Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 65

ರಚನೆಗಾರ: ದಾವೀದ.

65 ದೇವರೇ, ಚೀಯೋನಿನಲ್ಲಿ ನಾವು ನಿನ್ನನ್ನು ಸ್ತುತಿಸುವೆವು.
    ನಾವು ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆವು.
ಪ್ರಾರ್ಥನೆಯನ್ನು ಕೇಳುವಾತನೇ,
    ಜನರೆಲ್ಲರೂ ನಿನ್ನ ಬಳಿಗೆ ಬರುವರು.
ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ;
    ನಮ್ಮನ್ನು ಆ ಪಾಪಗಳಿಂದ ಬಿಡಿಸು.
ನಿನ್ನ ಸೇವಕರನ್ನು ಆರಿಸಿಕೊಂಡಾತನು ನೀನೇ.
ನಿನ್ನ ಆಲಯಕ್ಕೆ ಬಂದು ನಿನ್ನನ್ನು ಆರಾಧಿಸಲು
    ನಮ್ಮನ್ನು ಆರಿಸಿಕೊಂಡಾತನು ನೀನೇ.
ನಿನ್ನ ಮಹಾಪವಿತ್ರ ಆಲಯದ ಸೌಭಾಗ್ಯದಿಂದ
    ನಾವು ಉಲ್ಲಾಸಗೊಂಡಿದ್ದೇವೆ.
ನಮ್ಮ ರಕ್ಷಕನಾದ ದೇವರೇ,
    ನೀತಿವಂತರ ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸು;
ಅವರಿಗೋಸ್ಕರ ಮಹತ್ಕಾರ್ಯಗಳನ್ನು ನಡೆಸು.
    ಸರ್ವಭೂನಿವಾಸಿಗಳ ನಂಬಿಕೆಗೆ ನೀನೇ ಆಧಾರ.
ಸ್ವಬಲದಿಂದ ಪರ್ವತಗಳನ್ನು ನಿರ್ಮಿಸಿದಾತನು ದೇವರೇ.
    ಆತನು “ಶೌರ್ಯ” ಎಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾನೆ.
ಭೋರ್ಗರೆಯುವ ಸಮುದ್ರಗಳನ್ನೂ
    ಅನ್ಯಜನಾಂಗಗಳ ದಂಗೆಯನ್ನೂ ಶಾಂತಗೊಳಿಸುವಾತನು ದೇವರೇ.
ಭೂಲೋಕದಾದ್ಯಂತದಲ್ಲಿರುವ ಜನರು ನಿನ್ನ ಮಹತ್ಕಾರ್ಯಗಳಿಂದ ಆಶ್ಚರ್ಯಚಕಿತರಾಗಿದ್ದಾರೆ.
    ಸೂರ್ಯೋದಯವೂ ಸೂರ್ಯಸ್ತಮಾನವೂ ನಮ್ಮನ್ನು ಹರ್ಷಗೊಳಿಸುತ್ತವೆ.
ದೇವರೇ, ಭೂಪಾಲಕನು ನೀನೇ.
    ಭೂಮಿಗೆ ನೀರೆರೆದು ಹದಗೊಳಿಸುವಾತನು ನೀನೇ.
ತೊರೆಗಳನ್ನು ತುಂಬಿಸಿ
    ಸುಗ್ಗಿಯನ್ನು ಬರಮಾಡುವಾತನು ನೀನೇ.
10 ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ,
    ಹೆಂಟೆಗಳನ್ನು ಕರಗಿಸಿ,
ಭೂಮಿಯನ್ನು ಮೃದುಗೊಳಿಸಿ,
    ಎಳೆ ಸಸಿಗಳನ್ನು ಬೆಳೆಸುವಾತನು ನೀನೇ.
11 ಹೊಸ ವರ್ಷವನ್ನು ಸಮೃದ್ಧಿಕರವಾದ ಸುಗ್ಗಿಯೊಂದಿಗೆ ಆರಂಭಿಸುವಾತನು ನೀನೇ.
    ಅನೇಕ ಬೆಳೆಗಳಿಂದ ಬಂಡಿಗಳನ್ನು ತುಂಬಿಸುವಾತನು ನೀನೇ.
12 ಅರಣ್ಯವು ಹುಲ್ಲಿನಿಂದ ಆವೃತವಾಗಿದೆ.
    ಬೆಟ್ಟಗುಡ್ಡಗಳು ಸಮೃದ್ಧಿಕರ ಫಸಲಿನಿಂದ ಕಂಗೊಳಿಸುತ್ತವೆ.
13 ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ.
    ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ.
ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ.

ವಿಮೋಚನಕಾಂಡ 7:14-24

ನೀರು ರಕ್ತವಾದದ್ದು

14 ಆಗ ಯೆಹೋವನು ಮೋಶೆಗೆ, “ಫರೋಹನ ಹೃದಯ ಮೊಂಡಾಗಿದೆ; ಅವನು ಜನರನ್ನು ಹೋಗಗೊಡಿಸುವುದಿಲ್ಲ. 15 ಮುಂಜಾನೆ ಅವನು ನದಿಗೆ ಹೋಗುವನು. ಸರ್ಪವಾಗಿ ಮಾರ್ಪಾಟಾದ ಊರುಗೋಲನ್ನು ತೆಗೆದುಕೊಂಡು ನದಿಯ ತೀರಕ್ಕೆ ಹೋಗಿ ಅವನನ್ನು ಭೇಟಿಯಾಗಿ ಅವನಿಗೆ, 16 ‘ಇಬ್ರಿಯರ ದೇವರಾದ ಯೆಹೋವನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ. ಆತನ ಜನರು ಅರಣ್ಯದಲ್ಲಿ ಆತನನ್ನು ಆರಾಧಿಸುವುದಕ್ಕೆ ನೀನು ಅವರಿಗೆ ಅಪ್ಪಣೆಕೊಡಬೇಕೆಂದು ಆತನು ನಿನಗೆ ಆಜ್ಞಾಪಿಸುತ್ತಾನೆ. ಇದುವರೆಗೆ ನೀನು ಯೆಹೋವನ ಮಾತಿಗೆ ಕಿವಿಗೊಡಲಿಲ್ಲ. 17 ಆದ್ದರಿಂದ ಆತನೇ ಯೆಹೋವನೆಂದು ನಿನಗೆ ತಿಳಿಯಲೆಂದು ನನ್ನ ಕೈಯಲ್ಲಿರುವ ಕೋಲಿನಿಂದ ನೈಲ್ ನದಿಯ ನೀರನ್ನು ಹೊಡೆಯುವೆನು; ಆ ನದಿಯ ನೀರು ರಕ್ತವಾಗುವುದು. 18 ನದಿಯಲ್ಲಿರುವ ಮೀನುಗಳು ಸಾಯುವವು; ನದಿಯು ಹೊಲಸಾಗುವುದು; ಈಜಿಪ್ಟಿನವರು ನದಿಯ ನೀರನ್ನು ಕುಡಿಯಲಾಗುವುದಿಲ್ಲ’ ಎಂದು ಹೇಳಬೇಕು” ಅಂದನು.

19 ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೈಯಲ್ಲಿರುವ ಊರುಗೋಲನ್ನು ನದಿಗಳ, ಕಾಲುವೆಗಳ, ಕೆರೆಗಳ ಮತ್ತು ನೀರಿರುವ ಪ್ರತಿಯೊಂದು ಸ್ಥಳದ ಮೇಲೆ ಚಾಚು’ ಎಂದು ಹೇಳು. ಅವನು ಚಾಚಿದಾಗ ನೀರೆಲ್ಲಾ ರಕ್ತವಾಗುವುದು. ಮರದ ಮತ್ತು ಕಲ್ಲಿನ ಪಾತ್ರೆಗಳಲ್ಲಿರುವ ನೀರು ಸಹ ರಕ್ತವಾಗುವುದು” ಎಂದು ಹೇಳಿದನು.

20 ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಆರೋನರು ಮಾಡಿದರು. ಆರೋನನು ಫರೋಹನ ಮತ್ತು ಅವನ ಅಧಿಕಾರಿಗಳ ಮುಂದೆ ಕೋಲನ್ನು ಎತ್ತಿ ನೈಲ್ ನದಿಯ ನೀರನ್ನು ಹೊಡೆದನು. ಆಗ ನದಿಯ ನೀರೆಲ್ಲಾ ರಕ್ತವಾಯಿತು. 21 ನದಿಯಲ್ಲಿದ್ದ ಮೀನುಗಳು ಸತ್ತವು; ನದಿಯು ಹೊಲಸಾಗತೊಡಗಿತು. ಆದ್ದರಿಂದ ಈಜಿಪ್ಟಿನವರು ನದಿಯ ನೀರನ್ನು ಕುಡಿಯಲಾಗಲಿಲ್ಲ. ಈಜಿಪ್ಟಿನ ನೀರೆಲ್ಲಾ ರಕ್ತವೇ ಆಗಿತ್ತು.

22 ಮಾಂತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇ ರೀತಿ ಮಾಡಿದರು. ಆದ್ದರಿಂದ ಫರೋಹನು ಮೋಶೆ ಆರೋನರ ಮಾತನ್ನು ಕೇಳಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು. 23 ಫರೋಹನು ತನ್ನ ಮನೆಗೆ ಹೊರಟುಹೋದನು. ಮೋಶೆ ಆರೋನರು ಮಾಡಿದ ಮಹತ್ಕಾರ್ಯಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ.

24 ಈಜಿಪ್ಟಿನವರು ನದಿಯ ನೀರನ್ನು ಕುಡಿಯಲಾಗಲಿಲ್ಲ. ಆದ್ದರಿಂದ ಅವರು ನದಿಯ ಸುತ್ತಲೂ ಕುಡಿಯುವ ನೀರಿಗಾಗಿ ಬಾವಿಗಳನ್ನು ಅಗೆದರು.

ಅಪೊಸ್ತಲರ ಕಾರ್ಯಗಳು 27:13-38

ಬಿರುಗಾಳಿ

13 ಬಳಿಕ ಒಳ್ಳೆಯ ಗಾಳಿಯು ದಕ್ಷಿಣದ ಕಡೆಯಿಂದ ಬೀಸತೊಡಗಿತು. ಹಡಗಿನಲ್ಲಿದ್ದ ಜನರು, “ನಮಗೆ ಬೇಕಾಗಿದ್ದು ಈ ಗಾಳಿಯೇ, ಈಗ ಅದು ನಮಗೆ ದೊರಕಿತು!” ಎಂದು ಭಾವಿಸಿಕೊಂಡರು. ಆದ್ದರಿಂದ ಅವರು ಹಡಗಿನ ಲಂಗರನ್ನು[a] ಮೇಲಕ್ಕೆ ಎಳೆದರು. ನಾವು ಕ್ರೇಟ್ ದ್ವೀಪದ ಕರಾವಳಿಯಲ್ಲೇ ನೌಕಾಯಾನ ಮಾಡಿದೆವು. 14 ಆದರೆ “ಈಶಾನ್ಯ ಮಾರುತ”[b] ಎಂಬ ಬಿರುಗಾಳಿಯು ದ್ವೀಪದಲ್ಲಿ ಬೀಸತೊಡಗಿ 15 ಹಡಗನ್ನು ಬಡಿದುಕೊಂಡು ಹೋಯಿತು. ಹಡಗು ಅದಕ್ಕೆ ಎದುರಾಗಿ ಚಲಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಗಾಳಿಯು ಬೀಸುವ ಕಡೆಗೆ ಹೋಗತೊಡಗಿದೆವು.

16 ನಾವು “ಕಾವ್ದ” ಎಂಬ ಚಿಕ್ಕ ದ್ವೀಪದ ಮರೆಯಲ್ಲಿ ಹಾದುಹೋದೆವು. ಆಗ ನಾವು ಹಡಗಿನಲ್ಲಿದ್ದ ಚಿಕ್ಕ ದೋಣಿಯನ್ನು ಒಳಗೆ ತೆಗೆದುಕೊಳ್ಳಲು ಸಾಧ್ಯವಾಯಿತು. ಆದರೂ ಆ ಕೆಲಸ ಬಹಳ ಪ್ರಯಾಸಕರವಾಗಿತ್ತು. 17 ಬಳಿಕ ಹಡಗು ಒಡೆದುಹೋಗದಂತೆ ಹಡಗಿನ ಸುತ್ತಲೂ ಹಗ್ಗಗಳನ್ನು ಬಿಗಿದರು. ಅನಂತರ “ಸರ್ತಿಸ್” ಎಂಬ ಕಳ್ಳುಸುಬಿನಲ್ಲಿ ಹಡಗು ಎಲ್ಲಿ ಸಿಕ್ಕಿಕೊಳ್ಳುವುದೊ ಎಂದು ಅವರಿಗೆ ಭಯವಾಯಿತು. ಆದ್ದರಿಂದ ಅವರು ಹಾಯಿಯನ್ನು[c] ಇಳಿಸಿ ಹಡಗನ್ನು ಬಡಿದುಕೊಂಡು ಹೋಗಲು ಗಾಳಿಗೆ ಅವಕಾಶ ಮಾಡಿಕೊಟ್ಟರು.

18 ಮರುದಿನ, ಬಿರುಗಾಳಿ ರಭಸವಾಗಿ ಬೀಸುತ್ತಿದ್ದುದರಿಂದ ಜನರು ಹಡಗಿನಲ್ಲಿದ್ದ ಕೆಲವು ಸಾಮಾನುಗಳನ್ನು ಎಸೆದುಬಿಟ್ಟರು. 19 ಒಂದು ದಿನವಾದ ನಂತರ ಹಡಗಿನ ಉಪಕರಣಗಳನ್ನು ತಮ್ಮ ಕೈಯಾರೆ ಎಸೆದು ಬಿಟ್ಟರು. 20 ಅನೇಕ ದಿನಗಳವರೆಗೆ ನಾವು ಸೂರ್ಯನನ್ನಾಗಲಿ ನಕ್ಷತ್ರಗಳನ್ನಾಗಲಿ ನೋಡಲಾಗಲಿಲ್ಲ. ಬಿರುಗಾಳಿಯು ಭೀಕರವಾಗಿತ್ತು. ನಾವು ಜೀವಸಹಿತ ಉಳಿಯುತ್ತೇವೆ ಎಂಬ ನಿರೀಕ್ಷೆ ಕಳೆದುಹೋಯಿತು. ನಾವು ಸಾಯುತ್ತೇವೆ ಎಂದು ಭಾವಿಸಿಕೊಂಡೆವು.

21 ಆ ಜನರು ಬಹಳ ದಿನಗಳವರೆಗೆ ಊಟಮಾಡಲಿಲ್ಲ. ಆಗ ಒಂದು ದಿನ ಪೌಲನು ಎದ್ದುನಿಂತುಕೊಂಡು ಅವರಿಗೆ, “ಜನರೇ, ಕ್ರೇಟ್ ದ್ವೀಪದಿಂದ ಹೊರಡಬೇಡಿರಿ ಎಂದು ನಾನು ನಿಮಗೆ ಹೇಳಿದೆ. ನೀವು ನನ್ನ ಮಾತನ್ನು ಕೇಳಬೇಕಿತ್ತು. ಆಗ ನಿಮಗೆ ಇಷ್ಟು ಕಷ್ಟವಾಗಲಿ ನಷ್ಟವಾಗಲಿ ಆಗುತ್ತಿರಲಿಲ್ಲ. 22 ಈಗಲಾದರೋ ನೀವು ಸಂತೋಷದಿಂದ ಇರಬೇಕೆಂದು ನಾನು ನಿಮಗೆ ಹೇಳುತ್ತಿದ್ದೇನೆ. ನಿಮ್ಮಲ್ಲಿ ಒಬ್ಬರೂ ಸಾಯುವುದಿಲ್ಲ! ಆದರೆ ಹಡಗು ನಾಶವಾಗುವುದು. 23 ಕಳೆದ ರಾತ್ರಿ ದೇವರ ಬಳಿಯಿಂದ ದೂತನೊಬ್ಬನು ನನ್ನ ಬಳಿಗೆ ಬಂದಿದ್ದನು. ಆ ದೇವರನ್ನೇ ನಾನು ಆರಾಧಿಸುವುದು. ನಾನು ಆತನವನು. 24 ದೇವರ ದೂತನು, ‘ಪೌಲನೇ, ಭಯಪಡಬೇಡ! ನೀನು ಸೀಸರನ ಮುಂದೆ ನಿಂತುಕೊಳ್ಳಬೇಕು. ನಿನ್ನೊಂದಿಗೆ ನೌಕಾಯಾನ ಮಾಡತ್ತಿರುವ ಎಲ್ಲಾ ಜನರ ಪ್ರಾಣಗಳನ್ನು ಉಳಿಸುವುದಾಗಿ ದೇವರು ನಿನಗೆ ವಾಗ್ದಾನವನ್ನು ಮಾಡಿದ್ದಾನೆ’ ಎಂದು ಹೇಳಿದನು. 25 ಆದ್ದರಿಂದ ಜನರೇ, ಸಂತೋಷದಿಂದಿರಿ! ನಾನು ದೇವರಲ್ಲಿ ಭರವಸೆಯಿಟ್ಟಿದ್ದೇನೆ. ಆತನ ದೂತನು ಹೇಳಿದಂತೆ ಪ್ರತಿಯೊಂದೂ ನೆರವೇರುವುದು. 26 ಆದರೆ ನಾವು ಒಂದು ದ್ವೀಪದ ದಡವನ್ನು ತಲುಪಬೇಕಾಗಿದೆ” ಎಂದು ಹೇಳಿದನು.

27 ಹದಿನಾಲ್ಕನೆಯ ರಾತ್ರಿ ನಾವು ಆದ್ರಿಯ ಸಮುದ್ರದಲ್ಲಿ ಅತ್ತಿತ್ತ ಹೊಯ್ದಾಡುತ್ತಾ ಪ್ರಯಾಣವನ್ನು ಮುಂದುವರಿಸಿದೆವು. ನಾವು ಭೂಮಿಗೆ ಸಮೀಪವಾಗಿದ್ದೇವೆಂದು ನಾವಿಕರು ಆಲೋಚಿಸಿಕೊಂಡರು. 28 ಅವರು ಅಳತೆ ಗುಂಡನ್ನು ಹಗ್ಗದ ತುದಿಗೆ ಕಟ್ಟಿ ಹಗ್ಗವನ್ನು ನೀರಿನಲ್ಲಿ ಇಳಿಯಬಿಟ್ಟರು. ನೀರು ನೂರಿಪ್ಪತ್ತು ಅಡಿ ಆಳವಾಗಿತ್ತು. ಅವರು ಇನ್ನೂ ಸ್ವಲ್ಪದೂರ ಹೋಗಿ ಹಗ್ಗವನ್ನು ನೀರಿನಲ್ಲಿ ಇಳಿಯಬಿಟ್ಟರು. ಅಲ್ಲಿ ನೀರಿನ ಆಳ ತೊಂಭತ್ತು ಅಡಿಯಿತ್ತು. 29 ಹಡಗು ಬಂಡೆಗೆ ಅಪ್ಪಳಿಸಬಹುದೆಂದು ನಾವಿಕರು ಭಯಪಟ್ಟರು. ಆದ್ದರಿಂದ ಅವರು ನಾಲ್ಕು ಲಂಗರುಗಳನ್ನು ನೀರಿನೊಳಗೆ ಇಳಿಯಬಿಟ್ಟರು. ಬಳಿಕ ಅವರು ಬೆಳಗಾಗಲೆಂದು ಪ್ರಾರ್ಥಿಸಿದರು. 30 ನಾವಿಕರಲ್ಲಿ ಕೆಲವರು ಹಡಗನ್ನು ಬಿಟ್ಟುಹೋಗಬೇಕೆಂದಿದ್ದರು. ಅವರು ದೋಣಿಯನ್ನು ನೀರಿಗೆ ಇಳಿಸಿ, ಹಡಗಿನ ಮುಂಭಾಗದಲ್ಲಿ ಇನ್ನೂ ಕೆಲವು ಲಂಗರುಗಳನ್ನು ಇಳಿಸುವವರಂತೆ ನಟಿಸಿದರು. 31 ಆದರೆ ಪೌಲನು ಸೇನಾಧಿಕಾರಿಗೆ ಮತ್ತು ಇತರ ಸೈನಿಕರಿಗೆ, “ಈ ನಾವಿಕರು ಹಡಗಿನಲ್ಲಿ ಇರದಿದ್ದರೆ ನಿಮ್ಮ ಪ್ರಾಣಗಳು ಉಳಿಯಲು ಸಾಧ್ಯವಿಲ್ಲ” ಎಂದು ಹೇಳಿದನು. 32 ಆದ್ದರಿಂದ ಸೈನಿಕರು ಹಗ್ಗಗಳನ್ನು ಕತ್ತರಿಸಿ ದೋಣಿಯನ್ನು ನೀರುಪಾಲು ಮಾಡಿದರು.

33 ಇನ್ನೂ ಬೆಳಕಾಗುತ್ತಿರುವಾಗಲೇ ಏನಾದರೂ ತಿನ್ನುವಂತೆ ಪೌಲನು ಅವರನ್ನು ಒತ್ತಾಯಿಸುತ್ತಾ, “ಕಳೆದ ಹದಿನಾಲ್ಕು ದಿನಗಳಿಂದ ನೀವು ಊಟವನ್ನೇ ಮಾಡಿಲ್ಲ. 34 ಈಗ ನೀವು ಸ್ವಲ್ಪವಾದರೂ ತಿನ್ನುವಂತೆ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ಜೀವಂತವಾಗಿ ಉಳಿಯಬೇಕಾದರೆ ನಿಮಗೆ ಊಟ ಅವಶ್ಯಕವಾಗಿದೆ. ನಿಮ್ಮಲ್ಲಿರುವ ಯಾರೂ ನಿಮ್ಮ ತಲೆಕೂದಲುಗಳಲ್ಲಿ ಒಂದನ್ನಾದರೂ ಕಳೆದುಕೊಳ್ಳುವುದಿಲ್ಲ” ಎಂದು ಹೇಳಿದನು. 35 ಹೀಗೆ ಹೇಳಿದ ಬಳಿಕ, ಪೌಲನು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡು ಅದಕ್ಕಾಗಿ ಅವರೆಲ್ಲರ ಮುಂದೆ ದೇವರಿಗೆ ಸ್ತೋತ್ರ ಮಾಡಿದನು. ಬಳಿಕ ಅವನು ಒಂದು ತುಂಡನ್ನು ಮುರಿದು ತಿನ್ನತೊಡಗಿದನು. 36-37 ಆಗ ಜನರೆಲ್ಲರೂ ಪ್ರೋತ್ಸಾಹಗೊಂಡು ತಿನ್ನತೊಡಗಿದರು. ಆ ಹಡಗಿನಲ್ಲಿ ಇನ್ನೂರ ಎಪ್ಪತ್ತಾರು ಮಂದಿ ಇದ್ದರು. 38 ನಾವು ತೃಪ್ತಿಯಾಗುವಷ್ಟು ತಿಂದೆವು. ಬಳಿಕ ದವಸವನ್ನು ಸಮುದ್ರಕ್ಕೆ ಎಸೆದು ಹಡಗನ್ನು ಹಗುರಗೊಳಿಸಿದೆವು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International