Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 52

ಎದೋಮ್ಯನಾದ ದೋಯೇಗನು ಸೌಲನ ಬಳಿಗೆ ಹೋಗಿ, “ದಾವೀದನು ಅಹೀಮೆಲೆಕನ ಮನೆಯಲ್ಲಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.

52 ದುಷ್ಟಾಧಿಕಾರಿಯೇ, ನಿನ್ನ ದುಷ್ಕೃತ್ಯಗಳ ಕುರಿತು ಜಂಬಪಡುವುದೇಕೇ?
    ದೇವರ ದೃಷ್ಟಿಗೆ ನೀನು ಅಸಹ್ಯಕರವಾಗಿರುವೆ.
ಮೋಸಗಾರನೇ, ನಿನ್ನ ನಾಲಗೆಯು ಹರಿತವಾದ ಕ್ಷೌರ ಕತ್ತಿಯಂತಿದ್ದು
    ನಾಶನದ ಸಂಚುಗಳನ್ನೇ ಮಾಡುವುದು.
ಒಳ್ಳೆಯದಕ್ಕಿಂತಲೂ ಕೆಟ್ಟದ್ದನ್ನೇ ನೀನು ಹೆಚ್ಚು ಪ್ರೀತಿಸುವೆ.
    ನಿನಗೆ ಸತ್ಯಕ್ಕಿಂತಲೂ ಸುಳ್ಳೇ ಇಷ್ಟ.

ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.
ದೇವರು ನಿನ್ನನ್ನು ಶಾಶ್ವತವಾಗಿ ನಾಶಮಾಡುವನು,
    ಗಿಡವನ್ನು ಬೇರು ಸಹಿತ ಕಿತ್ತುಹಾಕುವಂತೆ ಆತನು ನಿನ್ನನ್ನು ಹಿಡಿದು ನಿನ್ನ ಮನೆಯೊಳಗಿಂದ[a] ಕಿತ್ತು ಬೀಸಾಡುವನು.

ಒಳ್ಳೆಯವರು ಇದನ್ನು ಕಂಡು
    ದೇವರಲ್ಲಿ ಭಯಭಕ್ತಿಯುಳ್ಳವರಾಗುವರು.
ಅವರು ನಿಮ್ಮನ್ನು ನೋಡಿ ನಗುತ್ತಾ ಹೀಗೆನ್ನುವರು:
    “ದೇವರ ಮೇಲೆ ಅವಲಂಬಿಸಿಕೊಳ್ಳದ ಇವನಿಗೆ ಏನಾಯಿತು?
    ತನ್ನ ಐಶ್ವರ್ಯವೂ ಸುಳ್ಳುಗಳೂ ತನ್ನನ್ನು ಕಾಪಾಡುತ್ತವೆ ಎಂದು ಭಾವಿಸಿಕೊಂಡವನು ಇವನೇ.”

ನಾನಾದರೋ ದೇವರ ಆಲಯದ ಅಂಗಳದಲ್ಲಿ ಹಸಿರಸಿರಾಗಿ ಬೆಳೆಯುವ ಆಲೀವ್ ಮರದಂತಿದ್ದೇನೆ.
    ನಾನು ದೇವರ ಶಾಶ್ವತವಾದ ಪ್ರೀತಿಯಲ್ಲೇ ಯಾವಾಗಲೂ ಭರವಸವಿಟ್ಟಿರುವೆ.
ದೇವರೇ, ನಿನ್ನ ಉಪಕಾರಗಳಿಗಾಗಿ ನಾನು ನಿನ್ನನ್ನು ಎಂದೆಂದಿಗೂ ಕೊಂಡಾಡುವೆನು.
    ನಿನ್ನ ಹೆಸರಿನಲ್ಲೇ ಭರವಸವಿಟ್ಟಿರುವೆ; ಯಾಕೆಂದರೆ ನಿನ್ನ ಹೆಸರು ಎಷ್ಟೋ ಒಳ್ಳೆಯದು.
    ನಿನ್ನ ಪವಿತ್ರ ಜನರ ಸನ್ನಿಧಿಯಲ್ಲಿ ನಿನ್ನನ್ನು ಕೊಂಡಾಡುವೆನು.

ಯೆಹೆಜ್ಕೇಲ 31:1-12

ಅಶ್ಶೂರವು ದೇವದಾರು ಮರದಂತಿರುವದು

31 ಸೆರೆಹಿಡಿದ ಹನ್ನೊಂದನೇ ವರ್ಷದ ಮೂರನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಇದನ್ನು ಈಜಿಪ್ಟಿನ ರಾಜನಾದ ಫರೋಹನಿಗೂ ಅವನ ಜನರಿಗೂ ಹೇಳು:

“‘ನೀನು ಅತ್ಯಂತ ಪ್ರಭಾವಶಾಲಿ,
    ನಿನ್ನನ್ನು ಯಾರಿಗೆ ಹೋಲಿಸಲಿ?
ಅಶ್ಶೂರವು ಲೆಬನೋನಿನಲ್ಲಿರುವ ದೇವದಾರು ಮರದಂತೆ ಎತ್ತರವಾಗಿ,
    ಸುಂದರವಾದ ಕೊಂಬೆಗಳಿಂದಲೂ
    ಕಾಡಿನ ನೆರಳಿನಲ್ಲಿಯೂ ಶೋಭಿಸುತ್ತದೆ.
ಅದರ ಮೇಲಿನ ತುದಿಯು ಮುಗಿಲನ್ನು ಮುಟ್ಟುವದು.
ನೀರು ಆ ಮರವನ್ನು ಬೆಳೆಯುವಂತೆ ಮಾಡಿತು.
    ನದಿಯು ಅದನ್ನು ಎತ್ತರವಾಗುವಂತೆ ಮಾಡಿತು.
ಆ ಮರವು ನೆಡಲ್ಪಟ್ಟ ಸ್ಥಳದ ಸುತ್ತಲೂ ಹೊಳೆಯು ಹರಿಯುತ್ತಿದೆ.
    ಆ ಮರದಿಂದ ಬೇರೆ ಮರಗಳಿಗೆ ಸಣ್ಣ ಕಾಲುವೆಗಳು ಹೊರಡುತ್ತವೆ.
ಯಾಕೆಂದರೆ ಈ ಮರವು ಬೇರೆ ಮರಗಳಿಗಿಂತ ಉನ್ನತವಾಗಿ ಕಾಣಿಸಿಕೊಳ್ಳಲು,
    ಅದು ಅನೇಕ ಕೊಂಬೆಗಳನ್ನು ಬಿಟ್ಟಿತು.
ಅಲ್ಲಿ ಬೇಕಾದಷ್ಟು ನೀರು ಇದ್ದುದರಿಂದ
    ಕೊಂಬೆಗಳು ಉದ್ದವಾಗಿಯೂ ವಿಶಾಲವಾಗಿಯೂ ಬೆಳೆದವು.
ಅದರ ಕೊಂಬೆಗಳಲ್ಲಿ ಆಕಾಶದ ಪಕ್ಷಿಗಳು ಗೂಡುಗಳನ್ನು ಕಟ್ಟಿದವು.
    ಆ ಮರದ ಅಡಿಯಲ್ಲಿ ಪ್ರಾಣಿಗಳು ಮರಿಗಳನ್ನು ಈದವು.
ಆ ಮರದ ನೆರಳಿನಲ್ಲಿ
    ಎಲ್ಲಾ ದೊಡ್ಡ ಜನಾಂಗಗಳು ವಾಸಿಸಿದವು.
ಆ ಮರವು ಮನೋಹರವಾಗಿತ್ತು.
    ಅದು ದೊಡ್ಡದಾಗಿತ್ತು.
    ಅದರ ಕೊಂಬೆಗಳು ವಿಶಾಲವಾಗಿದ್ದವು.
    ಅದರ ಬೇರುಗಳಿಗೆ ಧಾರಾಳವಾದ ನೀರಿತ್ತು.
ದೇವರ ತೋಟದಲ್ಲಿರುವ ದೇವದಾರು ಮರಗಳೂ
    ಈ ಮರದಷ್ಟು ಎತ್ತರವಾಗಿರಲಿಲ್ಲ.
ಈ ಮಹಾ ಮರಕ್ಕಿರುವಷ್ಟು ಕೊಂಬೆಗಳು ಸೈಪ್ರಸ್ ಮರಗಳಿಗೂ ಇಲ್ಲ.
    ದೇವರ ತೋಟದಲ್ಲಿದ್ದ ಯಾವ ಮರವಾದರೂ ಇದರಷ್ಟು ಅಂದವಾಗಿರಲಿಲ್ಲ.
ನಾನು ಅದಕ್ಕೆ ಅನೇಕ ಕೊಂಬೆಗಳನ್ನು ಕೊಟ್ಟು
    ಅಂದವಾಗಿ ಕಾಣುವಂತೆ ಮಾಡಿದೆನು.
ದೇವರ ತೋಟವಾಗಿರುವ ಏದೆನಿನಲ್ಲಿರುವ
    ಮರಗಳೆಲ್ಲಾ ಅಸೂಯೆಪಡುತ್ತಿದ್ದವು.’”

10 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಆ ಮರವು ಎತ್ತರವಾಗಿ ಬೆಳೆಯಿತು. ಅದರ ತುದಿ ಮುಗಿಲನ್ನು ಮುಟ್ಟಿತು. ಇದು ಅದಕ್ಕೆ ಹೆಮ್ಮೆಯನ್ನು ತಂದಿತು. 11 ಆಗ ನಾನು ಒಬ್ಬ ಬಲಾಢ್ಯನಾದ ರಾಜನು ಬಂದು ಆ ಮರವನ್ನು ತೆಗೆದುಕೊಳ್ಳುವಂತೆ ಮಾಡಿದೆನು. ಆ ರಾಜನು ಮರವು ಮಾಡಿದ ದುಷ್ಕೃತ್ಯಗಳಿಗಾಗಿ ಅದನ್ನು ಶಿಕ್ಷಿಸಿದನು. ಆ ಮರವನ್ನು ನಾನು ನನ್ನ ತೋಟದಿಂದ ತೆಗೆದು ಹಾಕಿದೆನು. 12 ಪರದೇಶದ ಕ್ರೂರ ಜನರು ಅದನ್ನು ಕಡಿದು ಅದರ ರೆಂಬೆಗಳನ್ನೆಲ್ಲಾ ಬೆಟ್ಟ, ಬಯಲು, ತಗ್ಗುಗಳಲ್ಲಿ ಚದರಿಸಿಬಿಟ್ಟರು. ಅದರ ಮುರಿಯಲ್ಪಟ್ಟ ಕೊಂಬೆಗಳು ಆ ದೇಶದಲ್ಲಿ ಹರಿಯುವ ನದಿಯಲ್ಲಿ ತೇಲಿದವು. ಆ ಮರದಡಿಯಲ್ಲಿ ಈಗ ನೆರಳು ಇಲ್ಲ. ಆದ್ದರಿಂದ ಅಲ್ಲಿ ವಾಸವಾಗಿದ್ದ ಜನರೆಲ್ಲಾ ಅಲ್ಲಿಂದ ಹೊರಟುಹೋದರು.

ಗಲಾತ್ಯದವರಿಗೆ 6:11-18

ಪೌಲನ ಕಡೇ ಮಾತುಗಳು

11 ಇದನ್ನು ನಾನೇ ಕೈಯಾರೆ ಬರೆಯುತ್ತಿದ್ದೇನೆ. ನಾನು ಎಷ್ಟು ದೊಡ್ಡ ಅಕ್ಷರಗಳಲ್ಲಿ ಬರೆಯುತ್ತಿದ್ದೇನೆಂಬುದನ್ನು ನೋಡಿರಿ. 12 ನೀವು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಕೆಲವರು ನಿಮ್ಮನ್ನು ಒತ್ತಾಯಿಸುತ್ತಿದ್ದಾರೆ. ತಮ್ಮನ್ನು (ಯೆಹೂದ್ಯರು) ಸ್ವೀಕರಿಸಿಕೊಳ್ಳಲಿ ಎಂಬುದೇ ಅವರ ಉದ್ದೇಶ. ಕ್ರಿಸ್ತನ ಶಿಲುಬೆಯ ದೆಸೆಯಿಂದ ತಾವು ಹಿಂಸೆಗೆ ಒಳಗಾಗಬಹುದೆಂಬ ಭಯದಿಂದ ಅವರು ಹೀಗೆ ಮಾಡುತ್ತಾರೆ. 13 ಸುನ್ನತಿ ಮಾಡಿಸಿಕೊಂಡಿರುವ ಅವರೇ ಧರ್ಮಶಾಸ್ತ್ರಕ್ಕೆ ವಿಧೇಯರಾಗುತ್ತಿಲ್ಲ. ಆದರೆ ನಿಮಗೂ ಸುನ್ನತಿ ಮಾಡಿಸಿ ಅದರ ಬಗ್ಗೆ ಹೆಚ್ಚಳಪಡಬೇಕೆಂಬುದೇ ಅವರ ಆಸೆ.

14 ಅಂಥ ವಿಷಯಗಳ ಬಗ್ಗೆ ನಾನು ಹೆಚ್ಚಳಪಡುವುದೇ ಇಲ್ಲ. ನಾನು ಹೆಮ್ಮೆಪಡಲು ನನಗಿರುವ ಒಂದೇ ಕಾರಣವೇನೆಂದರೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಶಿಲುಬೆಯೊಂದೇ. ಶಿಲುಬೆಯ ಮೇಲೆ ಯೇಸುವಿಗಾದ ಮರಣದ ಮೂಲಕ ಲೋಕವು ನನ್ನ ಪಾಲಿಗೆ ಸತ್ತುಹೋಯಿತು. ನಾನು ಸಹ ಲೋಕದ ಪಾಲಿಗೆ ಸತ್ತುಹೋದೆನು. 15 ಒಬ್ಬನಿಗೆ ಸುನ್ನತಿಯಾಗಿದೆಯೋ ಸುನ್ನತಿಯಾಗಿಲ್ಲವೋ ಎಂಬುದು ಮುಖ್ಯವಲ್ಲ. ಆದರೆ ದೇವರಿಂದ ಹೊಸ ಸೃಷ್ಟಿಯಾಗಿರುವುದೇ ಮುಖ್ಯವಾದದ್ದು.[a] 16 ಈ ನಿಯಮವನ್ನು ಅನುಸರಿಸುವವರಿಗೆಲ್ಲ, ಅಂದರೆ ನಿಜ ಇಸ್ರೇಲರಾದ ದೇವ ಜನರಿಗೆಲ್ಲ ಶಾಂತಿಯೂ ಕರುಣೆಯೂ ಆಗಲಿ.

17 ಆದ್ದರಿಂದ ಇನ್ನು ಮೇಲೆ ನನಗೆ ತೊಂದರೆ ಕೊಡಬೇಡಿ. ನನ್ನ ದೇಹದ ಮೇಲೆ ಬಾಸುಂಡೆಯ ಗುರುತುಗಳಿವೆ. ನಾನು ಕ್ರಿಸ್ತನವನೆಂಬುದಕ್ಕೆ ಈ ಗುರುತುಗಳೇ ಸಾಕ್ಷಿ.

18 ನನ್ನ ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲೆಂದು ಪ್ರಾರ್ಥಿಸುತ್ತೇನೆ. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International