Revised Common Lectionary (Semicontinuous)
ಎರಡನೆ ಭಾಗ
(ಕೀರ್ತನೆಗಳು 42–72)
ರಚನೆಗಾರರು: ಕೋರಹೀಯರು.
42 ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಬಯಸುವಂತೆಯೇ
ನನ್ನ ಆತ್ಮವು ನಿನ್ನನ್ನು ಬಯಸುತ್ತದೆ.
2 ನನ್ನ ಆತ್ಮವು ಜೀವಸ್ವರೂಪನಾದ ದೇವರಿಗಾಗಿ ಬಾಯಾರಿದೆ.
ನಾನು ಯಾವಾಗ ಆತನನ್ನು ಸಂಧಿಸುವೆನು?
3 “ನಿನ್ನ ದೇವರು ಎಲ್ಲಿ?” ಎಂದು ನನ್ನ ವೈರಿಗಳು ಯಾವಾಗಲೂ ಗೇಲಿಮಾಡುವುದರಿಂದ
ಹಗಲಿರುಳು ಕಣ್ಣೀರೇ ನನಗೆ ಆಹಾರವಾಯಿತು.
4 ಆಗ ನಾನು, ಹಬ್ಬದ ಉತ್ಸಾಹದಲ್ಲಿ ಜನಸಮೂಹದೊಡನೆ ಹರ್ಷಿಸುತ್ತಾ
ಸ್ತುತಿಗೀತೆಗಳನ್ನು ಹಾಡುತ್ತಾ ಅವರನ್ನು ದೇವಾಲಯಕ್ಕೆ ಮುನ್ನಡೆಸುತ್ತಿದ್ದದ್ದನ್ನು
ನೆನಪಿಗೆ ತಂದುಕೊಂಡು ಹೃದಯದಲ್ಲಿ ಕೊರಗುವೆ.
5 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
6 ನನ್ನ ದೇವರೇ, ನಾನು ಕುಗ್ಗಿಹೋಗಿದ್ದೇನೆ.
ಆದ್ದರಿಂದ ಹೆರ್ಮೊನ್ ಪರ್ವತದಲ್ಲಿಯೂ ಜೋರ್ಡನ್ ನದಿಯ ಪ್ರದೇಶದಲ್ಲಿಯೂ
ಮಿಸ್ಸಾರ್ ಬೆಟ್ಟದಲ್ಲಿಯೂ ನಾನು ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
7 ಜಲಪಾತದ ಘೋಷದಂತೆಯೂ
ಪ್ರವಾಹದ ಘರ್ಜನೆಯಂತೆಯೂ ಇಕ್ಕಟ್ಟುಗಳು ನನಗೆ ಬಂದಿವೆ.
ಸಮುದ್ರದ ಅಲೆಗಳಂತೆ
ದುಃಖವು ನನ್ನನ್ನು ಆವರಿಸಿಕೊಂಡಿದೆ.
8 ಹಗಲಲ್ಲಿ ಯೆಹೋವನು ನನಗೆ ನಿಜಪ್ರೀತಿಯನ್ನು ತೋರುವುದರಿಂದ
ಜೀವಸ್ವರೂಪನಾದ ಆತನಿಗೆ ಪ್ರತಿ ರಾತ್ರಿಯಲ್ಲಿಯೂ ನೂತನ ಕೀರ್ತನೆಯನ್ನು ಹಾಡುವೆ; ಆತನಲ್ಲಿ ಪ್ರಾರ್ಥಿಸುವೆ.
9 ನನ್ನ ಬಂಡೆಯಾದ ದೇವರಿಗೆ,
“ನೀನು ನನ್ನನ್ನು ಯಾಕೆ ಮರೆತುಬಿಟ್ಟೆ?
ನನ್ನ ಶತ್ರುಗಳ ಕ್ರೂರತೆಯಿಂದ ನಾನೇಕೆ ಸಂಕಟಪಡಬೇಕು?” ಎಂದು ಕೇಳುವೆ.
10 ನನ್ನ ವಿರೋಧಿಗಳು ಸತತವಾಗಿ,
“ನಿನ್ನ ದೇವರು ಎಲ್ಲಿ?” ಎಂದು ಕೇಳುವುದರಿಂದ ನನ್ನ ಮೂಳೆಗಳು ಮುರಿದಂತಾಗಿವೆ.
11 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
ಆಲಯದಿಂದ ನೀರಿನ ಹರಿಯುವಿಕೆ
47 ಅವನು ಆಲಯದ ಪ್ರವೇಶ ದ್ವಾರಕ್ಕೆ ನನ್ನನ್ನು ಕರೆದುಕೊಂಡು ಹೋದನು. ನಾನು ಅಲ್ಲಿ ಆಲಯದ ಪೂರ್ವ ದ್ವಾರದ ಕೆಳಗಡೆಯಿಂದ ಹರಿಯುವ ನೀರನ್ನು ಕಂಡೆನು. ಆಲಯದ ಮುಂಭಾಗ ಪೂರ್ವ ದಿಕ್ಕಿನಲ್ಲಿದೆ. ಆ ನೀರು ಆಲಯದ ದಕ್ಷಿಣದ ಭಾಗದ ಕೆಳಗಿನಿಂದ ಹರಿಯುತ್ತಾ ಯಜ್ಞವೇದಿಯ ದಕ್ಷಿಣದ ಕಡೆಗೆ ಹರಿಯುತ್ತಿತ್ತು. 2 ಅವನು ನನ್ನನ್ನು ಉತ್ತರದ ದ್ವಾರದಿಂದ ಹೊರಕ್ಕೆ ತಂದು, ದೇವಾಲಯದ ಹೊರ ಅಂಚಿನಲ್ಲಿಯೇ ಪೂರ್ವ ದ್ವಾರಕ್ಕೆ ತಂದನು. ಆ ದ್ವಾರದ ದಕ್ಷಿಣದ ಕಡೆಯಿಂದ ನೀರು ಹರಿದು ಬರುತ್ತಿತ್ತು.
3 ಅವನು ಕೈಯಲ್ಲಿ ಅಳತೆಯ ನೂಲನ್ನು ಹಿಡಿದುಕೊಂಡು ಪೂರ್ವದ ಕಡೆಗೆ ನಡೆದನು. ಅವನು ಸಾವಿರ ಮೊಳ ಅಳೆದನು. ನನ್ನನ್ನು ಆ ಸ್ಥಳದಲ್ಲಿ ನೀರಿನಲ್ಲಿ ನಡೆದುಕೊಂಡು ಬರುವಂತೆ ಹೇಳಿದನು. ನೀರು ನನ್ನ ಪಾದ ಮುಳುಗುವಷ್ಟು ಆಳವಿತ್ತು. 4 ಅವನು ತಿರುಗಿ ಸಾವಿರ ಮೊಳ ಅಳೆದನು. ಆ ಜಾಗದಲ್ಲಿದ್ದ ನೀರಿನಲ್ಲಿ ನನಗೆ ನಡೆಯಲು ಹೇಳಿದನು. ಅಲ್ಲಿ ನೀರು ನನ್ನ ಮೊಣಕಾಲಿನಷ್ಟು ಆಳವಿತ್ತು. ತಿರುಗಿ ಅವನು ಸಾವಿರ ಮೊಳದಷ್ಟು ದೂರ ಅಳತೆ ಮಾಡಿದನು. ಆ ಸ್ಥಳದಲ್ಲಿ ನೀರಿನಲ್ಲಿ ನಡೆಯಲು ಹೇಳಿದನು. ಅಲ್ಲಿ ನೀರು ನನ್ನ ಸೊಂಟದಷ್ಟು ಆಳವಾಗಿತ್ತು. 5 ಅವನು ಇನ್ನೂ ಒಂದು ಸಾವಿರ ಮೊಳ ದೂರ ಅಳೆದನು. ಅಲ್ಲಿ ನೀರು ಹೆಚ್ಚಿದ್ದು ನನ್ನಿಂದ ದಾಟಲು ಆಗದಷ್ಟು ಆಳವಿತ್ತು. ಅದು ನದಿಯಾಗಿತ್ತು. ಆ ನೀರಿನಲ್ಲಿ ಈಜಾಡಬಹುದಾಗಿತ್ತು. ದಾಟಲಾಗದ ಆಳವಾದ ಹೊಳೆಯಾಗಿತ್ತು. 6 ಆಗ ಅವನು ನನಗೆ, “ನರಪುತ್ರನೇ, ನೀನು ನೋಡಿರುವ ವಿಷಯಗಳ ಬಗ್ಗೆ ಗಮನವಿಟ್ಟಿಯಾ?” ಎಂದು ಕೇಳಿದನು.
ಆಗ ಅವನು ನನ್ನನ್ನು ಹೊಳೆಯ ಪಕ್ಕದಲ್ಲೇ ಕರೆದುಕೊಂಡು ಹೋದನು. 7 ನಾನು ನದಿಯ ತೀರದಲ್ಲಿ ನಡೆಯುತ್ತಿರುವಾಗ ಅದರ ಎರಡೂ ಕಡೆಗಳಲ್ಲಿ ಲೆಕ್ಕವಿಲ್ಲದಷ್ಟು ಮರಗಳನ್ನು ನೋಡಿದೆನು. 8 ಅವನು ನನ್ನೊಡನೆ, “ಈ ನದಿಯು ಪೂರ್ವಕ್ಕೆ ಹೊರಟು ಅರಾಬಾ ತಗ್ಗಿನ ಕಡೆ ಹರಿಯುತ್ತಿದೆ. 9 ಇದು ಮೃತ್ಯುಸಮುದ್ರವನ್ನು ಸೇರಿದಾಗ ಅದರ ನೀರು ಹೊಸದಾಗಿ ಶುದ್ಧವಾಗುವದು. ನೀರಿನಲ್ಲಿ ನಾನಾ ತರದ ಮೀನುಗಳು ಜೀವಿಸುವವು, ಮತ್ತು ಆ ಹೊಳೆಯು ಹರಿಯುವಲ್ಲೆಲ್ಲಾ ವಿವಿಧ ಜಾತಿಯ ಪ್ರಾಣಿಗಳು ವಾಸಿಸುವವು. 10 ಎಂಗೇದಿಯಿಂದ ಪ್ರಾರಂಭವಾಗಿ ಏನ್‌ಎಗ್ಲಯಿಮ್ ತನಕ ಬೆಸ್ತರು ಹೊಳೆಯ ದಡದಲ್ಲಿ ನಿಂತಿರುವದನ್ನು ನೀನು ನೋಡಬಹುದು. ಅವರು ತಮ್ಮ ಬಲೆಗಳನ್ನು ಬೀಸಿ ನಾನಾ ತರದ ಮೀನುಗಳನ್ನು ಹಿಡಿಯುವದನ್ನು ನೀನು ನೋಡಬಹುದು. ಭೂಮಧ್ಯ ಸಮುದ್ರದೊಳಗೆ ಎಷ್ಟು ವಿಧವಾದ ಮೀನುಗಳಿವೆಯೋ ಅಷ್ಟೇ ವಿಧವಾದ ಮೀನುಗಳು ಈ ಹೊಳೆಯಲ್ಲಿಯೂ ಇವೆ. 11 ಆದರೆ ಜವುಗು ನೆಲಗಳೂ ಸವುಳು ನೆಲಗಳೂ ಸಿಹಿಯಾಗುವದಿಲ್ಲ. ಅವು ಉಪ್ಪು ತಯಾರಿಸುವದಕ್ಕಾಗಿ ಉಪಯೋಗಿಸಲ್ಪಡುವವು. 12 ಎಲ್ಲಾ ತರಹದ ಹಣ್ಣಿನ ಮರಗಳು ನದಿಯ ಇಕ್ಕೆಡೆಗಳಲ್ಲಿಯೂ ಬೆಳೆಯುವವು. ಅವುಗಳ ಎಲೆಗಳು ಎಂದಿಗೂ ಒಣಗಿ ನೆಲಕ್ಕೆ ಉದುರವು. ಆ ಮರಗಳಲ್ಲಿ ಸದಾಕಾಲ ಹಣ್ಣುಗಳು ಇರುವವು. ಪ್ರತೀ ತಿಂಗಳಿಗೆ ಹಣ್ಣುಗಳನ್ನು ಕೊಡುವವು. ಯಾಕೆಂದರೆ ಆ ಮರಗಳಿಗೆ ನೀರು ಆಲಯದಿಂದ ಬರುತ್ತದೆ. ಅದರ ಹಣ್ಣುಗಳನ್ನು ಆಹಾರಕ್ಕಾಗಿಯೂ ಅದರ ಎಲೆಗಳಿಂದ ಔಷಧಿಯನ್ನೂ ತಯಾರಿಸಬಹುದು.”
ಎಚ್ಚರಿಕೆ ಮತ್ತು ಮಾಡಬೇಕಾದ ಕಾರ್ಯಗಳು
17 ಪ್ರಿಯ ಸ್ನೇಹಿತರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಅಪೊಸ್ತಲರು ಮುಂಚೆ ಏನು ಹೇಳಿದರೆಂಬುದನ್ನು ನೆನಪು ಮಾಡಿಕೊಳ್ಳಿ. 18 ಅಪೊಸ್ತಲರು ನಿಮಗೆ, “ಅಂತ್ಯಕಾಲದಲ್ಲಿ ದೇವರನ್ನು ಕುರಿತು ನಗುವ ಜನರಿರುತ್ತಾರೆ” ಎಂದು ಹೇಳಿದರು. ಈ ಜನರು ತಮ್ಮ ಇಚ್ಛೆಗನುಸಾರವಾದ ಮತ್ತು ದೇವರಿಗೆ ವಿರುದ್ಧವಾದವುಗಳನ್ನು ಮಾತ್ರ ಮಾಡುವವರಾಗಿರುತ್ತಾರೆ. 19 ಈ ಜನರು ನಿಮ್ಮಲ್ಲಿ ಭೇದವನ್ನು ಹುಟ್ಟಿಸುತ್ತಾರೆ. ಈ ಜನರು ತಮ್ಮ ಪಾಪಸ್ವಭಾವದ ಅಪೇಕ್ಷೆಯಂತೆ ಮಾತ್ರ ಮಾಡುತ್ತಾರೆ. ಅವರಲ್ಲಿ ಪವಿತ್ರಾತ್ಮನಿಲ್ಲ.
20 ಆದರೆ ಪ್ರಿಯ ಸ್ನೇಹಿತರೇ, ನೀವು ನಿಮ್ಮ ಅತಿಪರಿಶುದ್ಧ ನಂಬಿಕೆಯ ಮೂಲಕ ದೃಢವಾಗಿರಿ. ಪವಿತ್ರಾತ್ಮಭರಿತರಾಗಿ ಪ್ರಾರ್ಥಿಸಿರಿ. 21 ದೇವರ ಪ್ರೀತಿಯಲ್ಲಿ ನೆಲೆಗೊಂಡಿರಿ. ನಿತ್ಯಜೀವವನ್ನು ಹೊಂದಿಕೊಳ್ಳುವುದಕ್ಕಾಗಿ ಪ್ರಭುವಾದ ಯೇಸು ಕ್ರಿಸ್ತನ ಕರುಣೆಯನ್ನೇ ಎದುರುನೋಡುತ್ತಿರಿ.
22 ಸಂದೇಹವಿರುವ ಜನರಿಗೆ ಕರುಣೆ ತೋರಿ. 23 ಇತರ ಜನರನ್ನು ರಕ್ಷಿಸಿ. ಆ ಜನರನ್ನು ಬೆಂಕಿಯಿಂದ ಹೊರಕ್ಕೆ ತನ್ನಿರಿ. ನೀವು ಕೆಲವು ಜನರಿಗೆ ಕರುಣೆ ತೋರುವಾಗ ಎಚ್ಚರದಿಂದಿರಿ. ಪಾಪಗಳಿಂದ ಹೊಲಸಾಗಿರುವ ಅವರ ಬಟ್ಟೆಗಳನ್ನು ಸಹ ದ್ವೇಷಿಸಿರಿ.
ದೇವರಿಗೆ ಸ್ತೋತ್ರ ಮಾಡಿರಿ
24 ಆತನು (ದೇವರು) ಬಲಶಾಲಿಯಾಗಿದ್ದಾನೆ. ನೀವು ಬೀಳದಂತೆ ಆತನು ನಿಮಗೆ ಸಹಾಯ ಮಾಡಬಲ್ಲನು. ಆತನು ನಿಮ್ಮಲ್ಲಿ ಯಾವ ತಪ್ಪೂ ಇಲ್ಲದಂತೆ ಮಾಡಿ, ತನ್ನ ಮಹಿಮಾ ಸನ್ನಿಧಿಗೆ ತರುವುದಕ್ಕೂ ನಿಮಗೆ ಮಹಾಸಂತೋಷವನ್ನು ಕೊಡುವುದಕ್ಕೂ ಶಕ್ತನಾಗಿದ್ದಾನೆ. 25 ಆತನೊಬ್ಬನೇ ದೇವರು. ನಮ್ಮನ್ನು ರಕ್ಷಿಸುವಾತನು ಆತನೊಬ್ಬನೇ. ಆದಿಯಿಂದ ಇದ್ದಹಾಗೆ ಈಗಲೂ ಯಾವಾಗಲೂ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ಆತನಿಗೆ ಪ್ರಭಾವ, ಮಹತ್ವ, ಆಧಿಪತ್ಯ ಮತ್ತು ಅಧಿಕಾರಗಳು ಇರಲಿ. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International