Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 98

ಸ್ತುತಿಗೀತೆ.

98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
    ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
    ಆತನಿಗೆ ಜಯವನ್ನು ಉಂಟುಮಾಡಿವೆ.
ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
    ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
    ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
    ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
ಹಾರ್ಪ್‌ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
    ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
    ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
ಸಮುದ್ರವೂ ಭೂಮಿಯೂ
    ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
ನದಿಗಳೇ, ಚಪ್ಪಾಳೆ ತಟ್ಟಿರಿ!
    ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
ಯೆಹೋವನ ಎದುರಿನಲ್ಲಿ ಹಾಡಿರಿ,
    ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
    ಆತನು ಜನರನ್ನು ನೀತಿಯಿಂದ ಆಳುತ್ತಾನೆ.

ಜೆಕರ್ಯ 8:1-17

ಜೆರುಸಲೇಮನ್ನು ಆಶೀರ್ವದಿಸುವೆನು ಎಂಬ ಯೆಹೋವನ ವಾಗ್ದಾನ

ಸರ್ವಶಕ್ತನಾದ ಯೆಹೋವನ ಸಂದೇಶ: ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಚೀಯೋನ್ ಪರ್ವತವನ್ನು ನಾನು ಸತ್ಯವಾಗಿಯೂ ಪ್ರೀತಿಸುತ್ತೇನೆ. ನನಗೆ ನಂಬಿಗಸ್ತಳಾಗದಿದ್ದಾಗ ನಾನು ಆಕೆಯ ಮೇಲೆ ಕೋಪಗೊಳ್ಳುವಷ್ಟರವರೆಗೆ ಪ್ರೀತಿಸುತ್ತೇನೆ.” ಯೆಹೋವನು ಹೇಳುವುದೇನೆಂದರೆ, “ನಾನು ಚೀಯೋನಿಗೆ ಹಿಂದಿರುಗಿ ಬಂದಿದ್ದೇನೆ. ನಾನು ಜೆರುಸಲೇಮಿನಲ್ಲಿ ವಾಸಿಸುತ್ತೇನೆ. ಜೆರುಸಲೇಮ್ ನಂಬಿಗಸ್ತನಗರವೆಂದು ಕರೆಯಲ್ಪಡುವುದು. ಸರ್ವಶಕ್ತನ ಪರ್ವತವು ಪವಿತ್ರ ಪರ್ವತವೆಂದು ಕರೆಯಲ್ಪಡುವುದು.”

ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ವೃದ್ಧವೃದ್ಧೆಯರು ಜೆರುಸಲೇಮಿನ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಿ ಕಾಣಸಿಗುವರು. ಅವರು ಬಹು ದೀರ್ಘ ಆಯುಷ್ಯವನ್ನು ಹೊಂದುವದರಿಂದ ಅವರಿಗೆ ಕೈಕೋಲು ಬೇಕಾಗುತ್ತದೆ. ನಗರದ ತುಂಬಾ ಬಾಲಬಾಲೆಯರು ಆಡುವರು.” ಅಳಿದುಳಿದುವರು “ಇದು ಆಶ್ಚರ್ಯಕರ” ಎಂದು ಹೇಳುವರು. ನಾನೂ ಇದು ಆಶ್ಚರ್ಯಕರವೆಂದು ತಿಳಿಯುತ್ತೇನೆ.

ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಾನೂ ಪೂರ್ವ ಪಶ್ಚಿಮದಲ್ಲಿರುವ ದೇಶಗಳೊಳಗಿಂದ ನನ್ನ ಜನರನ್ನು ರಕ್ಷಿಸುವುದನ್ನು ನೋಡಿರಿ. ನಾನು ಅವರನ್ನು ಇಲ್ಲಿಗೆ ಕರೆತರುವೆನು. ಅವರು ಜೆರುಸಲೇಮಿನಲ್ಲಿ ವಾಸಿಸುವರು. ಅವರು ನನ್ನ ಜನರಾಗಿರುವರು; ನಾನು ಅವರಿಗೆ ಒಳ್ಳೆಯವನಾದ ನಂಬಿಗಸ್ತನಾದ ದೇವರಾಗಿರುವೆನು.”

ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಬಲಗೊಳ್ಳಿರಿ! ಸರ್ವಶಕ್ತನಾದ ಯೆಹೋವನು ತನ್ನ ಆಲಯವನ್ನು ತಿರುಗಿ ಕಟ್ಟಲು ಅಸ್ತಿವಾರವನ್ನು ಹಾಕುವಾಗ ಪ್ರವಾದಿಗಳು ಕೊಟ್ಟ ಸಂದೇಶವನ್ನೇ ನೀವು ತಿರುಗಿ ಕೇಳುತ್ತಿದ್ದೀರಿ! 10 ಇದಕ್ಕಿಂತ ಮುಂಚೆ ಜನರ ಕೈಯಲ್ಲಿ ಕೆಲಸಗಾರರಿಗೆ ಕೂಲಿ ಕೊಡುವದಕ್ಕಾಗಲಿ ಪ್ರಾಣಿಗಳ ಬಾಡಿಗೆ ಕೊಡುವದಕ್ಕಾಗಲಿ ಹಣವಿರಲಿಲ್ಲ. ಅದೇ ಸಮಯದಲ್ಲಿ ಜನರು ಹೋಗುತ್ತಾ ಬರುತ್ತಾ ಇರುವದಕ್ಕೆ ಸುರಕ್ಷತೆ ಇರಲಿಲ್ಲ. ಎಲ್ಲಾ ತೊಂದರೆಗಳು ತೊರೆಯಲ್ಪಡಲಿಲ್ಲ. ಪ್ರತಿ ಮನುಷ್ಯನು ತನ್ನ ನೆರೆಯವನ ಮೇಲೆ ಎದುರುಬೀಳುವಂತೆ ನಾನು ಮಾಡಿದ್ದೆನು. 11 ಆದರೆ ಈಗ ಹಾಗಿಲ್ಲ. ಅಳಿಯದೆ ಉಳಿದವರಿಗೆ ಹಾಗೆ ಆಗುವದಿಲ್ಲ. ಇದು ಸರ್ವಶಕ್ತನಾದ ಯೆಹೋವನ ನುಡಿ.

12 “ಈ ಜನರು ನೆಮ್ಮದಿಯಿಂದ ಭೂಮಿಯ ಮೇಲೆ ನಡೆಯುವರು. ಅವರ ದ್ರಾಕ್ಷಾಲತೆಗಳು ದ್ರಾಕ್ಷಿಹಣ್ಣನ್ನು ಕೊಡುವವು. ದೇಶವು ಸಮೃದ್ಧಿಯಾದ ಬೆಳೆಯನ್ನು ಕೊಡುವದು. ಆಕಾಶವು ಮಳೆಯನ್ನು ಸುರಿಸುವದು. ಇವೆಲ್ಲವನ್ನು ನಾನು ನನ್ನ ಜನರಿಗೆ ಕೊಡುವೆನು. 13 ಜನರು ಇಸ್ರೇಲ್ ಮತ್ತು ಯೆಹೂದದ ಹೆಸರುಗಳನ್ನು ಶಾಪ ಇಡುವದಕ್ಕಾಗಿ ಉಪಯೋಗಿಸುವರು. ಆದರೆ ನಾನು ಇಸ್ರೇಲ್ ಮತ್ತು ಯೆಹೂದವನ್ನು ಸಂರಕ್ಷಿಸುವೆನು. ಆ ಹೆಸರುಗಳು ಆಶೀರ್ವದಿಸುವದಕ್ಕಾಗಿ ಉಪಯೋಗಿಸಲ್ಪಡುವದು. ಆದ್ದರಿಂದ ಭಯಪಡಬೇಡಿ, ಬಲಶಾಲಿಗಳಾಗಿರಿ.”

14 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಿಮ್ಮ ಪೂರ್ವಿಕರು ನನ್ನನ್ನು ಕೋಪಗೊಳಿಸಿದರು. ಆದ್ದರಿಂದ ಅವರನ್ನು ನಾಶಮಾಡಲು ನಾನು ತೀರ್ಮಾನಿಸಿದೆನು. ಮತ್ತು ಈ ತೀರ್ಮಾನವನ್ನು ಬದಲಾಯಿಸುವದೇ ಇಲ್ಲವೆಂದು ನಿರ್ಧರಿಸಿದೆನು. 15 ಆದರೆ ಈಗ ನನ್ನ ನಿರ್ಧಾರವನ್ನು ಬದಲಾಯಿಸಿದ್ದೇನೆ. ಜೆರುಸಲೇಮಿಗೂ ಯೆಹೂದದ ಜನರಿಗೂ ಒಳ್ಳೆಯದನ್ನೇ ಮಾಡುವೆನು. ಆದ್ದರಿಂದ ಭಯಪಡಬೇಡಿ. 16 ಆದರೆ ನೀವು ಮಾಡಬೇಕಾದದ್ದೇನೆಂದರೆ, ನಿಮ್ಮ ನೆರೆಯವರ ಸಂಗಡ ಸತ್ಯವನ್ನೇ ಆಡಿರಿ. ನಿಮ್ಮ ನಗರಗಳಲ್ಲಿ ಯಾವುದೇ ತೀರ್ಮಾನಗಳನ್ನು ಮಾಡುವುದಾಗಿದ್ದರೂ ಅವು ನ್ಯಾಯವಾದವುಗಳಾಗಿಯೂ ಸತ್ಯವಾದವುಗಳಾಗಿಯೂ ಸಮಾಧಾನವನ್ನು ತರುವಂಥವುಗಳಾಗಿಯೂ ಇರಲಿ. 17 ನಿಮ್ಮ ನೆರೆಯವನಿಗೆ ಹಾನಿಮಾಡುವುದನ್ನು ಗುಟ್ಟಾಗಿ ಆಲೋಚಿಸಬೇಡಿರಿ. ಸುಳ್ಳು ವಾಗ್ದಾನ ಮಾಡಬೇಡಿರಿ. ಅವುಗಳನ್ನೆಲ್ಲಾ ಮಾಡುವದರಲ್ಲಿ ಆನಂದಿಸಬೇಡಿರಿ. ಯಾಕೆಂದರೆ ಅವುಗಳನ್ನು ನಾನು ದ್ವೇಷಿಸುತ್ತೇನೆ.” ಇದು ಯೆಹೋವನ ನುಡಿ.

ಯೋಹಾನ 5:19-29

ಯೇಸುವಿಗೆ ದೇವರ ಅಧಿಕಾರವಿದೆ

19 ಅದಕ್ಕೆ ಉತ್ತರವಾಗಿ ಆತನು ಹೀಗೆಂದನು: “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಮಗನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ತಂದೆಯು ಮಾಡುವುದನ್ನು ಕಂಡು ತಾನೂ ಹಾಗೆಯೇ ಮಾಡುತ್ತಾನೆ. ತಂದೆಯು ಮಾಡುವ ಕಾರ್ಯಗಳನ್ನೇ ಮಗನೂ ಮಾಡುತ್ತಾನೆ. 20 ತಂದೆಯು ಮಗನನ್ನು ಪ್ರೀತಿಸುವನು ಮತ್ತು ತಾನು ಮಾಡುವ ಎಲ್ಲಾ ಕಾರ್ಯಗಳನ್ನು ಮಗನಿಗೆ ತೋರಿಸುವನು. ಆದರೆ ಇದಕ್ಕಿಂತಲೂ ಹೆಚ್ಚಿನ ಕಾರ್ಯಗಳನ್ನು ತಂದೆಯು ಮಗನಿಗೆ ತೋರಿಸುವನು. ಆಗ ನೀವೆಲ್ಲರೂ ಆಶ್ಚರ್ಯಚಕಿತರಾಗುವಿರಿ. 21 ತಂದೆಯು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವ ಕೊಡುತ್ತಾನೆ. ಅದೇ ರೀತಿಯಲ್ಲಿ ಮಗನು ತಾನು ಬಯಸಿದವರಿಗೆ ಜೀವವನ್ನು ಕೊಡುತ್ತಾನೆ.

22 “ಇದಲ್ಲದೆ ತಂದೆಯು ಯಾರಿಗೂ ತೀರ್ಪು ಮಾಡುವುದಿಲ್ಲ. ಆದರೆ ತಂದೆಯು ತೀರ್ಪು ಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ ಕೊಟ್ಟಿದ್ದಾನೆ. 23 ಜನರು ತಂದೆಯನ್ನು ಗೌರವಿಸುವಂತೆ ಮಗನನ್ನು ಗೌರವಿಸಬೇಕೆಂದು ದೇವರು ಹೀಗೆ ಮಾಡಿದನು. ಮಗನನ್ನು ಸನ್ಮಾನಿಸದವನು ಆತನನ್ನು ಕಳುಹಿಸಿರುವ ತಂದೆಯನ್ನೂ ಸನ್ಮಾನಿಸದವನಾಗಿದ್ದಾನೆ.

24 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನ ಮಾತನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅವನಿಗೆ ಅಪರಾಧಿಯೆಂಬ ತೀರ್ಪಾಗುವುದಿಲ್ಲ. ಅವನು ಈಗಾಗಲೇ ಮರಣವನ್ನು ದಾಟಿ ಜೀವಕ್ಕೆ ಪ್ರವೇಶಿಸಿದ್ದಾನೆ. 25 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸತ್ತುಹೋದವರು ದೇವರ ಮಗನ ಸ್ವರವನ್ನು ಕೇಳುವ ಕಾಲ ಬರುತ್ತದೆ. ಅದು ಈಗಲೇ ಬಂದಿದೆ. ಕೇಳಿ ಸ್ವೀಕರಿಸಿಕೊಳ್ಳುವವರು ಜೀವವನ್ನು ಹೊಂದುವರು. 26 ತಂದೆಯು ಜೀವಕೊಡುವ ಶಕ್ತಿಯನ್ನು ತಾನು ಹೊಂದಿರುವಂತೆ ಮಗನಿಗೂ ಜೀವಕೊಡುವ ಶಕ್ತಿಯನ್ನು ಅನುಗ್ರಹಿಸಿದನು, 27 ಮತ್ತು ಎಲ್ಲಾ ಜನರಿಗೆ ತೀರ್ಪುಮಾಡುವ ಅಧಿಕಾರವನ್ನು ತಂದೆಯು ಮಗನಿಗೂ ಕೊಟ್ಟಿದ್ದಾನೆ. ಏಕೆಂದರೆ ಆ ಮಗನು ಮನುಷ್ಯಕುಮಾರನಾಗಿದ್ದಾನೆ.

28 “ಇದರ ಬಗ್ಗೆ ಆಶ್ಚರ್ಯಪಡಬೇಡಿರಿ. ಏಕೆಂದರೆ ಸಮಾಧಿಗಳಲ್ಲಿರುವ ಜನರೆಲ್ಲರೂ ಆತನ ಸ್ವರವನ್ನು ಕೇಳುವ ಕಾಲ ಬರುತ್ತದೆ. 29 ಆಗ ಅವರು ತಮ್ಮ ಸಮಾಧಿಗಳಿಂದ ಎದ್ದುಬರುವರು. ಜೀವನದಲ್ಲಿ ಒಳ್ಳೆಯದನ್ನು ಮಾಡಿದ ಜನರು ಪುನರುತ್ಥಾನಗೊಂಡು ನಿತ್ಯಜೀವವನ್ನು ಹೊಂದಿಕೊಳ್ಳುವರು. ಆದರೆ ಕೆಟ್ಟದ್ದನ್ನು ಮಾಡಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International