Revised Common Lectionary (Semicontinuous)
ರಚನೆಗಾರ: ದಾವೀದ.
20 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ.
ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ.
2 ಆತನು ತನ್ನ ಪವಿತ್ರ ಸ್ಥಳದಿಂದ ನಿನಗೆ ಸಹಾಯಮಾಡಲಿ.
ಚೀಯೋನಿನಿಂದ ನಿನಗೆ ಆಧಾರ ನೀಡಲಿ.
3 ನೀನು ಅರ್ಪಿಸಿದ ಕಾಣಿಕೆಗಳನ್ನೆಲ್ಲ ಆತನು ಜ್ಞಾಪಿಸಿಕೊಳ್ಳಲಿ.
ನಿನ್ನ ಯಜ್ಞಗಳನ್ನೆಲ್ಲ ಆತನು ಸ್ವೀಕರಿಸಿಕೊಳ್ಳಲಿ.
4 ಆತನು ನಿನ್ನ ಬಯಕೆಗಳನ್ನು ಈಡೇರಿಸಲಿ.
ನಿನ್ನ ಆಲೋಚನೆಗಳನ್ನೆಲ್ಲ ನೆರವೇರಿಸಲಿ.
5 ದೇವರು ನಿನಗೆ ಸಹಾಯಮಾಡುವಾಗ ಹರ್ಷಿಸುವೆವು.
ಆತನ ಹೆಸರನ್ನು ಕೊಂಡಾಡೋಣ.
ಯೆಹೋವನು ನಿನ್ನ ಕೋರಿಕೆಗಳನ್ನೆಲ್ಲ ನೆರವೇರಿಸಲಿ.
6 ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಸಹಾಯಮಾಡುತ್ತಾನೆಂದು ಈಗ ನನಗೆ ಗೊತ್ತಾಯಿತು.
ದೇವರು ತಾನು ಆರಿಸಿಕೊಂಡ ರಾಜನಿಗೆ ಪರಲೋಕದಿಂದ ಉತ್ತರಿಸಿದನು;
ತನ್ನ ಮಹಾಶಕ್ತಿಯಿಂದ ಅವನನ್ನು ರಕ್ಷಿಸಿದನು.
7 ಕೆಲವರು ತಮ್ಮ ರಥಗಳಲ್ಲಿ ಭರವಸವಿಡುವರು.
ಕೆಲವರು ತಮ್ಮ ಸೈನಿಕರುಗಳಲ್ಲಿ ಭರವಸವಿಡುವರು.
ನಾವಾದರೋ ನಮ್ಮ ದೇವರಾದ ಯೆಹೋವನನ್ನೇ ಜ್ಞಾಪಿಸಿಕೊಳ್ಳುವೆವು.
8 ಅವರು ಸೋತುಹೋದರು; ಯುದ್ಧದಲ್ಲಿ ಸತ್ತುಹೋದರು;
ನಾವಾದರೋ ಜಯಗಳಿಸಿದೆವು! ನಾವು ಜಯಪ್ರದರಾಗಿ ನಿಂತುಕೊಳ್ಳುವೆವು!
9 ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು!
ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು.
15 ಯೆಹೋವನು ಹೀಗೆನ್ನುತ್ತಾನೆ:
“ರಾಮದಲ್ಲಿ ಅತಿ ದುಃಖದಿಂದ ಗೋಳಾಡುವ
ಒಂದು ಧ್ವನಿಯು ಕೇಳಿಬರುತ್ತದೆ.
ರಾಹೇಲಳು[a] ತನ್ನ ಮಕ್ಕಳಿಗಾಗಿ ಗೋಳಾಡುವಳು.
ಅವಳ ಮಕ್ಕಳು ಸತ್ತುಹೋದುದರಿಂದ
ರಾಹೇಲಳು ಸಮಾಧಾನ ಹೊಂದುವದಕ್ಕೆ ಒಪ್ಪಲಾರಳು.”
16 ಆದರೆ ಯೆಹೋವನು, “ಅಳುವದನ್ನು ನಿಲ್ಲಿಸು.
ಕಣ್ಣಿನಲ್ಲಿ ನೀರು ತುಂಬಿಕೊಳ್ಳಬೇಡ.
ನಿನ್ನ ಕೆಲಸಕ್ಕಾಗಿ ನಿನಗೆ ಪ್ರತಿಫಲ ಸಿಕ್ಕುವುದು” ಎಂದು ಹೇಳುವನು.
ಇದು ಯೆಹೋವನ ನುಡಿ.
“ಇಸ್ರೇಲರು ತಮ್ಮ ಶತ್ರುಗಳ ಪ್ರದೇಶದಿಂದ ಹಿಂತಿರುಗಿ ಬರುವರು.
17 ಆದ್ದರಿಂದ ಇಸ್ರೇಲೇ, ನಿನ್ನ ಮಕ್ಕಳು
ತಮ್ಮ ದೇಶಕ್ಕೆ ಹಿಂತಿರುಗಿ ಬರುವರೆಂಬ ನಿರೀಕ್ಷೆ ನಿನಗಿರಲಿ.”
ಇದು ಯೆಹೋವನ ನುಡಿ.
18 “ಎಫ್ರಾಯೀಮ್ ಅಳುವುದನ್ನು ನಾನು ಕೇಳಿದ್ದೇನೆ.
ಎಫ್ರಾಯೀಮು ಹೀಗೆ ಹೇಳುವದನ್ನು ನಾನು ಕೇಳಿದ್ದೇನೆ.
‘ಯೆಹೋವನೇ, ನೀನು ನಿಜವಾಗಿ ನನ್ನನ್ನು ದಂಡಿಸಿದೆ.
ನಾನು ಪಾಠವನ್ನು ಕಲಿತೆನು.
ನಾನು ತರಬೇತಿ ಹೊಂದದ ಒಂದು ಹೋರಿಯುಂತಿದ್ದೆನು.
ನನ್ನನ್ನು ದಂಡಿಸುವದನ್ನು ದಯವಿಟ್ಟು ನಿಲ್ಲಿಸು.
ನಾನು ನಿನ್ನಲ್ಲಿಗೆ ಹಿಂದಿರುಗಿ ಬರುತ್ತೇನೆ.
ನಿಜವಾಗಿಯೂ ನೀನೇ ನನ್ನ ದೇವರಾದ ಯೆಹೋವನು.
19 ಯೆಹೋವನೇ, ನಾನು ನಿನಗೆ ದೂರವಾಗಿ ಅಲೆದಾಡಿದೆನು.
ಆದರೆ ನಾನು ಮಾಡಿದ ದುಷ್ಕೃತ್ಯಗಳ ಬಗ್ಗೆ ತಿಳಿದುಕೊಂಡೆನು.
ಆದ್ದರಿಂದ ನಾನು ನನ್ನ ಮನಸ್ಸನ್ನೂ ಜೀವನವನ್ನೂ ಪರಿವರ್ತಿಸಿಕೊಂಡೆ.
ತಾರುಣ್ಯಾವಸ್ಥೆಯಲ್ಲಿ ನಾನು ಮಾಡಿದ ಮೂರ್ಖತನಕ್ಕಾಗಿ ಲಜ್ಜೆಗೊಂಡೆನು; ನಾಚಿಕೆಪಟ್ಟೆನು.’”
20 ಯೆಹೋವನು ಹೀಗೆನ್ನುತ್ತಾನೆ:
“ಎಫ್ರಾಯೀಮ್ ನನ್ನ ಪ್ರೀತಿಯ ಮಗನೆಂಬುದು ನೀನು ಬಲ್ಲೆ.
ನಾನು ಆ ಮಗುವನ್ನು ಪ್ರೀತಿಸುತ್ತೇನೆ.
ಹೌದು, ನಾನು ಹಲವು ಸಲ ಎಫ್ರಾಯೀಮನ ವಿರುದ್ಧವಾಗಿ ಮಾತನಾಡುತ್ತೇನೆ.
ಆದಾಗ್ಯೂ ನಾನು ಅವನನ್ನು ಜ್ಞಾಪಿಸಿಕೊಳ್ಳುತ್ತೇನೆ.
ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ.
ನಾನು ನಿಜವಾಗಿಯೂ ಅವನನ್ನು ಸಂತೈಸಬಯಸುತ್ತೇನೆ.”
ಇದು ಯೆಹೋವನ ನುಡಿ.
21 “ಇಸ್ರೇಲರೇ, ದಾರಿತೋರುವ
ಕಂಬಗಳನ್ನೂ ಕೈಮರಗಳನ್ನೂ ನೆಡಿರಿ.
ನೀವು ಪ್ರಯಾಣ ಮಾಡುತ್ತಿರುವ ರಸ್ತೆಯನ್ನು ಗಮನಿಸಿರಿ.
ನಿಮ್ಮ ಊರುಗಳಿಗೆ ಹಿಂತಿರುಗಿ ಬನ್ನಿ.
ನನ್ನ ವಧುವಾದ ಇಸ್ರೇಲೇ, ಮನೆಗೆ ಬಾ.
22 ನೀನು ಅಪನಂಬಿಗಸ್ತಳಾದ ಮಗಳಾಗಿದ್ದೆ.
ಆದರೆ ನೀನು ಬದಲಾವಣೆ ಹೊಂದಿದೆ.
ಈಗ ನೀನು ಮನೆಗೆ ಹಿಂದಿರುಗಿ ಬರಲು ಎಷ್ಟು ಹೊತ್ತು ಕಾದುಕೊಂಡಿರುವೆ.
“ಯೆಹೋವನು ಲೋಕದಲ್ಲಿ ಅಪೂರ್ವವಾದದ್ದನ್ನು ಮಾಡಿದ್ದಾನೆ.
ಹೆಂಗಸು ಗಂಡಸನ್ನು ಕಾಪಾಡುವಳು.”
ಜೆರುಸಲೇಮಿನ ವಿಷಯದಲ್ಲಿ ಯೇಸು ಅತ್ತನು
41 ಯೇಸು ಜೆರುಸಲೇಮಿನ ಸಮೀಪಕ್ಕೆ ಬಂದಾಗ ಆ ಪಟ್ಟಣವನ್ನು ನೋಡಿ ಅದರ ವಿಷಯದಲ್ಲಿ ಕಣ್ಣೀರಿಟ್ಟು 42 ಜೆರುಸಲೇಮಿಗೆ, “ನಿನಗೆ ಯಾವುದರಿಂದ ಸಮಾಧಾನವಾಗುತ್ತದೆ ಎಂಬುದನ್ನು ನೀನು ಇಂದೇ ತಿಳಿದುಕೊಂಡಿದ್ದರೆ ಎಷ್ಟೋ ಒಳ್ಳೆಯದಾಗಿತ್ತು! ಆದರೆ ನೀನು ಅದನ್ನು ತಿಳಿಯಲಾರೆ, ಏಕೆಂದರೆ ಅದು ನಿನಗೆ ಮರೆಯಾಗಿದೆ. 43 ನಿನ್ನ ವೈರಿಗಳು ನಿನ್ನ ಸುತ್ತಲೂ ಗೋಡೆ ಕಟ್ಟಿ ನಿನ್ನನ್ನು ಎಲ್ಲಾ ಕಡೆಗಳಿಂದಲೂ ಮುತ್ತಿಗೆ ಹಾಕಿ, 44 ನಿನ್ನನ್ನೂ ನಿನ್ನ ಜನರೆಲ್ಲರನ್ನೂ ನಾಶಮಾಡುವರು. ನಿನ್ನ ಕಟ್ಟಡಗಳಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ದೇವರು ನಿನ್ನನ್ನು ರಕ್ಷಿಸುವುದಕ್ಕೆ ಬಂದ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲವಾದ್ದರಿಂದ ಇದೆಲ್ಲಾ ನಿನಗೆ ಸಂಭವಿಸುವುದು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International