Revised Common Lectionary (Complementary)
ಯೋಬನಿಗೆ ದೇವರ ಉತ್ತರ
38 ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು:
2 “ನನ್ನ ಉದ್ದೇಶಗಳನ್ನು ಮೂರ್ಖತನದ ಮಾತುಗಳಿಂದ ಗಲಿಬಿಲಿಗೊಳಿಸುತ್ತಿರುವ
ಈ ಮನುಷ್ಯನು ಯಾರು?
3 ಯೋಬನೇ, ನಡುಕಟ್ಟಿಕೊಂಡು ಬಲಿಷ್ಠನಾಗಿರು.
ನಾನು ನಿನಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧನಾಗು.
4 “ಯೋಬನೇ, ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದೆ?
ನೀನು ಬಹು ಜಾಣನಾಗಿದ್ದರೆ ನನಗೆ ಉತ್ತರಕೊಡು.
5 ಯೋಬನೇ, ಭೂಮಿಯ ಅಳತೆಗಳನ್ನು ಯಾರು ನಿರ್ಧರಿಸಿದರು?
ಭೂಮಿಯ ಅಳತೆಯನ್ನು ನೂಲುಗುಂಡಿನಿಂದ ಅಳೆದವರು ಯಾರು?
6 ಭೂಮಿಯ ಆಧಾರಸ್ತಂಭಗಳು ಯಾವುದರ ಮೇಲೆ ನೆಲೆಗೊಂಡಿವೆ?
ಭೂಮಿಯ ಅಸ್ತಿವಾರಕ್ಕೆ ಮೊದಲ ಕಲ್ಲನ್ನು ಹಾಕಿದವರು ಯಾರು?
7 ಅದು ಸಂಭವಿಸಿದಾಗ, ಮುಂಜಾನೆಯ ನಕ್ಷತ್ರಗಳು ಒಟ್ಟಾಗಿ ಹಾಡಿದವು;
ದೇವದೂತರುಗಳು ಆನಂದಘೋಷ ಮಾಡಿದರು!
8 “ಯೋಬನೇ, ಭೂಮಿಯ ಗರ್ಭದೊಳಗಿಂದ ನುಗ್ಗಿ ಬರುವ ಸಮುದ್ರದ ನೀರನ್ನು
ನಿಲ್ಲಿಸುವುದಕ್ಕಾಗಿ ಬಾಗಿಲುಗಳನ್ನು ಮುಚ್ಚಿದವರು ಯಾರು?
9 ಆ ಸಮಯದಲ್ಲಿ ನಾನು ಸಮುದ್ರವನ್ನು ಮೋಡಗಳಿಂದ ಮುಚ್ಚಿ
ಕಾರ್ಗತ್ತಲನ್ನು ಬಟ್ಟೆಯಂತೆ ಸುತ್ತಿಟ್ಟೆನು.
10 ನಾನು ಸಮುದ್ರಕ್ಕೆ ಮೇರೆಯನ್ನು ನಿಗದಿಪಡಿಸಿ
ಕದ ಹಾಕಿದ ಬಾಗಿಲುಗಳ ಹಿಂಭಾಗದಲ್ಲಿಟ್ಟೆನು.
11 ನಾನು ಸಮುದ್ರಕ್ಕೆ, ‘ನೀನು ಇಲ್ಲಿಯವರೆಗೆ ಬರಬಹುದು, ಆದರೆ ಇದಕ್ಕಿಂತ ಹೆಚ್ಚಿಗೆ ಬರಕೂಡದು.
ನಿನ್ನ ಹೆಮ್ಮೆಯ ಅಲೆಗಳು ಇಲ್ಲೇ ನಿಲ್ಲಬೇಕು’ ಎಂದು ಅಪ್ಪಣೆಕೊಟ್ಟೆನು.
ಐದನೆಯ ಭಾಗ
(ಕೀರ್ತನೆಗಳು 107–150)
107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
ಆತನ ಪ್ರೀತಿ ಶಾಶ್ವತವಾದದ್ದು!
2 ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
3 ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.
23 ಕೆಲವರು ತಮ್ಮ ಉದ್ಯೋಗಗಳ ನಿಮಿತ್ತ
ಸಮುದ್ರಯಾನ ಮಾಡಿದರು.
24 ಯೆಹೋವನು ಮಾಡಬಲ್ಲ ಕಾರ್ಯಗಳನ್ನು ಅವರು ನೋಡಿದರು.
ಆತನು ಸಮುದ್ರದಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಅವರು ಕಣ್ಣಾರೆ ಕಂಡರು.
25 ಆತನು ಆಜ್ಞಾಪಿಸಲು ಬಲವಾದ ಗಾಳಿ ಬೀಸತೊಡಗಿತು;
ಅಲೆಗಳು ದೊಡ್ಡದಾಗತೊಡಗಿದವು.
26 ಅಲೆಗಳು ಆಕಾಶದಷ್ಟು ಎತ್ತರವಾಗಿದ್ದವು.
ಭಯಂಕರವಾದ ಬಿರುಗಾಳಿಯಿಂದ ಅವರು ಭಯಗೊಂಡರು.
27 ಅವರು ಅಮಲೇರಿದವರಂತೆ ಎಡವಿಬೀಳತೊಡಗಿದರು;
ನಾವಿಕರಾಗಿದ್ದ ಅವರ ಕೌಶಲ್ಯವು ನಿಷ್ಪ್ರಯೋಜಕವಾಯಿತು.
28 ಆಗ ಅವರು ಯೆಹೋವನಿಗೆ ಮೊರೆಯಿಡಲು
ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
29 ಆತನು ಬಿರುಗಾಳಿಯನ್ನು ನಿಲ್ಲಿಸಿ
ಅಲೆಗಳನ್ನು ಶಾಂತಗೊಳಿಸಿದನು.
30 ಸಮುದ್ರವು ಶಾಂತವಾದದ್ದರಿಂದ ನಾವಿಕರು ಬಹು ಸಂತೋಷಪಟ್ಟರು.
ಅವರು ತಲುಪಬೇಕಿದ್ದ ಸ್ಥಳಕ್ಕೆ ಆತನು ಅವರನ್ನು ಸುರಕ್ಷಿತವಾಗಿ ನಡೆಸಿದನು.
31 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ.
32 ಆತನನ್ನು ಮಹಾಸಭೆಯಲ್ಲಿ ಸ್ತುತಿಸಿರಿ.
ಹಿರಿಯರ ಸಭೆಯಲ್ಲಿ ಆತನನ್ನು ಕೊಂಡಾಡಿರಿ.
6 ನಾವು ದೇವರ ಜೊತೆಕೆಲಸದವರಾಗಿದ್ದೇವೆ. ಆದ್ದರಿಂದ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನೀವು ದೇವರಿಂದ ಹೊಂದಿಕೊಂಡ ಕೃಪೆಯು ವ್ಯರ್ಥವಾಗದಂತೆ ನೋಡಿಕೊಳ್ಳಿ. 2 ದೇವರು ಹೀಗೆನ್ನುತ್ತಾನೆ:
“ಸುಪ್ರಸನ್ನತೆಯ ಕಾಲದಲ್ಲಿ ನಾನು ನಿನಗೆ ಕಿವಿಗೊಟ್ಟೆನು,
ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದೆನು.”(A)
ಇದೇ ಆ “ಸುಪ್ರಸನ್ನತೆಯ ಕಾಲ.” ಇದೇ ಆ “ರಕ್ಷಣೆಯ ದಿನ.”
3 ನಮ್ಮ ಸೇವೆಯು ನಿಂದೆಗೆ ಒಳಗಾಗಬಾರದೆಂದು ನಾವು ಯಾರಿಗೂ ತೊಂದರೆ ಮಾಡುವುದಿಲ್ಲ. 4 ಆದರೆ ಪ್ರತಿಯೊಂದು ವಿಷಯದಲ್ಲಿಯೂ ನಾವು ದೇವರ ಸೇವಕರೆಂಬುದನ್ನು ತೋರ್ಪಡಿಸುತ್ತೇವೆ. ನಾವು ಸಂಕಟಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ 5 ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳಲ್ಲಿಯೂ ಕಷ್ಟವಾದ ಕೆಲಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ಬಹು ತಾಳ್ಮೆಯನ್ನು ತೋರುತ್ತೇವೆ. 6 ನಾವು ದೇವರ ಸೇವಕರೆಂಬುದನ್ನು ನಮ್ಮ ತಿಳುವಳಿಕೆಯಿಂದಲೂ ತಾಳ್ಮೆಯಿಂದಲೂ ಕನಿಕರದಿಂದಲೂ ಮತ್ತು ಪರಿಶುದ್ಧ ಜೀವಿತದಿಂದಲೂ ತೋರ್ಪಡಿಸಿದ್ದೇವೆ. ನಾವು ಇದನ್ನು ಪವಿತ್ರಾತ್ಮನಿಂದಲೂ ನಿಜವಾದ ಪ್ರೀತಿಯಿಂದಲೂ 7 ಸತ್ಯವನ್ನು ಹೇಳುವುದರಿಂದಲೂ ದೇವರ ಶಕ್ತಿಯಿಂದಲೂ ತೋರ್ಪಡಿಸುತ್ತೇವೆ. ಪ್ರತಿಯೊಂದರ ವಿರೋಧವಾಗಿ ನಮ್ಮನ್ನು ಸಂರಕ್ಷಿಸಿಕೊಳ್ಳಲು ನಮ್ಮ ಒಳ್ಳೆಯ ಜೀವಿತವನ್ನೇ ಉಪಯೋಗಿಸುತ್ತೇವೆ.
8 ಕೆಲವರು ನಮ್ಮನ್ನು ಸನ್ಮಾನಿಸುತ್ತಾರೆ; ಇನ್ನು ಕೆಲವರು ನಮಗೆ ಅವಮಾನ ಮಾಡುತ್ತಾರೆ. ಕೆಲವರು ನಮ್ಮ ಬಗ್ಗೆ ಒಳ್ಳೆಯ ವಿಷಯಗಳನ್ನು ಹೇಳುತ್ತಾರೆ; ಇನ್ನು ಕೆಲವರು ನಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುತ್ತಾರೆ. ಕೆಲವರು ನಮ್ಮನ್ನು ಸುಳ್ಳುಗಾರರೆನ್ನುತ್ತಾರೆ, ಆದರೆ ನಾವು ಸತ್ಯವನ್ನೇ ಹೇಳುತ್ತೇವೆ. 9 ನಾವು ಪ್ರಸಿದ್ಧರಾಗಿದ್ದರೂ ಕೆಲವರು ನಮ್ಮನ್ನು ಅಪ್ರಸಿದ್ಧರಂತೆ ಕಾಣುತ್ತಾರೆ. ನಾವು ಸಾಯುವಂತಿದ್ದರೂ ಬದುಕಿದ್ದೇವೆ; ಶಿಕ್ಷಿಸಲ್ಪಟ್ಟರೂ ಕೊಲ್ಲಲ್ಪಡಲಿಲ್ಲ; 10 ದುಃಖಿತರಂತೆ ಕಂಡರೂ ಯಾವಾಗಲೂ ಉಲ್ಲಾಸಿಸುವವರಾಗಿದ್ದೇವೆ; ಬಡವರಂತೆ ಕಂಡರೂ ಅನೇಕರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿ ಮಾಡುತ್ತಿದ್ದೇವೆ; ಏನೂ ಇಲ್ಲದವರಂತೆ ಕಂಡರೂ ವಾಸ್ತವವಾಗಿ ಎಲ್ಲವನ್ನೂ ಹೊಂದಿದವರಾಗಿದ್ದೇವೆ.
11 ಕೊರಿಂಥದಲ್ಲಿರುವ ನಿಮ್ಮೊಂದಿಗೆ ಬಿಚ್ಚುಮನಸ್ಸಿನಿಂದ ಮಾತಾಡಿದ್ದೇವೆ. ನಮ್ಮ ಹೃದಯಗಳನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದೇವೆ. 12 ನಿಮ್ಮ ಮೇಲೆ ನಮಗಿರುವ ಪ್ರೀತಿಯು ನಿಂತು ಹೋಗಿಲ್ಲ. ಆದರೆ ನಮ್ಮ ಮೇಲೆ ನಿಮಗಿದ್ದ ಪ್ರೀತಿಯೇ ನಿಂತು ಹೋಗಿದೆ. 13 ನೀವು ನನ್ನ ಮಕ್ಕಳೆಂಬಂತೆ ನಾನು ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ನಾವು ತೆರೆದಂತೆ ನೀವು ಸಹ ನಿಮ್ಮ ಹೃದಯಗಳನ್ನು ತೆರೆಯಿರಿ.
ಯೇಸುವಿನ ಆಜ್ಞೆಗೆ ಬಿರುಗಾಳಿಯ ವಿಧೇಯತೆ
(ಮತ್ತಾಯ 8:23-27; ಲೂಕ 8:22-25)
35 ಆ ದಿನ ಸಂಜೆ, ಯೇಸು ತನ್ನ ಶಿಷ್ಯರಿಗೆ “ನನ್ನೊಂದಿಗೆ ಬನ್ನಿ, ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು. 36 ಯೇಸು ಮತ್ತು ಆತನ ಶಿಷ್ಯರು ಅಲ್ಲಿದ್ದ ಜನರನ್ನು ಅಲ್ಲಿಯೇ ಬಿಟ್ಟುಹೋದರು. ಯೇಸು ಕುಳಿತುಕೊಂಡು ಉಪದೇಶಿಸುತ್ತಿದ್ದ ದೋಣಿಯಲ್ಲಿಯೇ ಅವರು ಹೋದರು. ಅವರೊಂದಿಗೆ ಬೇರೆ ದೋಣಿಗಳೂ ಇದ್ದವು. 37 ಅವರು ಹೋಗುತ್ತಿರಲು ಸರೋವರದ ಮೇಲೆ ಬಿರುಗಾಳಿ ಬೀಸಿತು. ಎತ್ತರವಾದ ಅಲೆಗಳು ದೋಣಿಗೆ ಅಪ್ಪಳಿಸತೊಡಗಿದ್ದರಿಂದ ದೋಣಿಯು ನೀರಿನಿಂದ ತುಂಬಿಹೋಯಿತು. 38 ಯೇಸುವು ದೋಣಿಯ ಹಿಂಭಾಗದಲ್ಲಿ ತಲೆದಿಂಬಿನ ಮೇಲೆ ತಲೆಯನ್ನಿಟ್ಟು ನಿದ್ರಿಸುತ್ತಿದ್ದನು. ಶಿಷ್ಯರು ಆತನ ಬಳಿಗೆ ಹೋಗಿ, ಆತನನ್ನು ಎಬ್ಬಿಸಿ, “ಗುರುವೇ, ನೀನು ನಮ್ಮ ಬಗ್ಗೆ ಚಿಂತಿಸುವುದಿಲ್ಲವೆ? ನಾವು ಮುಳುಗಿಹೋಗುತ್ತಿದ್ದೇವೆ!” ಎಂದರು.
39 ಯೇಸು ಎಚ್ಚೆತ್ತು ಬಿರುಗಾಳಿ ಮತ್ತು ಅಲೆಗಳಿಗೆ, “ಪ್ರಶಾಂತವಾಗಿರಿ! ಮೊರೆಯದಿರಿ!” ಎಂದು ಆಜ್ಞಾಪಿಸಿದನು. ಆಗ ಬಿರುಗಾಳಿ ನಿಂತುಹೋಯಿತು ಮತ್ತು ಸರೋವರವು ಪ್ರಶಾಂತವಾಯಿತು.
40 ಯೇಸು ತನ್ನ ಶಿಷ್ಯರಿಗೆ, “ನೀವೇಕೆ ಹೆದರುತ್ತೀರಿ? ನಿಮ್ಮಲ್ಲಿ ಇನ್ನೂ ನಂಬಿಕೆಯಿಲ್ಲವೇ?” ಎಂದು ಕೇಳಿದನು.
41 ಶಿಷ್ಯರು ಬಹಳ ಭಯಪಟ್ಟು, “ಈತನು ಯಾರಿರಬಹುದು? ಗಾಳಿ ಮತ್ತು ನೀರು ಸಹ ಈತನ ಮಾತನ್ನು ಕೇಳುತ್ತವೆಯಲ್ಲಾ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.
Kannada Holy Bible: Easy-to-Read Version. All rights reserved. © 1997 Bible League International