Revised Common Lectionary (Semicontinuous)
7 ಒಬ್ಬ ಸಂದೇಶವಾಹಕನು ಬೆಟ್ಟದ ಮೇಲಿನಿಂದ ಒಳ್ಳೆಯ ಸಮಾಚಾರವನ್ನು ತರುವದು ಎಷ್ಟೋ ಅಂದವಾಗಿದೆ. ಸಂದೇಶಕಾರನು, “ನಮಗೆ ಸಮಾಧಾನವಿದೆ, ನಾವು ರಕ್ಷಿಸಲ್ಪಟ್ಟಿದ್ದೇವೆ. ಚೀಯೋನೇ, ನಿನ್ನ ದೇವರು ಅರಸನಾಗಿದ್ದಾನೆ!” ಎಂಬ ಸಂದೇಶವನ್ನು ಕೇಳುವದು ಎಷ್ಟೋ ಸಂತೋಷ ಕೊಡುವದಾಗಿದೆ.
8 ಪಟ್ಟಣವನ್ನು ಕಾಯುವವರು ಸಂತೋಷದಿಂದ ಹರ್ಷಧ್ವನಿ ಮಾಡುತ್ತಾರೆ.
ಒಟ್ಟಾಗಿ ಸಂತಸಪಡುತ್ತಿದ್ದಾರೆ.
ಯಾಕೆಂದರೆ ಯೆಹೋವನು ಚೀಯೋನಿಗೆ ಹಿಂದಿರುಗುವದನ್ನು ಪ್ರತಿಯೊಬ್ಬನು ನೋಡುವನು.
9 ಜೆರುಸಲೇಮೇ, ನಿನ್ನ ಕೆಡವಲ್ಪಟ್ಟ ಕಟ್ಟಡಗಳು ಮತ್ತೆ ಸಂತೋಷಿಸುವವು.
ನೀವೆಲ್ಲರೂ ಒಟ್ಟಾಗಿ ಹರ್ಷಿಸುವಿರಿ.
ಯಾಕೆಂದರೆ ಯೆಹೋವನು ಜೆರುಸಲೇಮನ್ನು ಬಿಡಿಸಿ ತನ್ನ ಜನರನ್ನು ಸಂತೈಸುವನು.
10 ಯೆಹೋವನು ತನ್ನ ಪರಿಶುದ್ಧ ಸಾಮರ್ಥ್ಯವನ್ನು ಎಲ್ಲಾ ಜನಾಂಗಗಳಿಗೆ ಪ್ರದರ್ಶಿಸುವನು.
ಯೆಹೋವನು ತನ್ನ ಜನರನ್ನು ರಕ್ಷಿಸುವದನ್ನು ದೂರದೇಶದವರು ನೋಡುವರು.
ಸ್ತುತಿಗೀತೆ.
98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
ಆತನಿಗೆ ಜಯವನ್ನು ಉಂಟುಮಾಡಿವೆ.
2 ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
3 ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
4 ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
5 ಹಾರ್ಪ್‌ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
6 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
7 ಸಮುದ್ರವೂ ಭೂಮಿಯೂ
ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
8 ನದಿಗಳೇ, ಚಪ್ಪಾಳೆ ತಟ್ಟಿರಿ!
ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
9 ಯೆಹೋವನ ಎದುರಿನಲ್ಲಿ ಹಾಡಿರಿ,
ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
ಆತನು ಜನರನ್ನು ನೀತಿಯಿಂದ ಆಳುತ್ತಾನೆ.
ದೇವರು ತನ್ನ ಮಗನ ಮೂಲಕ ಮಾತನಾಡಿದನು
1 ಪೂರ್ವಕಾಲದಲ್ಲಿ ದೇವರು ಪ್ರವಾದಿಗಳ ಮೂಲಕ ನಮ್ಮ ಜನರೊಂದಿಗೆ ಹಲವಾರು ವಿಧದಲ್ಲಿ ಅನೇಕ ಸಲ ಮಾತನಾಡಿದನು. 2 ಈಗ, ಕೊನೆಯ ದಿನಗಳಲ್ಲಿ ದೇವರು ಮತ್ತೆ ನಮ್ಮ ಜೊತೆಯಲ್ಲಿ ತನ್ನ ಮಗನ ಮೂಲಕ ಮಾತನಾಡಿದನು. ದೇವರು ತನ್ನ ಮಗನ ಮೂಲಕ ಲೋಕವನ್ನೆಲ್ಲ ಸೃಷ್ಟಿಸಿ, ಸಮಸ್ತಕ್ಕೂ ಆತನನ್ನೇ ಬಾಧ್ಯಸ್ತನನ್ನಾಗಿ ಮಾಡಿದನು. 3 ದೇವರ ಮಹಿಮೆಯು ಆತನಲ್ಲಿ ತೋರಿಬಂದಿತು. ಆತನು ದೇವರ ಸ್ವಭಾವದ ಪ್ರತಿರೂಪವಾಗಿದ್ದಾನೆ. ಆತನು ತನ್ನ ಶಕ್ತಿಯ ಆಜ್ಞೆಯಿಂದ ಪರಿಪಾಲಿಸುತ್ತಿದ್ದಾನೆ. ಆತನು ಜನರನ್ನು ಅವರ ಪಾಪಗಳಿಂದ ಶುದ್ಧಿಮಾಡಿ, ಸ್ವರ್ಗದಲ್ಲಿ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು. 4 ದೇವರು ಆತನಿಗೆ ದೇವದೂತರಿಗಿಂತ ಎಷ್ಟೋ ಶ್ರೇಷ್ಠವಾದ ಹೆಸರನ್ನು ದಯಪಾಲಿಸಿದನು. ಆತನು ದೇವದೂತರಿಗಿಂತ ಅಷ್ಟೊಂದು ಶ್ರೇಷ್ಠನಾದನು.
5 ದೇವರು ಯಾವ ದೂತರಿಗೂ ಈ ಸಂಗತಿಗಳನ್ನು ಎಂದೂ ಹೇಳಿಲ್ಲ:
“ನೀನು ನನ್ನ ಮಗ;
ಈ ದಿನ ನಾನು ನಿನ್ನ ತಂದೆಯಾದೆನು.”(A)
ದೇವರು ದೂತನೊಬ್ಬನಿಗೆ ಎಂದೂ ಹೀಗೆ ಹೇಳಿಲ್ಲ:
“ನಾನು ಅವನ ತಂದೆಯಾಗಿರುವೆನು,
ಅವನು ನನ್ನ ಮಗನಾಗಿರುವನು.”(B)
6 ದೇವರು ತನ್ನ ಚೊಚ್ಚಲ ಮಗನನ್ನು ಈ ಲೋಕಕ್ಕೆ ಬರಮಾಡುವಾಗ, ಆತನು ಹೇಳುವುದೇನೆಂದರೆ,
“ದೇವದೂತರೆಲ್ಲರೂ ಆತನನ್ನು ಆರಾಧಿಸಲಿ.”[a]
7 ದೇವರು ತನ್ನ ದೂತರನ್ನು ಕುರಿತು ಹೇಳಿದ್ದು ಹೀಗಿದೆ:
“ದೇವರು ತನ್ನ ದೂತರನ್ನು ಗಾಳಿಗಳನ್ನಾಗಿ ಮಾಡಿದನು.
ಆತನು ತನ್ನ ಸೇವಕರನ್ನು ಬೆಂಕಿಯ ಜ್ವಾಲೆಗಳಂತೆ ಮಾಡಿದನು.”(C)
8 ಆದರೆ ದೇವರು ತನ್ನ ಮಗನನ್ನು ಕುರಿತು ಹೀಗೆ ಹೇಳಿದನು:
“ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲೂ ಇರುವುದು.
ನೀನು ನಿನ್ನ ರಾಜ್ಯವನ್ನು ಸಮರ್ಪಕವಾದ ತೀರ್ಪುಗಳೊಡನೆ ಆಳುವೆ.
9 ನೀನು ಒಳ್ಳೆಯದನ್ನು ಪ್ರೀತಿಸುವೆ, ಕೆಟ್ಟದ್ದನ್ನು ದ್ವೇಷಿಸುವೆ.
ಆದ್ದರಿಂದ ದೇವರು, ಹೌದು, ನಿನ್ನ ದೇವರೇ ನಿನ್ನನ್ನು
ನಿನ್ನ ಸಂಗಡಿಗರಿಗಿಂತ ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದದ ತೈಲದಿಂದ ಅಭಿಷೇಕಿಸಿದ್ದಾನೆ.”(D)
10 ಇದಲ್ಲದೆ ದೇವರು ಹೀಗೆನ್ನುತ್ತಾನೆ:
“ಪ್ರಭುವೇ, ಆದಿಯಲ್ಲಿ ನೀನು ಈ ಲೋಕವನ್ನು ಸೃಷ್ಟಿಸಿದೆ.
ಗಗನಮಂಡಲವು ನಿನ್ನ ಕೈಕೆಲಸವಾಗಿದೆ.
11 ಇವೆಲ್ಲವು ನಾಶವಾಗುತ್ತವೆ, ಆದರೆ ನೀನು ಶಾಶ್ವತವಾಗಿರುವೆ.
ಎಲ್ಲಾ ವಸ್ತುಗಳೂ ವಸ್ತ್ರಗಳಂತೆ ಹಳೆಯವಾಗುವವು.
12 ನೀನು ಅವುಗಳನ್ನು ಮೇಲಂಗಿಯಂತೆ ಮಡಿಚಿಡುವೆ.
ಅವು ವಸ್ತ್ರಗಳಂತೆ ಬದಲಾಗುತ್ತವೆ.
ಆದರೆ ನೀನು ಎಂದೆಂದಿಗೂ ಬದಲಾಗುವುದಿಲ್ಲ.
ನಿನ್ನ ಜೀವಕ್ಕೆ ಅಂತ್ಯವೆಂಬುದಿಲ್ಲ.”(E)
ಜಗತ್ತಿಗೆ ಕ್ರಿಸ್ತನ ಆಗಮನ
1 ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ವಾಕ್ಯ[a] ಎಂಬಾತನಿದ್ದನು. ಆ ವಾಕ್ಯ ಎಂಬಾತನು ದೇವರೊಂದಿಗೆ ಇದ್ದನು. ಆ ವಾಕ್ಯ ಎಂಬಾತನೇ ಸ್ವತಃ ದೇವರಾಗಿದ್ದನು. 2 ಆರಂಭದಲ್ಲಿ ಆತನು ದೇವರೊಂದಿಗೆ ಇದ್ದನು. 3 ಎಲ್ಲಾ ವಸ್ತುಗಳು ಆತನ ಮೂಲಕ ನಿರ್ಮಾಣಗೊಂಡವು. ಆತನಿಲ್ಲದೆ ಯಾವುದೂ ನಿರ್ಮಿತವಾಗಲಿಲ್ಲ. 4 ಆತನಲ್ಲಿ ಜೀವವಿತ್ತು. ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು. 5 ಬೆಳಕು ಕತ್ತಲೆಯಲ್ಲಿ ಪ್ರಕಾಶಿಸುತ್ತದೆ. ಆದರೆ ಕತ್ತಲೆಯು ಬೆಳಕನ್ನು ಮುಸುಕಲಿಲ್ಲ.
6 ಯೋಹಾನ[b] ಎಂಬ ಒಬ್ಬ ಮನುಷ್ಯನನ್ನು ದೇವರು ಕಳುಹಿಸಿದನು. 7 ಯೋಹಾನನು ಬೆಳಕಿನ (ಕ್ರಿಸ್ತನ) ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಬಂದನು. ತನ್ನ ಮೂಲಕ ಎಲ್ಲಾ ಜನರು ಬೆಳಕಿನ ಬಗ್ಗೆ ಕೇಳಿ ನಂಬಿಕೊಳ್ಳಲೆಂದು ಅವನು ಬಂದನು. 8 ಯೋಹಾನನೇ ಆ ಬೆಳಕಾಗಿರಲಿಲ್ಲ. ಆದರೆ ಯೋಹಾನನು ಬೆಳಕಿನ ಬಗ್ಗೆ ಜನರಿಗೆ ಸಾಕ್ಷಿ ನೀಡಲು ಬಂದನು. 9 ನಿಜವಾದ ಬೆಳಕು ಈ ಲೋಕಕ್ಕೆ ಆಗಮಿಸಲಿತ್ತು. ಈ ನಿಜವಾದ ಬೆಳಕೇ ಎಲ್ಲಾ ಜನರಿಗೆ ಬೆಳಕನ್ನು ಕೊಡುತ್ತದೆ.
10 ವಾಕ್ಯ ಎಂಬಾತನು ಆಗಲೇ ಈ ಲೋಕದಲ್ಲಿದ್ದನು. ಈ ಲೋಕವು ವಾಕ್ಯ ಎಂಬಾತನ ಮೂಲಕ ನಿರ್ಮಾಣಗೊಂಡಿತು. ಆದರೆ ಈ ಲೋಕದವರು ಆತನನ್ನು ತಿಳಿದಿರಲಿಲ್ಲ. 11 ಆತನು ತನ್ನ ಸ್ವಾಸ್ತ್ಯಕ್ಕೆ ಬಂದನು. ಆದರೆ ಆತನ ಸ್ವಂತ ಜನರು ಆತನನ್ನು ಸ್ವೀಕರಿಸಿಕೊಳ್ಳಲಿಲ್ಲ. 12 ಯಾರ್ಯಾರು ಆತನನ್ನು ಸ್ವೀಕರಿಸಿಕೊಂಡರೋ ಅಂದರೆ ಆತನಲ್ಲಿ ನಂಬಿಕೆ ಇಟ್ಟರೋ ಅವರಿಗೆ ಆತನು ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು. 13 ಇವರು ರಕ್ತದಿಂದಾಗಲಿ ಕಾಮದಿಂದಾಗಲಿ ಪುರುಷನ ಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ. ಇವರು ದೇವರಿಂದಲೇ ಹುಟ್ಟಿದವರು.
14 ವಾಕ್ಯ ಎಂಬಾತನು ಮನುಷ್ಯನಾಗಿ ನಮ್ಮೊಂದಿಗೆ ವಾಸಿಸಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಒಬ್ಬನೇ ಮಗನಿಗಿರುವ ಮಹಿಮೆಯಾಗಿತ್ತು. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು.
Kannada Holy Bible: Easy-to-Read Version. All rights reserved. © 1997 Bible League International