Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:137-144

137 ಯೆಹೋವನೇ, ನೀನು ನೀತಿಸ್ವರೂಪನಾಗಿರುವೆ.
    ನಿನ್ನ ತೀರ್ಪುಗಳು ನ್ಯಾಯವಾಗಿವೆ.
138 ನೀನು ನೀತಿಯ ಕಟ್ಟಳೆಗಳನ್ನೇ ಕೊಟ್ಟಿರುವೆ.
    ಅವು ನಂಬಿಕೆಗೆ ಯೋಗ್ಯವಾಗಿವೆ.
139 ನನ್ನ ಅಭಿಮಾನವು ನನ್ನನ್ನು ದಹಿಸುತ್ತಿದೆ.
    ಯಾಕೆಂದರೆ ನನ್ನ ವೈರಿಗಳು ನಿನ್ನ ಆಜ್ಞೆಗಳನ್ನು ಮರೆತುಬಿಟ್ಟಿದ್ದರಿಂದ ನನಗೆ ಬೇಸರವಾಗಿದೆ.
140 ನಿನ್ನ ವಾಗ್ದಾನಗಳು ಪರೀಕ್ಷಿಸಲ್ಪಟ್ಟಿವೆ.
    ಅವು ನನಗೆ ಪ್ರಿಯವಾಗಿವೆ.
141 ನಾನು ಅಲ್ಪನೂ ತಿರಸ್ಕೃತನೂ ಆಗಿದ್ದೇನೆ.
    ಆದರೂ ನಾನು ನಿನ್ನ ನಿಯಮಗಳನ್ನು ಮರೆಯುವುದಿಲ್ಲ.
142 ನಿನ್ನ ನೀತಿಯು ಶಾಶ್ವತವಾದದ್ದು.
    ನಿನ್ನ ಉಪದೇಶಗಳು ನಂಬಿಕೆಗೆ ಯೋಗ್ಯವಾಗಿವೆ.
143 ಕಷ್ಟಸಂಕಟಗಳು ನನಗೆ ಬಂದಿದ್ದವು.
    ನಿನ್ನ ಆಜ್ಞೆಗಳು ನನಗೆ ಆನಂದಕರವಾಗಿವೆ.
144 ನಿನ್ನ ಕಟ್ಟಳೆಗಳು ಸದಾಕಾಲ ನೀತಿಯ ಕಟ್ಟಳೆಗಳಾಗಿವೆ.
    ಅವುಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು, ಆಗ ಬದುಕಿಕೊಳ್ಳುವೆನು.

ಹಬಕ್ಕೂಕ 2:5-11

ಯೆಹೋವನು ಹೇಳಿದ್ದು: “ಒಬ್ಬನನ್ನು ದ್ರಾಕ್ಷಾರಸವು ಮೋಸಪಡಿಸಬಹುದು. ಅದೇ ರೀತಿಯಲ್ಲಿ ಬಲಿಷ್ಠನ ಗರ್ವವು ಅವನನ್ನು ಮೋಸಪಡಿಸಬಹುದು. ಆದರೆ ಅವನಿಗೆ ಸಮಾಧಾನ ಸಿಕ್ಕುವುದಿಲ್ಲ. ಅವನು ಮರಣದಂತಿರುವನು. ಅವನಿಗೆ ಯಾವಾಗಲೂ ಹೆಚ್ಚೆಚ್ಚು ಬೇಕು. ಮರಣದಂತೆ ಅವನಿಗೆ ತೃಪ್ತಿಯೇ ಇರದು. ಅವನು ಜನಾಂಗಗಳನ್ನು ಸೋಲಿಸುತ್ತಲೇ ಇರುವನು. ಆ ಜನರನ್ನು ತನ್ನ ಕೈದಿಗಳನ್ನಾಗಿ ಮಾಡುತ್ತಲೇ ಇರುವನು. ಆದರೆ ಬೇಗನೇ ಅವರೆಲ್ಲಾ ಇವನನ್ನು ನೋಡಿ ನಗಾಡುವರು. ಅವನ ಸೋಲುವಿಕೆಯ ಕಥೆಗಳನ್ನು ವರ್ಣಿಸುವರು; ನಗಾಡುತ್ತಾ, ‘ಎಂಥಾ ದುಃಖಕರ ಸಂಗತಿ, ಅಷ್ಟೆಲ್ಲಾ ಸಂಪಾದಿಸಿದವನು ಅದನ್ನು ಇಟ್ಟುಕೊಳ್ಳಲಾಗಲಿಲ್ಲವಲ್ಲ. ಅವನು ಸಾಲಗಳನ್ನು ವಸೂಲಿ ಮಾಡಿ ತನ್ನನ್ನು ಐಶ್ವರ್ಯವಂತನನ್ನಾಗಿ ಮಾಡಿಕೊಂಡನು.’

“ಬಲಶಾಲಿಯಾದ ಮನುಷ್ಯನೇ, ನೀನು ಜನರಿಂದ ಹಣವನ್ನು ಸುಲಿದುಕೊಂಡಿರುವೆ. ಒಂದು ದಿವಸ ಆ ಜನರು ಎಚ್ಚರವಾಗಿ ತಮಗೆ ಏನಾಯಿತೆಂದು ಅರಿತುಕೊಳ್ಳುವರು. ನಿನಗೆ ವಿರುದ್ಧವಾಗಿ ಏಳುವರು. ನಿನ್ನ ಕೈಯಿಂದ ಆ ವಸ್ತುಗಳನ್ನು ಕಿತ್ತುಕೊಳ್ಳುವರು. ಆಗ ನೀನು ಭಯಗ್ರಸ್ತನಾಗುವೆ. ಎಷ್ಟೋ ಜನಾಂಗಗಳಿಂದ ನೀನು ವಸ್ತುಗಳನ್ನು ಅಪಹರಿಸಿರುವೆ. ಅವರು ನಿನ್ನಿಂದ ಇನ್ನೂ ಹೆಚ್ಚಾಗಿ ಅಪಹರಿಸುವರು. ನೀನು ಎಷ್ಟೋ ಮಂದಿಯನ್ನು ಕೊಂದಿರುವೆ; ದೇಶಗಳನ್ನೂ ನಗರಗಳನ್ನೂ ನಾಶಮಾಡಿರುವೆ. ಅಲ್ಲಿಯ ಎಷ್ಟೋ ಜನರನ್ನು ಸಂಹರಿಸಿರುವೆ.

“ಹೌದು, ಕೆಟ್ಟದ್ದನ್ನು ಮಾಡಿ ಧನಿಕನಾದವನಿಗೆ ಬಹಳ ಕೇಡಾಗುವುದು. ಆ ಮನುಷ್ಯನು ಒಂದು ಸುರಕ್ಷಿತವಾದ ಸ್ಥಳದಲ್ಲಿ ವಾಸಿಸಲು ಇದನ್ನೆಲ್ಲಾ ಮಾಡುತ್ತಾನೆ. ಹಾಗೆ ಮಾಡುವದರಿಂದ ಬೇರೆ ಜನರು ಅವನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲವೆಂದು ಅವನು ತಿಳಿಯುತ್ತಾನೆ. ಆದರೆ ಕೆಟ್ಟ ಸಂಗತಿಗಳು ಅವನಿಗೆ ಸಂಭವಿಸುವವು. 10 ಎಷ್ಟೋ ಜನರನ್ನು ನಾಶಮಾಡಲು ನೀನು ಯೋಜನೆ ಮಾಡಿರುವೆ. ಆದರೆ ಆ ಯೋಜನೆಗಳು ನಿನ್ನ ಮನೆಗೆ ನಾಚಿಕೆಯನ್ನು ತಂದೊಡ್ಡುವವು. ನೀನು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ನೀನು ನಿನ್ನ ಪ್ರಾಣವನ್ನು ಕಳೆದುಕೊಳ್ಳುವೆ. 11 ಗೋಡೆಯ ಕಲ್ಲುಗಳು ನಿನಗೆ ವಿರುದ್ಧವಾಗಿ ಕೂಗುವವು. ನಿನ್ನ ಮನೆಯ ಮರದ ಜಂತೆಗಳು ಸಹ ನೀನು ಅಪರಾಧಿಯೆಂದು ಸಾಕ್ಷಿ ಹೇಳುವವು.

ಯೋಹಾನ 8:39-47

39 ಯೆಹೂದ್ಯರು, “ಅಬ್ರಹಾಮನೇ ನಮ್ಮ ತಂದೆ” ಎಂದು ಹೇಳಿದರು.

ಯೇಸು, “ನೀವು ನಿಜವಾಗಿಯೂ ಅಬ್ರಹಾಮನ ಮಕ್ಕಳಾಗಿದ್ದರೆ, ಅಬ್ರಹಾಮನು ಮಾಡಿದ ಕಾರ್ಯಗಳನ್ನೇ ಮಾಡುತ್ತಿದ್ದಿರಿ. 40 ನಾನು ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದವನಾಗಿದ್ದೇನೆ. ಆದರೆ ನೀವು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೀರಿ. ಅಬ್ರಹಾಮನು ಅಂಥದ್ದೇನನ್ನೂ ಮಾಡಲಿಲ್ಲ. 41 ಆದ್ದರಿಂದ ನಿಮ್ಮ ಸ್ವಂತ ತಂದೆ ಮಾಡಿದ್ದನ್ನೇ ನೀವು ಮಾಡುತ್ತಿದ್ದೀರಿ” ಎಂದು ಹೇಳಿದನು.

ಆದರೆ ಯೆಹೂದ್ಯರು, “ನಾವು ಹಾದರಕ್ಕೆ ಹುಟ್ಟಿದವರಲ್ಲ. ದೇವರೇ ನಮ್ಮ ತಂದೆ. ನಮಗಿರುವ ತಂದೆ ಆತನೊಬ್ಬನೇ” ಎಂದು ಹೇಳಿದರು.

42 ಯೇಸು ಆ ಯೆಹೂದ್ಯರಿಗೆ, “ದೇವರು ನಿಜವಾಗಿಯೂ ನಿಮ್ಮ ತಂದೆಯಾಗಿದ್ದರೆ, ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ. ನಾನು ದೇವರಿಂದ ಬಂದು ಈಗ ಇಲ್ಲಿದ್ದೇನೆ. ನಾನು ಬಂದದ್ದು ನನ್ನ ಸ್ವಂತ ಅಧಿಕಾರದಿಂದಲ್ಲ. ದೇವರೇ ನನ್ನನ್ನು ಕಳುಹಿಸಿದನು. 43 ನಾನು ಹೇಳುವ ಈ ಸಂಗತಿಗಳನ್ನು ನೀವು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ನನ್ನ ಉಪದೇಶವನ್ನು ನೀವು ಸ್ವೀಕರಿಸಿಕೊಳ್ಳಲಾರಿರಿ. 44 ಸೈತಾನನೇ ನಿಮ್ಮ ತಂದೆ. ನೀವು ಅವನಿಗೆ ಹುಟ್ಟಿದವರಾಗಿದ್ದೀರಿ. ಅವನ ದುರಿಚ್ಛೆಗಳನ್ನು ಮಾಡಬಯಸುತ್ತೀರಿ. ಅವನು ಆರಂಭದಿಂದಲೂ ಕೊಲೆಗಾರನಾಗಿದ್ದು ಸತ್ಯಕ್ಕೆ ವಿರೋಧವಾಗಿದ್ದನು. ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸ್ವಭಾವಾನುಸಾರವಾಗಿ ಸುಳ್ಳಾಡುತ್ತಾನೆ. ಅವನು ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ.

45 “ನಾನು ಸತ್ಯವನ್ನು ಹೇಳುತ್ತೇನೆ. ಆದರೆ ನೀವು ನನ್ನನ್ನು ನಂಬುವುದಿಲ್ಲ. 46 ನನ್ನಲ್ಲಿ ಪಾಪವನ್ನು ತೋರಿಸಿಕೊಡುವವನು ನಿಮ್ಮಲ್ಲಿ ಯಾವನಾದರೂ ಇರುವನೇ? ನಾನು ಸತ್ಯವನ್ನು ಹೇಳಿದರೂ ನೀವೇಕೆ ನಂಬುವುದಿಲ್ಲ? 47 ದೇವರಿಂದ ಹುಟ್ಟಿದವನು ದೇವರು ಹೇಳುವ ಮಾತುಗಳನ್ನು ಸ್ವೀಕರಿಸಿಕೊಳ್ಳುವನು. ಆದರೆ ನೀವು ದೇವರಿಂದ ಹುಟ್ಟಿಲ್ಲದ ಕಾರಣ ಆತನ ಮಾತುಗಳನ್ನು ಸ್ವೀಕರಿಸಿಕೊಳ್ಳುವುದಿಲ್ಲ” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International