Revised Common Lectionary (Complementary)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
2 ನನ್ನ ಒಡೆಯನೇ, ನನಗೆ ಕಿವಿಗೊಡು.
ನನ್ನ ಮೊರೆಯನ್ನು ಆಲಿಸು.
3 ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
ಒಬ್ಬನೂ ಜೀವಂತವಾಗಿ ಉಳಿಯಲಾರ.
4 ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.
5 ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
6 ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
7 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
8 ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.
ದೇವರು ತನ್ನ ಜನರಿಗೆ ಸಹಾಯ ಮಾಡುವನು
9 ಯೆಹೋವನು ಜನರಿಗೆ ಪಾಠ ಕಲಿಸಲು ಪ್ರಯತ್ನಿಸುತ್ತಿದ್ದಾನೆ. ತನ್ನ ಬೋಧನೆಯನ್ನು ತನ್ನ ಜನರು ಅರಿತುಕೊಳ್ಳಲೆಂದು ಯೆಹೋವನು ಪ್ರಯತ್ನಿಸುತ್ತಿದ್ದಾನೆ. ಆದರೆ ಜನರು ಇನ್ನೂ ತಾಯಿ ಹಾಲು ಕುಡಿಯುವ ಚಿಕ್ಕ ಕೂಸುಗಳಿಂತಿದ್ದಾರೆ. 10 ಆದ್ದರಿಂದ ಚಿಕ್ಕಕೂಸುಗಳೊಂದಿಗೆ ಮಾತಾಡುವಂತೆ ಯೆಹೋವನು ಅವರ ಸಂಗಡ ಮಾತಾಡುತ್ತಾನೆ:
“ಸಾ ಲಸಾವ್ ಸಾ ಲಸಾವ್
ಖಾವ್ ಲಖಾವ್ ಖಾವ್ ಲಖಾವ್
ಜೆಯಿರ್ ಶಾಮ್ ಜೆಯಿರ್ ಶಾಮ್.”[a]
11 ಯೆಹೋವನು ಅವರ ಸಂಗಡ ವಿಚಿತ್ರವಾಗಿಯೂ ಅನ್ಯಭಾಷೆಗಳಲ್ಲಿಯೂ ಮಾತನಾಡುತ್ತಾನೆ.
12 ಹಿಂದಿನ ಕಾಲದಲ್ಲಿ ದೇವರು ಅವರ ಸಂಗಡ ಮಾತನಾಡಿ, “ಇಲ್ಲಿ ವಿಶ್ರಾಂತಿಯ ಸ್ಥಳವಿದೆ, ಇದು ವಿಶ್ರಮಿಸುವ ಸ್ಥಳ. ಆಯಾಸಗೊಂಡವರೇ, ಬಂದು ವಿಶ್ರಮಿಸಿರಿ. ಇದು ಸಮಾಧಾನಕರವಾದ ಸ್ಥಳ” ಎಂದು ಹೇಳುತ್ತಿದ್ದನು.
ಆದರೆ ಜನರಿಗೆ ಆತನ ಮಾತುಗಳನ್ನು ಕೇಳಲು ಇಷ್ಟವಾಗಲಿಲ್ಲ. 13 ಆದ್ದರಿಂದ ಆತನ ಮಾತು ಅವರಿಗೆ ಪರಭಾಷೆಯಂತೆ ಕೇಳಿಸುವುದು.
“ಸಾ ಲಸಾವ್ ಸಾ ಲಸಾವ್
ಖಾವ್ ಲಖಾವ್ ಖಾವ್ ಲಖಾವ್
ಜೆಯಿರ್ ಶಾಮ್ ಜೆಯಿರ್ ಶಾಮ್.”
ಜನರು ತಮ್ಮ ಇಷ್ಟಪ್ರಕಾರ ನಡೆದರು. ಆದ್ದರಿಂದ ಅವರು ಸೋಲಿಸಲ್ಪಟ್ಟರು. ಅವರು ಉರುಲಿಗೆ ಸಿಕ್ಕಿ ಹಾಕಿಕೊಂಡು ಹಿಡಿಯಲ್ಪಟ್ಟರು.
ದೇವರ ವರಗಳಿಗೆ ಉತ್ತಮ ಕಾರ್ಯ ನಿರ್ವಾಹಕರಾಗಿರಿ
7 ಎಲ್ಲಾ ಸಂಗತಿಗಳೂ ಅಂತ್ಯಗೊಳ್ಳುವ ಕಾಲ ಸಮೀಪಿಸಿದೆ. ನೀವು ವಿವೇಕಿಗಳಾಗಿದ್ದು ನಿಮ್ಮನ್ನು ಹತೋಟಿಯಲ್ಲಿಟ್ಟು ಕೊಳ್ಳಿರಿ. ನೀವು ಪ್ರಾರ್ಥಿಸಲು ಇದು ಸಹಾಯ ಮಾಡುತ್ತದೆ. 8 ನೀವು ಒಬ್ಬರನ್ನೊಬ್ಬರು ಎಡಬಿಡದೆ ಪ್ರೀತಿಸುವುದು ಬಹಳ ಮುಖ್ಯವಾದುದು. ಪ್ರೀತಿಯು ಅನೇಕ ಪಾಪಗಳನ್ನು ಅಡಗಿಸಿಬಿಡುತ್ತದೆ. 9 ಗುಣುಗುಟ್ಟದೆ ಅತಿಥಿಸತ್ಕಾರ ಮಾಡಿರಿ. 10 ನಿಮ್ಮಲ್ಲಿ ಪ್ರತಿಯೊಬ್ಬರೂ ದೇವರಿಂದ ಆತ್ಮಿಕ ವರವನ್ನು ಪಡೆದುಕೊಂಡಿರಿ. ದೇವರು ನಿಮಗೆ ಅನೇಕ ವಿಧಗಳಲ್ಲಿ ತನ್ನ ಕೃಪೆಯನ್ನು ದಯಪಾಲಿಸಿರುವನು. ನೀವು ದೇವರ ವರಗಳನ್ನು ಉಪಯೋಗಿಸುವ ಜವಾಬ್ದಾರಿಯುತರಾದ ಸೇವಕರಾಗಿದ್ದೀರಿ. ಆದ್ದರಿಂದ ಒಳ್ಳೆಯ ಸೇವಕರಾಗಿರಿ; ಪರಸ್ಪರ ಸೇವೆ ಮಾಡಲು ನಿಮ್ಮ ವರಗಳನ್ನು ಉಪಯೋಗಿಸಿರಿ. 11 ಬೋಧಿಸುವವನು ದೇವರ ನುಡಿಗಳನ್ನೇ ಬೋಧಿಸಲಿ. ಸೇವೆ ಮಾಡುವವನು ದೇವರೇ ದಯಪಾಲಿಸಿದ ಶಕ್ತಿಯಿಂದ ಸೇವೆ ಮಾಡಲಿ. ನೀವು ಹೀಗೆ ಮಾಡಿದರೆ, ನೀವು ಮಾಡುವ ಪ್ರತಿಯೊಂದರಲ್ಲೂ ಯೇಸು ಕ್ರಿಸ್ತನ ಮೂಲಕ ದೇವರು ಸ್ತುತಿಸಲ್ಪಡುವನು. ಅಧಿಕಾರವೂ ಮಹಿಮೆಯೂ ಯುಗಯುಗಾಂತರಗಳಲ್ಲಿ ಆತನಿಗೆ ಸೇರಿದವುಗಳಾಗಿವೆ. ಆಮೆನ್.
ಕ್ರೈಸ್ತನಾಗಿ ಸಂಕಟಪಡುವುದು
12 ನನ್ನ ಸ್ನೇಹಿತರೇ, ನೀವು ಈಗ ಅನುಭವಿಸುತ್ತಿರುವ ಸಂಕಟಗಳ ವಿಷಯದಲ್ಲಿ ಆಶ್ಚರ್ಯಪಡದಿರಿ. ಅವು ನಿಮ್ಮ ನಂಬಿಕೆಯನ್ನು ಪರೀಕ್ಷಿಸುತ್ತಿವೆ. ವಿಪರೀತವಾದದ್ದು ನಿಮಗೆ ಸಂಭವಿಸುತ್ತಿದೆಯೆಂದು ಯೋಚಿಸದಿರಿ. 13 ಆದರೆ ನೀವು ಕ್ರಿಸ್ತನ ಸಂಕಟಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಸಂತೋಷಿಸಿರಿ. ಕ್ರಿಸ್ತನು ತನ್ನ ಮಹಿಮೆಯನ್ನು ತೋರ್ಪಡಿಸುವಾಗ ನೀವು ಸಂತೋಷಪಡುವಿರಿ ಮತ್ತು ಆನಂದಿಸುವಿರಿ. 14 ನೀವು ಕ್ರಿಸ್ತನನ್ನು ಅನುಸರಿಸುತ್ತಿರುವುದರ ನಿಮಿತ್ತವಾಗಿ ನಿಮ್ಮ ಬಗ್ಗೆ ಜನರು ಕೆಟ್ಟದ್ದನ್ನು ನುಡಿದರೆ ನೀವು ಭಾಗ್ಯವಂತರಾಗಿದ್ದೀರಿ. ತೇಜೋಮಯವಾದ ಆತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನೆ. ಆತನು ದೇವರಾತ್ಮನಾಗಿದ್ದಾನೆ. 15 ನೀವು ಕೆಡುಕರಾಗಬಾರದು ಅಂದರೆ ಕೊಲೆಗಾರರಾಗಬಾರದು, ಕಳ್ಳರಾಗಬಾರದು ಮತ್ತು ಇತರರಿಗೆ ತೊಂದರೆ ಕೊಡಬಾರದು. ಇಂಥವುಗಳನ್ನು ಮಾಡುವವನು ಸಂಕಟಕ್ಕೆ ಒಳಗಾಗುವನು. ನಿಮ್ಮಲ್ಲಿ ಯಾರೂ ಆ ರೀತಿಯ ಸಂಕಟಕ್ಕೆ ಒಳಗಾಗಬಾರದು. 16 ನೀವು ಕ್ರೈಸ್ತರಾಗಿರುವುದರಿಂದ ಸಂಕಟಪಟ್ಟರೆ, ನಾಚಿಕೊಳ್ಳಬಾರದು. ಆ (ಕ್ರೈಸ್ತ) ಹೆಸರಿನ ನಿಮಿತ್ತ ನೀವು ದೇವರಿಗೆ ಸ್ತೋತ್ರ ಮಾಡಬೇಕು. 17 ನಿಮ್ಮ ನ್ಯಾಯನಿರ್ಣಯದ ಕಾಲ ಬಂದಿದೆ. ಅದು ದೇವರ ಕುಟುಂಬದಿಂದಲೇ ಆರಂಭವಾಗುವುದು. ನಮ್ಮಲ್ಲಿಯೇ ಅದು ಆರಂಭವಾದರೆ, ದೇವರ ಸುವಾರ್ತೆಗೆ ವಿಧೇಯರಾಗದ ಜನರಿಗೆ ಏನಾಗಬಹುದು?
18 “ನೀತಿವಂತನೇ ರಕ್ಷಣೆ ಹೊಂದಲು ಕಷ್ಟವಾದರೆ,
ಭಕ್ತಿಹೀನನ ಮತ್ತು ಪಾಪಿಷ್ಠನ ಗತಿಯೇನು?”(A)
19 ಆದ್ದರಿಂದ ದೇವರ ಅಪೇಕ್ಷೆಯಂತೆ ಸಂಕಟಪಡುವವರು ತಮ್ಮ ಜೀವಾತ್ಮಗಳನ್ನು ಆತನಿಗೆ ಒಪ್ಪಿಸಿಕೊಡಬೇಕು. ಅವರನ್ನು ಸೃಷ್ಟಿಸಿದಾತನು ದೇವರೇ. ಆದ್ದರಿಂದ ಅವರು ಆತನಲ್ಲಿ ಭರವಸವಿಡತಕ್ಕದ್ದು. ಹೀಗಿರಲಾಗಿ ಅವರು ಒಳ್ಳೆಯದನ್ನು ಮಾಡುತ್ತಲೇ ಇರಬೇಕು.
Kannada Holy Bible: Easy-to-Read Version. All rights reserved. © 1997 Bible League International