ ಬೆಳಕಿನಂತೆ ಪ್ರಕಾಶಿಸುತ್ತದೆ.
ಭೂಮಿಯು ತನ್ನಲ್ಲಿರುವ ಸತ್ತವರನ್ನು ಒಪ್ಪಿಸಿಕೊಡುವಾಗ
    ಪ್ರಾರಂಭವಾಗುವ ಹೊಸ ದಿನವನ್ನು ಅದು ಸೂಚಿಸುವದು.”

ಶಿಕ್ಷೆ ಅಥವಾ ಬಹುಮಾನ

20 ನನ್ನ ಜನರೇ, ನಿಮ್ಮ ನಿಮ್ಮ ಕೋಣೆಯೊಳಗೆ
    ಹೋಗಿ ಕದಮುಚ್ಚಿರಿ.
ಸ್ವಲ್ಪಕಾಲ ನೀವು ಅಲ್ಲಿಯೇ ಅಡಗಿಕೊಳ್ಳಿರಿ.
    ದೇವರ ಕೋಪ ತೀರುವ ತನಕ ಅಲ್ಲಿಯೇ ಅವಿತುಕೊಳ್ಳಿರಿ.
21 ಇಗೋ, ಈ ಲೋಕದ ಜನರು ಮಾಡಿದ ಪಾಪಕೃತ್ಯಗಳಿಗೆ
    ನ್ಯಾಯತೀರಿಸಲು ಯೆಹೋವನು ತನ್ನ ಸ್ಥಳದಿಂದ ಎದ್ದಿದ್ದಾನೆ.
ಭೂಮಿಯು ತನ್ನಲ್ಲಿರುವ ರಕ್ತವನ್ನು ತೋರಿಸುವದು.
    ಭೂಮಿಯು ಇನ್ನುಮುಂದೆ ಸತ್ತವರನ್ನು ಮರೆಮಾಡುವುದಿಲ್ಲ.

27 ಆ ಸಮಯದಲ್ಲಿ ಯೆಹೋವನು ವಂಚನೆಯ ಸರ್ಪವಾದ ಲಿವ್ಯಾತಾನನಿಗೆ ನ್ಯಾಯತೀರಿಸುವನು.
ಯೆಹೋವನು ಕಠಿಣವೂ ಮಹತ್ವವೂ ಬಲವೂ ಆಗಿರುವ ತನ್ನ ಖಡ್ಗದಿಂದ
    ಸುತ್ತಿಕೊಂಡಿರುವ ಸರ್ಪವಾದ ಲಿವ್ಯಾತಾನನನ್ನು ಕೊಲ್ಲುವನು.
    ಯೆಹೋವನು ಸಮುದ್ರದಲ್ಲಿರುವ ಘಟಸರ್ಪವನ್ನು ಕೊಲ್ಲುವನು.

ಲೂಕ 11:14-28

ಯೇಸುವಿನ ಶಕ್ತಿ ದೇವರಿಂದ ಬಂದದ್ದು

(ಮತ್ತಾಯ 12:22-30; ಮಾರ್ಕ 3:20-27)

14 ಒಮ್ಮೆ ಯೇಸು ಮೂಕದೆವ್ವದಿಂದ ಪೀಡಿತನಾಗಿದ್ದ ಒಬ್ಬನನ್ನು ಬಿಡಿಸುತ್ತಿದ್ದನು. ಆ ದೆವ್ವವು ಅವನನ್ನು ಬಿಟ್ಟು ಹೊರಗೆ ಬಂದಾಗ ಅವನು ಮಾತಾಡಿದನು. ಇದನ್ನು ಕಂಡ ಜನರು ಬೆರಗಾದರು. 15 ಆದರೆ ಕೆಲವರು, “ದೆವ್ವದಿಂದ ಪೀಡಿತರಾಗಿರುವವರನ್ನು ಇವನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದು ಹೇಳಿದರು.

16 ಇತರ ಜನರು ಯೇಸುವನ್ನು ಪರೀಕ್ಷಿಸಬೇಕೆಂದು ದೇವರಿಂದ ಒಂದು ಸೂಚಕಕಾರ್ಯವನ್ನು ನಮಗೆ ತೋರಿಸು ಎಂದು ಕೇಳಿದರು. 17 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ಒಡೆದುಹೋದ ಮತ್ತು ತನಗೆ ವಿರುದ್ಧವಾಗಿ ತಾನೇ ಕಾದಾಡುವ ರಾಜ್ಯವು ನಾಶವಾಗುವುದು. ಭೇದಭಾವದಿಂದ ಕೂಡಿರುವ ಕುಟುಂಬವು ಮುರಿದು ಹೋಗುವುದು. 18 ಅಂತೆಯೇ, ಸೈತಾನನು ತನಗೆ ವಿರುದ್ಧವಾಗಿ ತಾನೇ ಕಾದಾಡಿದರೆ ಅವನ ರಾಜ್ಯವು ಮುಂದುವರಿಯಲು ಹೇಗೆ ಸಾಧ್ಯ? ನಾನು ದೆವ್ವಗಳನ್ನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತೇನೆಂದು ನೀವು ಹೇಳುತ್ತೀರಿ. 19 ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾಗಿದ್ದರೆ, ನಿಮ್ಮ ಜನರು ದೆವ್ವಗಳನ್ನು ಯಾವ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನು ತಪ್ಪಿತಸ್ಥರೆಂದು ಹೇಳುತ್ತಾರೆ. 20 ಆದರೆ ನಾನು ದೆವ್ವಗಳನ್ನು ದೇವರ ಬಲದಿಂದ ಹೊರಡಿಸುವುದಾದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.

21 “ಒಬ್ಬ ಬಲಿಷ್ಠನು ಅನೇಕ ಆಯುಧಗಳಿಂದ ಸುಸಜ್ಜಿತನಾಗಿ ತನ್ನ ಮನೆಯನ್ನು ಕಾಯುತ್ತಿರುವಾಗ, ಮನೆಯೊಳಗಿರುವ ವಸ್ತುಗಳು ಸುರಕ್ಷಿತವಾಗಿರುತ್ತವೆ. 22 ಆದರೆ ಅವನಿಗಿಂತಲೂ ಬಲಿಷ್ಠನಾದ ಮತ್ತೊಬ್ಬನು ಬಂದು ಅವನನ್ನು ಸೋಲಿಸಿದರೆ, ಮೊದಲನೆಯ ಬಲಿಷ್ಠನು ತನ್ನ ಮನೆಯನ್ನು ಸುರಕ್ಷಿತವಾಗಿಡುವುದಕ್ಕಾಗಿ ಅವಲಂಬಿಸಿಕೊಂಡಿದ್ದ ಆಯುಧಗಳನ್ನೆಲ್ಲಾ ಆ ಮತ್ತೊಬ್ಬ ಬಲಿಷ್ಠನು ತೆಗೆದುಕೊಂಡು ಹೋಗುವನು. ಬಳಿಕ ಆ ಮತ್ತೊಬ್ಬ ಬಲಿಷ್ಠನು ಆ ಮನುಷ್ಯನ ವಸ್ತುಗಳನ್ನು ತನಗೆ ಇಷ್ಟಬಂದ ಹಾಗೆ ಮಾಡುವನು.

23 “ನನ್ನೊಂದಿಗಿಲ್ಲದವನು ನನಗೆ ವಿರೋಧವಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.

ಬರಿದಾದ ಹೃದಯ

(ಮತ್ತಾಯ 12:43-45)

24 “ದೆವ್ವವು ಒಬ್ಬ ವ್ಯಕ್ತಿಯಿಂದ ಹೊರಗೆ ಬಂದ ಮೇಲೆ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಅಲೆದಾಡುತ್ತದೆ. ಆದರೆ ವಿಶ್ರಮಿಸಿಕೊಳ್ಳಲು ಅದಕ್ಕೆ ಸ್ಥಳ ದೊರೆಯುವುದಿಲ್ಲ. ಆದ್ದರಿಂದ ‘ನಾನು ಬಿಟ್ಟುಬಂದ ಮನೆಗೆ (ವ್ಯಕ್ತಿ) ಹಿಂತಿರುಗುವೆನು’ ಎಂದುಕೊಳ್ಳುತ್ತದೆ. 25 ಅದು ಆ ವ್ಯಕ್ತಿಯ ಬಳಿಗೆ ಹಿಂತಿರುಗಿ ಬಂದಾಗ, ಆ ಮನೆಯನ್ನು (ವ್ಯಕ್ತಿ) ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ. 26 ಆಗ ಹೊರಟುಹೋಗಿ ತನಗಿಂತಲೂ ಹೆಚ್ಚು ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಬಳಿಕ ಆ ದೆವ್ವಗಳೆಲ್ಲಾ ಆ ಮನುಷ್ಯನೊಳಗೆ ಹೋಗಿ ಅಲ್ಲೇ ವಾಸಿಸುತ್ತವೆ. ಆಗ ಆ ವ್ಯಕ್ತಿಯು ಮೊದಲಿಗಿಂತಲೂ ಹೆಚ್ಚಿನ ಸಂಕಟಕ್ಕೆ ಒಳಗಾಗುತ್ತಾನೆ” ಎಂದು ಹೇಳಿದನು.

ನಿಜವಾದ ಭಾಗ್ಯವಂತರು

27 ಯೇಸು ಈ ಸಂಗತಿಗಳನ್ನು ಹೇಳಿದಾಗ, ಅಲ್ಲಿ, ಜನರೊಂದಿಗಿದ್ದ ಒಬ್ಬ ಸ್ತ್ರೀ ಯೇಸುವಿಗೆ, “ನಿನ್ನನ್ನು ಹೆತ್ತು ಪೋಷಿಸಿದ ತಾಯಿ ಭಾಗ್ಯವಂತಳೇ ಸರಿ!” ಎಂದು ಹೇಳಿದಳು.

28 ಆದರೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ಭಾಗ್ಯವಂತರು!” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International