Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.
122 “ಯೆಹೋವನ ಆಲಯಕ್ಕೆ ಹೋಗೋಣ”
ಎಂದು ಜನರು ಹೇಳಿದಾಗ ನನಗೆ ಬಹು ಸಂತೋಷವಾಯಿತು.
2 ನಾವು ಜೆರುಸಲೇಮಿನ ಬಾಗಿಲುಗಳ ಬಳಿಯಲ್ಲಿ ನಿಂತಿದ್ದೇವೆ.
3 ಇದು ಹೊಸ ಜೆರುಸಲೇಮ್!
ಈ ಪಟ್ಟಣವು ಏಕೀಕರಣಗೊಂಡ ನಗರದಂತೆ ಮತ್ತೆ ಕಟ್ಟಲ್ಪಟ್ಟಿದೆ.
4 ಇಸ್ರೇಲಿನ ಕುಲಗಳವರು ಅಂದರೆ ಯೆಹೋವನ ಕುಲಗಳವರು
ಯೆಹೋವನ ಹೆಸರನ್ನು ಕೊಂಡಾಡಲು ಅಲ್ಲಿಗೆ ಹೋಗುವರು.
5 ದಾವೀದನ ಕುಟುಂಬದ ರಾಜರುಗಳು ಜನರಿಗೆ
ನ್ಯಾಯತೀರ್ಪು ನೀಡಲು ತಮ್ಮ ಸಿಂಹಾಸನಗಳನ್ನು ಅಲ್ಲಿ ಸ್ಥಾಪಿಸಿದರು.
6 ಜೆರುಸಲೇಮಿನ ಶಾಂತಿಗೋಸ್ಕರ ಪ್ರಾರ್ಥಿಸಿರಿ:
“ನಿನ್ನನ್ನು ಪ್ರೀತಿಸುವ ಜನರು ಅಲ್ಲಿ ಶಾಂತಿಯನ್ನು ಕಂಡುಕೊಳ್ಳಲಿ.
7 ನಿನ್ನ ಕೋಟೆಗಳೊಳಗೆ ಶಾಂತಿ ನೆಲಸಿರಲಿ
ನಿನ್ನ ಮಹಾ ಕಟ್ಟಡಗಳಲ್ಲಿ ಸುರಕ್ಷತೆಯಿರಲಿ.”
8 ನನ್ನ ಸಹೋದರರ ಮತ್ತು ನೆರೆಯವರ ಒಳ್ಳೆಯದಕ್ಕಾಗಿ
ಅಲ್ಲಿ ಶಾಂತಿ ನೆಲೆಸಿರಲೆಂದು ಪ್ರಾರ್ಥಿಸುವೆನು.
9 ನಮ್ಮ ದೇವರಾದ ಯೆಹೋವನ ಆಲಯಕ್ಕೋಸ್ಕರ
ಈ ಪಟ್ಟಣಕ್ಕೆ ಒಳ್ಳೆಯದಾಗಲೆಂದು ಪ್ರಾರ್ಥಿಸುವೆನು.
11-12 ದೇವರು ಭೂಮಿಯ ಕಡೆಗೆ ನೋಡಿದಾಗ ಜನರಿಂದ ಅದು ಕೆಟ್ಟುಹೋಗಿರುವುದನ್ನು ಕಂಡನು. ಎಲ್ಲೆಲ್ಲೂ ಹಿಂಸೆ ತುಂಬಿಕೊಂಡಿತ್ತು; ಜನರು ದುಷ್ಟರಾಗಿಯೂ ಕ್ರೂರಿಗಳಾಗಿಯೂ ತಮ್ಮ ಜೀವಿತವನ್ನು ಕೆಡಿಸಿಕೊಂಡಿದ್ದರು.
13 ಆದ್ದರಿಂದ ದೇವರು ನೋಹನಿಗೆ, “ನಾನು ಎಲ್ಲಾ ಜನರಿಗೂ ಅಂತ್ಯವನ್ನು ಬರಮಾಡಬೇಕೆಂದಿದ್ದೇನೆ; ಯಾಕೆಂದರೆ ಅವರು ಕೋಪ, ಹಿಂಸೆಗಳಿಂದ ಭೂಮಿಯನ್ನು ತುಂಬಿಸಿದ್ದಾರೆ. ಆದಕಾರಣ ನಾನು ಎಲ್ಲಾ ಜೀವಿಗಳನ್ನು ನಾಶಮಾಡುವೆನು. 14 ನಿನಗೋಸ್ಕರ ಒಂದು ನಾವೆಯನ್ನು ತುರಾಯಿ ಮರದಿಂದ ತಯಾರಿಸು. ಆ ನಾವೆಯಲ್ಲಿ ಕೋಣೆಗಳನ್ನು ಮಾಡು. ಇಡೀ ನಾವೆಗೆ ಒಳಭಾಗದಲ್ಲೂ ಹೊರಭಾಗದಲ್ಲೂ ರಾಳವನ್ನು ಹಚ್ಚು.
15 “ನೀನು ತಯಾರಿಸುವ ನಾವೆಯು ನಾನೂರೈವತ್ತು ಅಡಿ ಉದ್ದವಾಗಿಯೂ ಎಪ್ಪತ್ತೈದು ಅಡಿ ಅಗಲವಾಗಿಯೂ ನಲವತ್ತೈದು ಅಡಿ ಎತ್ತರವಾಗಿಯೂ ಇರಬೇಕು. 16 ಕಿಟಕಿಯ ಮೇಲ್ಛಾವಣಿಗೆ ಹದಿನೆಂಟು ಇಂಚು ಕೆಳಗಿರಲಿ. ನಾವೆಯ ಪಾರ್ಶ್ವದಲ್ಲಿ ಬಾಗಿಲಿರಲಿ. ನಾವೆಯಲ್ಲಿ ಮೇಲಂತಸ್ತು ಮಧ್ಯಂತಸ್ತು ಮತ್ತು ಕೆಳಂತಸ್ತು ಎಂಬ ಮೂರು ಅಂತಸ್ತುಗಳಿರಲಿ.
17 “ನಾನು ನಿನಗೆ ಹೇಳುತ್ತಿರುವುದನ್ನು ಅರ್ಥಮಾಡಿಕೊ. ನಾನು ಭೂಮಿಯ ಮೇಲೆ ಮಹಾ ಜಲಪ್ರಳಯವನ್ನು ತರುವೆನು. ಆಕಾಶದ ಕೆಳಗಿರುವ ಎಲ್ಲಾ ಜೀವಿಗಳನ್ನು ನಾಶಮಾಡುವೆನು. ಭೂಮಿಯ ಮೇಲಿರುವ ಪ್ರತಿಯೊಂದೂ ಸಾಯುವುದು. 18 ನಾನು ನಿನ್ನೊಂದಿಗೆ ವಿಶೇಷ ಒಡಂಬಡಿಕೆಯನ್ನು ಮಾಡಿಕೊಳ್ಳುವೆ. ಅದೇನೆಂದರೆ, ನೀನು ಮತ್ತು ನಿನ್ನ ಹೆಂಡತಿ, ನಿನ್ನ ಗಂಡುಮಕ್ಕಳು ಮತ್ತು ಸೊಸೆಯಂದಿರು ನಾವೆಯೊಳಗೆ ಹೋಗುವಿರಿ. 19 ಇದಲ್ಲದೆ, ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯಲ್ಲಿ ಒಂದು ಗಂಡನ್ನೂ ಒಂದು ಹೆಣ್ಣನ್ನೂ ನಾವೆಯೊಳಗೆ ಸೇರಿಸಿಕೊ. ನಿನ್ನೊಡನೆ ಅವುಗಳನ್ನು ಜೀವದಿಂದುಳಿಸಿ ಕಾಪಾಡು. 20 ಭೂಮಿಯ ಮೇಲಿರುವ ಪ್ರತಿಯೊಂದು ಬಗೆಯ ಪಕ್ಷಿಗಳಲ್ಲಿ ಎರಡೆರಡೂ ಪ್ರತಿಯೊಂದು ಪ್ರಾಣಿಗಳಲ್ಲಿ ಎರಡೆರಡೂ ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಜಂತುಗಳಲ್ಲಿ ಎರಡೆರಡೂ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ನಿನ್ನೊಂದಿಗಿರಲಿ. 21 ಭೂಮಿಯ ಮೇಲೆ ದೊರೆಯುವ ಎಲ್ಲಾ ಬಗೆಯ ಆಹಾರವನ್ನು ನಿಮಗಾಗಿಯೂ ಮತ್ತು ಪ್ರಾಣಿಗಳಿಗಾಗಿಯೂ ನಾವೆಯಲ್ಲಿ ತುಂಬಿಸಿಕೊ” ಎಂದು ಹೇಳಿದನು.
22 ದೇವರು ಆಜ್ಞಾಪಿಸಿದಂತೆಯೇ ನೋಹನು ಮಾಡಿದನು.
ನೆಲಸಮವಾಗಲಿರುವ ಮಹಾದೇವಾಲಯ
(ಮಾರ್ಕ 13:1-31; ಲೂಕ 21:5-33)
24 ಯೇಸು ದೇವಾಲಯದಿಂದ ಹೋಗುತ್ತಿದ್ದಾಗ ಆತನ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸಲು ಆತನ ಬಳಿಗೆ ಬಂದರು. 2 ಆಗ ಯೇಸು “ಈ ಕಟ್ಟಡಗಳನ್ನೆಲ್ಲ ನೋಡುತ್ತಿದ್ದೀರಾ? ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇವುಗಳೆಲ್ಲಾ ನಾಶವಾಗುತ್ತವೆ. ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದಂತೆ ಎಲ್ಲಾ ಕಲ್ಲುಗಳು ಕೆಡವಲ್ಪಡುತ್ತವೆ” ಎಂದು ಹೇಳಿದನು.
3 ಬಳಿಕ ಯೇಸು ಆಲಿವ್ ಗುಡ್ಡದ ಮೇಲೆ ಕುಳಿತುಕೊಂಡಿದ್ದಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ! ನೀನು ಈ ಲೋಕಕ್ಕೆ ಮತ್ತೊಮ್ಮೆ ಬರುವಾಗ ಮತ್ತು ಲೋಕದ ಸಮಾಪ್ತಿಯ ಸಮಯ ಬಂದಾಗ ಸೂಚನೆಗಾಗಿ ಏನು ಸಂಭವಿಸುವುದು? ನಮಗೆ ತಿಳಿಸು!” ಎಂದು ಕೇಳಿದರು.
4 ಯೇಸು ಅವರಿಗೆ ಕೊಟ್ಟ ಉತ್ತರವಿದು: “ಎಚ್ಚರವಾಗಿರಿ! ನಿಮ್ಮನ್ನು ಮೋಸಗೊಳಿಸಲು ಯಾರಿಗೂ ಅವಕಾಶ ಕೊಡಬೇಡಿ. 5 ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಪಡಿಸುವರು. 6 ನಿಮ್ಮ ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ದವನ್ನೂ ಬಹು ದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಹೆದರಬೇಡಿ. ಅಂತ್ಯವು ಬರುವುದಕ್ಕಿಂತ ಮುಂಚೆ ಇವುಗಳು ಸಂಭವಿಸಲೇಬೇಕು. 7 ಜನಾಂಗಗಳು ಬೇರೆ ಜನಾಂಗಗಳಿಗೆ ವಿರೋಧವಾಗಿ ಯುದ್ದ ಮಾಡುತ್ತವೆ. ರಾಜ್ಯಗಳು ಬೇರೆಬೇರೆ ರಾಜ್ಯಗಳಿಗೆ ವಿರೋಧವಾಗಿ ಯುದ್ಧ ಮಾಡುತ್ತವೆ. ಬರಗಾಲಗಳು ಬರುತ್ತವೆ. ಬೇರೆಬೇರೆ ಸ್ಥಳಗಳಲ್ಲಿ ಭೂಕಂಪಗಳು ಆಗುತ್ತವೆ. 8 ಇವೆಲ್ಲಾ ಪ್ರಸವವೇದನೆಯ ಆರಂಭವಷ್ಟೇ.
9 “ಆಗ ಜನರು ನಿಮ್ಮನ್ನು ಹಿಂಸಿಸಿ, ಮರಣದಂಡನೆ ವಿಧಿಸಲು ಅಧಿಕಾರಿಗಳಿಗೆ ಒಪ್ಪಿಸಿಕೊಡುವರು. ಜನರೆಲ್ಲರೂ ನಿಮ್ಮನ್ನು ವಿರೋಧಿಸುವರು. ನೀವು ನನ್ನಲ್ಲಿ ನಂಬಿಕೆ ಇಟ್ಟದ್ದಕ್ಕಾಗಿ ಇವುಗಳೆಲ್ಲಾ ನಿಮಗೆ ಸಂಭವಿಸುವವು. 10 ಆ ಸಮಯದಲ್ಲಿ ಅನೇಕ ವಿಶ್ವಾಸಿಗಳು ತಮ್ಮ ನಂಬಿಕೆಯನ್ನು ಕಳೆದುಕೊಳ್ಳುವರು. ಅವರು ಒಬ್ಬರಿಗೊಬ್ಬರಿಗೆ ವಿರೋಧವಾಗಿ ತಿರುಗಿಕೊಂಡು ಒಬ್ಬರನ್ನೊಬ್ಬರು ದ್ವೇಷಿಸುವರು. 11 ಅನೇಕ ಸುಳ್ಳುಪ್ರವಾದಿಗಳು ಬಂದು ಎಷ್ಟೋ ಜನರನ್ನು ವಂಚಿಸುವರು. 12 ಲೋಕದಲ್ಲಿ ದುಷ್ಟತನವು ಹೆಚ್ಚಾಗಿ ಬಹುಜನ ವಿಶ್ವಾಸಿಗಳ ಪ್ರೀತಿಯು ಅಡಗಿಹೋಗುವುದು. 13 ಆದರೆ ಕಡೆಯವರೆಗೂ ದೃಢವಾಗಿರುವವನು ರಕ್ಷಣೆಹೊಂದುತ್ತಾನೆ. 14 ದೇವರ ರಾಜ್ಯದ ಶುಭವಾರ್ತೆಯನ್ನು ಲೋಕದಲ್ಲೆಲ್ಲಾ ಪ್ರತಿ ಜನಾಂಗಕ್ಕೂ ಸಾರಲಾಗುವುದು. ಆಗ ಅಂತ್ಯವು ಬರುತ್ತದೆ.
15 “ಭಯಂಕರವಾದ ನಾಶಕ್ಕೆ ಕಾರಣವಾದ ವಸ್ತುವೊಂದನ್ನು[a] ಕುರಿತು ಪ್ರವಾದಿ ದಾನಿಯೇಲನು ಹೇಳಿದ್ದಾನೆ. ಈ ಭಯಂಕರವಾದ ವಸ್ತುವು ದೇವಾಲಯದ ಪರಿಶುದ್ಧ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಿರಿ. (ಇದನ್ನು ಓದುತ್ತಿರುವವನು ಇದರ ಅರ್ಥವನ್ನು ಗ್ರಹಿಸಿಕೊಳ್ಳಲಿ.) 16 ಆ ಸಮಯದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಲಿ. 17 ಮಾಳಿಗೆಯ ಮೇಲಿರುವವನು ಇಳಿದು ತನ್ನ ವಸ್ತುಗಳನ್ನು ಮನೆಯಿಂದ ತೆಗೆದುಕೊಳ್ಳದೆ ಓಡಿಹೋಗಲಿ. 18 ಹೊಲದಲ್ಲಿರುವವನು ತನ್ನ ಮೇಲಂಗಿಯನ್ನು ತೆಗೆದುಕೊಳ್ಳುವುದಕ್ಕಾಗಿ ಮನೆಗೆ ಹಿಂತಿರುಗದಿರಲಿ.
19 “ಆ ಸಮಯದಲ್ಲಿ ಗರ್ಭಿಣಿಯರಿಗೂ ಮೊಲೆಕೂಸುಗಳಿರುವ ಸ್ತ್ರೀಯರಿಗೂ ಎಂಥಾ ಗೋಳಾಟ! 20 ನೀವು ಓಡಿಹೋಗಬೇಕಾದ ಈ ಸಮಯವು ಚಳಿಗಾಲದಲ್ಲಾಗಲಿ ಸಬ್ಬತ್ ದಿನದಲ್ಲಾಗಲಿ ಬರದಂತೆ ಪ್ರಾರ್ಥಿಸಿರಿ. 21 ಏಕೆಂದರೆ ಆ ಸಮಯದಲ್ಲಿ ಮಹಾ ಸಂಕಟ ಇರುವುದು. ಲೋಕವು ಸೃಷ್ಟಿಯಾದಂದಿನಿಂದ ಇಂಥ ಸಂಕಟವು ಎಂದೂ ಸಂಭವಿಸಿಲ್ಲ. ಇನ್ನು ಮುಂದೆಯೂ ಸಂಭವಿಸುವುದಿಲ್ಲ.
22 “ದೇವರು ಭಯಂಕರವಾದ ಆ ಸಮಯವನ್ನು ಕಡಿಮೆಗೊಳಿಸಲು ತೀರ್ಮಾನಿಸಿದ್ದಾನೆ. ಇಲ್ಲವಾದರೆ, ಜೀವದಿಂದ ಉಳಿಯಲು ಯಾರಿಗೂ ಸಾಧ್ಯವಿಲ್ಲ. ತಾನು ಆರಿಸಿಕೊಂಡ ಜನರ ನಿಮಿತ್ತ ದೇವರು ಆ ಸಮಯವನ್ನು ಕಡಿಮೆ ಮಾಡಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International