Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.
124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಇಸ್ರೇಲರೇ, ನನಗೆ ಉತ್ತರಹೇಳಿ.
2 ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
3 ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
4 ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
5 ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.
6 ಯೆಹೋವನಿಗೆ ಸ್ತೋತ್ರವಾಗಲಿ!
ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.
7 ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
8 ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.
ದೇವರು ತನ್ನ ಜನರನ್ನು ಸ್ವದೇಶಕ್ಕೆ ಬರಮಾಡುವನು
54 ಬಂಜೆಯೇ, ಸಂತೋಷಿಸು, ನಿನಗೆ ಮಕ್ಕಳಿಲ್ಲ.
ಆದ್ದರಿಂದ ನೀನು ಬಹಳವಾಗಿ ಸಂತೋಷಿಸು.
ಯೆಹೋವನು ಹೇಳುವುದೇನೆಂದರೆ,
“ಗಂಡ ಬಿಟ್ಟಿರುವ ಹೆಂಗಸಿಗೆ ಮದುವೆಯಾದ ಹೆಂಗಸಿಗಿಂತ ಹೆಚ್ಚು ಮಕ್ಕಳಿರುವರು.”
2 “ನಿನ್ನ ಡೇರೆಗಳನ್ನು ವಿಸ್ತರಿಸು.
ನಿನ್ನ ಬಾಗಿಲುಗಳನ್ನು ಅಗಲವನ್ನಾಗಿ ಮಾಡು.
ನಿನ್ನ ಮನೆಯನ್ನು ಅಭಿವೃದ್ಧಿಪಡಿಸು.
ನಿನ್ನ ಡೇರೆಯನ್ನು ದೊಡ್ಡದಾಗಿಯೂ ಬಲವಾಗಿಯೂ ಮಾಡು.
3 ಯಾಕೆಂದರೆ ನೀನು ಅಧಿಕವಾಗಿ ಬೆಳೆಯುವಿ.
ನಿನ್ನ ಮಕ್ಕಳು ಅನೇಕ ಜನಾಂಗಗಳನ್ನು ವಶಮಾಡಿಕೊಳ್ಳುವರು.
ಕೆಡವಿಹಾಕಿದ ಪಟ್ಟಣಗಳಲ್ಲಿ ನಿನ್ನ ಮಕ್ಕಳು ತಿರಿಗಿ ವಾಸಿಸುವರು.
4 ಹೆದರಬೇಡ, ನೀನು ನಿರಾಶಳಾಗುವದಿಲ್ಲ.
ಜನರು ನಿನ್ನ ವಿಷಯವಾಗಿ ಕೆಟ್ಟದ್ದನ್ನು ಆಡುವದಿಲ್ಲ.
ನೀನು ಬೇಸರಗೊಳ್ಳುವದಿಲ್ಲ.
ನೀನು ಯೌವ್ವನಸ್ಥಳಾಗಿರುವಾಗ ನಿನಗೆ ನಾಚಿಕೆಯಾಯಿತು.
ಆದರೆ ಈಗ ನೀನು ಆ ನಾಚಿಕೆಯನ್ನು ಮರೆತುಬಿಟ್ಟವಳಾಗಿದ್ದಿ.
ನಿನ್ನ ಗಂಡನನ್ನು ನೀನು ಕಳೆದುಕೊಂಡಾಗ
ನೀನು ಪಟ್ಟ ನಾಚಿಕೆಯನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ.
5 ಯಾಕೆಂದರೆ ನಿನ್ನ ಗಂಡನೇ (ದೇವರು) ನಿನ್ನನ್ನು ನಿರ್ಮಿಸಿದನು.
ಆತನ ಹೆಸರು ಸರ್ವಶಕ್ತನಾದ ಯೆಹೋವನು.
ಆತನು ಇಸ್ರೇಲನ್ನು ಕಾಪಾಡುವಾತನಾಗಿದ್ದಾನೆ. ಆತನು ಇಸ್ರೇಲಿನ ಪರಿಶುದ್ಧ ದೇವರಾಗಿದ್ದಾನೆ.
ಆತನನ್ನು ‘ಇಡೀ ಭೂಲೋಕದ ದೇವರು’ ಎಂದು ಕರೆಯುವರು.
6 “ನೀನು ಗಂಡಬಿಟ್ಟ ಹೆಂಗಸಿನಂತಿದ್ದಿ.
ನಿನ್ನ ಆತ್ಮದಲ್ಲಿ ನೀನು ತುಂಬಾ ದುಃಖಿತಳಾಗಿದ್ದಿ.
ಆದರೆ ಯೆಹೋವನು ನಿನ್ನನ್ನು ತನ್ನವಳನ್ನಾಗಿ ಮಾಡಲು ಕರೆದನು.
ಎಳೇ ಪ್ರಾಯದಲ್ಲಿ ಮದುವೆಯಾದ ಮತ್ತು ಗಂಡಬಿಟ್ಟ ಹೆಂಗಸಿನಂತೆ ನೀನಿದ್ದಿ.
ಆದರೆ ದೇವರು ತನ್ನವಳನ್ನಾಗಿ ಮಾಡಿಕೊಳ್ಳಲು ನಿನ್ನನ್ನು ಕರೆದನು.”
7 ದೇವರು ಹೇಳುವುದೇನೆಂದರೆ: “ನಾನು ನಿನ್ನನ್ನು ತೊರೆದೆನು. ಆದರೆ ಸ್ವಲ್ಪ ಸಮಯಕ್ಕಾಗಿ ಮಾತ್ರ.
ನಿನ್ನನ್ನು ಮತ್ತೆ ನನಗಾಗಿ ಒಟ್ಟುಗೂಡಿಸುವೆನು. ಆಗ ನಿನಗೆ ಅತ್ಯಂತ ದಯೆಯನ್ನು ತೋರಿಸುವೆನು.
8 ನಾನು ತುಂಬಾ ಸಿಟ್ಟುಗೊಂಡಿದ್ದೆನು ಮತ್ತು ಸ್ವಲ್ಪ ಕಾಲಕ್ಕೆ ನಿನಗೆ ಮರೆಯಾದೆನು.
ಆದರೆ ನಿನ್ನನ್ನು ಕರುಣೆಯಿಂದ ನಿರಂತರವೂ ಸಂತೈಸುವೆನು.”
ನಿನ್ನ ರಕ್ಷಕನಾದ ಯೆಹೋವನ ನುಡಿಗಳಿವು.
9 ದೇವರು ಹೇಳುವುದೇನೆಂದರೆ: “ನೋಹನ ಕಾಲದಲ್ಲಿ ನಾನು ಲೋಕವನ್ನು ಜಲಪ್ರವಾಹದ ಮೂಲಕ ಶಿಕ್ಷಿಸಿದ್ದನ್ನು ಜ್ಞಾಪಕಮಾಡಿಕೊ.
ಆ ಬಳಿಕ ನಾನು ನೋಹನಿಗೆ ಪ್ರಪಂಚವನ್ನು ಜಲಪ್ರವಾಹದಿಂದ ಇನ್ನೆಂದಿಗೂ ನಾಶಪಡಿಸುವದಿಲ್ಲ ಎಂದು ಪ್ರಮಾಣ ಮಾಡಿದೆನು.
ಅದೇ ರೀತಿಯಲ್ಲಿ ಇನ್ನೆಂದಿಗೂ ನಿನ್ನ ಮೇಲೆ ಕೋಪಗೊಳ್ಳುವುದಿಲ್ಲವೆಂತಲೂ ನಿನ್ನನ್ನು ಗದರಿಸುವುದಿಲ್ಲವೆಂತಲೂ ನಾನು ನಿನಗೆ ಪ್ರಮಾಣ ಮಾಡುತ್ತೇನೆ.”
10 ಯೆಹೋವನು ಹೇಳುವುದೇನೆಂದರೆ, “ಪರ್ವತಗಳು ಇಲ್ಲದೆ ಹೋದರೂ
ಬೆಟ್ಟಗಳು ಧೂಳಾದರೂ
ನನ್ನ ಕೃಪೆಯು ನಿನ್ನನ್ನು ಎಂದಿಗೂ ತೊರೆಯದು.
ನಾನು ನಿನ್ನೊಂದಿಗೆ ನಿತ್ಯಕಾಲದ
ಸಮಾಧಾನದಲ್ಲಿ ಇರುವೆನು.”
ಯೆಹೋವನು ನಿನಗೆ ಕರುಣೆಯನ್ನು ತೋರುವನು.
ಈ ಸಂಗತಿಗಳನ್ನು ಆತನೇ ಹೇಳಿದ್ದಾನೆ.
23 “ಆ ಸಮಯದಲ್ಲಿ ಕೆಲವರು ನಿಮಗೆ, ‘ನೋಡಿ, ಕ್ರಿಸ್ತನು ಅಲ್ಲಿದ್ದಾನೆ!’ ಎಂದು ಹೇಳಬಹುದು. ಇಲ್ಲವೆ ಬೇರೊಬ್ಬನು, ‘ಆತನು ಇಲ್ಲಿದ್ದಾನೆ!’ ಎಂದು ಹೇಳಬಹುದು. ಆದರೆ ಅವರನ್ನು ನಂಬಬೇಡಿ. 24 ಸುಳ್ಳುಕ್ರಿಸ್ತರು ಮತ್ತು ಸುಳ್ಳುಪ್ರವಾದಿಗಳು ಬಂದು ದೇವರು ಆರಿಸಿಕೊಂಡಿರುವ ಜನರನ್ನು ಮೋಸಗೊಳಿಸುವುದಕ್ಕಾಗಿ ಮಹತ್ಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವರು. 25 ಅದು ಸಂಭವಿಸುವುದಕ್ಕೆ ಮುಂಚೆಯೇ ನಾನು ಅದರ ವಿಷಯವಾಗಿ ನಿಮಗೆ ಎಚ್ಚರಿಕೆ ಕೊಟ್ಟಿದ್ದೇನೆ.
26 “‘ಕ್ರಿಸ್ತನು ಅಡವಿಯಲ್ಲಿದ್ದಾನೆ!’ ಎಂದು ಕೆಲವರು ಹೇಳಿದರೆ ಅಡವಿಗೆ ಹೋಗಬೇಡಿ. ‘ಕ್ರಿಸ್ತನು ಆ ಕೋಣೆ ಒಳಗೆ ಇದ್ದಾನೆ!’ ಎಂದು ಹೇಳಿದರೆ ಅದನ್ನು ನಂಬಬೇಡಿ. 27 ಮನುಷ್ಯಕುಮಾರನು ಜನರಿಗೆಲ್ಲ ಕಾಣಿಸುವಂತೆ ಬರುತ್ತಾನೆ. ಮನುಷ್ಯಕುಮಾರನ ಪ್ರತ್ಯಕ್ಷತೆಯು ಆಕಾಶದಲ್ಲಿ ಮಿಂಚು ಹೊಳೆಯುವಂತೆ ಪ್ರಕಾಶಿಸುತ್ತಾ ಲೋಕದ ಎಲ್ಲಾ ಕಡೆಗಳಲ್ಲೂ ಕಾಣಿಸುವುದು. 28 ಹದ್ದುಗಳು ಎಲ್ಲಿ ಕೂಡಿಬರುತ್ತವೆಯೋ ಅಲ್ಲಿ ಹೆಣವಿರುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ಅದೇ ರೀತಿ ನನ್ನ ಬರುವಿಕೆಯೂ ಸ್ಪಷ್ಟವಾಗಿರುವುದು.
29 “ಆ ದಿನಗಳ ಸಂಕಟವು ತೀರಿದ ಕೂಡಲೇ,
‘ಸೂರ್ಯನು ಕತ್ತಲಾಗುವನು.
ಚಂದ್ರನು ಕಾಂತಿಹೀನನಾಗುವನು.
ನಕ್ಷತ್ರಗಳು ಆಕಾಶದಿಂದ ಕಳಚಿಬೀಳುವವು.
ಆಕಾಶಮಂಡಲವು ಕಂಪಿಸುವುದು.’(A)
30 “ಆಗ ಮನುಷ್ಯಕುಮಾರನ ಆಗಮನದ ಸೂಚನೆಯು ಆಕಾಶದಲ್ಲಿ ಕಾಣಿಸಿಕೊಳ್ಳುವುದು. ಲೋಕದ ಜನರೆಲ್ಲಾ ಗೋಳಾಡುವರು. ಆಕಾಶದಲ್ಲಿ ಮೇಘಗಳ ಮೇಲೆ ಆತನು ಬರುವುದನ್ನು ಜನರೆಲ್ಲರೂ ನೋಡುವರು. ಆತನು ಶಕ್ತಿಸಾಮರ್ಥ್ಯದಿಂದಲೂ ಮಹಿಮೆಯಿಂದಲೂ ಬರುವನು. 31 ಮಹಾಶಬ್ದದ ತುತ್ತೂರಿಯ ಘೋಷಣೆಯೊಡನೆ ಮನುಷ್ಯಕುಮಾರನು ತನ್ನ ದೂತರನ್ನು ಭೂಮಿಯ ಎಲ್ಲಾ ಕಡೆಗೆ ಕಳುಹಿಸುವನು. ಆತನು ಆರಿಸಿಕೊಂಡವರನ್ನು ದೇವದೂತರು ಭೂಲೋಕದ ಎಲ್ಲಾ ಕಡೆಗಳಿಂದಲೂ ಒಟ್ಟುಗೂಡಿಸುವರು.
32 “ಅಂಜೂರದ ಮರವು ನಮಗೆ ಒಂದು ಪಾಠವನ್ನು ಕಲಿಸುತ್ತದೆ. ಅಂಜೂರದ ಮರದ ಕೊಂಬೆಗಳು ಹಸುರಾಗಿ ಎಳೆಯದಾಗಿದ್ದು ಹೊಸ ಎಲೆಗಳು ಬೆಳೆಯುವುದಕ್ಕೆ ಪ್ರಾರಂಭಿಸಿದಾಗ, ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ. 33 ನಾನು ನಿಮಗೆ ಹೇಳಿದ ಈ ಸಂಗತಿಗಳಿಗೂ ಅದು ಅನ್ವಯಿಸುತ್ತದೆ. ಈ ಸಂಗತಿಗಳೆಲ್ಲಾ ಸಂಭವಿಸುತ್ತಿರುವುದನ್ನು ನೀವು ನೋಡುವಾಗ ಆ ಸಮಯ ಹತ್ತಿರವಾಯಿತೆಂದೂ ಬರುವುದಕ್ಕೆ ಸಿದ್ಧವಾಗಿದೆಯೆಂದೂ ತಿಳಿದುಕೊಳ್ಳುವಿರಿ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. 34 ಇಂದಿನ ಜನರು ಇನ್ನೂ ಜೀವಿಸಿರುವಾಗಲೇ ಈ ಎಲ್ಲಾ ಸಂಗತಿಗಳು ಸಂಭವಿಸುತ್ತವೆ! 35 ಭೂಮಿಯೂ ಆಕಾಶವೂ ನಾಶವಾಗುತ್ತವೆ, ಆದರೆ ನಾನು ಹೇಳಿದ ಮಾತುಗಳು ನಾಶವಾಗುವುದೇ ಇಲ್ಲ!
Kannada Holy Bible: Easy-to-Read Version. All rights reserved. © 1997 Bible League International