Revised Common Lectionary (Semicontinuous)
15 ಪರ್ಶಿಯಾದ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳಿನ ಇಪ್ಪತ್ನಾಲ್ಕನೆಯ ದಿವಸದಲ್ಲಿ ಕಟ್ಟುವ ಕಾರ್ಯವನ್ನು ಪ್ರಾರಂಭಿಸಿದರು.
ಯೆಹೋವನ ಉತ್ತೇಜನ; ಕೆಲಸದ ಪ್ರಾರಂಭ
2 ಏಳನೇ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಹಗ್ಗಾಯನಿಗೆ ಯೆಹೋವನಿಂದ ಈ ಸಂದೇಶವು ದೊರಕಿತು: 2 “ಶೆಯಲ್ತಿಯೇಲನ ಮಗನೂ ರಾಜ್ಯಪಾಲನೂ ಆಗಿರುವ ಜೆರುಬ್ಬಾಬೆಲನಿಗೂ ಮಹಾಯಾಜಕನೂ ಯೆಹೋಚಾದಾಕನ ಮಗನೂ ಆಗಿರುವ ಯೆಹೋಶುವನಿಗೂ ಮತ್ತು ಎಲ್ಲಾ ಜನರಿಗೂ ಈ ವಿಷಯಗಳನ್ನು ತಿಳಿಸು. 3 ‘ನಿಮ್ಮಲ್ಲಿ ಎಷ್ಟು ಮಂದಿ ಹೊಸ ಆಲಯವನ್ನು ನೋಡುವಾಗ ಕೆಡವಲ್ಪಟ್ಟ ಮೊದಲನೇ ಆಲಯದ ಸೌಂದರ್ಯವನ್ನೂ ಗಾಂಭೀರ್ಯವನ್ನೂ ನೆನಪು ಮಾಡುತ್ತೀರಿ? ನಿಮ್ಮ ಆಲೋಚನೆಯೇನು? ಮೊದಲಿನ ಆಲಯದೊಡನೆ ಈ ಆಲಯವನ್ನು ಹೋಲಿಸಿದಾಗ ಇದು ಏನೂ ಅಲ್ಲವೆಂದು ತೋರುತ್ತದೋ? 4 ಆದರೆ ಜೆರುಬ್ಬಾಬೆಲನೇ, ಯೆಹೋವನು ಹೀಗೆನ್ನುತ್ತಾನೆ, “ನಿರುತ್ಸಾಹಗೊಳ್ಳಬೇಡ! ಮಹಾಯಾಜಕನಾದ ಯೆಹೋಶುವನೇ, ನಿರುತ್ಸಾಹಗೊಳ್ಳಬೇಡ! ಈ ದೇಶದ ಎಲ್ಲಾ ಜನರೇ, ನಿರುತ್ಸಾಹಗೊಳ್ಳಬೇಡಿ, ಕೆಲಸವನ್ನು ಮುಂದುವರಿಸಿರಿ, ಯಾಕೆಂದರೆ ನಾನೇ ನಿಮ್ಮೊಂದಿಗಿದ್ದೇನೆ” ಎಂದು ಯೆಹೋವನು ಹೇಳುತ್ತಾನೆ.’” ಇದು ಸರ್ವಶಕ್ತನಾದ ಯೆಹೋವನ ನುಡಿ.
5 ಯೆಹೋವನು ಹೇಳುವುದೇನೆಂದರೆ, “‘ನೀವು ಈಜಿಪ್ಟ್ ದೇಶವನ್ನು ಬಿಟ್ಟಾಗ ನಾನು ನಿಮ್ಮೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡೆನು. ನಾನು ಆ ವಾಗ್ದಾನವನ್ನು ನೆರವೇರಿಸಿದ್ದೇನೆ! ನನ್ನ ಆತ್ಮವು ನಿಮ್ಮೊಂದಿಗಿದೆ. ಆದ್ದರಿಂದ ಭಯಪಡಬೇಡಿ!’ 6 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ಇನ್ನು ಸ್ವಲ್ಪ ಸಮಯದಲ್ಲಿ ನಾನು ಭೂಪರಲೋಕಗಳನ್ನು ಅದುರಿಸುವೆನು. ಸಮುದ್ರವನ್ನೂ ಒಣನೆಲವನ್ನೂ ಕಂಪಿಸುವೆನು, 7 ನಾನು ಜನಾಂಗಗಳನ್ನು ನಡುಗಿಸುವೆನು. ಆಗ ಅವರು ಎಲ್ಲಾ ಜನಾಂಗಗಳ ಐಶ್ವರ್ಯದೊಡನೆ ನಿಮ್ಮಲ್ಲಿಗೆ ಬರುವರು. ಆಗ ನನ್ನ ಈ ಆಲಯವನ್ನು ಮಹಿಮೆಯಿಂದ ತುಂಬಿಸುವೆನು.’ ಸರ್ವಶಕ್ತನಾದ ದೇವರು ಇದನ್ನು ಹೇಳುತ್ತಿದ್ದಾನೆ! 8 ‘ಅವರ ಬೆಳ್ಳಿಯೆಲ್ಲವೂ ನನ್ನದೇ, ಅವರ ಬಂಗಾರವೂ ನನ್ನದೇ.’ ಇದು ಸರ್ವಶಕ್ತನಾದ ಯೆಹೋವನ ನುಡಿ. 9 ‘ಈ ಅಂತಿಮ ದೇವಾಲಯವು ಮೊದಲನೆ ಆಲಯಕ್ಕಿಂತಲೂ ಸುಂದರವಾಗಿಯೂ ವೈಭವವಾಗಿಯೂ ಇರುವುದು! ನಾನು ಈ ಸ್ಥಳಕ್ಕೆ ಸಮಾಧಾನವನ್ನು ತರುವೆನು!’ ಜ್ಞಾಪಕದಲ್ಲಿಡಿ, ಇವುಗಳನ್ನು ಸರ್ವಶಕ್ತನಾದ ಯೆಹೋವನು ಹೇಳುತ್ತಿದ್ದಾನೆ!”
ರಚನೆಗಾರ: ದಾವೀದ.
145 ನನ್ನ ದೇವರೇ, ನನ್ನ ರಾಜನೇ, ನಿನ್ನನ್ನು ಸ್ತುತಿಸುವೆನು;
ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
2 ನಿನ್ನನ್ನು ಪ್ರತಿದಿನವೂ ಸ್ತುತಿಸುವೆನು.
ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
3 ಯೆಹೋವನು ಮಹೋನ್ನತನೂ ಸ್ತುತಿಗೆ ಪಾತ್ರನೂ ಆಗಿದ್ದಾನೆ.
ಆತನ ಮಹತ್ಕಾರ್ಯಗಳು ಅಸಂಖ್ಯಾತವಾಗಿವೆ.
4 ಯೆಹೋವನೇ, ನಿನ್ನ ಕಾರ್ಯಗಳನ್ನು ಜನರು ಎಂದೆಂದಿಗೂ ಸ್ತುತಿಸುವರು;
ನಿನ್ನ ಮಹತ್ಕಾರ್ಯಗಳ ವಿಷಯವಾಗಿ ಜನರು ಬೇರೆಯವರಿಗೆ ಹೇಳುವರು.
5 ನಿನ್ನ ಪ್ರಭಾವವುಳ್ಳ ಮಹಿಮೆಯ ಕುರಿತು ಜನರು ಹೇಳುವರು.
ನಾನು ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವೆನು.
17 ಯೆಹೋವನ ಕಾರ್ಯಗಳೆಲ್ಲ ನೀತಿಯುಳ್ಳವುಗಳಾಗಿವೆ.
ಆತನ ಪ್ರತಿಯೊಂದು ಕಾರ್ಯದಲ್ಲೂ ಆತನ ಶಾಶ್ವತ ಪ್ರೀತಿ ತೋರಿಬರುವುದು.
18 ಯೆಹೋವನು ತನ್ನ ಭಕ್ತರಿಗೆ ಸಮೀಪವಾಗಿದ್ದಾನೆ.
ಆತನು ತನ್ನನ್ನು ಯಥಾರ್ಥವಾಗಿ ಕರೆಯುವ ಪ್ರತಿಯೊಬ್ಬರಿಗೂ ಸಮೀಪವಾಗಿದ್ದಾನೆ.
19 ಆತನು ತನ್ನ ಭಕ್ತರ ಇಷ್ಟವನ್ನು ನೆರವೇರಿಸುವನು.
ಆತನು ಅವರ ಮೊರೆಗೆ ಕಿವಿಗೊಟ್ಟು ಅವರನ್ನು ರಕ್ಷಿಸುವನು.
20 ಯೆಹೋವನು ತನ್ನನ್ನು ಪ್ರೀತಿಸುವ ಪ್ರತಿಯೊಬ್ಬರನ್ನೂ ಸಂರಕ್ಷಿಸುವನು,
ದುಷ್ಟರನ್ನಾದರೋ ಆತನು ನಾಶಮಾಡುವನು.
21 ನಾನು ಯೆಹೋವನನ್ನು ಕೊಂಡಾಡುತ್ತೇನೆ!
ಎಲ್ಲಾ ಜೀವಿಗಳು ಆತನ ಪವಿತ್ರ ಹೆಸರನ್ನು ಸದಾಕಾಲ ಕೊಂಡಾಡಲಿ!
ಸ್ತುತಿಗೀತೆ.
98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
ಆತನಿಗೆ ಜಯವನ್ನು ಉಂಟುಮಾಡಿವೆ.
2 ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
3 ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
4 ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
5 ಹಾರ್ಪ್ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
ಹಾರ್ಪ್ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
6 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
7 ಸಮುದ್ರವೂ ಭೂಮಿಯೂ
ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
8 ನದಿಗಳೇ, ಚಪ್ಪಾಳೆ ತಟ್ಟಿರಿ!
ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
9 ಯೆಹೋವನ ಎದುರಿನಲ್ಲಿ ಹಾಡಿರಿ,
ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
ಆತನು ಜನರನ್ನು ನೀತಿಯಿಂದ ಆಳುತ್ತಾನೆ.
ಕೆಟ್ಟಕಾರ್ಯಗಳು ಸಂಭವಿಸುವವು
2 ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವುದನ್ನು ಕುರಿತು ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನಾವೆಲ್ಲರೂ ಒಟ್ಟಾಗಿ ಸೇರಿ ಆತನನ್ನು ಸಂಧಿಸುವ ಕಾಲವನ್ನು ಕುರಿತು ನಿಮ್ಮೊಡನೆ ಮಾತನಾಡಲು ಇಚ್ಛಿಸುತ್ತೇವೆ. 2 ಪ್ರಭುವಿನ ದಿನವು ಈಗಾಗಲೇ ಬಂದುಬಿಟ್ಟಿತು ಎಂದು ಯಾರಾದರು ನಿಮಗೆ ಹೇಳಿದರೆ ಆ ಕೂಡಲೇ ಕಳವಳಗೊಳ್ಳಬೇಡಿ ಅಥವಾ ಭಯಪಡಬೇಡಿ. ಯಾವನಾದರೂ ತನ್ನ ಪ್ರವಾದನೆಯಲ್ಲಾಗಲಿ ಉಪದೇಶದಲ್ಲಾಗಲಿ ಹಾಗೆ ಹೇಳುವ ಸಾಧ್ಯತೆ ಇದೆ. ಯಾವನಾದರೂ ಸುಳ್ಳುಪತ್ರವನ್ನೇ ನಮ್ಮ ಹೆಸರಿನಲ್ಲಿ ತಾನೇ ಬರೆದು ನಿಮ್ಮ ಮುಂದೆ ಓದಿ ತಿಳಿಸುವ ಸಾಧ್ಯತೆಯೂ ಇದೆ. 3 ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸಲು ಅವಕಾಶ ನೀಡದಿರಿ. ಜನರು ದೇವರಿಗೆ ವಿಮುಖರಾಗದ ಹೊರತು, ಅಧರ್ಮಸ್ವರೂಪನು ಕಾಣಿಸಿಕೊಳ್ಳದ ಹೊರತು ಆ ದಿನವು ಬರುವುದಿಲ್ಲ. 4 ದೇವರೆಂದು ಕರೆಸಿಕೊಳ್ಳುವ ಏನನ್ನೇ ಆಗಲಿ, ಜನರು ಪೂಜಿಸುವ ಯಾವುದನ್ನೇ ಆಗಲಿ ಅಧರ್ಮಸ್ವರೂಪನು ವಿರೋಧಿಸಿ, ಅವುಗಳಿಗಿಂತ ತನ್ನನ್ನು ತಾನೇ ಹೆಚ್ಚಿಸಿಕೊಂಡು ದೇವರ ಆಲಯದೊಳಕ್ಕೆ ಹೋಗಿ ಕುಳಿತುಕೊಂಡು ತಾನೇ ದೇವರೆಂದು ಹೇಳಿಕೊಳ್ಳುತ್ತಾನೆ.
5 ಈ ಸಂಗತಿಗಳೆಲ್ಲವೂ ಸಂಭವಿಸುತ್ತವೆಯೆಂದು ನಾನು ನಿಮಗೆ ಮೊದಲೇ ತಿಳಿಸಿದ್ದೇನೆ. ಜ್ಞಾಪಕವಿಲ್ಲವೇ?
ರಕ್ಷಣೆಗಾಗಿ ನೀವು ಆರಿಸಲ್ಪಟ್ಟಿರುವಿರಿ
13 ಸಹೋದರ ಸಹೋದರಿಯರೇ, ಪ್ರಭುವು ನಿಮ್ಮನ್ನು ಪ್ರೀತಿಸುತ್ತಾನೆ. ನಿಮ್ಮನ್ನು ರಕ್ಷಿಸಬೇಕೆಂದು ದೇವರು ನಿಮ್ಮನ್ನು ಆದಿಯಲ್ಲಿಯೇ ಆರಿಸಿಕೊಂಡನು. ಆದ್ದರಿಂದ ನಿಮ್ಮ ವಿಷಯದಲ್ಲಿ ದೇವರಿಗೆ ಯಾವಾಗಲೂ ಕೃತಜ್ಞತೆ ಸಲ್ಲಿಸಬೇಕು. ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡುವ ಪವಿತ್ರಾತ್ಮನಿಂದ ಮತ್ತು ಸತ್ಯದ ಮೇಲೆ ನಿಮಗಿರುವ ನಂಬಿಕೆಯಿಂದ ನೀವು ರಕ್ಷಣೆ ಹೊಂದಿದ್ದೀರಿ. 14 ನೀವು ರಕ್ಷಣೆಯನ್ನು ಹೊಂದಿಕೊಂಡು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮಹಿಮೆಯಲ್ಲಿ ಪಾಲುಗಾರರಾಗಬೇಕೆಂದು, ನಾವು ಸಾರಿದ ಸುವಾರ್ತೆಯ ಮೂಲಕ ದೇವರು ನಿಮ್ಮನ್ನು ಕರೆದನು. 15 ಸಹೋದರ ಸಹೋದರಿಯರೇ, ದೃಢವಾಗಿರಿ. ನಾವು ಮಾತಿನ ಮೂಲಕ ಮತ್ತು ಪತ್ರಗಳ ಮೂಲಕ ನಿಮಗೆ ತಿಳಿಸಿದ ಬೋಧನೆಗಳನ್ನು ನಂಬಿಕೊಂಡೇ ಇರಿ.
16-17 ನೀವು ಹೇಳುವ ಒಳ್ಳೆಯ ಸಂಗತಿಗಳಲ್ಲಿ ಮತ್ತು ಮಾಡುವ ಒಳ್ಳೆಯ ಕಾರ್ಯಗಳಲ್ಲಿ ನಿಮಗೆ ಬಲವನ್ನೂ ಆದರಣೆಯನ್ನೂ ಪ್ರಭುವಾದ ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರು ನಿಮಗೆ ದಯಪಾಲಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ. ದೇವರು ನಮ್ಮನ್ನು ಪ್ರೀತಿಸಿದನು. ಆತನು ತನ್ನ ಕೃಪೆಯಿಂದಲೇ ನಮಗೆ ಒಳ್ಳೆಯ ನಿರೀಕ್ಷೆಯನ್ನೂ ಶಾಶ್ವತವಾದ ಆದರಣೆಯನ್ನೂ ದಯಪಾಲಿಸಿದನು.
ಯೇಸುವನ್ನು ಮೋಸಗೊಳಿಸಲು ಕೆಲವು ಸದ್ದುಕಾಯರ ಪ್ರಯತ್ನ
(ಮತ್ತಾಯ 22:23-33; ಮಾರ್ಕ 12:18-27)
27 ಕೆಲವು ಸದ್ದುಕಾಯರು[a] ಯೇಸುವಿನ ಬಳಿಗೆ ಬಂದರು. (ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂದು ಸದ್ದುಕಾಯರು ನಂಬುತ್ತಾರೆ.) ಅವರು ಯೇಸುವಿಗೆ, 28 “ಉಪದೇಶಕನೇ, ಮದುವೆಯಾದ ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನು ಆ ಸ್ತ್ರೀಯನ್ನು ಮದುವೆಯಾಗಿ, ಸತ್ತುಹೋದ ಸಹೋದರನಿಗಾಗಿ ಮಕ್ಕಳನ್ನು ಪಡೆಯಬೇಕೆಂದು[b] ಮೋಶೆಯು ಬರೆದಿದ್ದಾನಷ್ಟೆ. 29 ಒಂದು ಕಾಲದಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯ ಸಹೋದರನು ಒಬ್ಬ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು. ಅವನಿಗೆ ಮಕ್ಕಳಿರಲಿಲ್ಲ. 30 ಆಗ ಎರಡನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು. 31 ಆಗ ಮೂರನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು. ಬಳಿಕ ಅವನೂ ಸತ್ತುಹೋದನು. ಇನ್ನುಳಿದ ಸಹೋದರರಿಗೂ ಹೀಗೆಯೇ ಆಯಿತು. ಅವರೆಲ್ಲರೂ ಮಕ್ಕಳಿಲ್ಲದೆ ಸತ್ತರು. 32 ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು. 33 ಆದರೆ ಆ ಏಳು ಮಂದಿ ಸಹೋದರರೂ ಆಕೆಯನ್ನು ಮದುವೆಯಾಗಿದ್ದರು. ಹೀಗಿರಲಾಗಿ, ಸತ್ತವರು ಪುನರುತ್ಥಾನ ಹೊಂದುವಾಗ, ಆ ಸ್ತ್ರೀಯು ಯಾರ ಹೆಂಡತಿಯಾಗಿರುವಳು?” ಎಂದು ಕೇಳಿದರು.
34 ಯೇಸು ಸದ್ದುಕಾಯರಿಗೆ, “ಭೂಲೋಕದಲ್ಲಿ ಜನರು ಒಬ್ಬರನ್ನೊಬ್ಬರು ಮದುವೆ ಆಗುತ್ತಾರೆ. 35 ಪುನರುತ್ಥಾನಕ್ಕೆ ಯೋಗ್ಯರಾದ ಕೆಲವು ಜನರು ಜೀವಂತವಾಗಿ ಎದ್ದುಬಂದು ಮತ್ತೆ ಜೀವಿಸುತ್ತಾರೆ. ಆ ಹೊಸ ಜೀವನದಲ್ಲಿ ಅವರು ಮದುವೆ ಆಗುವುದಿಲ್ಲ. 36 ಆ ಜೀವನದಲ್ಲಿ ಅವರು ದೇವದೂತರಂತಿರುತ್ತಾರೆ. ಅವರಿಗೆ ಮರಣವೂ ಇರುವುದಿಲ್ಲ. ಅವರು ದೇವರ ಮಕ್ಕಳಾಗಿರುತ್ತಾರೆ, ಏಕೆಂದರೆ ಅವರು ಪುನರುತ್ಥಾನ ಹೊಂದಿದವರಾಗಿದ್ದಾರೆ. 37 ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯು ಸ್ಪಷ್ಟವಾಗಿ ತೋರಿಸಿದ್ದಾನೆ. ಉರಿಯುವ ಪೊದೆಯ[c] ಕುರಿತು ಮೋಶೆ ಬರೆಯುವಾಗ ‘ಪ್ರಭುವಾದ ದೇವರೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ಹೇಳಿದ್ದಾನೆ. 38 ದೇವರು ಅವರೆಲ್ಲರಿಗೆ ದೇವರಾಗಿರುವುದರಿಂದ ಅವರೆಲ್ಲರು ನಿಜವಾಗಿಯೂ ಸತ್ತಿಲ್ಲ. ಏಕೆಂದರೆ ದೇವರು ಜೀವಿಸುವ ಜನರಿಗೇ ದೇವರಾಗಿದ್ದಾನೆ. ದೇವರಿಗೆ ಸೇರಿದವರೆಲ್ಲರೂ ಜೀವಂತರಾಗಿದ್ದಾರೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International