Revised Common Lectionary (Complementary)
ಸಬ್ಬತ್ ದಿನದ ಸ್ತುತಿಗೀತೆ.
92 ಯೆಹೋವನೇ, ನಿನ್ನನ್ನು ಸ್ತುತಿಸುವುದೂ
ಮಹೋನ್ನತನಾದ ದೇವರೇ, ನಿನ್ನ ಹೆಸರನ್ನು ಕೊಂಡಾಡುವುದೂ ಯುಕ್ತವಾಗಿದೆ.
2-3 ಹತ್ತು ತಂತಿವಾದ್ಯಗಳನ್ನೂ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ನುಡಿಸುತ್ತಾ
ನಿನ್ನ ಪ್ರೀತಿಯ ಕುರಿತು ಮುಂಜಾನೆಯಲ್ಲಿಯೂ
ನಿನ್ನ ನಂಬಿಗಸ್ತಿಕೆಯ ಕುರಿತು ರಾತ್ರಿಯಲ್ಲಿಯೂ ಹಾಡುವುದು ಯುಕ್ತವಾಗಿದೆ.
4 ಯೆಹೋವನೇ, ನಿನ್ನ ಕಾರ್ಯಗಳಿಂದ ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಿರುವೆ.
ಅವುಗಳ ಕುರಿತು ನಾವು ಹರ್ಷದಿಂದ ಹಾಡುವೆವು.
12-13 ನೀತಿವಂತರಾದರೋ ಯೆಹೋವನ ಆಲಯದಲ್ಲಿ
ಬೆಳೆಯುತ್ತಿರುವ ಲೆಬನೋನಿನ ದೇವದಾರು ವೃಕ್ಷದಂತಿರುವರು.
ನೀತಿವಂತರಾದರೋ ನಮ್ಮ ದೇವಾಲಯದ ಅಂಗಳದಲ್ಲಿ
ಮೊಗ್ಗು ಬಿಡುತ್ತಿರುವ ಖರ್ಜೂರದ ಮರಗಳಂತಿರುವರು.
14 ಅವರು ಮುಪ್ಪಿನಲ್ಲಿಯೂ ಪುಷ್ಟಿಯಾಗಿ ಬೆಳೆದಿರುವ
ಎಲೆಮರಗಳಂತೆ ಫಲಿಸುವರು.
15 ಯೆಹೋವನು ಒಳ್ಳೆಯವನೆಂಬುವುದಕ್ಕೆ
ಅವರು ದೃಷ್ಟಾಂತವಾಗಿರುವರು.
ಆತನೇ ನನ್ನ ಬಂಡೆ.
ಆತನು ಎಂದಿಗೂ ತಪ್ಪು ಮಾಡನು.
14 ಆಗ ದೇವರಾದ ಯೆಹೋವನು ಹಾವಿಗೆ,
“ನೀನು ಮಾಡಿದ ಈ ಕೆಟ್ಟಕಾರ್ಯದಿಂದ
ನಿನಗೂ ಕೇಡುಗಳಾಗುತ್ತವೆ.[a]
ಬೇರೆಲ್ಲಾ ಪ್ರಾಣಿಗಳಿಗಿಂತಲೂ
ನಿನಗೆ ಹೀನಸ್ಥಿತಿ ಉಂಟಾಗುವುದು.
ನೀನು ಹೊಟ್ಟೆಯಿಂದಲೇ ತೆವಳಿಕೊಂಡು
ನಿನ್ನ ಜೀವಮಾನವೆಲ್ಲಾ ಮಣ್ಣನ್ನೇ ತಿನ್ನುವೆ.
15 ನೀನು ಮತ್ತು ಸ್ತ್ರೀಯು ಒಬ್ಬರಿಗೊಬ್ಬರು ವೈರಿಗಳಾಗಿರುವಂತೆ ಮಾಡುವೆನು.
ನಿನ್ನ ಮಕ್ಕಳು ಮತ್ತು ಅವಳ ಮಕ್ಕಳು[b] ಒಬ್ಬರಿಗೊಬ್ಬರು ವೈರಿಗಳಾಗಿರುವರು.
ನೀನು ಆಕೆಯ ಮಗನ ಪಾದವನ್ನು ಕಚ್ಚುವೆ.
ಆದರೆ ಅವನು ನಿನ್ನ ತಲೆಯನ್ನು ಜಜ್ಜಿ ಹಾಕುವನು” ಎಂದನು.
16 ಬಳಿಕ ದೇವರಾದ ಯೆಹೋವನು ಸ್ತ್ರೀಗೆ,
“ನೀನು ಗರ್ಭಿಣಿಯಾಗಿರುವಾಗ
ಬಹು ಸಂಕಟಪಡುವೆ.
ನೀನು ಮಕ್ಕಳನ್ನು ಹೆರುವಾಗ
ಬಹಳ ವೇದನೆಪಡುವೆ.
ನೀನು ಗಂಡನನ್ನು ಬಹಳವಾಗಿ ಇಷ್ಟಪಡುವೆ;
ಆದರೆ ಅವನು ನಿನ್ನನ್ನು ಆಳುವನು” ಎಂದನು.
17 ಆಮೇಲೆ ದೇವರಾದ ಯೆಹೋವನು ಪುರುಷನಿಗೆ,
“ವಿಶೇಷವಾದ ಆ ಮರದ ಹಣ್ಣನ್ನು ತಿನ್ನಕೂಡದೆಂದು ನಾನು ನಿನಗೆ ಆಜ್ಞಾಪಿಸಿದ್ದೆ.
ಆದರೆ ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ಆ ಮರದ ಹಣ್ಣನ್ನು ತಿಂದೆ.
ನಿನ್ನ ದೆಸೆಯಿಂದ ನಾನು ಭೂಮಿಯನ್ನು ಶಪಿಸುವೆನು.
ಭೂಮಿಯು ಫಲಿಸುವ ಆಹಾರಕ್ಕಾಗಿ ನೀನು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಕಷ್ಟಪಟ್ಟು ದುಡಿಯಲೇಬೇಕು.
18 ಭೂಮಿಯು ನಿನಗೋಸ್ಕರ ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸುವುದು.
ಹೊಲದಲ್ಲಿ ಬೆಳೆಯುವ ಬೆಳೆಯನ್ನು ನೀನು ತಿನ್ನುವೆ.[c]
19 ನಿನ್ನ ಮುಖದಲ್ಲಿ ಬೆವರು ಹರಿಯುವ ತನಕ
ನೀನು ಆಹಾರಕ್ಕಾಗಿ ಕಷ್ಟಪಟ್ಟು ದುಡಿಯುವೆ.
ನೀನು ಸಾಯುವ ದಿನದವರೆಗೆ ಕಷ್ಟಪಟ್ಟು ಕೆಲಸ ಮಾಡುವೆ.
ಆಮೇಲೆ ನೀನು ಮಣ್ಣಾಗುವೆ.
ನಾನು ನಿನ್ನನ್ನು ನಿರ್ಮಿಸಲು ಮಣ್ಣನ್ನು ಉಪಯೋಗಿಸಿದೆ.
ನೀನು ಸತ್ತಾಗ ಮತ್ತೆ ಮಣ್ಣೇ ಆಗುವೆ” ಎಂದನು.
20 ಆದಾಮನು ತನ್ನ ಹೆಂಡತಿಗೆ ಹವ್ವ ಎಂದು ಹೆಸರಿಟ್ಟನು. ಆದಾಮನು ಹವ್ವ ಎಂದು ಹೆಸರಿಡಲು ಕಾರಣವೇನೆಂದರೆ ಈ ಲೋಕದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಆಕೆಯೇ ಮೂಲ ತಾಯಿ.
21 ದೇವರಾದ ಯೆಹೋವನು ಪ್ರಾಣಿಯ ಚರ್ಮದಿಂದ ಉಡುಪುಗಳನ್ನು ಮಾಡಿ ಆದಾಮನಿಗೆ ಮತ್ತು ಅವನ ಹೆಂಡತಿಗೆ ತೊಡಿಸಿದನು.
22 ದೇವರಾದ ಯೆಹೋವನು, “ಮನುಷ್ಯನು ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ತಿಳಿದುಕೊಂಡು ನಮ್ಮಂತಾದನು. ಈಗ ಮನುಷ್ಯನು ಜೀವದಾಯಕ ಮರದ ಹಣ್ಣನ್ನೇನಾದರೂ ತೆಗೆದುಕೊಂಡು ತಿಂದರೆ ಅವನು ಸದಾಕಾಲ ಬದುಕುವನು” ಅಂದುಕೊಂಡನು.
23 ಆದ್ದರಿಂದ ಆತನು ಆದಾಮನನ್ನು ಅವನು ಉತ್ಪತ್ತಿಗೊಂಡಿದ್ದ ನೆಲದಲ್ಲಿ ವ್ಯವಸಾಯ ಮಾಡಲು ಬಲವಂತವಾಗಿ ಏದೆನ್ ತೋಟದಿಂದ ಹೊರಡಿಸಿಬಿಟ್ಟನು. 24 ಅಲ್ಲದೆ ಏದೆನ್ ತೋಟವನ್ನು ಸಂರಕ್ಷಿಸುವುದಕ್ಕಾಗಿ ಆತನು ಕೆರೂಬಿದೂತರನ್ನು ತೋಟದ ಪೂರ್ವಭಾಗದಲ್ಲಿ ಇರಿಸಿದನು. ಇದಲ್ಲದೆ ಆತನು ಬೆಂಕಿಯ ಖಡ್ಗವನ್ನು ಅಲ್ಲಿಟ್ಟನು. ಈ ಖಡ್ಗವು ಎಲ್ಲಾ ದಿಕ್ಕುಗಳತ್ತ ತಿರುಗುತ್ತಾ ಧಗಧಗನೆ ಪ್ರಜ್ವಲಿಸುತ್ತಾ ಜೀವದಾಯಕ ಮರದ ಮಾರ್ಗವನ್ನು ಕಾಯುತ್ತಿತ್ತು.
ಜನರನ್ನು ರಕ್ಷಿಸಲು ಕ್ರಿಸ್ತನು ಜನರಂತೆಯೇ ಆದನು
5 ಮುಂದೆ ಬರುವ ನೂತನ ಲೋಕವನ್ನು ಆಳಲು ದೇವರು ದೇವದೂತರನ್ನು ಆರಿಸಲಿಲ್ಲ. ಈಗ ನಾವು ನಿಮಗೆ ಹೇಳುತ್ತಿರುವುದು ಆ ಲೋಕದ ಕುರಿತಾಗಿಯೇ. 6 ಅದನ್ನು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ:
“ದೇವರೇ, ನೀನು ಮಾನವರನ್ನು ಏಕೆ ನೆನಪುಮಾಡಿಕೊಳ್ಳಬೇಕು?
ನೀನು ಮನುಷ್ಯನಿಗೋಸ್ಕರ ಏಕೆ ಚಿಂತಿಸಬೇಕು?
ಅವನು ಅಷ್ಟೊಂದು ಮುಖ್ಯನಾದವನೇ?
7 ಕೇವಲ ಸ್ವಲ್ಪಕಾಲದವರೆಗೆ ನೀನು ಅವನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆ ಮಾಡಿದೆ.
ನೀನು ಅವನಿಗೆ ವೈಭವವನ್ನೂ ಗೌರವವನ್ನೂ ಕಿರೀಟವಾಗಿ ಇಟ್ಟಿರುವೆ.
8 ನೀನು ಎಲ್ಲವನ್ನು ಅವನಿಗೆ ಅಧೀನಗೊಳಿಸಿರುವೆ.”(A)
ದೇವರು ಎಲ್ಲವನ್ನೂ ಆತನಿಗೆ ಅಧೀನಗೊಳಿಸಿದ್ದರೆ, ಆತನು ಆಳದೆ ಇರುವಂಥದ್ದು ಒಂದಾದರೂ ಇಲ್ಲ. ಆದರೆ ಸಮಸ್ತದ ಮೇಲೆ ಅವನು ಆಳ್ವಿಕೆ ಮಾಡುತ್ತಿರುವುದು ನಮಗಿನ್ನೂ ಕಾಣುತ್ತಿಲ್ಲ. 9 ಕೇವಲ ಸ್ವಲ್ಪಕಾಲದವರೆಗೆ ಯೇಸುವು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಲ್ಪಟ್ಟನು. ಆದರೆ ನಾವೀಗ ವೈಭವ, ಗೌರವಗಳೆಂಬ ಕಿರೀಟ ಧರಿಸಿರುವ ಆತನನ್ನು ನೋಡುತ್ತೇವೆ. ಏಕೆಂದರೆ ದೇವರ ಕೃಪೆಯ ನಿಮಿತ್ತ ಆತನು ಎಲ್ಲರಿಗೋಸ್ಕರ ಸಂಕಟ ಅನುಭವಿಸಿ ಮರಣಹೊಂದಿದನು.
Kannada Holy Bible: Easy-to-Read Version. All rights reserved. © 1997 Bible League International