Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 72:1-7

ರಚನೆಗಾರ: ಸೊಲೊಮೋನ.

72 ದೇವರೇ, ನಿನ್ನಂತೆ ನ್ಯಾಯವಾಗಿ ತೀರ್ಪುನೀಡಲು ರಾಜನಿಗೆ ಕಲಿಸಿಕೊಡು.
    ನಿನ್ನ ನೀತಿಯನ್ನು ಕಲಿತುಕೊಳ್ಳಲು ರಾಜಕುಮಾರನಿಗೆ ಸಹಾಯಮಾಡು.
ನಿನ್ನ ಜನರಿಗೆ ನೀತಿಯಿಂದಲೂ ನಿನ್ನ ಬಡಜನರಿಗೆ ನ್ಯಾಯವಾಗಿಯೂ
    ತೀರ್ಪುಮಾಡಲು ಅವನಿಗೆ ಸಹಾಯಮಾಡು.
ಪ್ರಖ್ಯಾತವಾದ ಬೆಟ್ಟಗುಡ್ಡಗಳಲ್ಲೆಲ್ಲಾ,
    ದೇಶದಲ್ಲೆಲ್ಲಾ ಶಾಂತಿಯೂ ನ್ಯಾಯವೂ ನೆಲೆಸಿರಲಿ.
ರಾಜನು ಬಡವರಿಗೆ ನ್ಯಾಯ ದೊರಕಿಸಿಕೊಡಲಿ; ನಿಸ್ಸಹಾಯಕರಿಗೆ ಸಹಾಯಮಾಡಲಿ.
    ಅವರಿಗೆ ಕೇಡುಮಾಡುವವರನ್ನು ರಾಜನು ದಂಡಿಸಲಿ.
ಸೂರ್ಯಚಂದ್ರರು ಆಕಾಶದಲ್ಲಿ ಇರುವವರೆಗೂ
    ಜನರು ರಾಜನಿಗೆ ಭಯಪಡಲಿ; ಅವನನ್ನು ಗೌರವಿಸಲಿ.
ಹುಲ್ಲುಗಾವಲಿನ ಮೇಲೆ ಸುರಿಯುವ ಮಳೆಯಂತೆಯೂ
    ಭೂಮಿಯನ್ನು ಹದಗೊಳಿಸುವ ಹಿತವಾದ ಮಳೆಯಂತೆಯೂ ನೀನು ಅವನಿಗೆ ಸಹಾಯಕನಾಗಿರು.
ಅವನ ಆಡಳಿತದ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ.
    ಚಂದ್ರನಿರುವವರೆಗೂ ಶಾಂತಿ ನೆಲಸಿರಲಿ.

ಕೀರ್ತನೆಗಳು 72:18-19

18 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಅಂಥ ಅದ್ಭುತಕಾರ್ಯಗಳನ್ನು ದೇವರೊಬ್ಬನೇ ಮಾಡಬಲ್ಲನು!
19 ಆತನ ಪ್ರಭಾವಪೂರ್ಣವಾದ ಹೆಸರನ್ನು ಎಂದೆಂದಿಗೂ ಕೊಂಡಾಡಿರಿ!
    ಆತನ ಮಹಿಮೆ ಭೂಲೋಕವನ್ನೆಲ್ಲಾ ತುಂಬಿಕೊಳ್ಳಲಿ!
    ಆಮೆನ್, ಆಮೆನ್!

ಯೆಶಾಯ 4:2-6

ಆ ಸಮಯದಲ್ಲಿ ಯೆಹೋವನ ಸಸಿ (ಯೆಹೂದವು) ಬಹಳ ಚಂದವಾಗಿಯೂ ದೊಡ್ಡದಾಗಿಯೂ ಇರುವುದು. ಆ ಸಮಯದಲ್ಲಿ, ಚೀಯೋನಿನಲ್ಲಿ ಮತ್ತು ಜೆರುಸಲೇಮಿನಲ್ಲಿ ಇನ್ನೂ ವಾಸಿಸುತ್ತಿರುವ ಜನರು ತಮ್ಮ ದೇಶದಲ್ಲಿ ಬೆಳೆಯುವ ಫಲಗಳಿಗಾಗಿ ತುಂಬಾ ಹೆಚ್ಚಳಪಡುವರು. ಜೀವಬಾಧ್ಯರ ಪಟ್ಟಿಯಲ್ಲಿ ಹೆಸರು ಬರೆಯಲ್ಪಟ್ಟು ಚೀಯೋನಿನಲ್ಲಿಯೂ ಜೆರುಸಲೇಮಿನಲ್ಲಿಯೂ ವಾಸಿಸುವವರು ಪರಿಶುದ್ಧರೆಂದು ಕರೆಯಲ್ಪಡುವರು. ಅವರೆಲ್ಲರೂ ಅಲ್ಲಿಯೇ ನೆಲೆಸುವರು.

ಚೀಯೋನಿನ ಸ್ತ್ರೀಯರ ಕಲ್ಮಷವನ್ನು ಯೆಹೋವನು ತೊಳೆದುಬಿಡುವನು. ಆತನು ಜೆರುಸಲೇಮಿನ ಮಧ್ಯದಲ್ಲಿರುವ ರಕ್ತವನ್ನು ತೊಳೆದುಬಿಡುವನು. ಆತನು ನ್ಯಾಯನೀತಿಗಳಿಂದ ತೀರ್ಪುನೀಡುವನು; ದಹಿಸುವ ಆತ್ಮನಿಂದ ಎಲ್ಲವನ್ನು ಶುದ್ಧಗೊಳಿಸುವನು. ಆ ಸಮಯದಲ್ಲಿ ತಾನು ತನ್ನ ಜನರೊಂದಿಗೆ ಇರುವುದಾಗಿ ಹೀಗೆ ಯೆಹೋವನು ರುಜುವಾತುಪಡಿಸುವನು. ಹಗಲಲ್ಲಿ ಆತನು ಧೂಮಮೇಘವನ್ನೂ ಇರುಳಲ್ಲಿ ಪ್ರಜ್ವಲಿಸುವ ಅಗ್ನಿಯ ಪ್ರಕಾಶವನ್ನೂ ಉಂಟುಮಾಡುವನು. ಈ ಗುರುತುಗಳು ಚೀಯೋನ್ ಪರ್ವತದ ಮೇಲಿರುವ ಪ್ರತಿಯೊಂದು ಜನರ ಸಭೆಯ ಮೇಲೆ ಆಕಾಶದಲ್ಲಿ ಕಾಣುವುದು. ಪ್ರತಿಯೊಬ್ಬನ ಮೇಲೆಯೂ ಕಾಪಾಡಿಕೊಳ್ಳುವುದಕ್ಕಾಗಿ ಹೊದಿಕೆ ಇರುವುದು. ಈ ಹೊದಿಕೆಯು ಸುರಕ್ಷಿತ ಸ್ಥಳದಂತಿರುವದು. ಅದು ಸೂರ್ಯನ ಶಾಖದಿಂದ ಅವರನ್ನು ರಕ್ಷಿಸುವದು. ಅದೇ ಸಮಯದಲ್ಲಿ ಸಣ್ಣ ದೊಡ್ಡ ಮಳೆಗಳಿಂದಲೂ ಆ ಹೊದಿಕೆಯು ರಕ್ಷಿಸುವದು.

ಅಪೊಸ್ತಲರ ಕಾರ್ಯಗಳು 1:12-17

ಹೊಸ ಅಪೊಸ್ತಲನೊಬ್ಬನ ಆಯ್ಕೆ

12 ಬಳಿಕ ಅಪೊಸ್ತಲರು ಆಲಿವ್ ಮರಗಳ ಗುಡ್ಡದಿಂದ ಜೆರುಸಲೇಮಿಗೆ ಹಿಂತಿರುಗಿಹೋದರು. (ಈ ಗುಡ್ಡಕ್ಕೂ ಜೆರುಸಲೇಮಿಗೂ ಸುಮಾರು ಅರ್ಧ ಮೈಲಿ ಅಂತರವಿದೆ.) 13 ಅಪೊಸ್ತಲರು ಪಟ್ಟಣವನ್ನು ಪ್ರವೇಶಿಸಿ ತಾವು ವಾಸವಾಗಿದ್ದಲ್ಲಿಗೆ ಹೋದರು. ಅದು ಮೇಲಂತಸ್ತಿನಲ್ಲಿತ್ತು. ಆ ಅಪೊಸ್ತಲರು ಯಾರಾರೆಂದರೆ: ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಯಾಕೋಬ (ಅಲ್ಫಾಯನ ಮಗ), ದೇಶಾಭಿಮಾನಿಯಾದ ಸಿಮೋನ ಮತ್ತು ಯೂದ (ಯಾಕೋಬನ ಮಗ).

14 ಅಪೊಸ್ತಲರೆಲ್ಲರೂ ಒಟ್ಟಾಗಿ ಸೇರಿದ್ದರು. ಅವರು ಒಂದೇ ಉದ್ದೇಶದಿಂದ ಎಡಬಿಡದೆ ಪ್ರಾರ್ಥಿಸುತ್ತಿದ್ದರು. ಕೆಲವು ಸ್ತ್ರೀಯರೂ ಯೇಸುವಿನ ತಾಯಿ ಮರಿಯಳೂ ಆತನ ಸಹೋದರರೂ ಅಪೊಸ್ತಲರ ಸಂಗಡವಿದ್ದರು.

15 ಕೆಲವು ದಿನಗಳಾದ ಮೇಲೆ ವಿಶ್ವಾಸಿಗಳು ಸಭೆ ಸೇರಿದ್ದರು. (ಅಲ್ಲಿ ಸುಮಾರು ನೂರಿಪ್ಪತ್ತು ಮಂದಿ ಇದ್ದರು.) ಪೇತ್ರನು ಎದ್ದುನಿಂತುಕೊಂಡು ಹೀಗೆಂದನು: 16-17 “ಸಹೋದರರೇ, ಪವಿತ್ರಾತ್ಮನು ದಾವೀದನ ಮೂಲಕವಾಗಿ ಪವಿತ್ರ ಗ್ರಂಥದಲ್ಲಿ[a] ಮುಂತಿಳಿಸಿದ್ದ ಸಂಗತಿ ನೆರವೇರಬೇಕಿತ್ತು. ನಮ್ಮ ಸ್ವಂತ ಗುಂಪಿನವರಲ್ಲಿ ಒಬ್ಬನಾದ ಯೂದನ ಬಗ್ಗೆ ದಾವೀದನು ಹೇಳಿದ್ದಾನೆ. ಯೂದನು ನಮ್ಮೊಂದಿಗೆ ಸೇವೆ ಮಾಡಿದನು. ಯೇಸುವನ್ನು ಬಂಧಿಸುವವರಿಗೆ ಯೂದನು ಮಾರ್ಗದರ್ಶಕನಾಗುತ್ತಾನೆಂದು ಪವಿತ್ರಾತ್ಮನು ತಿಳಿಸಿದ್ದನು.”

ಅಪೊಸ್ತಲರ ಕಾರ್ಯಗಳು 1:21-26

21-22 “ಆದ್ದರಿಂದ ಬೇರೊಬ್ಬನು ನಮ್ಮೊಂದಿಗೆ ಸೇರಿ, ಯೇಸುವಿನ ಪುನರುತ್ಥಾನಕ್ಕೆ ಸಾಕ್ಷಿಯಾಗಿರಬೇಕು. ಪ್ರಭುವಾದ ಯೇಸು ನಮ್ಮಲ್ಲಿ ಹೋಗುತ್ತಾ ಬರುತ್ತಾ ಇದ್ದ ಕಾಲವೆಲ್ಲಾ ಅವನು ನಮ್ಮ ಗುಂಪಿನಲ್ಲಿದ್ದವರಲ್ಲಿ ಒಬ್ಬನಾಗಿರಬೇಕು. ಯೋಹಾನನು ದೀಕ್ಷಾಸ್ನಾನ ಕೊಡಲು ಆರಂಭ ಮಾಡಿದ ದಿನದ ಮೊದಲುಗೊಂಡು ಯೇಸುವು ನಮ್ಮ ಬಳಿಯಿಂದ ಪರಲೋಕಕ್ಕೆ ಎತ್ತಲ್ಪಟ್ಟ ದಿನದವರೆಗೂ ಅವನು ನಮ್ಮೊಂದಿಗಿದ್ದವನಾಗಿರಬೇಕು.”

23 ಅಪೊಸ್ತಲರು ಇಬ್ಬರನ್ನು ಸಭೆಯ ಮುಂದೆ ನಿಲ್ಲಿಸಿದರು. ಒಬ್ಬನು ಬಾರ್ಸಬನೆಂಬ ಯೋಸೇಫ. ಇವನನ್ನು ಯೂಸ್ತನೆಂದೂ ಕರೆಯುತ್ತಿದ್ದರು. ಮತ್ತೊಬ್ಬನು ಮತ್ತೀಯ. 24-25 ಅಪೊಸ್ತಲರು ಹೀಗೆ ಪ್ರಾರ್ಥಿಸಿದರು: “ಪ್ರಭುವೇ, ನೀನು ಎಲ್ಲಾ ಜನರ ಮನಸ್ಸುಗಳನ್ನು ತಿಳಿದಿರುವೆ. ಈ ಕೆಲಸವನ್ನು ಮಾಡುವುದಕ್ಕಾಗಿ ಈ ಇಬ್ಬರಲ್ಲಿ ನೀನು ಯಾರನ್ನು ಆರಿಸಿಕೊಂಡಿರುವೆ ಎಂಬುದನ್ನು ನಮಗೆ ತೋರಿಸು. ಯೂದನು ಈ ಕೆಲಸಕ್ಕೆ ವಿಮುಖನಾಗಿ ತಾನು ಸೇರಬೇಕಿದ್ದಲ್ಲಿಗೆ ಹೊರಟುಹೋದನು. ಪ್ರಭುವೇ, ಅವನ ಸ್ಥಳದಲ್ಲಿ ಅಪೊಸ್ತಲನಾಗಿ ಯಾರು ನೇಮಕಗೊಳ್ಳಬೇಕೆಂಬುದನ್ನು ನಮಗೆ ತೋರಿಸು!” 26 ಬಳಿಕ ಅಪೊಸ್ತಲರು ಅವರಿಬ್ಬರಲ್ಲಿ ಒಬ್ಬನನ್ನು ಆರಿಸಿಕೊಳ್ಳಲು ಚೀಟಿಹಾಕಿದರು. ಚೀಟಿ ಮತ್ತೀಯನಿಗೆ ಬಂದದ್ದರಿಂದ ಹನ್ನೊಂದು ಮಂದಿಯೊಂದಿಗೆ ಅವನೂ ಅಪೊಸ್ತಲನಾದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International