Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 35

ದೇವರು ತನ್ನ ಜನರನ್ನು ಸಂತೈಸುವನು

35 ಮರಭೂಮಿಯೂ ಒಣನೆಲವೂ ಬಹಳವಾಗಿ ಸಂತೋಷಿಸುವದು. ಅದು ಹರ್ಷಿಸುತ್ತಾ ಪುಷ್ಪದಂತೆ ಫಲಿಸುವುದು. ಮರುಭೂಮಿಯು ಹರ್ಷದಿಂದ ಅರಳಿದ ಹೂಗಳಿಂದ ತುಂಬಿಹೋಗುವುದು. ಸಂತೋಷದಿಂದ, ಕುಣಿದಾಡುವದೋ ಎಂಬಂತೆ ತೋರುವದು. ಲೆಬನೋನಿನ ಅರಣ್ಯದಂತೆಯೂ ಕರ್ಮೆಲ್ ಬೆಟ್ಟದಂತೆಯೂ ಶಾರೋನಿನ ಕಣಿವೆಯಂತೆಯೂ ಮನೋಹರವಾಗಿರುವದು. ಇವೆಲ್ಲಾ ನೆರವೇರುವದು ಯಾಕೆಂದರೆ ಎಲ್ಲಾ ಜನರು ಯೆಹೋವನ ಮಹಿಮೆಯನ್ನು ನಮ್ಮ ದೇವರ ಪ್ರಭಾವವನ್ನೂ ಕಾಣುವರು.

ಬಲಹೀನವಾದ ಕೈಗಳನ್ನು ಬಲಗೊಳಿಸಿರಿ, ನಡುಗುವ ಮೊಣಕಾಲುಗಳನ್ನು ಬಲಗೊಳಿಸಿರಿ. ಜನರು ಭಯದಿಂದ ಗಲಿಬಿಲಿಗೊಂಡಿದ್ದಾರೆ. ಅವರಿಗೆ ಹೀಗೆ ಹೇಳು, “ಧೈರ್ಯಗೊಳ್ಳಿರಿ, ಭಯಪಡಬೇಡಿ.” ಇಗೋ, ನಿಮ್ಮ ದೇವರು ಬಂದು ನಿಮ್ಮ ವೈರಿಗಳನ್ನು ಶಿಕ್ಷಿಸುವನು. ಆತನು ಬಂದು ನಿಮಗೆ ಪ್ರತಿಫಲವನ್ನು ಕೊಡುವನು. ಯೆಹೋವನು ನಿಮ್ಮನ್ನು ಕಾಪಾಡುತ್ತಾನೆ. ಆಗ ಕುರುಡರಿಗೆ ದೃಷ್ಟಿ ಬರುವದು. ಅವರ ಕಣ್ಣುಗಳು ತೆರೆಯಲ್ಪಡುವವು. ಆಗ ಕಿವುಡರು ಕೇಳಿಸಿಕೊಳ್ಳುವರು. ಅವರ ಕಿವಿಗಳು ತೆರೆಯಲ್ಪಡುವವು. ಕುಂಟರು ಜಿಂಕೆಯಂತೆ ಜಿಗಿದಾಡುವರು. ಮಾತನಾಡಲು ಸಾಧ್ಯವಾಗದ ಜನರು ಆಗ ಹರ್ಷಗಾನವನ್ನು ಹಾಡುವರು. ಯಾವಾಗ ಮರುಭೂಮಿಯಲ್ಲಿ ತೊರೆಯ ನೀರು ಹರಿಯುವದೋ ಆಗ ಇವೆಲ್ಲಾ ಜರಗುವವು. ಒಣಭೂಮಿಯಲ್ಲಿ ಒರತೆಯ ನೀರು ಹರಿಯುವದು. ಆಗ ಜನರು ಬಿಸುಲ್ಗುದುರೆಯನ್ನು ನೋಡಿ ನೀರು ಎಂದು ಭಾವಿಸುವರು. ಆದರೆ ಆಗ ನೀರಿನ ಕೊಳಗಳೇ ಇರುವವು. ಬೆಂಗಾಡಿನಲ್ಲಿ ಬಾವಿಗಳಿರುವವು. ನೆಲದೊಳಗಿಂದ ನೀರು ಉಕ್ಕುವುದು. ಒಂದು ಕಾಲದಲ್ಲಿ ಕಾಡುಪ್ರಾಣಿಗಳು ವಾಸವಾಗಿದ್ದ ಸ್ಥಳದಲ್ಲಿ ಎತ್ತರವಾದ ನೀರವಂಜಿಗಳು ಬೆಳೆಯುವವು.

ಆ ಸಮಯದಲ್ಲಿ ಅಲ್ಲಿ ಮಾರ್ಗವಿರುವದು. ಆ ಹೆದ್ದಾರಿಯು “ಪರಿಶುದ್ಧ” ಮಾರ್ಗವೆಂದು ಕರೆಯಲ್ಪಡುವದು. ದುಷ್ಟಜನರಿಗೆ ಆ ಮಾರ್ಗದಲ್ಲಿ ನಡೆಯಲು ಅನುಮತಿ ಇರುವದಿಲ್ಲ. ಮೂರ್ಖರು ಆ ಮಾರ್ಗದಲ್ಲಿ ನಡೆಯರು. ಆ ಮಾರ್ಗದಲ್ಲಿ ಒಳ್ಳೆಯ ಜನರು ಮಾತ್ರ ನಡೆಯುವರು. ಆ ಮಾರ್ಗದಲ್ಲಿ ಅಪಾಯವಿರುವದಿಲ್ಲ. ಜನರಿಗೆ ಹಾನಿಮಾಡಲು ಸಿಂಹಗಳಾಗಲಿ ಕ್ರೂರಜಂತುಗಳಾಗಲಿ ಆ ಮಾರ್ಗದಲ್ಲಿರುವದಿಲ್ಲ. ದೇವರು ರಕ್ಷಿಸುವ ಜನರಿಗೆ ಮಾತ್ರವೇ ಆ ಮಾರ್ಗವಿರುವುದು.

10 ಯೆಹೋವನು ತನ್ನ ಜನರನ್ನು ಸ್ವತಂತ್ರರನ್ನಾಗಿ ಮಾಡುತ್ತಾನೆ. ಆ ಜನರು ಆತನ ಬಳಿಗೆ ಹಿಂದಿರುಗಿ ಬರುವರು. ಚೀಯೋನಿಗೆ ಜನರು ಬರುವಾಗ ಅವರು ಸಂತೋಷಭರಿತರಾಗುವರು. ಅವರು ನಿತ್ಯವೂ ಸಂತೋಷವಾಗಿರುವರು. ತಲೆಯ ಮೇಲಿನ ಕಿರೀಟದಂತೆ ಅವರ ಸಂತೋಷವಿರುವದು. ಅವರಲ್ಲಿ ಹರ್ಷವೂ ಸಂತಸವೂ ಸಂಪೂರ್ಣವಾಗಿ ತುಂಬಿರುವವು. ದುಃಖವೂ ಚಿಂತೆಯೂ ಬಹು ದೂರವಾಗಿರುವವು.

ಕೀರ್ತನೆಗಳು 146:5-10

ಯಾರಿಗೆ ದೇವರು ಸಹಾಯಕನೋ,
    ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
ಯೆಹೋವನು ಆಕಾಶವನ್ನೂ ಭೂಮಿಯನ್ನೂ
    ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
    ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
    ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
    ಯೆಹೋವನು ನೀತಿವಂತರನ್ನು ಪ್ರೀತಿಸುವನು.
ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
    ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
    ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
    ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!

ಯೆಹೋವನಿಗೆ ಸ್ತೋತ್ರವಾಗಲಿ!

ಲೂಕ 1:46-55

ಮರಿಯಳು ದೇವರನ್ನು ಸ್ತುತಿಸಿದಳು

46 ಆಗ ಮರಿಯಳು,

47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ.
    ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ.
    ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
49 ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ.
    ಆತನ ಹೆಸರು ಅತಿ ಪರಿಶುದ್ಧವಾದದ್ದು.
50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
51 ಆತನು ತನ್ನ ಭುಜಬಲವನ್ನು ತೋರಿ
    ಗರ್ವಿಷ್ಠರನ್ನು ಚದರಿಸುತ್ತಾನೆ.
52 ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ
    ದೀನರನ್ನು ಉನ್ನತಿಗೇರಿಸುತ್ತಾನೆ.
53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ
    ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
54 ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ
    ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
55 ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.

ಯಾಕೋಬನು 5:7-10

ತಾಳ್ಮೆಯಿಂದಿರಿ

ಸಹೋದರ ಸಹೋದರಿಯರೇ, ತಾಳ್ಮೆಯಿಂದಿರಿ, ಪ್ರಭುವಾದ ಯೇಸು ಪ್ರತ್ಯಕ್ಷನಾಗುತ್ತಾನೆ. ಆದ್ದರಿಂದ ಅಲ್ಲಿಯವರೆಗೆ ತಾಳ್ಮೆಯಿಂದಿರಿ. ತನ್ನ ಅಮೂಲ್ಯ ಬೆಳೆಯು ಭೂಮಿಯಿಂದ ಬರುವ ತನಕ ರೈತನು ತಾಳ್ಮೆಯಿಂದ ಕಾಯುತ್ತಾನೆ. ಮೊದಲ ಹಾಗೂ ಕೊನೆಯ ಮಳೆಯು ತನ್ನ ಬೆಳೆಯ ಮೇಲೆ ಸುರಿಯುವ ತನಕ ರೈತನು ತಾಳ್ಮೆಯಿಂದ ಕಾದಿರುತ್ತಾನೆ. ನೀವೂ ತಾಳ್ಮೆಯಿಂದಿರಬೇಕು. ನಿಮ್ಮ ನಿರೀಕ್ಷೆಯನ್ನು ಬಿಡಬೇಡಿ. ಪ್ರಭು ಯೇಸು ಬೇಗನೆ ಪ್ರತ್ಯಕ್ಷನಾಗುವನು. ಸಹೋದರ ಸಹೋದರಿಯರೇ, ಒಬ್ಬರ ಮೇಲೊಬ್ಬರು ದೂರದಿರಿ. ನೀವು ದೂರುವುದನ್ನು ನಿಲ್ಲಿಸದಿದ್ದರೆ ದೋಷಿಗಳೆಂದು ನಿಮಗೆ ತೀರ್ಪು ನೀಡಲಾಗುವುದು. ನ್ಯಾಯಧಿಪತಿಯು ಬರಲು ಸಿದ್ಧನಾಗಿದ್ದಾನೆ!

10 ಸಹೋದರ ಸಹೋದರಿಯರೇ, ಪ್ರಭುವಿನ ಸಂದೇಶವನ್ನು ತಿಳಿಸಿದ ಪ್ರವಾದಿಗಳು ನಿಮಗೆ ಮಾದರಿಯಾಗಿರಲಿ. ಅವರು ಅನೇಕ ರೀತಿಯಲ್ಲಿ ಸಂಕಟವನ್ನು ಅನುಭವಿಸಿದರೂ ತಾಳ್ಮೆಯಿಂದಿದ್ದರು.

ಮತ್ತಾಯ 11:2-11

ಸ್ನಾನಿಕನಾದ ಯೋಹಾನನು ಸೆರೆಯಲ್ಲಿದ್ದನು. ಕ್ರಿಸ್ತನು ಮಾಡುತ್ತಿದ್ದ ಸಂಗತಿಗಳು ಅವನಿಗೆ ತಿಳಿಯಿತು. ಆದ್ದರಿಂದ ಯೋಹಾನನು ತನ್ನ ಕೆಲವು ಶಿಷ್ಯರನ್ನು ಯೇಸುವಿನ ಬಳಿಗೆ ಕಳುಹಿಸಿದನು. ಯೋಹಾನನ ಶಿಷ್ಯರು ಯೇಸುವಿಗೆ, “ಯೋಹಾನನು ಹೇಳಿದ್ದಂತೆ ಬರಬೇಕಾಗಿದ್ದವನು ನೀನೋ ಅಥವಾ ಬೇರೊಬ್ಬನಿಗಾಗಿ ನಾವು ಎದುರುನೋಡಬೇಕೋ?” ಎಂದು ಕೇಳಿದರು.

ಅದಕ್ಕೆ ಯೇಸು, “ನೀವು ಇಲ್ಲಿ ಕೇಳಿದ ಮತ್ತು ನೋಡಿದ ಸಂಗತಿಗಳನ್ನು ಯೋಹಾನನಿಗೆ ತಿಳಿಸಿರಿ. ಕುರುಡರು ದೃಷ್ಟಿ ಹೊಂದುತ್ತಾರೆ; ಕುಂಟರು ಮತ್ತೆ ನಡೆದಾಡಲು ಸಮರ್ಥರಾಗುತ್ತಾರೆ; ಕುಷ್ಟರೋಗಿಗಳು ಗುಣಹೊಂದುತ್ತಾರೆ; ಕಿವುಡರು ಕೇಳಲು ಸಮರ್ಥರಾಗುತ್ತಾರೆ; ಸತ್ತವರು ಜೀವವನ್ನು ಹೊಂದುತ್ತಾರೆ ಮತ್ತು ಬಡಜನರಿಗೆ ಶುಭವಾರ್ತೆಯನ್ನು ಹೇಳಲಾಗುತ್ತದೆ. ನನ್ನನ್ನು ಸ್ವೀಕರಿಸಿಕೊಳ್ಳುವವನು ಧನ್ಯನಾಗಿದ್ದಾನೆ” ಎಂದು ಉತ್ತರಕೊಟ್ಟನು.

ಯೋಹಾನನ ಶಿಷ್ಯರು ಹೊರಟುಹೋಗುತ್ತಿರಲು ಯೇಸುವು ಜನರೊಡನೆ ಯೋಹಾನನನ್ನು ಕುರಿತು ಮಾತನಾಡಲು ಪ್ರಾರಂಭಿಸಿದನು. ಯೇಸು, “ನೀವು ಏನು ನೋಡಬೇಕೆಂದು ಅಡವಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? ಇಲ್ಲ! ನಿಜವಾಗಿಯೂ ನೀವು ಏನನ್ನು ನೋಡುವುದಕ್ಕೆ ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡಿರುವ ಮನುಷ್ಯನನ್ನೋ? ಇಲ್ಲ! ನಯವಾದ ಉಡುಪನ್ನು ಹಾಕಿಕೊಂಡಿರುವ ಜನರು ರಾಜರ ಅರಮನೆಗಳಲ್ಲಿ ವಾಸಿಸುತ್ತಾರೆ. ಹಾಗಾದರೆ, ಏನನ್ನು ನೋಡಲು ಹೋಗಿದ್ದಿರಿ? ಒಬ್ಬ ಪ್ರವಾದಿಯನ್ನೋ? ಹೌದು! ಯೋಹಾನನು ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ. 10 ಯೋಹಾನನನ್ನು ಕುರಿತು ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ:

‘ಇಗೋ! ನಾನು (ದೇವರು) ನನ್ನ ದೂತನನ್ನು ನಿನಗಿಂತ ಮೊದಲು ಕಳುಹಿಸುತ್ತೇನೆ.
ಅವನು ನಿನಗೆ ದಾರಿಯನ್ನು ಸಿದ್ಧಮಾಡುತ್ತಾನೆ.’(A)

11 “ಸ್ನಾನಿಕ ಯೋಹಾನನು ಹಿಂದೆ ಜೀವಿಸಿದ್ದವರಿಗಿಂತ ದೊಡ್ಡವನು. ಆದರೆ ಪರಲೋಕರಾಜ್ಯದಲ್ಲಿರುವ ಚಿಕ್ಕವನು ಸಹ ಯೋಹಾನನಿಗಿಂತಲೂ ಹೆಚ್ಚಿನವನಾಗಿದ್ದಾನೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International