Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 124

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
    ಇಸ್ರೇಲರೇ, ನನಗೆ ಉತ್ತರಹೇಳಿ.
ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
    ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
    ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
    ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
    ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.

ಯೆಹೋವನಿಗೆ ಸ್ತೋತ್ರವಾಗಲಿ!
    ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.

ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
    ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
    ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.

ಆದಿಕಾಂಡ 8:1-19

ಜಲಪ್ರಳಯದ ಮುಕ್ತಾಯ

ಆದರೆ ದೇವರು ನೋಹನನ್ನು ಮರೆಯಲಿಲ್ಲ. ದೇವರು ನೋಹನನ್ನು ಮತ್ತು ನಾವೆಯಲ್ಲಿದ್ದ ಎಲ್ಲಾ ಪ್ರಾಣಿಗಳನ್ನು ನೆನಪುಮಾಡಿಕೊಂಡನು. ದೇವರು ಭೂಮಿಯ ಮೇಲೆ ಗಾಳಿಯನ್ನು ಬರಮಾಡಿದನು. ನೀರು ಕಡಿಮೆಯಾಗಲು ಪ್ರಾರಂಭಿಸಿತು.

ಆಕಾಶದಿಂದ ಸುರಿಯುತ್ತಿದ್ದ ಮಳೆ ನಿಂತುಹೋಯಿತು. ಆಕಾಶದ ತೂಬುಗಳು ಮುಚ್ಚಿಹೋದವು. ಭೂಸೆಲೆಗಳಿಂದ ಉಕ್ಕುತ್ತಿದ್ದ ನೀರು ಸಹ ನಿಂತುಹೋಯಿತು. 3-4 ಭೂಮಿಯನ್ನು ಆವರಿಸಿಕೊಂಡಿದ್ದ ನೀರು ನೂರೈವತ್ತು ದಿನಗಳಾದ ಮೇಲೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂತು. ಏಳನೆಯ ತಿಂಗಳ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ನಾಡಿನಲ್ಲಿದ್ದ ಒಂದು ಬೆಟ್ಟದ ಮೇಲೆ ನಿಂತುಕೊಂಡಿತು. ನೀರು ಕಡಿಮೆಯಾಗತೊಡಗಿದ್ದರಿಂದ ಹತ್ತನೆಯ ತಿಂಗಳ ಮೊದಲನೆಯ ದಿನದಲ್ಲಿ ಬೆಟ್ಟದ ತುದಿಗಳು ಕಾಣತೊಡಗಿದವು.

ನಲವತ್ತು ದಿನಗಳಾದ ಮೇಲೆ, ನೋಹನು ತಾನು ಮಾಡಿದ್ದ ನಾವೆಯ ಕಿಟಕಿಯನ್ನು ತೆರೆದು ನೋಡಿದನು. ನೋಹನು ಒಂದು ಕಾಗೆಯನ್ನು ಹೊರಕ್ಕೆ ಬಿಟ್ಟನು. ಭೂಮಿಯ ಮೇಲಿನ ನೀರು ಒಣಗುವ ವರೆಗೆ ಆ ಕಾಗೆಯು ಸ್ಥಳದಿಂದ ಸ್ಥಳಕ್ಕೆ ಹಾರಾಡುತ್ತಿತ್ತು. ನೆಲ ಒಣಗಿದೆಯೇ, ತೇವವಾಗಿದೆಯೇ ಎಂದು ತಿಳಿದುಕೊಳ್ಳುವುದಕ್ಕಾಗಿ ನೋಹನು ಒಂದು ಪಾರಿವಾಳವನ್ನು ಸಹ ಹೊರಕ್ಕೆ ಬಿಟ್ಟನು.

ನೀರು ಇನ್ನೂ ಇದ್ದಕಾರಣ, ಆ ಪಾರಿವಾಳ ಹಿಂತಿರುಗಿ ಬಂತು. ನೋಹನು ಕೈಚಾಚಿ ಅದನ್ನು ಹಿಡಿದುಕೊಂಡು ನಾವೆಯೊಳಗೆ ಸೇರಿಸಿಕೊಂಡನು.

10 ಏಳು ದಿನಗಳವರೆಗೆ ನೋಹನು ಕಾದುಕೊಂಡಿದ್ದು ಮತ್ತೆ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. 11 ಆ ಸಾಯಂಕಾಲವೂ ಪಾರಿವಾಳ ನೋಹನ ಬಳಿಗೆ ಹಿಂತಿರುಗಿ ಬಂತು. ಅದರ ಕೊಕ್ಕಿನಲ್ಲಿ ಆಲೀವ್ ಮರದ ಎಲೆಯಿತ್ತು. ಇದರಿಂದ, ಭೂಮಿಯಲ್ಲಿ ಒಣನೆಲವಿದೆಯೆಂದು ನೋಹನು ತಿಳಿದುಕೊಂಡನು. 12 ಏಳು ದಿನಗಳ ನಂತರ ನೋಹನು ಮತ್ತೆ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. ಆದರೆ ಅದು ಈ ಸಲ ಹಿಂತಿರುಗಿ ಬರಲಿಲ್ಲ.

13 ಆದ್ದರಿಂದ ನೋಹನು ನಾವೆಯ ಬಾಗಿಲನ್ನು ತೆರೆದು ಸುತ್ತಲೂ ನೋಡಿದನು. ನೆಲವೆಲ್ಲಾ ಒಣಗಿತ್ತು. ಅಂದು ಮೊದಲನೆಯ ವರ್ಷದ ಮೊದಲನೆಯ ತಿಂಗಳ ಮೊದಲನೆಯ ದಿನವಾಗಿತ್ತು. ಆಗ ನೋಹನಿಗೆ ಆರುನೂರ ಒಂದು ವರ್ಷವಾಗಿತ್ತು. 14 ಎರಡನೆಯ ತಿಂಗಳ ಇಪ್ಪತ್ತೇಳನೆಯ ದಿನದೊಳಗೆ ನೆಲವೆಲ್ಲಾ ಸಂಪೂರ್ಣವಾಗಿ ಒಣಗಿಹೋಯಿತು.

15-16 ಆಮೇಲೆ ದೇವರು ನೋಹನಿಗೆ, “ನೀನು, ನಿನ್ನ ಹೆಂಡತಿ, ನಿನ್ನ ಗಂಡುಮಕ್ಕಳು ಮತ್ತು ನಿನ್ನ ಸೊಸೆಯರೊಂದಿಗೆ ನಾವೆಯಿಂದ ಹೊರಗೆ ಬನ್ನಿ. 17 ನಿಮ್ಮೊಡನೆ ನಾವೆಯೊಳಗಿದ್ದ ಎಲ್ಲಾ ಜೀವಿಗಳು ಅಂದರೆ ಎಲ್ಲಾ ಪಕ್ಷಿಗಳು, ಪ್ರಾಣಿಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದೂ ಹೊರಗೆ ಬರಲಿ. ಅವುಗಳ ಸಂತಾನವು ಹೆಚ್ಚೆಚ್ಚಾಗಲಿ; ಭೂಮಿಯ ಮೇಲೆಲ್ಲಾ ಅವು ತುಂಬಿಕೊಳ್ಳಲಿ” ಅಂದನು.

18 ಆದ್ದರಿಂದ ನೋಹನು ತನ್ನ ಹೆಂಡತಿ, ಗಂಡುಮಕ್ಕಳು ಮತ್ತು ಸೊಸೆಯರೊಂದಿಗೆ ನಾವೆಯಿಂದ ಹೊರಗೆ ಬಂದನು. 19 ಎಲ್ಲಾ ಪ್ರಾಣಿಗಳು, ಪಕ್ಷಿಗಳು, ಹರಿದಾಡುವ ಜೀವಿಗಳು ನಾವೆಯಿಂದ ಹೊರಬಂದವು.

ರೋಮ್ನಗರದವರಿಗೆ 6:1-11

ಪಾಪದ ಪಾಲಿಗೆ ಸತ್ತವರು, ಆದರೆ ಕ್ರಿಸ್ತನಲ್ಲಿ ಜೀವಂತರು

ಹಾಗಾದರೆ ನಿಮ್ಮ ಅಭಿಪ್ರಾಯವೇನು? ದೇವರು ನಮಗೆ ಹೆಚ್ಚುಹೆಚ್ಚು ಕೃಪೆಯನ್ನು ತೋರಿಸಲೆಂದು ನಾವು ಪಾಪದಲ್ಲೇ ಮುಂದುವರಿಯಬೇಕೇ? ಇಲ್ಲ! ನಾವು ನಮ್ಮ ಹಿಂದಿನ ಪಾಪಮಯ ಜೀವಿತಗಳ ಪಾಲಿಗೆ ಸತ್ತುಹೋದೆವು. ಹೀಗಿರಲು, ನಾವು ಪಾಪದಲ್ಲೇ ಜೀವಿಸಲು ಹೇಗೆ ಸಾಧ್ಯ? ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಕ್ರಿಸ್ತನಲ್ಲಿ ಪಾಲುಗಾರರಾದೆವು ಎಂಬುದನ್ನು ನೀವು ಮರೆತುಬಿಟ್ಟಿರಾ? ನಮ್ಮ ದೀಕ್ಷಾಸ್ನಾನದ ಮೂಲಕ ನಾವು ಆತನ ಮರಣದಲ್ಲಿ ಪಾಲುಗಾರರಾದೆವು. ಹೀಗಿರಲಾಗಿ, ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ, ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು ಮತ್ತು ನಾವು ಆತನ ಮರಣದಲ್ಲಿ ಪಾಲುಗಾರರಾದೆವು. ನಾವು ಜೀವಂತವಾಗಿ ಎದ್ದು ಹೊಸ ಜೀವಿತವನ್ನು ನಡೆಸಬೇಕೆಂದು ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು. ಕ್ರಿಸ್ತನು ತಂದೆಯ ಅದ್ಭುತವಾದ ಶಕ್ತಿಯ ಮೂಲಕ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಜೀವಂತವಾಗಿ ಎದ್ದುಬಂದೆವು.

ಕ್ರಿಸ್ತನ ಮರಣಕ್ಕೆ ಸದೃಶ್ಯವಾದ ಮರಣದ ಮೂಲಕ ನಾವು ಸಹ ಆತನೊಂದಿಗೆ ಐಕ್ಯರಾದೆವು. ಆದ್ದರಿಂದ ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಸಹ ಜೀವಂತವಾಗಿ ಎದ್ದುಬರುವುದರ ಮೂಲಕವಾಗಿ ಆತನೊಂದಿಗೆ ಐಕ್ಯರಾಗುವೆವು. ನಮ್ಮ ಹಳೆಯ ಜೀವಿತವು ಕ್ರಿಸ್ತನೊಂದಿಗೆ ಶಿಲುಬೆಯ ಮೇಲೆ ಸತ್ತುಹೋಯಿತೆಂಬುದು ನಮಗೆ ಗೊತ್ತಿದೆ. ನಮ್ಮ ಪಾಪಸ್ವಭಾವಕ್ಕೆ ನಮ್ಮ ಮೇಲೆ ಯಾವ ಅಧಿಕಾರ ಇರಬಾರದೆಂತಲೂ ನಾವು ಪಾಪಕ್ಕೆ ಗುಲಾಮರಾಗಿರಬಾರದೆಂತಲೂ ಹೀಗಾಯಿತು. ಪಾಪದ ಪಾಲಿಗೆ ಸತ್ತವನು ಪಾಪದ ಹಿಡಿತದಿಂದ ಬಿಡುಗಡೆ ಹೊಂದಿದ್ದಾನೆ.

ನಾವು ಕ್ರಿಸ್ತನೊಂದಿಗೆ ಸತ್ತಿದ್ದರೆ, ಆತನೊಂದಿಗೆ ಜೀವಿಸುತ್ತೇವೆ ಎಂಬುದೂ ನಿಶ್ಚಯವಾಗಿದೆ. ಕ್ರಿಸ್ತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಆತನು ಮತ್ತೆ ಸಾಯಲು ಸಾಧ್ಯವಿಲ್ಲವೆಂಬುದು ನಮಗೆ ತಿಳಿದಿದೆ. ಈಗ ಮರಣಕ್ಕೆ ಆತನ ಮೇಲೆ ಯಾವ ಅಧಿಕಾರವೂ ಇಲ್ಲ. 10 ಹೌದು, ಕ್ರಿಸ್ತನು ಪಾಪದ ಶಕ್ತಿಯನ್ನು ಸೋಲಿಸುವುದಕ್ಕಾಗಿ ಒಂದೇ ಸಲ ಸತ್ತನು; ಅದು ಎಲ್ಲಾ ಕಾಲಕ್ಕೂ ಸಾಕಾಗಿದೆ. ಈಗ ಆತನಲ್ಲಿ ಹೊಸ ಜೀವಿತವಿದೆ. ದೇವರೊಂದಿಗೆ ಜೀವಿಸುವುದೇ ಆ ಹೊಸ ಜೀವಿತ. 11 ಅದೇ ರೀತಿಯಲ್ಲಿ ನೀವು ಸಹ ನಿಮ್ಮನ್ನು ಪಾಪದ ಶಕ್ತಿಯ ಪಾಲಿಗೆ ಸತ್ತವರೆಂದು ಮತ್ತು ಕ್ರಿಸ್ತ ಯೇಸುವಿನ ಮೂಲಕ ದೇವರಿಗಾಗಿ ಜೀವಿಸುವವರೆಂದು ಪರಿಗಣಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International