Revised Common Lectionary (Semicontinuous)
ರಚನೆಗಾರ: ದಾವೀದ.
21 ಯೆಹೋವನೇ, ನಿನ್ನ ಬಲವು ರಾಜನನ್ನು ಸಂತೋಷಗೊಳಿಸುವುದು.
ನಿನ್ನ ರಕ್ಷಣೆಯು ಅವನನ್ನು ಹರ್ಷಗೊಳಿಸುವುದು.
2 ರಾಜನು ನಿನ್ನಲ್ಲಿ ಪ್ರಾರ್ಥಿಸಿದಾಗ
ನೀನು ಅವನ ಕೋರಿಕೆಗಳನ್ನೆಲ್ಲಾ ಈಡೇರಿಸಿದೆ.
3 ನೀನು ರಾಜನನ್ನು ಬಹಳವಾಗಿ ಆಶೀರ್ವದಿಸಿರುವೆ.
ಅವನ ತಲೆಗೆ ಬಂಗಾರದ ಕಿರೀಟವನ್ನು ತೊಡಿಸಿರುವೆ.
4 ಅವನು ದೀರ್ಘಾಯುಷ್ಯವನ್ನು ಕೇಳಿಕೊಂಡಾಗ ನೀನು ದಯಪಾಲಿಸಿದೆ.
ದೇವರೇ, ನೀನು ರಾಜನಿಗೆ ಶಾಶ್ವತವಾದ ಜೀವಿತವನ್ನು ಅನುಗ್ರಹಿಸಿದೆ.
5 ನೀನು ರಾಜನಿಗೆ ಜಯವನ್ನು ದೊರಕಿಸಿ
ಅವನಿಗೆ ಗೌರವವನ್ನೂ ಹೊಗಳಿಕೆಯನ್ನೂ ಬರಮಾಡಿದೆ.
6 ನೀನು ರಾಜನಿಗೆ ಶಾಶ್ವತವಾದ ಆಶೀರ್ವಾದವನ್ನು ಕೊಟ್ಟಿರುವೆ.
ಅವನು ನಿನ್ನ ಸನ್ನಿಧಿಯಲ್ಲಿ ಅತ್ಯಾನಂದಪಡುವನು.
7 ರಾಜನು ಯೆಹೋವನಲ್ಲಿಯೇ ಭರವಸವಿಟ್ಟಿದ್ದಾನೆ;
ಮಹೋನ್ನತನಾದ ದೇವರು ಅವನನ್ನು ನಿರಾಶೆಗೊಳಿಸುವುದಿಲ್ಲ.
8 ದೇವರೇ, ನಿನ್ನ ಬಲಿಷ್ಠತನವನ್ನು ನಿನ್ನ ಶತ್ರುಗಳಿಗೆಲ್ಲ ನೀನು ತೋರಿಸುವೆ.
ನೀನು ದ್ವೇಷಿಸುವವರನ್ನು ನಿನ್ನ ಶಕ್ತಿಯು ಸೋಲಿಸುವುದು.
9 ಯೆಹೋವನೇ, ನೀನು ರಾಜನೊಂದಿರುವಾಗ
ಅವನು ಉರಿಯುವ ಕುಲಿಮೆಯಂತಿರುವನು.
ಅವನ ಕೋಪವು ಧಗಧಗಿಸುವ ಬೆಂಕಿಯಂತೆ ಸುಡುವುದು;
ಅವನು ಶತ್ರುಗಳನ್ನು ನಾಶಮಾಡುವನು.
10 ಅವನ ಶತ್ರುಗಳ ಕುಟುಂಬಗಳು ನಾಶವಾಗುತ್ತವೆ;
ಅವು ಭೂಮಿಯ ಮೇಲೆ ಇಲ್ಲವಾಗುತ್ತವೆ.
11 ಯಾಕೆಂದರೆ, ಅವರು ನಿನಗೆ ವಿರೋಧವಾಗಿ ದುರಾಲೋಚನೆಗಳನ್ನು ಮಾಡಿದರು.
ಅವರು ಕುತಂತ್ರಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ.
12 ನಿನ್ನ ಬಿಲ್ಲುಗಳಿಂದ ಬಾಣಗಳನ್ನು ನೀನು ಎಸೆಯುವಾಗ
ಅವರು ಬೆನ್ನುಕೊಟ್ಟು ಓಡಿಹೋಗುವರು.
13 ಯೆಹೋವನೇ, ನಿನ್ನ ಪರಾಕ್ರಮಕ್ಕಾಗಿ ನಿನ್ನನ್ನು ಕೊಂಡಾಡುವೆನು.
ನಿನ್ನ ಮಹತ್ವದ ಬಗ್ಗೆ ವಾದ್ಯ ನುಡಿಸುತ್ತಾ ಹಾಡುವೆವು.
14 ನನಗೆ ಅಮೂಲ್ಯವಾದ ಯಾಕೋಬೇ, ಭಯಪಡಬೇಡ.
ನನ್ನ ಪ್ರಿಯ ಇಸ್ರೇಲೇ, ಹೆದರಬೇಡ.
ನಾನು ನಿಜವಾಗಿಯೂ ನಿನಗೆ ಸಹಾಯ ಮಾಡುತ್ತೇನೆ.”
ಇದು ಯೆಹೋವನ ನುಡಿ.
“ಇಸ್ರೇಲರ ಪರಿಶುದ್ಧನೂ ನಿನ್ನನ್ನು ರಕ್ಷಿಸುವಾತನೂ
ಈ ಮಾತುಗಳನ್ನು ಹೇಳಿದ್ದಾನೆ:
15 ಇಗೋ, ನಾನು ನಿನ್ನನ್ನು ಹೊಸ ಹಂತಿಕುಂಟೆಯನ್ನಾಗಿ ಮಾಡಿದ್ದೇನೆ. ಅದಕ್ಕೆ ಅನೇಕ ಹರಿತವಾದ ಹಲ್ಲುಗಳಿವೆ.
ಬೇಸಾಯಗಾರರು ಧಾನ್ಯವನ್ನು ಹುಲ್ಲಿನಿಂದ ಪ್ರತ್ಯೇಕಿಸುವದಕ್ಕಾಗಿ ಅದನ್ನು ಉಪಯೋಗಿಸುವರು.
ನೀವು ಬೆಟ್ಟದ ಶಿಖರಗಳಲ್ಲಿ ತುಳಿದಾಡಿ ಅದನ್ನು ಪುಡಿ ಮಾಡುವಿರಿ.
ಆ ಬೆಟ್ಟಗಳನ್ನು ನೀವು ಕುಂಟೆಯಂತೆ ಮಾಡುವಿರಿ.
16 ನೀವು ಅವುಗಳನ್ನು ಗಾಳಿಗೆ ತೂರಿಬಿಡುವಿರಿ.
ಗಾಳಿಯು ಅವುಗಳನ್ನು ಹಾರಿಸಿ ಚದರಿಸಿಬಿಡುವುದು.
ಆಗ ನೀವು ಯೆಹೋವನಲ್ಲಿ ಸಂತಸಪಡುವಿರಿ.
ಇಸ್ರೇಲರ ಪರಿಶುದ್ಧನಲ್ಲಿ ಹೆಚ್ಚಳಪಡುವಿರಿ.
17 “ಬಡಜನರು ನೀರಿಗಾಗಿ ಹುಡುಕಾಡುವರು.
ಆದರೆ ನೀರು ಅವರಿಗೆ ದೊರಕುವದಿಲ್ಲ.
ಅವರು ದಾಹಗೊಂಡಿದ್ದಾರೆ, ಅವರ ನಾಲಿಗೆ ಒಣಗಿಹೋಗಿದೆ.
ನಾನು ಅವರ ಮೊರೆಯನ್ನು ಕೇಳುವೆನು.
ನಾನು ಅವರನ್ನು ತೊರೆಯುವುದಿಲ್ಲ, ಅವರನ್ನು ಸಾಯಲು ಬಿಡುವುದಿಲ್ಲ.
18 ಒಣಬೆಟ್ಟಗಳಲ್ಲಿ ನದಿಗಳು ಹರಿಯುವಂತೆ ನಾನು ಮಾಡುವೆನು.
ಕಣಿವೆಗಳ ಮೂಲಕ ಬುಗ್ಗೆಯ ನೀರು ಹರಿಯುವಂತೆ ಮಾಡುವೆನು.
ಮರುಭೂಮಿಯನ್ನು ಸರೋವರವನ್ನಾಗಿ ಮಾಡುವೆನು.
ಆ ಒಣನೆಲದಲ್ಲಿ ನೀರಿನ ಬುಗ್ಗೆಗಳು ಕಾಣುವವು.
19 ಮರುಭೂಮಿಯ ಮೇಲೆ ಮರಗಳು ಬೆಳೆಯುವವು.
ಅಲ್ಲಿ ದೇವದಾರು, ಆಲೀವ್, ಕಸ್ತೂರಿಜಾಲಿ, ತುರಾಯಿ, ತಪಸಿ ಮತ್ತು ತಿಲಕ ವೃಕ್ಷಗಳು ಇರುವವು.
20 ಜನರು ಇವುಗಳನ್ನು ನೋಡಿ,
ಇವು ಯೆಹೋವನ ಶಕ್ತಿಯಿಂದ ಆದವು ಎಂದು ತಿಳಿದುಕೊಳ್ಳುವರು.
ಜನರು ಈ ಸಂಗತಿಗಳನ್ನು ನೋಡಿ ಇಸ್ರೇಲರ ಪರಿಶುದ್ಧನಾದ ಯೆಹೋವನೇ
ಇವುಗಳನ್ನು ಮಾಡಿದನೆಂದು ತಿಳಿದುಕೊಳ್ಳುವರು.”
ತನ್ನ ಸೇವೆಯ ಬಗ್ಗೆ ಪೌಲನ ವಿವರಣೆ
14 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಳ್ಳೆಯತನವು ತುಂಬಿದೆಯೆಂದು ನನಗೆ ನಿಶ್ಚಯವಾಗಿ ಗೊತ್ತಿದೆ. ಅಗತ್ಯವಾದ ಸಕಲ ಜ್ಞಾನವು ನಿಮಗಿದೆಯೆಂದು ಮತ್ತು ಒಬ್ಬರಿಗೊಬ್ಬರು ಸಲಹೆ ನೀಡಬಲ್ಲಿರೆಂದು ನನಗೆ ಗೊತ್ತಿದೆ. 15 ನೀವು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕೆಂದು ನಾನು ಅಪೇಕ್ಷಿಸಿದ ಕೆಲವು ಸಂಗತಿಗಳನ್ನು ನಾನು ನಿಮಗೆ ಧೈರ್ಯವಾಗಿ ಬರೆದಿರುವೆ. ಕ್ರಿಸ್ತ ಯೇಸುವಿನ ಸೇವಕ ಎಂಬ ವಿಶೇಷವಾದ ವರವನ್ನು ದೇವರು ನನಗೆ ಕೊಟ್ಟಿರುವುದರಿಂದ ನಾನು ಹೀಗೆ ಬರೆದಿದ್ದೇನೆ. 16 ಯೆಹೂದ್ಯರಲ್ಲದ ಜನರಿಗೆ ಸಹಾಯ ಮಾಡುವುದಕ್ಕಾಗಿ ದೇವರು ನನ್ನನ್ನು ತನ್ನ ಸೇವಕನನ್ನಾಗಿ ಮಾಡಿಕೊಂಡನು. ದೇವರ ಸುವಾರ್ತೆಯನ್ನು ಉಪದೇಶಿಸುವುದರ ಮೂಲಕ ನಾನು ಆತನ ಸೇವೆ ಮಾಡುವವನಾಗಿದ್ದೇನೆ. ಯೆಹೂದ್ಯರಲ್ಲದ ಜನರು ಸಹ ದೇವರು ಸ್ವೀಕರಿಸಿಕೊಳ್ಳುವ ಕಾಣಿಕೆಯಂತಾಗಬೇಕೆಂದು ನಾನು ಈ ಸೇವೆ ಮಾಡುವವನಾಗಿದ್ದೇನೆ. ಆ ಜನರು ದೇವರಿಗೋಸ್ಕರವಾಗಿ ಪವಿತ್ರಾತ್ಮನ ಮೂಲಕ ಪವಿತ್ರರಾಗಿದ್ದಾರೆ.
17 ಆದ್ದರಿಂದ ಕ್ರಿಸ್ತ ಯೇಸುವಿನಲ್ಲಿ ನಾನು ದೇವರಿಗೋಸ್ಕರ ಮಾಡುವ ಕಾರ್ಯಗಳ ಬಗ್ಗೆ ಹೆಮ್ಮೆಪಡುತ್ತೇನೆ. 18 ನಾನು ನನ್ನ ಸ್ವಕಾರ್ಯಗಳ ಬಗ್ಗೆಯೂ ಮಾತಾಡುವುದಿಲ್ಲ. ಯೆಹೂದ್ಯರಲ್ಲದ ಜನರನ್ನು ತನಗೆ ವಿಧೇಯರನ್ನಾಗಿ ಮಾಡಿಕೊಳ್ಳಲು ಕ್ರಿಸ್ತನು ನನ್ನ ಮೂಲಕ ಮಾತಿನಲ್ಲಿಯೂ ಕ್ರಿಯೆಯಲ್ಲಿಯೂ ಮಾಡಿದ ಕಾರ್ಯಗಳನ್ನು ಹೇಳಿಕೊಳ್ಳುತ್ತೇನೆ. 19 ಅದ್ಭುತಕಾರ್ಯಗಳ ಶಕ್ತಿಯನ್ನು ಮತ್ತು ಮಹಾಕಾರ್ಯಗಳನ್ನು ನೋಡಿದ್ದರಿಂದಲೂ ಪವಿತ್ರಾತ್ಮನ ಶಕ್ತಿಯ ನಿಮಿತ್ತದಿಂದಲೂ ಅವರು ದೇವರಿಗೆ ವಿಧೇಯರಾದರು. ನಾನು ಜೆರುಸಲೇಮಿನಿಂದ ಇಲ್ಲುರಿಕ ಪ್ರಾಂತ್ಯದವರೆಗೂ ಸುವಾರ್ತೆಯನ್ನು ಬೋಧಿಸಿ, ನನ್ನ ಆ ಕರ್ತವ್ಯವನ್ನು ಪೂರೈಸಿದ್ದೇನೆ. 20 ಕ್ರಿಸ್ತನ ಬಗ್ಗೆ ಜನರು ಎಂದೂ ಕೇಳಿಲ್ಲದ ಸ್ಥಳಗಳಲ್ಲಿ ಸುವಾರ್ತೆಯನ್ನು ಬೋಧಿಸಲು ನಾನು ಯಾವಾಗಲೂ ಅಪೇಕ್ಷಿಸುತ್ತೇನೆ; ಏಕೆಂದರೆ ಮತ್ತೊಬ್ಬನು ಆಗಲೇ ಆರಂಭಿಸಿರುವ ಕೆಲಸದ ಮೇಲೆ ಕಟ್ಟಲು ನನಗೆ ಇಷ್ಟವಿಲ್ಲ. 21 ಆದರೆ ಇದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ:
“ಆತನ ಬಗ್ಗೆ ತಿಳಿಯದ ಜನರು ಆತನನ್ನು (ಕ್ರಿಸ್ತನನ್ನು) ನೋಡುವರು.
ಆತನ ಬಗ್ಗೆ ಕೇಳಿಲ್ಲದ ಜನರು ಆತನನ್ನು ಅರ್ಥಮಾಡಿಕೊಳ್ಳುವರು.”(A)
Kannada Holy Bible: Easy-to-Read Version. All rights reserved. © 1997 Bible League International