Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 107:1-3

ಐದನೆಯ ಭಾಗ

(ಕೀರ್ತನೆಗಳು 107–150)

107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
    ಆತನ ಪ್ರೀತಿ ಶಾಶ್ವತವಾದದ್ದು!
ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
    ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
    ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.

ಕೀರ್ತನೆಗಳು 107:23-32

23 ಕೆಲವರು ತಮ್ಮ ಉದ್ಯೋಗಗಳ ನಿಮಿತ್ತ
    ಸಮುದ್ರಯಾನ ಮಾಡಿದರು.
24 ಯೆಹೋವನು ಮಾಡಬಲ್ಲ ಕಾರ್ಯಗಳನ್ನು ಅವರು ನೋಡಿದರು.
    ಆತನು ಸಮುದ್ರದಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಅವರು ಕಣ್ಣಾರೆ ಕಂಡರು.
25 ಆತನು ಆಜ್ಞಾಪಿಸಲು ಬಲವಾದ ಗಾಳಿ ಬೀಸತೊಡಗಿತು;
    ಅಲೆಗಳು ದೊಡ್ಡದಾಗತೊಡಗಿದವು.
26 ಅಲೆಗಳು ಆಕಾಶದಷ್ಟು ಎತ್ತರವಾಗಿದ್ದವು.
    ಭಯಂಕರವಾದ ಬಿರುಗಾಳಿಯಿಂದ ಅವರು ಭಯಗೊಂಡರು.
27     ಅವರು ಅಮಲೇರಿದವರಂತೆ ಎಡವಿಬೀಳತೊಡಗಿದರು;
    ನಾವಿಕರಾಗಿದ್ದ ಅವರ ಕೌಶಲ್ಯವು ನಿಷ್ಪ್ರಯೋಜಕವಾಯಿತು.
28 ಆಗ ಅವರು ಯೆಹೋವನಿಗೆ ಮೊರೆಯಿಡಲು
    ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
29 ಆತನು ಬಿರುಗಾಳಿಯನ್ನು ನಿಲ್ಲಿಸಿ
    ಅಲೆಗಳನ್ನು ಶಾಂತಗೊಳಿಸಿದನು.
30 ಸಮುದ್ರವು ಶಾಂತವಾದದ್ದರಿಂದ ನಾವಿಕರು ಬಹು ಸಂತೋಷಪಟ್ಟರು.
    ಅವರು ತಲುಪಬೇಕಿದ್ದ ಸ್ಥಳಕ್ಕೆ ಆತನು ಅವರನ್ನು ಸುರಕ್ಷಿತವಾಗಿ ನಡೆಸಿದನು.
31 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
    ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ.
32 ಆತನನ್ನು ಮಹಾಸಭೆಯಲ್ಲಿ ಸ್ತುತಿಸಿರಿ.
    ಹಿರಿಯರ ಸಭೆಯಲ್ಲಿ ಆತನನ್ನು ಕೊಂಡಾಡಿರಿ.

ಯೋಬನು 37:1-13

37 “ಗುಡುಗು ಮಿಂಚುಗಳು ನನ್ನನ್ನು ಭಯಗೊಳಿಸಿವೆ.
    ನನ್ನ ಹೃದಯವು ಢವಢವನೆ ಬಡಿದುಕೊಳ್ಳುತ್ತಿದೆ.
ಪ್ರತಿಯೊಬ್ಬರೂ ಕೇಳಿರಿ! ದೇವರ ಧ್ವನಿಯು ಗುಡುಗಿನ ಧ್ವನಿಯಂತಿದೆ.
    ಆತನ ಬಾಯಿಂದ ಬರುವ ಗುಡುಗುಟ್ಟುವ ಧ್ವನಿಯನ್ನು ಕೇಳಿರಿ.
ಇಡೀ ಆಕಾಶಮಂಡಲದಲ್ಲೆಲ್ಲಾ ಪ್ರಕಾಶಿಸಲೆಂದು ದೇವರು ತನ್ನ ಸಿಡಿಲನ್ನು ಕಳುಹಿಸುವನು.
    ಅದು ಭೂಮಿಯ ಮೇಲೆಲ್ಲಾ ಪ್ರಕಾಶಿಸುವುದು.
ಸಿಡಿಲು ಪ್ರಕಾಶಿಸಿದ ನಂತರ ದೇವರ ಗರ್ಜನೆಯು ಕೇಳಿಬರುವುದು.
    ಆತನು ತನ್ನ ಆಶ್ಚರ್ಯಕರವಾದ ಧ್ವನಿಯಿಂದ ಗುಡುಗುಟ್ಟುವನು!
ಸಿಡಿಲು ಪ್ರಕಾಶಿಸುವಾಗ ಆತನ ಧ್ವನಿಯು ಗುಡುಗುಟ್ಟುವುದು!
ದೇವರ ಗುಡುಗುಟ್ಟುವ ಧ್ವನಿಯು ಆಶ್ಚರ್ಯಕರವಾಗಿದೆ!
    ನಾವು ಅರ್ಥಮಾಡಿಕೊಳ್ಳಲಾಗದ ಮಹಾಕಾರ್ಯಗಳನ್ನು ಆತನು ಮಾಡುತ್ತಾನೆ.
ಆತನು ಹಿಮಕ್ಕೆ,
    ‘ಭೂಮಿಯ ಮೇಲೆ ಬೀಳು’ ಎಂತಲೂ
ಮಳೆಗೆ,
    ‘ಭೂಮಿಯ ಮೇಲೆ ಸುರಿ’ ಎಂತಲೂ ಆಜ್ಞಾಪಿಸುವನು.
ದೇವರು ತನ್ನ ಕಾರ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದು
    ಪ್ರತಿಯೊಬ್ಬರನ್ನು ಮನೆಯೊಳಗೆ ಕೂಡಿಹಾಕುತ್ತಾನೆ.[a]
ಪ್ರಾಣಿಗಳು ಓಡಿಹೋಗಿ ತಮ್ಮ ಗುಹೆಗಳಲ್ಲಿ ಸೇರಿಕೊಳ್ಳುತ್ತವೆ.
ದಕ್ಷಿಣ ದಿಕ್ಕಿನಿಂದ ಬಿರುಗಾಳಿಯೂ
    ಉತ್ತರ ದಿಕ್ಕಿನಿಂದ ಚಳಿಗಾಳಿಯೂ ಬರುತ್ತವೆ.
10 ದೇವರ ಉಸಿರು ನೀರನ್ನು ಮಂಜನ್ನಾಗಿ ಮಾಡಿ
    ಸಾಗರಗಳನ್ನು ಹೆಪ್ಪುಗಟ್ಟಿಸುವುದು.
11 ದೇವರು ಮೋಡಗಳಲ್ಲಿ ನೀರು ತುಂಬಿಸುವನು.
    ಆತನು ತನ್ನ ಮಿಂಚನ್ನು ಮೋಡಗಳಲ್ಲೆಲ್ಲಾ ಹರಡುವನು.
12 ಭೂಮಂಡಲದಲ್ಲೆಲ್ಲಾ ಚಲಿಸಲು ದೇವರು ಮೋಡಗಳಿಗೆ ಆಜ್ಞಾಪಿಸುವನು.
    ಮೋಡಗಳು ಆತನ ಆಜ್ಞೆಗನುಸಾರವಾಗಿ ಮಾಡುತ್ತವೆ.
13 ದೇವರು ಜನರನ್ನು ದಂಡಿಸುವುದಕ್ಕಾಗಲಿ
    ನೀರನ್ನು ಒದಗಿಸುವ ಮೂಲಕ ತನ್ನ ನಿರಂತರ ಪ್ರೀತಿಯನ್ನು ತೋರಿಸುವುದಕ್ಕಾಗಲಿ ಮೋಡಗಳನ್ನು ಬರಮಾಡುವನು.

ಲೂಕ 21:25-28

ಭಯಪಡಬೇಡಿರಿ

(ಮತ್ತಾಯ 24:29-31; ಮಾರ್ಕ 13:24-27)

25 “ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಲ್ಲಿ ವಿಚಿತ್ರವಾದ ಸೂಚನೆಗಳು ಕಾಣಿಸಿಕೊಳ್ಳುವವು. ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿ ಹೋಗುವವು. 26 ಗ್ರಹಶಕ್ತಿಗಳು ಕದಲುವುದರಿಂದ ಭೂಮಿಯಲ್ಲಿ ಏನೇನು ಸಂಭವಿಸುವುದೋ ಎಂಬ ಭಯದಿಂದ ಮನುಷ್ಯರು ದಿಗ್ಭ್ರಮೆಗೊಳ್ಳುವರು. 27 ಆಗ ಮನುಷ್ಯಕುಮಾರನು ಮಹಾಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ನೋಡುವರು. 28 ಈ ಸಂಗತಿಗಳು ಸಂಭವಿಸುವುದಕ್ಕೆ ತೊಡಗುವಾಗ ಭಯಪಡಬೇಡಿರಿ. ಮೇಲೆ ನೋಡಿ ಸಂತೋಷಪಡಿರಿ! ಚಿಂತೆಮಾಡಬೇಡಿರಿ. ಸಂತೋಷಪಡಿರಿ, ಏಕೆಂದರೆ ದೇವರು ನಿಮ್ಮನ್ನು ಬಿಡುಗಡೆಗೊಳಿಸುವ ಕಾಲ ಸಮೀಪವಾಗಿದೆ ಎಂಬುದಕ್ಕೆ ಅವು ಸೂಚನೆಯಾಗಿವೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International