Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 92:1-4

ಸಬ್ಬತ್ ದಿನದ ಸ್ತುತಿಗೀತೆ.

92 ಯೆಹೋವನೇ, ನಿನ್ನನ್ನು ಸ್ತುತಿಸುವುದೂ
    ಮಹೋನ್ನತನಾದ ದೇವರೇ, ನಿನ್ನ ಹೆಸರನ್ನು ಕೊಂಡಾಡುವುದೂ ಯುಕ್ತವಾಗಿದೆ.
2-3 ಹತ್ತು ತಂತಿವಾದ್ಯಗಳನ್ನೂ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ನುಡಿಸುತ್ತಾ
    ನಿನ್ನ ಪ್ರೀತಿಯ ಕುರಿತು ಮುಂಜಾನೆಯಲ್ಲಿಯೂ
    ನಿನ್ನ ನಂಬಿಗಸ್ತಿಕೆಯ ಕುರಿತು ರಾತ್ರಿಯಲ್ಲಿಯೂ ಹಾಡುವುದು ಯುಕ್ತವಾಗಿದೆ.
ಯೆಹೋವನೇ, ನಿನ್ನ ಕಾರ್ಯಗಳಿಂದ ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಿರುವೆ.
    ಅವುಗಳ ಕುರಿತು ನಾವು ಹರ್ಷದಿಂದ ಹಾಡುವೆವು.

ಕೀರ್ತನೆಗಳು 92:12-15

12-13 ನೀತಿವಂತರಾದರೋ ಯೆಹೋವನ ಆಲಯದಲ್ಲಿ
    ಬೆಳೆಯುತ್ತಿರುವ ಲೆಬನೋನಿನ ದೇವದಾರು ವೃಕ್ಷದಂತಿರುವರು.
ನೀತಿವಂತರಾದರೋ ನಮ್ಮ ದೇವಾಲಯದ ಅಂಗಳದಲ್ಲಿ
    ಮೊಗ್ಗು ಬಿಡುತ್ತಿರುವ ಖರ್ಜೂರದ ಮರಗಳಂತಿರುವರು.
14 ಅವರು ಮುಪ್ಪಿನಲ್ಲಿಯೂ ಪುಷ್ಟಿಯಾಗಿ ಬೆಳೆದಿರುವ
    ಎಲೆಮರಗಳಂತೆ ಫಲಿಸುವರು.
15 ಯೆಹೋವನು ಒಳ್ಳೆಯವನೆಂಬುವುದಕ್ಕೆ
    ಅವರು ದೃಷ್ಟಾಂತವಾಗಿರುವರು.
ಆತನೇ ನನ್ನ ಬಂಡೆ.
    ಆತನು ಎಂದಿಗೂ ತಪ್ಪು ಮಾಡನು.

2 ರಾಜರುಗಳು 14:1-14

ಅಮಚ್ಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸುವನು

14 ಯೆಹೋವಾಹಾಜನ ಮಗನಾದ ಯೋವಾಷನು ಇಸ್ರೇಲಿನ ರಾಜನಾಗಿದ್ದ ಎರಡನೆಯ ವರ್ಷದಲ್ಲಿ ಯೆಹೋವಾಷನ ಮಗ ಅಮಚ್ಯನು ಯೆಹೂದದ ರಾಜನಾದನು. ಅಮಚ್ಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು. ಅಮಚ್ಯನು ಜೆರುಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷ ಆಳಿದನು. ಜೆರುಸಲೇಮಿನ ಯೆಹೋವದ್ದೀನಳು ಅಮಚ್ಯನ ತಾಯಿ. ಯೆಹೋವನು ಸರಿಯೆಂದು ಹೇಳಿದ ಕಾರ್ಯಗಳನ್ನು ಅಮಚ್ಯನು ಮಾಡಿದನು. ಆದರೆ ಅವನು ತನ್ನ ಪೂರ್ವಿಕನಾದ ದಾವೀದನು ಅನುಸರಿಸಿದಂತೆ ಸಂಪೂರ್ಣವಾಗಿ ಯೆಹೋವನನ್ನು ಅನುಸರಿಸಲಿಲ್ಲ. ಅಮಚ್ಯನು ತನ್ನ ತಂದೆಯಾದ ಯೆಹೋವಾಷನು ಮಾಡಿದ ಕಾರ್ಯಗಳನ್ನೆಲ್ಲ ಮಾಡಿದನು. ಆದರೆ ಅವನು ಉನ್ನತ ಪೂಜಾಸ್ಥಳಗಳನ್ನು ನಾಶಗೊಳಿಸಲಿಲ್ಲ. ಜನರು ಪೂಜಾಸ್ಥಳಗಳಲ್ಲಿ ಇನ್ನೂ ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪ ಹಾಕುತ್ತಿದ್ದರು.

ಅಮಚ್ಯನು ರಾಜ್ಯಾಧಿಕಾರವನ್ನು ಬಿಗಿಗೊಳಿಸಿಕೊಂಡ ಮೇಲೆ, ತನ್ನ ತಂದೆಯನ್ನು ಕೊಂದ ಅಧಿಕಾರಿಗಳನ್ನು ಕೊಂದುಹಾಕಿದನು. ಆದರೆ ಮೋಶೆಯ ಧರ್ಮಶಾಸ್ತ್ರದಲ್ಲಿನ ನಿಯಮಗಳಿಗನುಸಾರವಾಗಿ ಅವನು ಕೊಲೆಗಾರರ ಮಕ್ಕಳನ್ನು ಕೊಂದುಹಾಕಲಿಲ್ಲ. ಮೋಶೆಯ ಧರ್ಮಶಾಸ್ತ್ರದಲ್ಲಿ ಯೆಹೋವನು, “ಮಕ್ಕಳು ಮಾಡಿದ ತಪ್ಪಿಗೆ ತಂದೆತಾಯಿಗಳನ್ನು ಸಾವಿಗೆ ಗುರಿಪಡಿಸಬಾರದು. ತಂದೆತಾಯಿಗಳು ಮಾಡಿದ ತಪ್ಪಿಗೆ ಅವರ ಮಕ್ಕಳನ್ನು ಸಾವಿಗೆ ಗುರಿಪಡಿಸಬಾರದು. ಒಬ್ಬ ವ್ಯಕ್ತಿಯನ್ನು ಅವನು ಮಾಡಿದ ಕೆಟ್ಟಕಾರ್ಯಕ್ಕಾಗಿ ಮಾತ್ರ ಸಾವಿಗೆ ಗುರಿಪಡಿಸಬೇಕು” ಎಂದು ಆಜ್ಞಾಪಿಸಿದ್ದಾನೆ.

ಅಮಚ್ಯನು ಉಪ್ಪಿನ ಕಣಿವೆಯಲ್ಲಿ ಹತ್ತುಸಾವಿರ ಎದೋಮ್ಯರನ್ನು ಕೊಂದುಹಾಕಿ ಅವರಿಂದ ಸೆಲ ದುರ್ಗವನ್ನು ವಶಪಡಿಸಿಕೊಂಡು ಅದನ್ನು “ಯೊಕ್ತೆಯೇಲ್” ಎಂದು ಕರೆದನು. ಆ ಸ್ಥಳಕ್ಕೆ ಇಂದಿಗೂ ಅದೇ ಹೆಸರಿದೆ.

ಯೋವಾಷನ ವಿರುದ್ಧ ಯುದ್ಧಮಾಡಲು ಅಮಚ್ಯನ ಅಪೇಕ್ಷೆ

ಇಸ್ರೇಲರ ರಾಜನೂ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಆದ ಯೋವಾಷನ ಬಳಿಗೆ ಅಮಚ್ಯನು ಸಂದೇಶಕರನ್ನು ಕಳುಹಿಸಿದನು. ಅಮಚ್ಯನು ಸಂದೇಶದಲ್ಲಿ, “ಬಾ, ನಾವು ಪರಸ್ಪರ ಯುದ್ಧ ಮಾಡೋಣ!” ಎಂದು ಹೇಳಿದ್ದನು.

ಇಸ್ರೇಲಿನ ರಾಜನಾದ ಯೋವಾಷನು ಯೆಹೂದದ ರಾಜನಾದ ಅಮಚ್ಯನಿಗೆ, “ಲೆಬನೋನಿನ ಒಂದು ಮುಳ್ಳುಗಿಡವು ಲೆಬನೋನಿನ ದೇವದಾರುಮರಕ್ಕೆ ಒಂದು ಸಂದೇಶವನ್ನು ಕಳುಹಿಸಿತು. ಅದು, ‘ನನ್ನ ಮಗನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡು’ ಎಂದಿತು. ಆದರೆ ಲೆಬನೋನಿನ ಒಂದು ಕಾಡುಮೃಗವು ಆ ದಾರಿಯಲ್ಲಿ ಹೋಗುವಾಗ, ಮುಳ್ಳುಗಿಡದ ಮೇಲೆ ಹಾದುಹೋಯಿತು. 10 ನೀನು ಎದೋಮ್ಯರನ್ನು ಸೋಲಿಸಿದೆಯೆಂಬುದು ನಿಜ. ಆದರೆ ನೀನು ಎದೋಮ್ಯರ ಮೇಲೆ ಜಯಗಳಿಸಿದ್ದರಿಂದ ಗರ್ವಿತನಾಗಿರುವೆ. ನೀನು ನಿನ್ನ ಮನೆಯಲ್ಲೇ ಕುಳಿತು ಬಡಾಯಿಕೊಚ್ಚಿಕೋ. ನಿನಗೆ ತೊಂದರೆಯನ್ನು ತಂದುಕೊಳ್ಳಬೇಡ. ಇಲ್ಲವಾದರೆ ನೀನೂ ಬೀಳುವುದಲ್ಲದೆ, ಯೆಹೂದವೂ ನಿನ್ನೊಂದಿಗೆ ಬಿದ್ದುಹೋಗುವುದು!” ಎಂದು ಹೇಳಿದನು.

11 ಆದರೆ ಯೋವಾಷನ ಎಚ್ಚರಿಕೆಯನ್ನು ಅಮಚ್ಯನು ಆಲಿಸಲೇ ಇಲ್ಲ. ಆದ್ದರಿಂದ ಇಸ್ರೇಲಿನ ರಾಜನಾದ ಯೋವಾಷನು ಯೆಹೂದದ ರಾಜನಾದ ಅಮಚ್ಯನ ವಿರುದ್ಧ ಹೋರಾಟ ಮಾಡಲು ಯೆಹೂದದ ಬೇತ್ಷೆಮೆಷಿಗೆ ಹೋದನು. 12 ಯೆಹೂದ್ಯರನ್ನು ಇಸ್ರೇಲರು ಸೋಲಿಸಿದರು. ಯೆಹೂದದ ಪ್ರತಿಯೊಬ್ಬರೂ ಮನೆಗೆ ಓಡಿಹೋದರು. 13 ಇಸ್ರೇಲಿನ ರಾಜನಾದ ಯೋವಾಷನು ಬೇತ್ಷೆಮೆಷಿನಲ್ಲಿ ಯೆಹೂದದ ರಾಜನಾದ ಅಮಚ್ಯನನ್ನು ಸೆರೆಹಿಡಿದನು. ಅಮಚ್ಯನು ಯೆಹೋವಾಷನ ಮಗನೂ ಅಹಜ್ಯನ ಮೊಮ್ಮಗನೂ ಆಗಿದ್ದನು. ಯೋವಾಷನು ಜೆರುಸಲೇಮಿಗೆ ಬಂದು ಎಫ್ರಾಯೀಮ್ ಬಾಗಿಲಿನಿಂದ ಮೂಲೆಯ ಬಾಗಿಲಿನವರೆಗೆ ಆರುನೂರು ಅಡಿ ಉದ್ದದ ಗೋಡೆಯನ್ನು ಒಡೆದುಹಾಕಿದನು. 14 ನಂತರ ಯೋವಾಷನು ದೇವಾಲಯದಲ್ಲಿದ್ದ ಮತ್ತು ಅರಮನೆಯ ಭಂಡಾರದಲ್ಲಿದ್ದ ಬೆಳ್ಳಿಬಂಗಾರಗಳನ್ನು ಮತ್ತು ಪಾತ್ರೆಗಳನ್ನೆಲ್ಲ ತೆಗೆದುಕೊಂಡನು. ಇದಲ್ಲದೆ ಯೋವಾಷನು ಜನರನ್ನು ಸಹ ತನ್ನ ಸೆರೆಯಾಳುಗಳನ್ನಾಗಿ ತೆಗೆದುಕೊಂಡು ಸಮಾರ್ಯಕ್ಕೆ ಹಿಂದಿರುಗಿದನು.

ಮಾರ್ಕ 4:1-20

ಬೀಜ ಬಿತ್ತುವ ರೈತನ ಸಾಮ್ಯ

(ಮತ್ತಾಯ 13:1-9; 8:4-8)

ಮತ್ತೊಂದು ಸಮಯದಲ್ಲಿ ಯೇಸು ಸರೋವರದ ತೀರದಲ್ಲಿ ಉಪದೇಶಿಸಲಾರಂಭಿಸಿದನು. ಅನೇಕಾನೇಕ ಜನರು ಆತನ ಸುತ್ತಲೂ ಸೇರಿದರು. ಯೇಸು ಒಂದು ದೋಣಿಯೊಳಕ್ಕೆ ಹೋಗಿ ಕುಳಿತು ಸರೋವರದ ದಡದಿಂದ ಸ್ವಲ್ಪದೂರ ಹೋದನು. ಜನರೆಲ್ಲರೂ ಸರೋವರದ ದಡದ ಮೇಲಿದ್ದರು. ಯೇಸು ದೋಣಿಯಲ್ಲಿ ಕುಳಿತುಕೊಂಡು ಅವರಿಗೆ ಅನೇಕ ಸಾಮ್ಯಗಳ ಮೂಲಕ ಉಪದೇಶಿಸಿದನು. ಆತನು ಹೇಳಿದ್ದೇನೆಂದರೆ:

“ಕೇಳಿರಿ! ಒಬ್ಬ ರೈತನು ಬೀಜ ಬಿತ್ತಲು ಹೊಲಕ್ಕೆ ಹೋದನು. ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಆ ಬೀಜಗಳನ್ನೆಲ್ಲ ತಿಂದುಬಿಟ್ಟವು. ಕೆಲವು ಬೀಜಗಳು ಬಂಡೆಯ ನೆಲದ ಮೇಲೆ ಬಿದ್ದವು. ಆ ನೆಲದಲ್ಲಿ ಸಾಕಷ್ಟು ಮಣ್ಣಿರಲಿಲ್ಲ. ನೆಲವು ಆಳವಾಗಿಲ್ಲದಿದ್ದ ಕಾರಣ ಬೀಜಗಳು ಬಹಳ ಬೇಗನೆ ಮೊಳೆತವು. ಆದರೆ ಸೂರ್ಯನು ಮೇಲೇರಿದಾಗ, ಆಳವಾದ ಬೇರಿಲ್ಲದ ಕಾರಣ ಆ ಸಸಿಗಳು ಒಣಗಿಹೋದವು. ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು, ಒಳ್ಳೆಯ ಗಿಡಗಳನ್ನು ಬೆಳೆಯದಂತೆ ತಡೆದವು. ಆದ್ದರಿಂದ ಆ ಗಿಡಗಳು ಫಲ ಕೊಡಲಿಲ್ಲ. ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಆ ಬೀಜಗಳು ಮೊಳೆತು, ಬೆಳೆದು, ಫಲಬಿಟ್ಟವು. ಕೆಲವು ಗಿಡಗಳು ಮೂವತ್ತರಷ್ಟು ಹೆಚ್ಟಾಗಿ, ಇನ್ನು ಕೆಲವು ಗಿಡಗಳು ಅರವತ್ತರಷ್ಟು ಹೆಚ್ಚಾಗಿ ಮತ್ತು ಬೇರೆ ಕೆಲವು ಗಿಡಗಳು ನೂರರಷ್ಟು ಹೆಚ್ಚಾಗಿ ಫಲಕೊಟ್ಟವು.”

ನಂತರ ಯೇಸು, “ನನ್ನ ಮಾತನ್ನು ಕೇಳುವ ಜನರೇ, ಆಲಿಸಿರಿ!” ಎಂದು ಹೇಳಿದನು.

ಯೇಸು ಸಾಮ್ಯಗಳನ್ನು ಬಳಸಲು ಕಾರಣವೇನು?

(ಮತ್ತಾಯ 13:10-17; ಲೂಕ 8:9-10)

10 ತರುವಾಯ, ಯೇಸು ಒಬ್ಬನೇ ಇದ್ದಾಗ ಹನ್ನೆರಡು ಮಂದಿ ಅಪೊಸ್ತಲರು ಮತ್ತು ಯೇಸುವಿನ ಇತರ ಶಿಷ್ಯರು ಆ ಸಾಮ್ಯಗಳ ಕುರಿತು ಆತನನ್ನು ಕೇಳಿದರು.

11 ಯೇಸು, “ದೇವರ ರಾಜ್ಯದ ಸತ್ಯದ ಗುಟ್ಟನ್ನು ನೀವು ಮಾತ್ರ ತಿಳಿದುಕೊಳ್ಳತಕ್ಕದ್ದು. ಆದರೆ ಇತರ ಎಲ್ಲಾ ಜನರಿಗೆ ನಾನು ಸಾಮ್ಯಗಳ ಮೂಲಕವಾಗಿ ಎಲ್ಲವನ್ನೂ ಹೇಳುತ್ತೇನೆ. 12 ಏಕೆಂದರೆ:

‘ಅವರು ಕಣ್ಣಾರೆ ನೋಡಿಯೂ ಕಾಣರು.
    ಕಿವಿಯಾರೆ ಕೇಳಿಯೂ ಗ್ರಹಿಸರು.
ಅವರು ನೋಡಿ ಗ್ರಹಿಸಿಕೊಂಡರೆ,
    ಪರಿವರ್ತನೆಗೊಂಡು ಪಾಪಕ್ಷಮೆ ಹೊಂದಿಯಾರು’” ಎಂದನು.(A)

ಬಿತ್ತಲ್ಪಟ್ಟ ಬೀಜದ ಕುರಿತು ಯೇಸು ಕೊಟ್ಟ ವಿವರಣೆ

(ಮತ್ತಾಯ 13:18-23; ಲೂಕ 8:11-15)

13 ನಂತರ ಯೇಸು ತನ್ನ ಶಿಷ್ಯರಿಗೆ, “ನಿಮಗೆ ಈ ಸಾಮ್ಯ ಅರ್ಥವಾಯಿತೇ? ನೀವು ಇದನ್ನೇ ಅರ್ಥಮಾಡಿಕೊಳ್ಳದಿದ್ದರೆ ಬೇರೆ ಯಾವ ಸಾಮ್ಯವನ್ನು ಅರ್ಥಮಾಡಿಕೊಳ್ಳುವಿರಿ? 14 ರೈತನು ದೇವರ ವಾಕ್ಯವನ್ನು ಬಿತ್ತುವವನಿಗೆ ಹೋಲಿಕೆಯಾಗಿದ್ದಾನೆ. 15 ಕೆಲವು ಜನರು ದೇವರ ವಾಕ್ಯವನ್ನು ಕೇಳುತ್ತಾರೆ. ಆದರೆ ಅವರಲ್ಲಿ ಬಿತ್ತಿದ ವಾಕ್ಯವನ್ನು ಸೈತಾನನು ಬಂದು ತೆಗೆದುಬಿಡುತ್ತಾನೆ. ಈ ಜನರೇ ದಾರಿಯ ಮಗ್ಗುಲಾಗಿದ್ದಾರೆ.

16 “ಇನ್ನು ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ ಮತ್ತು ಸಂತೋಷದಿಂದ ಅದನ್ನು ಬೇಗನೆ ಸ್ವೀಕರಿಸಿಕೊಳ್ಳುತ್ತಾರೆ. 17 ಆದರೆ ಆ ವಾಕ್ಯವು ತಮ್ಮಲ್ಲಿ ಆಳವಾಗಿ ಬೇರೂರಲು ಅವರು ಅವಕಾಶ ನೀಡುವುದಿಲ್ಲ. ಅವರು ಆ ವಾಕ್ಯವನ್ನು ಸ್ವಲ್ಪಕಾಲ ಮಾತ್ರ ಸ್ವೀಕರಿಸಿಕೊಂಡಿರುತ್ತಾರೆ. ಆ ವಾಕ್ಯದ ದೆಸೆಯಿಂದ ತೊಂದರೆಯಾಗಲಿ ಹಿಂಸೆಯಾಗಲಿ ಬಂದಾಗ ಅವರು ಅದನ್ನು ಬಹುಬೇಗನೆ ತ್ಯಜಿಸುತ್ತಾರೆ. ಇವರೇ ಬೀಜಬಿದ್ದ ಬಂಡೆಯ ನೆಲವಾಗಿದ್ದಾರೆ.

18 “ಇನ್ನು ಕೆಲವರು ಮುಳ್ಳಿನ ಗಿಡಗಳ ನೆಲದಂತಿರುವರು. ಈ ಜನರು ವಾಕ್ಯವನ್ನು ಕೇಳುತ್ತಾರೆ. 19 ಆದರೆ ಈ ಜೀವಿತದ ಚಿಂತೆಗಳು, ಹಣದ ಮೇಲಿನ ವ್ಯಾಮೋಹ ಮತ್ತು ಇತರ ಎಲ್ಲಾ ವಿಧವಾದ ಆಸೆಗಳು ಅವರಲ್ಲಿ ಬಿದ್ದ ವಾಕ್ಯಕ್ಕೆ ಬೆಳೆಯಲು ಅವಕಾಶ ಕೊಡುವುದಿಲ್ಲ. ಆದ್ದರಿಂದ ಅವರ ಜೀವಿತದಲ್ಲಿ ವಾಕ್ಯವು ಫಲ ಫಲಿಸುವುದಿಲ್ಲ.

20 “ಇನ್ನು ಕೆಲವರು ಬೀಜಬಿದ್ದ ಒಳ್ಳೆಯ ನೆಲದಂತಿದ್ದಾರೆ. ಅವರು ವಾಕ್ಯವನ್ನು ಸ್ವೀಕರಿಸಿಕೊಂಡು ಫಲವನ್ನು ಫಲಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಮೂವತ್ತರಷ್ಟು ಹೆಚ್ಚಾಗಿ, ಇನ್ನು ಕೆಲವು ಸಂದರ್ಭಗಳಲ್ಲಿ ಅರವತ್ತರಷ್ಟು ಹೆಚ್ಚಾಗಿ, ಮತ್ತೆ ಕೆಲವು ಸಂಧರ್ಭಗಳಲ್ಲಿ ನೂರರಷ್ಟು ಹೆಚ್ಚಾಗಿ ಫಲ ಫಲಿಸುತ್ತಾರೆ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International