ಮತ್ತಾಯ 13:1-17
Kannada Holy Bible: Easy-to-Read Version
ಬಿತ್ತನೆಯನ್ನು ಉದಾಹರಿಸಿ ಯೇಸು ಹೇಳಿದ ಬೋಧನೆ
(ಮಾರ್ಕ 4:1-9; ಲೂಕ 8:4-8)
13 ಅದೇ ದಿನದಲ್ಲಿ ಯೇಸು ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತುಕೊಂಡನು. 2 ಅನೇಕ ಜನರು ಯೇಸುವಿನ ಸುತ್ತಲೂ ನೆರೆದರು. ಆಗ ಯೇಸು ದೋಣಿಯೊಳಕ್ಕೆ ಹೋಗಿ ಕುಳಿತುಕೊಂಡನು. ಜನರೆಲ್ಲರೂ ದಡದಲ್ಲಿ ನಿಂತಿದ್ದರು. 3 ಆಗ ಯೇಸು ಸಾಮ್ಯಗಳ ಮೂಲಕ ಅನೇಕ ವಿಷಯಗಳನ್ನು ಅವರಿಗೆ ಬೋಧಿಸಿದನು. ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು:
“ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೋದನು. 4 ಅವನು ಬೀಜ ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಬೀಜಗಳನ್ನೆಲ್ಲ ತಿಂದುಬಿಟ್ಟವು. 5 ಕೆಲವು ಬೀಜಗಳು ಬಂಡೆಯ ನೆಲದಲ್ಲಿ ಬಿದ್ದವು. ಅಲ್ಲಿಯ ನೆಲದಲ್ಲಿ ಸಾಕಷ್ಟು ಮಣ್ಣಿಲ್ಲದಿದ್ದುದರಿಂದ ಬೀಜಗಳು ಬೇಗ ಮೊಳೆತವು. 6 ಆದರೆ ಬಿಸಿಲೇರಿದಾಗ ಆ ಮೊಳಕೆಗಳು ಒಣಗಿಹೋದವು. ಏಕೆಂದರೆ ಅವುಗಳಿಗೆ ಆಳವಾದ ಬೇರಿರಲಿಲ್ಲ. 7 ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಒಳ್ಳೆಯ ಗಿಡಗಳು ಬೆಳೆಯುವುದನ್ನು ತಡೆದುಬಿಟ್ಟವು. 8 ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಅವು ಬೆಳೆದು ಕಾಳುಬಿಟ್ಟವು. ಕೆಲವು ಗಿಡಗಳು ನೂರರಷ್ಟು, ಕೆಲವು ಗಿಡಗಳು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಕಾಳುಬಿಟ್ಟವು. 9 ನನಗೆ ಕಿವಿಗೊಡುವ ಜನರೇ, ಲಾಲಿಸಿರಿ!”
ಯೇಸು ಸಾಮ್ಯಗಳನ್ನು ಏಕೆ ಬಳಸಿದನು?
(ಮಾರ್ಕ 4:10-12; ಲೂಕ 8:9-10)
10 ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಸಾಮ್ಯಗಳ ಮೂಲಕ ಜನರಿಗೆ ಉಪದೇಶಿಸುವುದೇಕೆ?” ಎಂದು ಕೇಳಿದರು.
11 ಯೇಸು, “ಪರಲೋಕರಾಜ್ಯದ ರಹಸ್ಯವಾದ ಸತ್ಯಗಳನ್ನು ನೀವು ಮಾತ್ರ ತಿಳಿದುಕೊಳ್ಳಬಲ್ಲಿರಿ. ಈ ಸತ್ಯಗಳ ರಹಸ್ಯವು ಬೇರೆ ಜನರಿಗೆ ತಿಳಿಯಲಾರದು. 12 ಸ್ವಲ್ಪ ಜ್ಞಾನವನ್ನು ಹೊಂದಿರುವವನು ಇನ್ನೂ ಹೆಚ್ಚು ಜ್ಞಾನವನ್ನು ಪಡೆದುಕೊಂಡು ಸಾಕಷ್ಟು ಜ್ಞಾನವಂತನಾಗುವನು. ಆದರೆ ಜ್ಞಾನವನ್ನು ಹೊಂದಿಲ್ಲದವನು ತನಗಿರುವ ಸ್ವಲ್ಪ ಜ್ಞಾನವನ್ನೂ ಕಳೆದುಕೊಳ್ಳುವನು. 13 ಈ ಕಾರಣದಿಂದಲೇ ನಾನು ಈ ಸಾಮ್ಯಗಳ ಮೂಲಕ ಇವರಿಗೆ ಬೋಧಿಸುತ್ತೇನೆ. ಈ ಜನರು ನೋಡಿದರೂ ಕಾಣುವುದಿಲ್ಲ, ಕೇಳಿದರೂ ಗ್ರಹಿಸುವುದಿಲ್ಲ. 14 ಇಂಥವರ ಬಗ್ಗೆ ಯೆಶಾಯನು ಹೇಳಿದ್ದೇನೆಂದರೆ:
‘ನೀವು ಆಲಿಸುತ್ತೀರಿ, ಕೇಳುತ್ತೀರಿ,
ಆದರೆ ನಿಮಗೆ ಅರ್ಥವಾಗುವುದಿಲ್ಲ.
ನೀವು ದೃಷ್ಟಿಸಿ ನೋಡುತ್ತೀರಿ,
ಆದರೆ ನಿಮಗೆ ಕಾಣುವುದನ್ನು ಅರ್ಥಮಾಡಿಕೊಳ್ಳುವುದಿಲ್ಲ.
15 ಹೌದು, ಇವರ ಮನಸ್ಸುಗಳು ಕಠಿಣವಾಗಿವೆ.
ಕಿವಿ ಮಂದವಾಗಿವೆ,
ಕಣ್ಣು ಮಬ್ಬಾಗಿವೆ.
ಅವರು
ತಮ್ಮ ಕಣ್ಣುಗಳಿಂದ ನೋಡದಂತೆಯೂ
ತಮ್ಮ ಕಿವಿಗಳಿಂದ ಕೇಳದಂತೆಯೂ
ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆಯೂ
ನನ್ನ ಕಡೆಗೆ ತಿರುಗಿಕೊಳ್ಳದಂತೆಯೂ ನನ್ನಿಂದ ಗುಣಹೊಂದದಂತೆಯೂ ಹೀಗಾಯಿತು.’(A)
16 ನೀವಾದರೋ ಧನ್ಯರು. ನಿಮಗೆ ಕಾಣುವ ಸಂಗತಿಗಳನ್ನೂ ನಿಮಗೆ ಹೇಳುವ ವಿಷಯಗಳನ್ನೂ ಅರ್ಥಮಾಡಿಕೊಳ್ಳಬಲ್ಲಿರಿ. 17 ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಈಗ ನೋಡುವ ಸಂಗತಿಗಳನ್ನು ನೋಡಲು ಮತ್ತು ಈಗ ನೀವು ಕೇಳುವ ಸಂಗತಿಗಳನ್ನು ಕೇಳಲು ಅನೇಕ ಪ್ರವಾದಿಗಳು ಮತ್ತು ಒಳ್ಳೆಯ ಜನರು ಅಪೇಕ್ಷಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ.
Read full chapterKannada Holy Bible: Easy-to-Read Version. All rights reserved. © 1997 Bible League International