Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 30

ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.

30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
    ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
    ಆದ್ದರಿಂದ ನಿನ್ನನ್ನು ಕೊಂಡಾಡುವೆನು.
ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
    ನೀನು ನನ್ನನ್ನು ಗುಣಪಡಿಸಿದೆ.
ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
    ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]

ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
    ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
ಆತನ ಕೋಪವು ಕ್ಷಣಮಾತ್ರವಿರುವುದು.
    ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
    ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.

ನಾನು ಸುರಕ್ಷಿತವಾಗಿದ್ದಾಗ
    ನನಗೆ ಕೇಡೇ ಇಲ್ಲವೆಂದುಕೊಂಡೆನು.
ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
    ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
    ಭಯದಿಂದ ನಡುಗತೊಡಗಿದೆ.
ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
    ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
“ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
    ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
    ಅವರು ನಿನ್ನನ್ನು ಸ್ತುತಿಸುವುದಿಲ್ಲ!
    ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
    ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.

11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
    ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
    ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
    ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.

ಪ್ರಲಾಪಗಳು 1:16-22

16 “ನಾನು ಈ ಎಲ್ಲ ವಿಪತ್ತುಗಳಿಗಾಗಿ ಅಳುತ್ತೇನೆ.
    ನನ್ನ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿದೆ.
ನನ್ನನ್ನು ಸಂತೈಸುವವರು ಯಾರೂ ಸಮೀಪದಲ್ಲಿ ಇಲ್ಲ;
    ನನ್ನನ್ನು ಪ್ರೋತ್ಸಾಹಿಸುವವರು ಯಾರೂ ಇಲ್ಲ.
ನನ್ನ ಮಕ್ಕಳು ಹಾಳುಬಿದ್ದ ಭೂಮಿಯಂತಿದ್ದಾರೆ.
    ಶತ್ರುವು ಜಯಶಾಲಿಯಾದ ಕಾರಣ ಅವರು ಹಾಗಾಗಿದ್ದಾರೆ.”

17 ಚೀಯೋನು ತನ್ನ ಕೈಗಳನ್ನು ಚಾಚಿದಳು.
    ಅವಳನ್ನು ಸಂತೈಸುವವರೇ ಇರಲಿಲ್ಲ.
ಯಾಕೋಬನಿಗೆ ವೈರಿಗಳಾಗಬೇಕೆಂದು
    ಅವನ ನೆರೆಹೊರೆಯವರಿಗೆ ಯೆಹೋವನು ಆಜ್ಞಾಪಿಸಿದ್ದನು.
ಜೆರುಸಲೇಮ್ ಒಂದು ಹೊಲಸು ವಸ್ತುವಾಗಿದ್ದಾಳೆ.
    ಆ ವೈರಿಗಳ ಮಧ್ಯದಲ್ಲಿ ಅವಳು ಒಂದು ಹೊಲಸು ವಸ್ತುವಾಗಿದ್ದಾಳೆ.

18 ಅವಳು ಹೇಳಿದಳು, “ಯೆಹೋವನು ಮಾಡಿದ್ದು ನ್ಯಾಯವಾಗಿಯೇ ಇದೆ.
    ಏಕೆಂದರೆ ನಾನು ಆತನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
ಎಲ್ಲಾ ಜನಗಳೇ, ನನ್ನ ಮಾತುಗಳನ್ನು ಕೇಳಿರಿ.
    ನನ್ನ ವ್ಯಥೆಯನ್ನು ನೋಡಿರಿ.
ನನ್ನ ತರುಣತರುಣಿಯರು ಸೆರೆ ಒಯ್ಯಲ್ಪಟ್ಟಿದ್ದಾರೆ.
19 ನಾನು ನನ್ನ ಪ್ರಿಯತಮರನ್ನು ಕೂಗಿ ಕರೆದೆ.
    ಆದರೆ ಅವರು ನನಗೆ ಮೋಸ ಮಾಡಿದರು.
ನನ್ನ ಯಾಜಕರು ಮತ್ತು ಹಿರಿಯರು
    ನಗರದಲ್ಲಿ ಸತ್ತುಹೋದರು.
ಅವರು ತಮಗಾಗಿ ಆಹಾರವನ್ನು ಹುಡುಕುತ್ತಿದ್ದರು.
    ಅವರು ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳ ಬಯಸಿದರು.

20 “ಯೆಹೋವನೇ, ನನ್ನ ಕಡೆ ನೋಡು, ನಾನು ತೊಂದರೆಯಲ್ಲಿದ್ದೇನೆ.
    ನನ್ನ ಮನಸ್ಸು ಕ್ಷೋಭೆಗೊಂಡಿದೆ.
    ನನ್ನ ಮನಸ್ಸಿಗೆ ತಲೆ ಕೆಳಗಾದಂತೆ ಭಾಸವಾಗುತ್ತಿದೆ.
ನಾನು ದುರಹಂಕಾರಿಯಾಗಿದ್ದುದರಿಂದ
    ನನ್ನ ಮನಸ್ಸಿಗೆ ಹಾಗೆ ಭಾಸವಾಗುತ್ತಿದೆ.
ಕಾರಣವೇನೆಂದರೆ, ನಾನು ದಂಗೆಕೋರಳಾಗಿದ್ದೆ.
    ಬೀದಿಗಳಲ್ಲಿ ನನ್ನ ಮಕ್ಕಳು ಖಡ್ಗಕ್ಕೆ ಆಹುತಿಯಾದರು.
ಮನೆಯಲ್ಲಿಯೂ ಸಹ ಸಾವಿತ್ತು.

21 “ನಾನು ನರಳಾಡುತ್ತಿದ್ದೇನೆ.
ಅದಕ್ಕಾಗಿ ನನ್ನ ಮಾತುಗಳಿಗೆ ಕಿವಿಗೊಡು;
    ನನ್ನನ್ನು ಸಂತೈಸುವವರು ಯಾರೂ ಇಲ್ಲ.
ನನ್ನ ಎಲ್ಲ ವೈರಿಗಳು ನನ್ನ ಕಷ್ಟಗಳ ಬಗ್ಗೆ ಕೇಳಿದ್ದಾರೆ.
    ಅವರು ಸಂತೋಷಪಡುತ್ತಿದ್ದಾರೆ.
ನೀನು ನನಗೆ ಈ ಸ್ಥಿತಿಯನ್ನು ತಂದದ್ದಕ್ಕಾಗಿ ಅವರು ಸಂತೋಷಪಡುತ್ತಲಿದ್ದಾರೆ.
    ನೀನು ಪ್ರಕಟಿಸಿದ ಆ ದಿನವನ್ನು ಬರಮಾಡು.
ಆ ದಿನ ನನ್ನ ಶತ್ರುಗಳ ಸ್ಥಿತಿ
    ನನ್ನ ಇಂದಿನ ಸ್ಥಿತಿಯಂತೆ ಆಗಲಿ.

22 “ನನ್ನ ಶತ್ರುಗಳು ಎಷ್ಟು ದುಷ್ಟರಾಗಿದ್ದಾರೆ ನೋಡು.
ನನ್ನ ಎಲ್ಲ ಪಾಪಗಳ ನಿಮಿತ್ತ ನೀನು ನನಗೆ ಮಾಡಿದಂತೆ
    ಅವರಿಗೂ ಮಾಡಲು ನಿನಗೆ ಸಾಧ್ಯವಾಗುವುದು.
ನಾನು ಪದೇಪದೇ ನರಳಾಡುತ್ತಿರುವುದರಿಂದ ನೀನು ಇದನ್ನು ಮಾಡಬೇಕು.
ನನ್ನ ಹೃದಯವು ಅಸ್ವಸ್ಥಗೊಂಡಿರುವುದರಿಂದ ನೀನು ಇದನ್ನು ಮಾಡಬೇಕು.”

2 ಕೊರಿಂಥದವರಿಗೆ 7:2-16

ಪೌಲನ ಆನಂದ

ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳವನ್ನು ಕೊಡಿರಿ. ನಾವು ನಿಮ್ಮಲ್ಲಿ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ. ಯಾರ ನಂಬಿಕೆಯನ್ನೂ ಹಾಳುಮಾಡಿಲ್ಲ; ಯಾರನ್ನೂ ವಂಚಿಸಲಿಲ್ಲ. ನಾನು ಇದನ್ನು ಹೇಳುತ್ತಿರುವುದು ನಿಮ್ಮನ್ನು ನಿಂದಿಸುವುದಕ್ಕಾಗಿಯಲ್ಲ. ನಿಮ್ಮೊಂದಿಗೆ ಬದುಕುವಷ್ಟರಮಟ್ಟಿಗೆ ಮತ್ತು ಸಾಯುವಷ್ಟರಮಟ್ಟಿಗೆ ನಿಮ್ಮನ್ನು ಅಪಾರವಾಗಿ ಪ್ರೀತಿಸುತ್ತೇವೆಂದು ನಾನು ಮೊದಲೇ ನಿಮಗೆ ತಿಳಿಸಿದ್ದೇನೆ. ನಿಮ್ಮ ವಿಷಯದಲ್ಲಿ ನನಗೆ ಬಹಳ ಭರವಸವಿದೆ. ನಾನು ನಿಮ್ಮ ವಿಷಯದಲ್ಲಿ ಹೆಮ್ಮೆಪಡುತ್ತೇನೆ. ನೀವು ನನ್ನನ್ನು ಬಹಳವಾಗಿ ಸಂತೈಸಿದಿರಿ. ನಮ್ಮ ಎಲ್ಲಾ ಇಕ್ಕಟ್ಟುಗಳಲ್ಲಿಯೂ ನನಗೆ ಮಹಾ ಆನಂದವಿದೆ.

ನಾವು ಮಕೆದೋನಿಯಕ್ಕೆ ಬಂದಾಗ ನಮಗೆ ವಿಶ್ರಾಂತಿಯೇ ಇರಲಿಲ್ಲ. ನಮ್ಮ ಸುತ್ತಮುತ್ತಲೆಲ್ಲಾ ಇಕ್ಕಟ್ಟುಗಳಿದ್ದವು. ಹೊರಗೆ ಕಲಹವಿತ್ತು, ಒಳಗೆ ಭಯವಿತ್ತು. ಆದರೆ ದೇವರು ಇಕ್ಕಟ್ಟುಗಳಲ್ಲಿರುವ ಜನರನ್ನು ಸಂತೈಸುತ್ತಾನೆ. ತೀತನು ಬಂದಾಗ ದೇವರು ನಮ್ಮನ್ನು ಸಂತೈಸಿದನು. ಅವನ ಆಗಮನದಿಂದಲೂ ನೀವು ಅವನಿಗೆ ಕೊಟ್ಟ ಆದರಣೆಯಿಂದಲೂ ನಮಗೆ ಸಮಾಧಾನವಾಯಿತು. ನನ್ನನ್ನು ನೋಡಲು ನಿಮಗಿರುವ ಹಂಬಲದ ಕುರಿತಾಗಿಯೂ ನಿಮ್ಮ ಕಾರ್ಯಗಳಿಂದ ನಿಮಗಾಗಿರುವ ದುಃಖದ ಕುರಿತಾಗಿಯೂ ನನ್ನ ವಿಷಯವಾಗಿ ನಿಮಗಿರುವ ಮಹಾಹಿತಚಿಂತನೆಯ ಕುರಿತಾಗಿಯೂ ಅವನು ನನಗೆ ಹೇಳಿದಾಗ ನನಗೆ ಬಹಳ ಸಂತೋಷವಾಯಿತು.

ನಾನು ನಿಮಗೆ ಬರೆದ ಪತ್ರವು ನಿಮಗೆ ದುಃಖವನ್ನು ಉಂಟುಮಾಡಿದ್ದರೂ, ಅದನ್ನು ಬರೆದದ್ದಕ್ಕೆ ನನಗೆ ದುಃಖವಿಲ್ಲ, ಆ ಪತ್ರವು ನಿಮಗೆ ದುಃಖವನ್ನು ಉಂಟು ಮಾಡಿತೆಂದು ನನಗೆಗೊತ್ತಿದೆ. ಆ ವಿಷಯದಲ್ಲಿ ನನಗೆ ವ್ಯಸನವಾಯಿತು. ಆದರೆ ಅದು ನಿಮ್ಮನ್ನು ಸ್ವಲ್ಪಕಾಲದವರೆಗೆ ಮಾತ್ರ ದುಃಖಿತರನ್ನಾಗಿ ಮಾಡಿತು. ಈಗ ನಾನು ಸಂತೋಷವಾಗಿದ್ದೇನೆ. ನಿಮ್ಮನ್ನು ದುಃಖಿತರನ್ನಾಗಿ ಮಾಡಿದ್ದಕ್ಕಾಗಿ ನಾನು ದುಃಖಿಸುತ್ತಿಲ್ಲ. ಆದರೆ ನಿಮ್ಮ ದುಃಖವು ನಿಮ್ಮ ಹೃದಯಗಳಲ್ಲಿ ಪರಿವರ್ತನೆಯನ್ನು ಉಂಟುಮಾಡಿದ್ದರಿಂದ ನಾನು ಸಂತೋಷವಾಗಿದ್ದೇನೆ. ದೇವರ ಇಚ್ಫೆಗನುಸಾರವಾಗಿ ನೀವು ದುಃಖಿತರಾದಿರಿ. ಆದ್ದರಿಂದ ನಮ್ಮಿಂದ ನಿಮಗೆ ಯಾವ ರೀತಿಯಲ್ಲಿಯೂ ನೋವಾಗಲಿಲ್ಲ. 10 ದೇವರ ಇಷ್ಟಾನುಸಾರವಾದ ದುಃಖವು ಹೃದಯವನ್ನೂ ಜೀವಿತವನ್ನೂ ಪರಿವರ್ತಿಸುತ್ತದೆ. ಈ ಪರಿವರ್ತನೆಯು ರಕ್ಷಣೆಗೆ ನಡೆಸುತ್ತದೆ. ಈ ಪರಿವರ್ತನೆಯ ವಿಷಯದಲ್ಲಿ ನಾವು ವ್ಯಸನಪಡಬೇಕಾಗಿಲ್ಲ. ಆದರೆ, ಲೋಕವು ಹೊಂದಿರುವ ದುಃಖವು ಮರಣವನ್ನು ಬರಮಾಡುತ್ತದೆ. 11 ನೀವು ಯಾವ ದುಃಖವನ್ನು ಹೊಂದಿರಬೇಕೆಂದು ದೇವರು ಬಯಸಿದ್ದನೋ ಅದೇ ದುಃಖವನ್ನು ನೀವು ಹೊಂದಿದ್ದೀರಿ. ಆ ದುಃಖವು ನಿಮ್ಮನ್ನು ಬಹು ಆಸಕ್ತಿಯುಳ್ಳವರನ್ನಾಗಿ ಮಾಡಿತು; ನೀವು ತಪ್ಪಿತಸ್ಥರಾಗಿರಲಿಲ್ಲವೆಂದು ನಿರೂಪಿಸಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನಿಮ್ಮನ್ನು ಕೋಪಗೊಳಿಸಿತು ಮತ್ತು ಭಯಗೊಳಿಸಿತು; ನನ್ನನ್ನು ನೋಡಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನನ್ನ ಬಗ್ಗೆ ಚಿಂತಿಸುವಂತೆ ಮಾಡಿತು; ತಪ್ಪಿತಸ್ಥರನ್ನು ದಂಡಿಸಬೇಕೆಂಬ ಬಯಕೆಯನ್ನು ಉಂಟು ಮಾಡಿತು. ಆ ಸಮಸ್ಯೆಯ ಯಾವ ವಿಷಯದಲ್ಲಿಯೂ ನೀವು ಅಪರಾಧಿಗಳಾಗಿರಲಿಲ್ಲವೆಂದು ನಿರೂಪಿಸಿದಿರಿ. 12 ನಾನು ಆ ಪತ್ರವನ್ನು ಬರೆದದ್ದು ತಪ್ಪು ಮಾಡಿದವನಿಗೋಸ್ಕರವಲ್ಲ, ಆ ತಪ್ಪಿನಿಂದ ದುಃಖಕ್ಕೆ ಒಳಗಾದವನಿಗೋಸ್ಕರವೂ ಅಲ್ಲ. ಆದರೆ ನಮ್ಮ ವಿಷಯದಲ್ಲಿ ನಿಮಗಿರುವ ಮಹಾಚಿಂತೆಯನ್ನು ನೀವು ದೇವರ ಎದುರಿನಲ್ಲಿ ನೋಡುವಂತಾಗಬೇಕೆಂದು ಆ ಪತ್ರವನ್ನು ಬರೆದೆನು. 13 ಆದ್ದರಿಂದಲೇ ನಮಗೆ ಆದರಣೆಯಾಯಿತು.

ತೀತನು ಬಹು ಸಂತೋಷವಾಗಿರುವುದನ್ನು ಕಂಡು ನಮಗೆ ಮತ್ತಷ್ಟು ಸಂತೋಷವಾಯಿತು. ನೀವೆಲ್ಲರೂ ಅವನನ್ನು ಸಂತೋಷಗೊಳಿಸಿದಿರಿ. 14 ತೀತನ ಮುಂದೆ ನಾನು ನಿಮ್ಮನ್ನು ಹೊಗಳಿದೆನು. ಅದು ಸಮರ್ಪಕವೆಂದು ನೀವು ನಿರೂಪಿಸಿದಿರಿ. ನಾವು ನಿಮಗೆ ಹೇಳಿದ ಪ್ರತಿಯೊಂದೂ ಸತ್ಯವಾಗಿತ್ತು. ನಾವು ತೀತನ ಮುಂದೆ ನಿಮ್ಮ ವಿಷಯದಲ್ಲಿ ಹೇಳಿದ ಹೊಗಳಿಕೆಯ ಮಾತುಗಳೆಲ್ಲಾ ಸತ್ಯವೆಂದು ನೀವು ನಿರೂಪಿಸಿದಿರಿ. 15 ನೀವೆಲ್ಲರೂ ವಿಧೇಯರಾಗಿರಲು ಸಿದ್ಧರಾಗಿದ್ದನ್ನು ಜ್ಞಾಪಿಸಿಕೊಂಡಾಗಲೆಲ್ಲಾ ಅವನಿಗೆ ನಿಮ್ಮ ಮೇಲೆ ಪ್ರೀತಿಯು ಹೆಚ್ಚಾಗುತ್ತದೆ. ನೀವು ಅವನನ್ನು ಗೌರವದಿಂದಲೂ ಭಯದಿಂದಲೂ ಸ್ವೀಕರಿಸಿದಿರಿ. 16 ನನಗೆ ನಿಮ್ಮ ವಿಷಯದಲ್ಲಿ ಪೂರ್ಣ ಭರವಸೆ ಇರುವುದರಿಂದ ಬಹು ಸಂತೋಷಪಡುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International