Revised Common Lectionary (Semicontinuous)
ರಚನೆಗಾರ: ದಾವೀದ.
20 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ.
ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ.
2 ಆತನು ತನ್ನ ಪವಿತ್ರ ಸ್ಥಳದಿಂದ ನಿನಗೆ ಸಹಾಯಮಾಡಲಿ.
ಚೀಯೋನಿನಿಂದ ನಿನಗೆ ಆಧಾರ ನೀಡಲಿ.
3 ನೀನು ಅರ್ಪಿಸಿದ ಕಾಣಿಕೆಗಳನ್ನೆಲ್ಲ ಆತನು ಜ್ಞಾಪಿಸಿಕೊಳ್ಳಲಿ.
ನಿನ್ನ ಯಜ್ಞಗಳನ್ನೆಲ್ಲ ಆತನು ಸ್ವೀಕರಿಸಿಕೊಳ್ಳಲಿ.
4 ಆತನು ನಿನ್ನ ಬಯಕೆಗಳನ್ನು ಈಡೇರಿಸಲಿ.
ನಿನ್ನ ಆಲೋಚನೆಗಳನ್ನೆಲ್ಲ ನೆರವೇರಿಸಲಿ.
5 ದೇವರು ನಿನಗೆ ಸಹಾಯಮಾಡುವಾಗ ಹರ್ಷಿಸುವೆವು.
ಆತನ ಹೆಸರನ್ನು ಕೊಂಡಾಡೋಣ.
ಯೆಹೋವನು ನಿನ್ನ ಕೋರಿಕೆಗಳನ್ನೆಲ್ಲ ನೆರವೇರಿಸಲಿ.
6 ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಸಹಾಯಮಾಡುತ್ತಾನೆಂದು ಈಗ ನನಗೆ ಗೊತ್ತಾಯಿತು.
ದೇವರು ತಾನು ಆರಿಸಿಕೊಂಡ ರಾಜನಿಗೆ ಪರಲೋಕದಿಂದ ಉತ್ತರಿಸಿದನು;
ತನ್ನ ಮಹಾಶಕ್ತಿಯಿಂದ ಅವನನ್ನು ರಕ್ಷಿಸಿದನು.
7 ಕೆಲವರು ತಮ್ಮ ರಥಗಳಲ್ಲಿ ಭರವಸವಿಡುವರು.
ಕೆಲವರು ತಮ್ಮ ಸೈನಿಕರುಗಳಲ್ಲಿ ಭರವಸವಿಡುವರು.
ನಾವಾದರೋ ನಮ್ಮ ದೇವರಾದ ಯೆಹೋವನನ್ನೇ ಜ್ಞಾಪಿಸಿಕೊಳ್ಳುವೆವು.
8 ಅವರು ಸೋತುಹೋದರು; ಯುದ್ಧದಲ್ಲಿ ಸತ್ತುಹೋದರು;
ನಾವಾದರೋ ಜಯಗಳಿಸಿದೆವು! ನಾವು ಜಯಪ್ರದರಾಗಿ ನಿಂತುಕೊಳ್ಳುವೆವು!
9 ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು!
ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು.
5 ಸೊಲೊಮೋನನು ಗಿಬ್ಯೋನಿನಲ್ಲಿದ್ದಾಗ, ಯೆಹೋವನು ರಾತ್ರಿ ಕನಸಿನಲ್ಲಿ ಅವನಿಗೆ ದರ್ಶನವನ್ನು ನೀಡಿ, “ನೀನು ಏನುಬೇಕಾದರೂ ಕೇಳು. ನಾನು ಅದನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
6 ಸೊಲೊಮೋನನು, “ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ನೀನು ಬಹಳ ದಯಾಪರನಾಗಿದ್ದೆ. ಅವನು ನಿನ್ನನ್ನು ಅನುಸರಿಸಿದನು. ಅವನು ಒಳ್ಳೆಯವನಾಗಿದ್ದು ನೀತಿವಂತನಾಗಿ ಬದುಕಿದನು. ಅವನ ನಂತರ ಅವನ ಮಗನನ್ನು ಅವನ ಸಿಂಹಾಸನದಲ್ಲಿ ಕುಳ್ಳಿರಿಸಿ ಆಳಲು ನೇಮಿಸಿ ನೀನು ಮಹಾಕೃಪೆಯನ್ನು ತೋರಿಸಿದೆ. 7 ನನ್ನ ದೇವರಾದ ಯೆಹೋವನೇ, ನನ್ನ ತಂದೆಯ ಸ್ಥಾನದಲ್ಲಿ ನನ್ನನ್ನು ನೀನು ರಾಜನನ್ನಾಗಿ ಮಾಡಿದೆ. ಆದರೆ ನಾನೊಬ್ಬ ಚಿಕ್ಕ ಮಗುವಿನಂತಿದ್ದೇನೆ. ನಾನು ಮಾಡಬೇಕಾದ ಕಾರ್ಯಗಳನ್ನು ಮಾಡಲು ಇರಬೇಕಾದ ಬುದ್ದಿವಂತಿಕೆಯು ನನ್ನಲ್ಲಿಲ್ಲ. 8 ನಿನ್ನ ಸೇವಕನಾದ ನಾನು, ನೀನೇ ಆರಿಸಿಕೊಂಡಿರುವ ಜನರ ನಡುವೆ ಇದ್ದೇನೆ. ಇಲ್ಲಿ ಅನೇಕಾನೇಕ ಜನರಿದ್ದಾರೆ. ಅವರನ್ನು ಎಣಿಸಲಾಗದು, ಒಬ್ಬ ಆಡಳಿತಗಾರನು ಅವರ ಮಧ್ಯದಲ್ಲಿದ್ದು ಅನೇಕ ತೀರ್ಪುಗಳನ್ನು ಮಾಡಬೇಕಾಗುತ್ತದೆ. 9 ಆದ್ದರಿಂದ ನಿನ್ನ ಜನರನ್ನು ಒಳ್ಳೆಯ ರೀತಿಯಲ್ಲಿ ಆಳಲು ಮತ್ತು ಅವರಿಗೆ ಸರಿಯಾದ ತೀರ್ಪುಗಳನ್ನು ನೀಡಲು ನನಗೆ ವಿವೇಕವನ್ನು ಕರುಣಿಸು. ಇದು ನನಗೆ ಸರಿ ಮತ್ತು ತಪ್ಪುಗಳ ನಡುವಿರುವ ಭೇದವನ್ನು ತಿಳಿಸಿಕೊಡುತ್ತದೆ. ನನಗೆ ಉತ್ತಮವಾದ ವಿವೇಕವಿಲ್ಲದಿದ್ದರೆ, ನಾನು ಈ ಮಹಾಜನಾಂಗವನ್ನು ಆಳುವುದು ಸಾಧ್ಯವಾಗುವುದಿಲ್ಲ” ಎಂದು ಉತ್ತರಿಸಿದನು.
10 ಸೊಲೊಮೋನನ ಈ ಕೋರಿಕೆಯನ್ನು ಕೇಳಿ ಯೆಹೋವನಿಗೆ ಸಂತೋಷವಾಯಿತು. 11 ಆದ್ದರಿಂದ ದೇವರು ಅವನಿಗೆ, “ನೀನು ನಿನಗಾಗಿ ಹೆಚ್ಚು ಆಯಸ್ಸನ್ನೂ ಕೇಳಲಿಲ್ಲ, ಶ್ರೀಮಂತಿಕೆಯನ್ನೂ ಕೇಳಲಿಲ್ಲ, ನಿನ್ನ ಶತ್ರುಗಳಿಗೆ ಮರಣವನ್ನು ದಯಪಾಲಿಸೆಂದೂ ಕೇಳಲಿಲ್ಲ, ನೀನು ನ್ಯಾಯವಾದ ತೀರ್ಪು ನೀಡಲು ವಿವೇಕವನ್ನು ಕೇಳಿದೆ. 12 ನಿನ್ನ ಕೋರಿಕೆಯನ್ನು ಅನುಗ್ರಹಿಸುವೆನು; ನಿನ್ನನ್ನು ಜ್ಞಾನಿಯನ್ನಾಗಿಯೂ ವಿವೇಕಿಯನ್ನಾಗಿಯೂ ಮಾಡುವೆನು. ಪೂರ್ವಕಾಲದಲ್ಲಿ ನಿನ್ನಂತವರು ಯಾರೊಬ್ಬರೂ ಇರಲಿಲ್ಲ ಎನ್ನುವಷ್ಟು ಜ್ಞಾನಿಯನ್ನಾಗಿ ನಿನ್ನನ್ನು ಮಾಡುತ್ತೇನೆ. ಮುಂದೆ ನಿನ್ನಂತವರು ಯಾರೊಬ್ಬರೂ ಇರುವುದಿಲ್ಲ. 13 ನೀನು ಕೇಳದೆಹೋದ ಬಿನ್ನಹಗಳನ್ನು ನಾನು ನಿನಗೆ ಅನುಗ್ರಹಿಸುತ್ತೇನೆ. ನಿನ್ನ ಜೀವವಿರುವವರೆಗೆ ನೀನು ಶ್ರೀಮಂತನಾಗಿದ್ದು ಘನಮಾನವನ್ನು ಹೊಂದುವಿ. ಪ್ರಪಂಚದಲ್ಲಿ ನಿನ್ನಂತಹ ಉನ್ನತವಾದ ಬೇರೊಬ್ಬ ರಾಜನು ಇರುವುದಿಲ್ಲ. 14 ನೀನು ನನ್ನ ಕಟ್ಟಳೆಗಳನ್ನು ಆಜ್ಞೆಗಳನ್ನು ಅನುಸರಿಸುವುದರ ಮೂಲಕ ನನಗೆ ವಿಧೇಯನಾಗಿರಬೇಕು ಎಂದು ಹೇಳುತ್ತೇನೆ. ನಿನ್ನ ತಂದೆಯಾದ ದಾವೀದನು ನಡೆದ ಮಾರ್ಗದಲ್ಲಿ ನೀನೂ ನಡೆ. ಆಗ ನಾನು ನಿನಗೆ ದೀರ್ಘಾಯುಷ್ಯವನ್ನು ಕೊಡುತ್ತೇನೆ” ಎಂದು ಹೇಳಿದನು.
ಯೇಸುವೇ ಲೋಕಕ್ಕೆ ಬೆಳಕು
12 ಬಳಿಕ, ಯೇಸುವು ಜನರೊಂದಿಗೆ ಮತ್ತೆ ಮಾತಾಡುತ್ತಾ, “ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ಎಂದಿಗೂ ಜೀವಿಸುವುದಿಲ್ಲ. ಅವನು ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು” ಎಂದು ಹೇಳಿದನು.
13 ಫರಿಸಾಯರು ಯೇಸುವಿಗೆ, “ನೀನು ನಿನ್ನ ಬಗ್ಗೆ ಮಾತಾಡುವ ಈ ಸಂಗತಿಗಳು ಸತ್ಯವೆಂದು ಹೇಳುವವನು ನೀನೊಬ್ಬನು ಮಾತ್ರ. ಆದ್ದರಿಂದ, ನೀನು ಹೇಳುವ ಈ ಸಂಗತಿಗಳನ್ನು ನಾವು ಸ್ವೀಕರಿಸಿಕೊಳ್ಳಲಾರೆವು” ಎಂದು ಹೇಳಿದರು.
14 ಯೇಸು, “ಹೌದು, ನಾನೇ ನನ್ನ ಬಗ್ಗೆ ಈ ಸಂಗತಿಗಳನ್ನು ಹೇಳುತ್ತಿದ್ದರೂ ಈ ಸಂಗತಿಗಳು ಜನರ ನಂಬಿಕೆಗೆ ಯೋಗ್ಯವಾಗಿವೆ. ಏಕೆಂದರೆ, ನಾನು ಎಲ್ಲಿಂದ ಬಂದೆನೆಂಬುದೂ ನಾನು ಎಲ್ಲಿಗೆ ಹೋಗುತ್ತೇನೆಂಬುದೂ ನನಗೆ ತಿಳಿದಿದೆ. ನಾನು ನಿಮ್ಮಂಥ ವ್ಯಕ್ತಿಯಲ್ಲ. ನಾನು ಎಲ್ಲಿಂದ ಬಂದೆನೆಂಬುದು ಮತ್ತು ಎಲ್ಲಿಗೆ ಹೋಗುತ್ತೇನೆಂಬುದು ನಿಮಗೆ ಗೊತ್ತಿಲ್ಲ. 15 ನೀವು ಹೊರತೋರಿಕೆಯ ಪ್ರಕಾರ ತೀರ್ಪು ಮಾಡುತ್ತಿದ್ದೀರಿ. ಆದರೆ ನಾನು ಯಾರಿಗೂ ತೀರ್ಪು ಮಾಡುವುದಿಲ್ಲ. 16 ನಾನು ಮಾಡುವ ತೀರ್ಪು ನ್ಯಾಯಬದ್ಧವಾಗಿರುತ್ತದೆ. ಏಕೆಂದರೆ ನಾನು ತೀರ್ಪು ಮಾಡುವಾಗ ಒಬ್ಬಂಟಿಗನಾಗಿರುವುದಿಲ್ಲ. ನನ್ನನ್ನು ಕಳುಹಿಸಿದ ತಂದೆಯೂ ನನ್ನೊಂದಿಗಿರುತ್ತಾನೆ. 17 ಇಬ್ಬರ ಸಾಕ್ಷಿ ಒಂದೇ ಆಗಿದ್ದರೆ ಅವರ ಹೇಳಿಕೆಯನ್ನು ಸ್ವೀಕರಿಸಿಕೊಳ್ಳಬೇಕೆಂದು ನಿಮ್ಮ ಧರ್ಮಶಾಸ್ತ್ರವೇ ತಿಳಿಸುತ್ತದೆ. 18 ನನ್ನ ಪರವಾದ ಸಾಕ್ಷಿಗಳಲ್ಲಿ ನಾನೂ ಒಬ್ಬನಾಗಿದ್ದೇನೆ, ನನ್ನನ್ನು ಕಳುಹಿಸಿದ ತಂದೆಯು ನನ್ನ ಮತ್ತೊಬ್ಬ ಸಾಕ್ಷಿಯಾಗಿದ್ದಾನೆ” ಎಂದು ಉತ್ತರಕೊಟ್ಟನು.
19 ಜನರು, “ನಿನ್ನ ತಂದೆ ಎಲ್ಲಿದ್ದಾನೆ?” ಎಂದು ಕೇಳಿದರು.
ಯೇಸು, “ನಿಮಗೆ ನಾನಾಗಲಿ, ನನ್ನ ತಂದೆಯಾಗಲಿ ಗೊತ್ತಿಲ್ಲ. ನೀವು ನನ್ನನ್ನು ತಿಳಿದಿದ್ದರೆ, ನನ್ನ ತಂದೆಯನ್ನು ಸಹ ತಿಳಿದಿರುವಿರಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International