Add parallel Print Page Options

ಬಿತ್ತನೆಯ ಕುರಿತು ಯೇಸುವಿನ ವಿವರಣೆ

(ಮಾರ್ಕ 4:13-20; ಲೂಕ 8:11-15)

18 “ಹೀಗಿರಲು ಒಕ್ಕಲಿಗನ ಕುರಿತಾದ ಸಾಮ್ಯದ ಅರ್ಥವನ್ನು ಲಾಲಿಸಿರಿ.

19 “ಮಗ್ಗುಲಲ್ಲಿ ಬಿದ್ದ ಬೀಜ ಅಂದರೇನು? ಪರಲೋಕರಾಜ್ಯವನ್ನು ಕುರಿತು ಬೋಧಿಸಿದ್ದನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳದೆ ಇರುವ ಮನುಷ್ಯನೇ ಬೀಜ ಬಿದ್ದ ದಾರಿ ಮಗ್ಗುಲಾಗಿರುವನು. ಕೆಡುಕನು (ಸೈತಾನನು) ಬಂದು ಆ ಮನುಷ್ಯನ ಹೃದಯದಲ್ಲಿ ಬಿತ್ತಿದ್ದ ಬೀಜಗಳನ್ನು ತೆಗೆದುಹಾಕುತ್ತಾನೆ.

20 “ಬಂಡೆನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದ ಕೂಡಲೇ ಅದನ್ನು ಸಂತೋಷದಿಂದ ಅಂಗೀಕರಿಸುವ ಮನುಷ್ಯನೇ ಬೀಜ ಬಿದ್ದ ಬಂಡೆನೆಲವಾಗಿರುವನು. 21 ಆದರೆ ಆ ಮನುಷ್ಯನು ಬೋಧನೆಯನ್ನು ತನ್ನ ಜೀವಿತದಲ್ಲಿ ಬೇರೂರಿಸಿಕೊಳ್ಳುವುದಿಲ್ಲ. ಅವನು ಆ ಬೋಧನೆಯನ್ನು ಸ್ವಲ್ಪಕಾಲ ಮಾತ್ರ ಅನುಸರಿಸುವನು. ಆ ಬೋಧನೆಯನ್ನು ಅಂಗೀಕರಿಸಿದ್ದರಿಂದ ತನಗೆ ಕಷ್ಟವಾಗಲಿ ಹಿಂಸೆಯಾಗಲಿ ಬಂದಾಗ ಅದನ್ನು ಬೇಗನೆ ಬಿಟ್ಟುಬಿಡುವನು.

22 “ಮುಳ್ಳುಗಿಡಗಳ ನಡುವೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದರೂ ಜೀವನದ ಚಿಂತೆಗಳಿಂದ ಮತ್ತು ಹಣದ ಮೇಲಿನ ಪ್ರೀತಿಯಿಂದ ಬೋಧನೆಯನ್ನು ತನ್ನಲ್ಲಿ ಬೆಳೆಯದಂತೆ ಮಾಡುವವನೇ ಬೀಜ ಬಿದ್ದ ಮುಳ್ಳುಗಿಡಗಳ ನೆಲವಾಗಿರವನು. ಆದ್ದರಿಂದ ಬೋಧನೆಯು ಆ ಮನುಷ್ಯನ ಜೀವಿತದಲ್ಲಿ ಫಲ ಕೊಡುವುದಿಲ್ಲ.

23 “ಒಳ್ಳೆಯ ನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿ ಅದನ್ನು ಅರ್ಥಮಾಡಿಕೊಂಡ ವ್ಯಕ್ತಿಯೇ ಬೀಜ ಬಿದ್ದ ಒಳ್ಳೆಯ ನೆಲವಾಗಿರುವನು. ಆ ಮನುಷ್ಯನು ಬೆಳೆದು ಕೆಲವು ಸಾರಿ ನೂರರಷ್ಟು ಕೆಲವು ಸಾರಿ ಅರವತ್ತರಷ್ಟು ಮತ್ತು ಕೆಲವು ಸಾರಿ ಮೂವತ್ತರಷ್ಟು ಫಲ ಕೊಡುವನು” ಎಂದು ಹೇಳಿದನು.

Read full chapter